ಅನಂತರ, ಸುಲಕ್ಷಣಾ ಗರ್ಭಿಣಿಯಾದಳಲ್ಲ.... ಆಕೆಯಲ್ಲಿ ಹೆಣ್ತನವೇ ಈ ಗ ಸಂಪೂರ್ಣ ಅರಳಿದೆ. ಅಪೂರ್ವ ತಾಯ್ತನವೇ ಕೈಬೀಸಿ ಕರೆದಿದೆ. ಅವಳ ಹೊಟ್ಟೆ ಬೆಳೆದಂತೆಲ್ಲ ಕೆಲವೊಮ್ಮೆ ಸಾವೇ ತನ್ನನ್ನು ಹತ್ತಿರಕ್ಕೆ ಸೆಳೆದುಕೊಳ್ಳುತ್ತಿದೆ ಎಂದೇ ಭ್ರಮಿಸುತ್ತಾಳೆ. ಮತ್ತದೇ ಆತಂಕ ಭಯದ ಪಲ್ಲವಿ ಯಾಕೋ... ಸಾಮಾನ್ಯವಾಗಿ ಹೆಣ್ಣಿಗೆ ಮೊದಲ ಹೆರಿಗೆ ಕಷ್ಟವೆಂದೇ ಹೇಳುವರಲ್ಲ. ತನ್ನ ಆಯಸ್ಸು ಇಷ್ಟಕ್ಕೇನೇ ಮುಗಿಯಿತೆಂಬಂತೆ ಚಡಪಡಿಸುತ್ತಾಳೆ. ಮಹೇಶ ಪರಿಪರಿಯಾಗಿಯೆ ತನ್ನಾಕೆಗೆ ಸಾಂತ್ವಾನ ಗೈಯುತ್ತಾನೆ. ಕ್ರಮವಾಗಿ ಲೇಡಿ ಡಾಕ್ಟರ್ ಹತ್ತಿರ ಮೆಡಿಕಲ್ ಚೆಕಪ್ ಮಾಡಿಸುತ್ತಲೇ ಇದ್ದಾನೆ. ಆಕೆಗೆ ಎಲ್ಲಿಲ್ಲದ ಧೈರ್ಯ ತುಂಬಲೆತ್ನಿಸುತ್ತಾನೆ- “ ಸುಲೂ ನಿನ್ನ ಹಾಗೆ ಎಲ್ಲ ಹೆಣ್ಣುಗಳೂ ತಾಯಂದಿರಾಗುವಾಗಲೇ ಭಯ ಪಟ್ಟಿದ್ದರೆ, ಈ ಜೀವ ಸಮುದ್ರದಲ್ಲಿ ಇಷ್ಟು ಜನಸಂಖ್ಯೆ ಎಂಬುದೇ ಇರುತ್ತಿರಲಿಲ್ಲ........ ನೀನು ತಾಯಿಯಾಗುವಂಥ ಅವಸ್ಥೆ ಗಂಭೀರವಿದ್ದೀತಷ್ಟೇ. ಅದೇನು ಸಾವಿನಷ್ಟೇ ಗಂಭೀರ ವಿಷಯವೆಂದು ಭಾವಿಸುವುದು ತೀರ ಮೌಧ್ಯವೇ ಸರಿ........ ಅಷ್ಟಕ್ಕೂ ಡಾಕ್ಟರು, ನಿನಗೆ ಸುಲಭವಾಗಿಯೆ ನಾರ್ಮಲ್ ಡೆಲಿವರಿ ಆಗುತ್ತದೆ ಎಂದಿರುವರಲ್ಲ.... ” ಇನ್ನೇತರ ಭಯವೇ ನಿನಗೆ... ? ನಿನಗೆ ದೇವರಲ್ಲಿ ತುಂಬಾ ಭಕ್ತಿಯಲ್ಲವೇ ಈ ಜೀವಸೃಷ್ಟಿ ಕಾರ್ಯದಲ್ಲಿ ನನಗೆ ಶಕ್ತಿ ಕೊಡು ದೇವರೇ......... ನನ್ನನ್ನು ಸುಲಭವಾಗಿ ದಾಟಿಸು ಹೆರಿಗೆ ನೋವಿನಿಂದಲೇ.. ನನ್ನ ಕರುಳ ಕುಡಿಯನ್ನನೋಡುವುದರಲ್ಲರುವ ನಿನ್ನ ಬ್ರಹ್ಮಾನಂದವನ್ನು ಕರುಣಿಸೋ ತಂದೇ... ಎಂದೇ ದಿನವೂ ಪ್ರಾರ್ಥಿಸು ನೀನು ! ಸಾವಕಾಶ ನುಡಿದಿದ್ದ ಹೆಂಡತಿಗೆ ಮಹೇಶ.
ತಿಂಗಳು ದಿನಗಳು ಸರಿಯಾಗಿಯೆ ತುಂಬಿದ್ದವು. ಸುಲಕ್ಷಣಾ ಸುಲಭವಾಗಿಯೆ ಹೆಣ್ಣು ಮಗುವಿನ ತಾಯಿಯಾಗಿದ್ದಳು. ಅವಳು ಅನುಭವಿಸಿದ ಲೇಬರ್ ಪೈಯಿನ್ ಹೇಗಿತ್ತೇಂದು ಮಹೇಶ ಛೇಡಿಸಿ ಕೇಳಿದ್ದ. ಆಕೆ ಅರ್ಥಗರ್ಭಿತ ನಗೆ ನಕ್ಕಳು. “ ಅದನ್ನೇ.... ಯಾವ ಹೆಣ್ಣಿನಿಂದಲೂ ವಿವರಿಸಲಿಕ್ಕಾಗಲ್ಲ.... ನೀವು ಹೆಣ್ಣಾಗಿಯೆ ಹುಟ್ಟಿ ಅನುಭವಿಸ ಬೇಕಷ್ಟೇ....” ಮತ್ತೆ ನಸು ನಕ್ಕಳು.
“ ಅಬಬ್ಬಾ ! ಅದೆಷ್ಟು ಬುದ್ದಿವಂತೆಯಾಗಿಬಿಟ್ಟೆ ನೀನು, ” ಎಂದ. “ ಅಲ್ನೋಡಿ...... ನಿಮ್ಮ ಮಗಳೂ ನಿಮ್ಮನ್ನ ನೋಡಿ ನಗುತ್ತಿದ್ದಾಳೆ...”
“ ಈಗಲೇ ನಗುತ್ತಾಳೇನು ? ನನಗೇನು ಕಾಣಿಸ್ತಾ ಇಲ್ವೆ ..”
“ ಅದು ತಾಯಿ ಕಣ್ಣಿಗೆ ಮಾತ್ರ ತಕ್ಷಣವೇ ಕಾಣಿಸುತ್ತೇರಿ.... ” ಅಂದಳು.
“ ಸರಿ ಬಿಡು ... ನಮ್ಮನ್ನ ಗುರುತಿಸಲಿಕ್ಕೆ ಮೂರು ತಿಂಗಳೇ ಬೇಕೇನೋ ಅದಕ್ಕೆ ” ಎಂದ.
“ ಮೂರು ತಿಂಗಳೇಕೆ ? ಎರಡೇ ತಿಂಗಳು ಸಾಕು ಈಗಿನ ಮಕ್ಕಳಿಗೆ... ”
“ ಅದೂ ಹೆಣ್ಣು ಮಗುವಿಗೆ ಒಂದೇ ತಿಂಗಳು ಸಾಕೇನೋ...” ಅಂದಿದ್ದ.
“ ಅದೇನದೂ ಗಂಡ ಹೆಂಡತಿ ಸರಸ ಸಂಭಾಷಣೆ ... ನಿಮ್ಮನ್ನ ನೋಡಿ ಈಗ ನಿಜಕ್ಕೂ ಸಂತೋಷವಾಯ್ತಪ್ಪ. ” ಅಷ್ಟರಲ್ಲಿ, ಅಲ್ಲಿಗೆ ಗಂಜಿಯೊಂದಿಗೆ ಬಂದ ಅವನ ಅತ್ತೆ ಮೀನಾಕ್ಷಮ್ಮ ಹೇಳಿದರು.
ದಿನಗಳೇನು ಹೋಗಿ ಬಿಡುತ್ತವೆ. ವರ್ಷಗಳೋ ಎಣಿಕೆಗೆ ಬರುತ್ತಲೇ ಇರುತ್ತವೆ. ಈಗ ಪ್ರೀತಿಗೆ ಮೂರು ವರ್ಷಗಳು. ಪುಟ್ಟ ಹುಡುಗಿ. ಹೆಸರು ಸುರಮ್ಯ. ಮನೆಯ ಒಳಗೆ ಹೊರಗೆ ಗದ್ದಲ ಕಲ ಕಲ ಕಲಹ ಮಾಡಿಕೊಂಡು ಆಡಿಕೊಳ್ಳುತ್ತಾಳೆ.ಸುಲಕ್ಷಣಾದ ಮನದ ಮೂಲೆಯಲ್ಲಿನ್ನೂ ಆತಂಕದ ಛಾಯೆ ಅಡಗಿ ಕುಳಿತಿದೆಯಲ್ಲ. ಅದರ ಅಂದೋಲನಕ್ಕೆ ಕೊನೆಯೆಂದು ....? ಈಗ ಸಾವೆಂಬ ಭೂತ ಮತ್ತೊಂದು ಬಗೆಯಲ್ಲಿ ಅವಳನ್ನು ಅವಳ ಮಗುವಿನೊಂದಿಗೆ ಆಡಿಸಿದೆಯಲ್ಲ..... ಸುರಮ್ಯ ಒಂದು ಘಳಿಗೆ ಕಣ್ಮರೆಯಾಗುವ ಹಾಗಿಲ್ಲ. ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಒಂಚೂರು ಕಿರಿಕಿರಿ ಕಸಿವಿಸಿಯಾದರೂ ಆತಂಕ ಪಡುವವಳಲ್ಲ... “ ಏನ್ ಮಗೂನೊ ಏನೋ.... ಎಲ್ಲಂದರಲ್ಲಿ ಹೋಗಿ ಬಿಡುತ್ತೆ..... ಅವಿತಿಟ್ಟು ಕೊಂಡು ಕಾಡಿಸುತ್ತೇ.... ” ಎಂದು ಹಲುಬುತ್ತಾಳೆ. “ ಪುಟ್ಟ ಮಕ್ಕಳೇ ಹಾಗೆ ಬಿಡೇ... ಅವಕ್ಕೆ ಏನೆಲ್ಲವೂ ಆಟವೇ.... ” ಮೀನಾಕ್ಷಮ್ಮನವರೊಂದಿಗೆ ಮಹೇಶನೂ ದನಿಗೂಡಿಸುತ್ತಾನೆ. ಆದರೂ ಆಕೆಗೆ ಏನೋ ಕಳವಳವೇ.
“ ಹಾಗಲ್ಲರೀ .... ಹೀಗೆಲ್ಲ ಅವಿತಿಟ್ಟುಕೊಂಡು ಆಟವಾಡಿಸೋ ಮಗು ಬದುಕೊಲ್ಲವಂತೆ... ಹೆತ್ತವಳ ಸಂಕಟ ನಿಮಗೆ ಹೇಗೆ ಗೊತ್ತಾಗಬೇಕ್ರಿ.....” ಅನ್ನಬೇಕೇ .... ಮಹೇಶ ಉಶ್ ಪ್ಪಾ .... ಎಂದು ಸುಸ್ತಾದವನಂತೆ ಕುಳಿತಿದ್ದ.
“ ಅಲ್ವೇ .... ನೀನು ಹೆತ್ತವಳೇ.... ನಾನು ಅದರ ತಂದೆ ಕಣೇ..” ಎನ್ನುತ್ತಿದ್ದಂತೆ ಸುರಮ್ಯ ಓಡೋಡಿ ಬಂದವಳೆ ಪಪ್ಪಾ... ಎಂದು ಕೊರಳಿಗೆ ತನ್ನ ತೋಳುಗಳ ಮಾಲೆ ಹಾಕಿದ್ದಳು.... “ ಇದರ ಮೇಲೇ ನನಗೂ ಪ್ರಾಣ ಇಗೋ ನಾನು ನೆನಪಿಸಿಕೊಳ್ಳುತ್ತಿದ್ದಂತೇನೇ ಓಡಿ ಬಂದೇ ಬಿಟ್ಟಳಲ್ಲ... ನೂರು ವರ್ಷ ಕಣೇ ಇವಳಿಗೆ ” ಅಂದಿದ್ದ.
ಸುಲಕ್ಷಣಾ ಮೋರೆ ಊದಿಸಿಕೊಂಡು ಅಡಿಗೆ ಮನೆಗೆ ಹೊರಟು ಹೋಗಿದ್ದಳು.
ಸುರಮ್ಯಳಿಗೆ ಒಂದು ದಿನದ ಮಟ್ಟಿಗೆ ಜ್ವರ ಬರೊ ಹಾಗಿಲ್ಲ. ಆಗಲೂ ಅಷ್ಟೇ ಪರಿತಾಪ ಆಕೆಯದು. ತಾಯಿ ಮೀನಾಕ್ಷಮ್ಮ ತಮ್ಮ ಅನುಭವೀಕ ನುಡಿಗಳಿಂದ ಸಂತೈಸಿದರೂ ಸಮಾಧಾನವಾಗೋದು ಅಷ್ಟಕಷ್ಟೇ... ಅಷ್ಟೇಕೆ ಈಗಲೂ ಟಿ.ವಿ. ಸಿನಿಮಾ, ಸೀರಿಯಲ್ ಗಳಲ್ಲಿ ಒಂದು ಸಾವಿನ ದೃಶ್ಯ ಬಂದರೂ ಅವಳ ಎದೆ ಬಡಿತ ತೀವ್ರವಾಗುತ್ತದೆ. ಯಾವುದೋ ಸೀರಿಯಲ್ ಒಂದರಲ್ಲಿ ತಾಯಿಯೊಬ್ಬಳು ತನ್ನ ಮಗುವಿನ ವಯಸ್ಸಿನದೇ ಹೆಣ್ಣು ಮಗುವನಗನು ಅಪಘಾತದಲ್ಲಿ ಕಳೆದುಕೊಳ್ಳುತ್ತಾಳೆ. ಅವಳು ರೋಧಿಸುತ್ತಿದ್ದರೆ ಇವಳು ಅವಳೋಂದಿಗೆನೆ ನಡುಗುವ ದನಿ ತೇಲಿಸುತ್ತಾ ಏನೇನೋ ತೊದಲುತ್ತಾಳೆ. ಆಗ ಸುರಮ್ಯ ಎದುರಿಗೆ ಇಲ್ಲದೇ ಹೋದರಂತೂ ಕೇಳುವುದೇ ಬೇಡ.... ಅಂತಹ ಸಂಧರ್ಭದಲ್ಲಿ ಈ ಅಪರೂಪದ ಹೆತ್ತ ತಾಯಿಯನ್ನು ಸುಧಾರಿಸುವುದರಲ್ಲಿ ಅತ್ತೆ ಅಳಿಯನಿಗೆ ಸಾಕು ಸಾಕಾಗಿತ್ತು.
ಃಃಃಃಃಃಃಃಃಃಃಃಃಃಃಃಃಃಃ
ಮಹೇಶ ತಾನು ಆಯ್ದುಕೊಂಡ ಕಲಾ ಮಾಧ್ಯಮದಲ್ಲಿ ಪಕ್ವತೆಯ ಹಾದಿ ಹಿಡಿದು ಗಮನಾರ್ಹ ಸಾಧನೆ ಮಾಡಿದ್ದಾನೆ. ಮುಖ್ಯವಾಗಿ ಸ್ತ್ರೀ ಸೌಂಧರ್ಯದತ್ತಲೆ ಅವನ ಒಲವಿದ್ದರೂ ವಿಶ್ವದ ಮಹಾನ್ ಸಂತರ ಜ್ಞಾನಿಗಳೂ, ಚರಿತ್ರಾರ್ಹ ವ್ಯಕ್ತಿಗಳೂ, ಉದ್ದಾಮ ಪಂಡಿತರ, ದೇಶದ ನೇತಾರರ, ರಾಜಕೀಯ ಮುತ್ಸದ್ದಿಗಳೂ, ಹೀಗೆ ಅನೇಕ ಗಣ್ಯ ಮಹನೀಯರ ಭಾವ ಚಿತ್ರಗಳನ್ನು ರಚಿಸಿದ್ದಾನೆ. ದೇಶದ ನಾನಾ ಕಡೆ ಆರ್ಟ್ ಗ್ಯಾಲರಿಗಳಲ್ಲಿ ಅವನ ಚಿತ್ರಗಳು ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿವೆ. ಕೆಲವೊಂದು ವಿದೇಶಗಳಲ್ಲೂ ಹೆಸರಾಗಿ ಅತ್ಯುತ್ತಮ ಛಾಯಗ್ರಾಹಕನೂ ಆಗಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾನೆ. ಇತ್ತೀಚೆಗೆ ಕಂಪ್ಯೂಟರ್ ಗ್ರಾಫಿಕ್ಸ್ ಪರಿಚಯವನ್ನೂ ಮಾಡಿಕೊಂಡು ಅದರಲ್ಲೂ ಕೈಯಾಡಿಸಿ ಪರಿಣಿತಿ ಗಳಿಸುತ್ತಿದ್ದಾನೆ. ಹೀಗೆ ಸುಪ್ರಸಿದ್ಧನಾದ ಕಲಾವಿದನ ಬಳಿಗೆ ಎಲ್ಲರೂ ಹುಡುಕಿಕೊಂಡು ಬರುವವರೇ..... ಅವರಲ್ಲಿ ಕಾಲೇಜು ಹುಡುಗ ಹುಡುಗಿಯರು, ಸಿನಿಮಾ ನಟ, ನಟಿಯರೂ, ಹಾಗೂ ಟಿ.ವಿ. ಸಿರಿಯಲ್ ಗಳಿಗಾಗಿ ವಿವಿಧ ಭಾವ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳಬಯಸುವ ನವ ತಾರುಣ್ಯದ ಯುವಕ/ಯುವತಿಯರ ಹಿಂಡು ಹಿಂಡೇ ಅವನ ಸ್ಟುಡಿಯೋ ದಿಕ್ಕಿಗೆ ಕ್ಯೂನಲ್ಲಿ ನೆರೆದಿರುತ್ತಿತ್ತು.... ಅಂಥವರಲ್ಲಿ ಕೆಲ ಸುಂದರ ಹೆಣ್ಣುಗಳಿದ್ದರಲ್ಲ ಅವನ ಸ್ನೇಹ ಸಂಬಂಧ ಬಯಸಿ ಬಂದವರೂ ಇದ್ದರು. ಅವನ ಆಫೀಸಿನವಳೆ ಆದ ಹವ್ಯಾಸಿ ಕಲಾವಿದೆ ಮಾಲಳಂತೂ ಅವನ ಬೆನ್ನು ಬಿಡದೆ ಅದೆಷ್ಟೊ ಕಾಡಿದ್ದಳೋ. ಆದರೆ, ಮಹೇಶ ಕಲಾ ದೃಷ್ಟಿಯಲ್ಲಿ ಅವರನ್ನೆಲ್ಲ ಓಲೈಸಿ ಸಂತೈಸಿ ಕಳುಹಿಸುತ್ತಿದ್ದನೇ ಹೊರತು, ಅಪ್ಪಿ ತಪ್ಪಿಯೂ ಅವರೊಡನೆ ಅದಕ್ಕಿಂತ ಹೆಚ್ಚಾಗಿ ಮುಂದುವರೆದವನಲ್ಲ...ಇದ್ದುದ್ದರಲ್ಲಿ ಅವನು ತೀರ ಹಚ್ಚಿಕೊಂಡವಳೆಂದರೆ ಸಂಧ್ಯಾ ಒಬ್ಬಳೇ.... ಆಕೆ ದೂರದ ಮುಂಬೈನಲ್ಲಿದ್ದಳಲ್ಲ... ಆದರೇನು! ಆಕೆ ನಿಜಕ್ಕೂ ಒಬ್ಬ ಒಳ್ಳೆಯ ಸ್ನೇಹಿತೆ- ಹಿತಚಿಂತಕಳು. ಈಗಿತ್ತಲಾಗಿ ಮಹೇಶ ಪ್ರತಿಯೊಬ್ಬ ಗಂಡಸಿಗೂ ಅವನು ಅತಿಯಾಗಿ ಪ್ರೀತಿಸುವ ಹೆಂಡತಿಯಲ್ಲದೇನೆ ಸಂಧ್ಯಾಳಂಥ ಒಳ್ಳೆಯ ಹೆಣ್ಣೊಬ್ಬಳು ಸ್ನೇಹಿತೆಯಾಗಿದ್ದರೆ ಅವನ ಬದುಕು ಇನ್ನಷ್ಟು ಸುಂದರವಾದೀತೆಂದೂ ಆಲೋಚಿಸುತ್ತಾನೆ. ಅವನು ಇತ್ತೀಚೆಗೆಷ್ಡೇ ಬರೆದ ತನ್ನ ಹೆಂಡತಿ ಸುಲಕ್ಷಣಾಳ ಭಾವ ಚಿತ್ತವನ್ನು ಮುಂಬೈನಲ್ಲಿ ನಡೆದ ಸ್ಪರ್ಧೆಗೆ ಕಳುಹಿಸಿದ್ದನಲ್ಲ.... ಅದಕ್ಕೆ ಪ್ರಥಮ ಬಹುಮಾನ ಬಂದಿದೆ ಎಂಬ ಸಿಹಿ ಸುದ್ದಿಯನ್ನು ಅವಳೇ ಟೆಲಿಪೋನ್ ಮೂಲಕ ತಿಳಿಸಿದ್ದಳು. ಬಹುಮಾನ ವಿತರಣೆ ಇಂತಹ ದಿನ ಇದೆ. ನೀವು ಮುಂಬೈಗೆ ಆ ದಿನ ಬರಬೇಕಾಗುತ್ತದೆ ಎಂದೂ ಹೇಳಿದ್ದಳಲ್ಲ...
ಮಹೇಶ ಮುಂಬೈಗೆ ಹೊರಡುವ ಆ ದಿನ ಬಂದೇ ಬಂದಿತ್ತು. ಸುಲಕ್ಷಣಾಳಿಗೆ ಹೇಳಿದ. ಆಕೆಯೆ ಮುಂದಾಗಿ, “ ನೀವು ಸಂಧ್ಯಾಳ ಮನೆಯಲ್ಲಿ ಉಳಿದುಕೊಂಡು ಬನ್ನಿ. ಆಕೆ ಚೆನ್ನಾಗಿ ನೋಡಿಕೊಳ್ತಾಳೆ. ಅವರ ಮನೆಯೇನು ಒಂದು ದೊಡ್ಡ ಗೆಸ್ಟ್ ಹೌಸ್ ತರಾ ಇದೆಯಲ್ಲ... ” ಎಂದು ನಕ್ಕಳು. ಮಹೇಶ ಸಖೇದಾಶ್ಚರ್ಯದಿಂದ ಅವಳ ಮೋರೆ ನೋಡಿದ್ದಾನೆ. “ ಈಗ ನೀವೇನೂ ಹೇಳುವುದು ಬೇಡ ... ನನಗೆಲ್ಲ ಗೊತ್ತಿದೆ. ನನ್ನ ಯಜಮಾನ್ರ ಸ್ವಭಾವ ಹೇಗೆಂತ...” ಪುನಃ ಮೋಹಕ ನಗೆ ನಕ್ಕಳು.
ಎಲ ಇವಳಾ ನನ್ನ ಬಗ್ಗೆ ಎಷ್ಟೊಂದು ಭರವಸೆ ಇವಳಿಗೆ. ಇನ್ನು ಸಾವನ್ನು ದಿಕ್ಕರಿಸುತ್ತಾ ಬದುಕಿನ ಬಗ್ಗೆ ಭರವಸೆ ಬರುವುದು ಯಾವಾಗಲೋ ಅನ್ನಿಸದಿರಲಿಲ್ಲ. ಮಗು ಸುರಮ್ಯಳಿಗೆ ಟಾ ಟಾ ಹೊರಟು ನಿಂತಿದ್ದ.
ಮತ್ತದೇನೋ ಆತಂಕ ಭಯವೇ ಕಾಡಿದಂತೆ ಸುಲಕ್ಷಣಾ ತಳಮಳಿಸುವುದನ್ನು ಕಂಡು ಮಹೇಶ ಮಂದಸ್ಮಿತ ನಗೆಯಲ್ಲೆ ಅವಳನ್ನು ಎದೆಗಪ್ಪಿಕೊಂಡು ಧೈರ್ಯ ಹೇಳಿದ್ದ. ನನ್ನ ಸಹೋದ್ಯೊಗಿ ರಾಮಚಂದ್ರ ಮೂರ್ತಿ ನಮ್ಮ ಮನೆ ಪಕ್ಕದಲ್ಲೆ ಇದ್ದಾನೆ. ಅವನ ಹೆಂಡತಿ ಜಯಲಕ್ಷ್ಮಿಯಂತೂ ನಿನಗೆ ಬೇಕಾದವಳೆ ಆಗಿದ್ದಾಳಲ್ಲ ಎಂದೇ ಸಮಾಧಾನದ ನುಡಿಗಳನ್ನಾಡಿ ಮುಂಬೈಗೆ ಪ್ರಯಾಣ ಬೆಳೆಸಿದ್ದ ಮಹೇಶ.
ಹೌದು, ಇಂತಹ ಸಂದರ್ಭದಲ್ಲಿ ಹೆಣ್ಣೊಬ್ಬಳಿಗೆ ನೆರೆ ಮನೆಯ ಗಂಡಸಿನ ಸಹಾಯ ಅತ್ಯಗತ್ಯವಾಗುತ್ತದೆ. ಅಂದರೇನು ! ಹೆಣ್ಣಾದವಳಿಗೆ ಗಂಡನಲ್ಲದೇ ಒಬ್ಬ ಒಳ್ಳೆ ಸ್ನೇಹಿತನ ಅಗತ್ಯವಿದ್ದೇ ಇರುತ್ತದೆಂದೆ ಮಹೇಶ ಎಷ್ಟೋ ಬಾರಿ ಸುಲಕ್ಷಣಾಳಿಗೆ ಹೇಳಿಯೂ ಇದ್ದಾನೆ. ಆದರೆ, ಆತ ಒಳ್ಳೆಯ ಸಂಭಾವಿತನೇ ಇರಬೇಕಷ್ಟೇ... ರಾಮಚಂದ್ರಮೂರ್ತಿ ಆ ಮಾತಿಗೆ ತೆಗೆದು ಹಾಕುವಂತಿಲ್ಲ. ಆತನ ಹೆಂಡತಿಯೂ ಅಷ್ಟೇ. ಒಬ್ಬರನ್ನೊಬ್ಬರು ಸೂಕ್ಷ್ಮವಾಗಿ ಆರಾಧಿಸುವ ಪರಿ, ಸದಾ ಅರಿತು ಕೊಂಡು ಹೋಗುವ ರೀತಿ ನಿಜಕ್ಕೂ ಅನುಕರಣಿಯವೇ ಸರಿ.
ಜಯಲಕ್ಷ್ಮಿ ಸುಲಕ್ಷಣಾಳಿಗೆ ಅಕ್ಕನ ಹಾಗೆಯೆ ಎಷ್ಟೋ ಕೆಲಸಗಳಲ್ಲಿ ಈಗಾಗಲೇ ನೆರವಾಗಿದ್ದಾಳಲ್ಲ... ಇನ್ನೇನು ಸುಲಕ್ಷಣಾಳಿಗೆ ಆತಂಕ ಭಯವೇತರದೋ...
************************************ ಮನುಷ್ಯನ ಬೆನ್ನ ಹಿಂದೆಯೆ ಹುಟ್ಟಿನೊಂದಿಗೆ ಸಾವು ಬೆನ್ನಟ್ಟಿಕೊಂಡು ಬರುತ್ತಲೇ ಇರುತ್ತದೆಂಬುದು ಕಠೋರ ಸತ್ಯ !.... ಆಕಸ್ಮಿಕ ಅಘಾತವೊಂದು ಸಂಭವಿಸಿದರಂತೂ ಅದನ್ನು ಎದೆಯೊಡ್ಡಿ ಎದುರಿಸುವುದನ್ನೂ ನಾವು ತಿಳಿದಿರಬೇಕು. ಯಾರಿಗೋ ಆದದ್ದು ತನಗಾಗುವುದಿಲ್ಲವೆಂದು ನಿಶ್ಚಿಂತೆಯಿಂದ ಇರುವವರೇ ಹೆಚ್ಚು ಮಂದಿಯಲ್ಲ... ಉಹೂಂ, ಸಾವಿನ ಸಾಮೀಪ್ಯದಲ್ಲೇ ಬದುಕಿನ ನಗ್ನ ಸತ್ಯದ ದರ್ಶನವಾಗುವುದೂ, ಎಷ್ಟೋ ವೇಳೆ ಮಾನಸಿಕ ತಳಮಳ ಬೇಗುದಿ ಎಲ್ಲವೂ ಒಮ್ಮಲೆ ಮಾಯವಾಗಿ ವ್ಯಕ್ತಿತ್ವದಲ್ಲಿ ಸ್ಥಿರತೆ ಪ್ರಾಪ್ತವಾಗುವುದೂ ಕೂಡ ಆವಾಗಲೇ... ಯಾವೊಂದು ಬುದ್ದಿವಾದವೂ ವೈದ್ಯಕೀಯ ಚಿಕಿತ್ಸೆಗಳೂ ಪರಿಣಾಮ ಬೀರದಿರುವಾಗಲೂ ಆ ಪರಿಯ ಆಘಾತವೊಂದು – ಷಾಕ್ ಟ್ರೀಟ್ ಮೆಂಟ್ ತರುವ ಪರಿವರ್ತನೆ ಅದ್ಭುತ ಪವಾಡವೇ ಆದೀತಲ್ಲ....
ಮುಂಬೈನಲ್ಲಿ ಕಲಾವಿದರ ಸಮ್ಮೇಳನದಲ್ಲಿ ತನಗೆ ದೊರೆತ ಪ್ರಶಸ್ತಿಗೆ ಸನ್ಮಾನವನ್ನೂ ಪಡೆದು ಕಾರಿನಲ್ಲಿ ಹಿಂದಿರುಗುತ್ತಿದ್ದ ಮಹೇಶ. ಚೌಪಾಟಿಯ ರಸ್ತೆ ತಿರುವೊಂದರಲ್ಲಿ ಎದುರಿಗೆ ಬರುತ್ತಿದ್ದ ವಾಹನವೊಂದರ ಚಾಲಕ ಅವರನ್ನು ಹಿಂದೆ ತಕ್ಷಣ ಜಾಗರೂಕನಾಗಿದ್ದ. ಆದರೂ ಅಪಘಾತ ಸಂಭವಿಸಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹೇಶನ ತಲೆಗೆ ಪೆಟ್ಟು ಬಿದ್ದಿತ್ತು. ಅವನನ್ನು ನಾನಾವತಿ ಆಸ್ಪತ್ರೆಗೆ ಸೇರಿಸಿದ್ದರು.
ಇತ್ತ ಶಿವಮೊಗ್ಗಕ್ಕೆ ಫೋನಿನಲ್ಲಿ ಸುದ್ದಿ ತಿಳಿಸಿದವಳು ಸಂಧ್ಯಾ.
ಸುಲಕ್ಷಣಾ ತಾನು ಹೇಗೆ ಇದ್ದಕ್ಕಿದ್ದ ಹಾಗೇನೆ ಮುಂಬೈಗೆ ಹೋಗುವುದೋ ತಿಳಿಯದೇನೆ ಗಾಬರಿಯಿಂದ ಚಡಪಡಿಸತೊಡಗಿದಳು. ಆಗ ಸಹಾಯಕ್ಕೆ ಬಂದವನೇ ಮಹೇಶನ ಸಹೋದ್ಯೋಗಿ ರಾಮಚಂದ್ರ ಮೂರ್ತಿ. ಸಂಧ್ಯಾಳಿಂದ ಪಡೆದಿದ್ದ ಸಂಪರ್ಕ ವಿಳಾಸವ ಮತ್ತು ಟೆಲಿಫೋನ್ ನಂಬರ್ ಎಲ್ಲವನ್ನೂ ತೆಗೆದುಕೊಂಡು ಕೂಡಲೇ ನಾನಿದ್ದೇನೆ ಹೊರಡಿ. ನನ್ನ ಸ್ನೇಹಿತನಿಗಾಗಿ ಅಷ್ಟೂ ಮಾಡದಿದ್ದರೆ ಹೇಗೆ... ? ಎಂದವನೇ ಸುಲಕ್ಷಣಾಳನ್ನು ಕರೆದುಕೊಂಡು ಕೂಡಲೇ ಮುಂಬೈಗೆ ಪಯಣಿಸಿದ್ದ.
ಮೀನಾಕ್ಷಮ್ಮ ಈ ದುರ್ಭರ ಸನ್ನಿವೇಶವನ್ನು ಅರ್ಥಮಾಡಿಕೊಂಡವರೇ, ನೀವಿಬ್ಬರೂ ಹೊರಡಿ. ನಾನು ಇಲ್ಲೇ ಇದ್ದು ಮಹೇಶನನ್ನು ಕರೆದುಕೊಂಡು ಬರುವವರೆಗೂ ಮಗುವನ್ನು ನೋಡಿಕೊಂಡಿರುತ್ತೇನೆ. ಎಂದು ವಿಶ್ವಾಸದಿಂದಲೇ ಹೇಳಿದರು.
ಪ್ರಯಾಣದಲ್ಲಿ ರಾಮಚಂದ್ರಮೂರ್ತಿ ಮುಂಬೈ ತಲುಪುವವರೆಗೆ ಸುಲಕ್ಷಣಾಳನ್ನು ಅದೆಷ್ಡು ಕಾಳಜಿಯಿಂದ ನೋಡಿಕೊಂಡನೋ... ಅದನ್ನು ಪದಗಳಲ್ಲಿ ವಿವರಿಸಲು ಅವಳಿಗೆ ಸಾಧ್ಯವಾಗಲಾರದೆನೋ... ಹೆಣ್ಣು ಮದುವೆಯಾಗಿದ್ದರೇನು, ಎಷ್ಟೋ ವೇಳೆ ಹತ್ತಿರದ ಬಂಧು ಬಳಗದವರಿಗಿಂತ ಇಂಥ ಒಳ್ಳೆಯ ಸ್ನೇಹಿತನೊಬ್ಬನ ಅಗತ್ಯ ಖಂಡಿತವಿರುತ್ತದೆ ಎನ್ನಿಸದಿರಲಿಲ್ಲ ಸುಲಕ್ಷಣಾಳಿಗೆ.
ಮುಂಬೈ ತಲುಪಿದಾಗ ಬೆಳಗಿನ ಹತ್ತುಗಂಟೆಯಾಗಿತ್ತು.
ಆಸ್ಪತ್ರೆಯಲ್ಲಿ ಮಹೇಶನಿದ್ದ ವಾರ್ಡ್‌ಗೆ ಹೋಗಿದ್ದರು. ಅವನ ತಲೆಗೊಂದು ಬ್ಯಾ0ಡೇಜ್ ಸುತ್ತಿದ್ದರು. ಮತ್ತೆ ಸಣ್ಣಪುಟ್ಟ ಗಾಯಗಳಾಗಿದ್ದವಷ್ಟೇ. ಸಾವಿನಿಂದ ಅದಾಗಲೇ ಪಾರಾಗಿದ್ದ ಅವನು ಮುಗುಳ್ನಗೆಯಲ್ಲೆ ಇವರನ್ನು ಸ್ವಾಗತಿಸಿದ್ದ. ಹಗಲಿರುಳೆನ್ನೆದೇ ಅವನ ಬಳಿಯೇ ಸೇವೆಯಲ್ಲಿ ನಿರತಳಾದ ಸಂಧ್ಯಾ ಕೂಡ ಅಲ್ಲೆ ಇದ್ದಳು.
“ ನಾನು ಇವರನ್ನು ಮುಂದೆ ಕಾರಿನಲ್ಲಿ ಕಳುಹಿಸಿದ್ದೇ ತಪ್ಪಾಯಿತು. ನಾನು ಜತೆಗಿದ್ದು ನನ್ನದೇ ಕಾರಿನಲ್ಲಿ ಕರೆದುಕೊಂಡು ಬಂದಿದ್ದರೆ ಹೀಗಾಗುತ್ತಿರಲಿಲ್ಲವೇನೋ...”
ಸಂಧ್ಯಾ ಹೇಳುವಾಗ ಆಕೆ ಸ್ವರ ಗದ್ಗದಿತವಾಗಿತ್ತು. “ ಸಂಧ್ಯಾ ! ನಿನಗೆ ಇಲ್ಲದ ತೊಂದರೆ ಕೊಟ್ಟೆ ನಾನು. ನಿನಗೆ ನಿನ್ನದೇ ಆದ ಸಮಸ್ಯೆಗಳಿರೋವಾಗ ... ಈ ನನ್ನ ನೋವು ನಿನಗೇತಕೇಂತ... ” ಮಹೇಶನೆಂದ.
ಸಂಧ್ಯಾ ಇತ್ತೀಚಿಗೆ ತನ್ನ ಗಂಡನಿಂದ ಕಾನೂನು ಪ್ರಕಾರ ವಿಚ್ಚೇದನ ಪಡೆದಿದ್ದಾಳೆ. ಅವಳೀಗ ಬಾಂದ್ರದಲ್ಲಿ ತನ್ನದೇ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಾಳೆ. ಪ್ರೈಮರಿ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಾಳೆ. ಹೀಗಿರುವಾಗ ಅವಳೀಗೇಕೆ ನನ್ನ ಉಸಾಬರಿ ಖರ್ಚುವೆಚ್ಚ ಎಂದೇ ಮಹೇಶನ ಭಾವನೆ. ಆದರೆ ಅವಳು ಕೇಳಬೇಕಲ್ಲ. ಏನು ಮಹೇಶ್ ನಾನು ನಿನಗೆ ಏನೂ ಅಲ್ಲವಾ ಎಂದೇ ಅತ್ತುಬಿಡುತ್ತಾಳಲ್ಲ.... ಇದೇನು ಬಿಡಿಸಲಾಗದ ಬಾಂಧವ್ಯ !
ಸುಲಕ್ಷಣಾಳಂತೂ ಸ್ತಬ್ದಳಾಗಿ ಬಿಟ್ಟಿದ್ದಾಳೆ ! ರಾಮಚಂದ್ರ ಮೂರ್ತಿಯೊಡನೆ ಮುಂಬೈವರೆಗೆ ಪ್ರಯಾಣಿಸುವಾಗಲೇ ಅವಳು ಮಾನಸಿಕ ಹೋರಾಟಕ್ಕೋಂದು ಹೊಸನೆಲೆ ಹೊಸ ಬದಲಾವಣೆ ದೊರೆತು ಅವಳು ತೀರ ಹೊಸ ಮನುಷ್ಯಳೆ ಆಗಿದ್ದಾಳೆ... ತನ್ನನ್ನು ನೋಡುತ್ತಿದ್ದಂತೇನೇ ಹೆಂಡತಿಯ ಆಕ್ರಂದನ ಮುಗಿಲು ಮುಟ್ಟುತ್ತದೆಂದೇ ಮಹೇಶ ಊಹಿಸಿದ್ದು ಸುಳ್ಳಾಗಿತ್ತು. ಆಕೆ ತೀರ ದಿಟ್ಟೆಯಾಗಿ ಕಂಗೋಳಿಸುತ್ತಿದ್ದಾಳಲ್ಲ... ಇದ್ದಕ್ಕಿದ್ದಂತೇ ಬಂದೆರಗುವ ಬದುಕಿನ ಈ ದುರ್ಭರತೆ ಸಾವಿನ ಬರ್ಭರತೆ ಅವಳ ಆಂತರ್ಯದಲ್ಲಿ ಮನೆ ಮಾಡಿದ್ದ ಆತಂಕ ಭಯ ಭೀತಿಗಳನ್ನು ದಿಕ್ಕಾ ಪಾಲಾಗುವಂತೆ ಹೀಗಾದ ಆಕಸ್ಮಿಕ ಷಾಕ್ ನಿಂದಲೇ ಹೊಡೆದೋಡಿಸಿಬಿಟ್ಟಿದ್ದವಲ್ಲ... ಒತ್ತಿ ಬರುತ್ತಿದ್ದ ಅಳುವನ್ನು ತಡೆದು ಅವಳು ಗಜಗಂಭೀರೆಯಾಗಿದ್ದಾಳೆ.
ರಾಮಚಂದ್ರ ಮೂರ್ತಿ ಸ್ವಲ್ಪಹೊತ್ತು ಕುಳಿತು ಸ್ನೇಹಿತನನ್ನು ವಿಚಾರಿಸಿಕೊಂಡ. ನಂತರ ಏನನ್ನಿಸಿತೋ ನಾನು ಇಲ್ಲೇ ಹೊರಗೆ ಹೋಗಿ ಬರುತ್ತೇನೆ. ಎಂದವನೇ ಹೊರಗೆ ಹೋಗಿಬಿಟ್ಟ. ಅದನ್ನು ಗಮನಿಸಿದ ಸಂಧ್ಯಾಳೂ ತಾನು ಹೊರಡಲನುವಾದಳು. ಮಹೇಶ, “ ಬೇಡ ಸಂಧ್ಯಾ..... ನೀನಿರು.. ನನ್ನವಳಿಗೆ ಸಮಾಧಾನ ಮಾಡಲು ನೀನೇ ಸರಿ... ” ಎಂದು ಅವಳ ಕೈ ಹಿಡಿದು ತಡೆದು ನಿಲ್ಲಿಸಿದ್ದ.
ಅವಳೂ ಕೂಡ ಸುಲಕ್ಷಣಾಲ ಮಗ್ಗುಲಿಗೇ ಕುಳಿತಳು. ಸಮುದ್ರದಲ್ಲಿ ಬಿರುಗಾಳಿಗೆ ಸಿಕ್ಕ ತರಗೆಲೆಯೆಂತೆ ಸುಲಕ್ಷಣಾಳ ಜೀವ ಹೊಯ್ದಾಡುತ್ತಿತ್ತಲ್ಲ.... ಈಗ ? ಅವಳು ಗಂಡ ಹಾಗೆನ್ನುತ್ತಿದ್ದಂತೆ- “ ಸಂಧ್ಯಾ ನೀವು ತಕ್ಷಣ ಇವರನ್ನ ಆಸ್ಪತ್ರೆಗೆ ಸೇರಿಸಿ ಸರಿಯಾಗಿ ನೋಡಿಕೊಳ್ಳದೇ ಹೋಗಿದ್ರೆ... ನನಗೆ.. ” ಎನ್ನುವಷ್ಡರಲ್ಲಿ ಅವಳಿಗೆ ದುಃಖ ಉಮ್ಮಳಿಸಿ ಬಂದಿತ್ತು.
ಸಂಧ್ಯಾ ಅವಳ ತಲೆದಡವಿದರೆ ಆಕೆ ಅವಳ ಮಡಿಲಲ್ಲೆ ಕಂಬನಿ ಮಿಡಿದಳು. ಮಹೇಶ ಈ ಮನೋಜ್ಞ ದೃಶ್ಯವನ್ನು ನೋಡಿ ಮನ ಹಗುರಮಾಡಿಕೊಂಡ... ಅವನ ತಲೆಗೆ ಆದ ನೋವೂ ಕಡಿಮೆ ಎನಿಸುತ್ತಿತ್ತು...
ಹೌದು, ಸಾವೊಂದು ಸೃಷ್ಟಿಯ ಕಠೋರ ಸತ್ಯ ! ಎಲ್ಲವನ್ನೂ ತ್ಯಜಿಸಿ ಸಾಯುವುದು ಸನ್ಯಾಸಿಯ ಬದುಕಾದರೆ, ಎಲ್ಲವನ್ನೂ ಬಯಸಿಯೆ ಕಡೆಗೂ ಸಾವನ್ನು ಗಂಭೀರವಾಗಿ ಇದಿರ್ಗೋಳ್ಳುವುದೇ ಸಂಸಾರಿಯ ಬದುಕಾಗುತ್ತದೆ... ಸುಲಕ್ಷಣಾ ತನ್ನನ್ನು ತಾನು ಸಾವರಿಸಿಕೊಂಡಿದ್ದಾಳೆ... “ ನಾನು ನನ್ನವರಿಗೆ ಒಂದಿಷ್ಟೂ ಸುಖ ಕೊಡಲಿಲ್ಲ .. ಅವರು ನಿರಾತಂಕದಿಂದ ಇರಲು ಬಿಡಲಿಲ್ಲ. ಯಾವೊಂದು ಅಲಳುಕಿಲ್ಲದೆ ಮೈಮರೆತು ಸುಖವನ್ನು ಅವರೊಡನೆ ಹಂಚಿಕೊಳ್ಳಲಿಲ್ಲ... ಅವರ ಹೃದಯದಲ್ಲಿ ಒಲವಿನ ಒಸಗೆಯದೆಷ್ಟು ಅಗಾಧ ! ಅವರ ದೈಹಿಕತೆ-ರಸಿಕತೆ ಎಂಬುದೋ ಬೆಳದಿಂಗಳ ಸಮುದ್ರದಲ್ಲಿ ಹಾಲಿನಂತಯೆ ಉಕ್ಕುತ್ತದೆ. ಅದೊಂದು ಜೀವ ಸಮುದ್ರವೇ... ಆ ಸಮುದ್ರದ ಅಲೆಗಳು ತಮ್ಮ ಸಹಜ ಅಬ್ಬರದಲ್ಲೆ ಅಪ್ಯಾಯತೆಯಿಂದಲೇ ತನ್ನನ್ನು ಬರಸೆಳೆದು ಅಪ್ಪಿಕೊಳ್ಳುತ್ತಿದ್ದರೆ ತಾನೇಕೆ ಅಂಜುತ್ತಿದ್ದೆ. ಅದೆಲ್ಲವೂ ಅತಿ ಕಾಮಿಯೊಬ್ಬನು ಸಾವಿಗೊಯ್ಯುವ ಅಬ್ಬರವೆಂದೇ ಭ್ರಮಿಸಿ ಭೀತಳಾಗಿ ನಡುಗುತ್ತಿದ್ದೆ.... ತಾನೊಂದು ಜುಳುಜುಳು ಹರಿವ ನದಿಯೆಂತೆಯೆ ಜೀವ ಸಮುದ್ರದ ಅಲೆಗಳ ಆಹ್ವಾನವನ್ನು ಸಹಜವಾಗಿಯೆ ಸ್ವೀಕರಿಸಿ ಅದರೊಡನೊಂದಾಗುವುದನ್ನೇ ನಿರಾಕರಿಸುವಷ್ಟು ಮೌಢ್ಯಳಾಗಿದ್ದೇನನೇಕೆ.. ದಂಪತಿಗಳ ಜೀವಿತ ಆ ಆಮಿತಾನಂದದಲ್ಲಿ ಸಾವನ್ನು ದಿಕ್ಕರಿಸುವ ಉತ್ಕಟತೆ ಮತ್ತೆ ಹೊಸ ಬೆಳಗಿನಲ್ಲಿ ಕಾಣುವ ಉತ್ಕರ್ಷವೇ ಅಡಗಿದೆಯಲ್ಲವೇ... ”
“ ಸುಲೂ ಏನ್ ಯೋಚಿಸುತ್ತಿರುವೇ... ” ಮಹೇಶ ಮಂದ ಸ್ವರದಲ್ಲಿಯೆ ಕೇಳಿದ.
“ ಏನಿಲ್ಲ ... ಆಕೆ ನಿಮ್ಮೊಡನೆ ಕಳೆದ ರಸನಿಮಿಷಗಳು ಮತ್ತೆ ಈ ಜೀವಕೆ ಮರುಕಳಿಸಿ ದಿವ್ಯ ಔಷಧಿಯಾಗಿವೆಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದಾಳೆ ಅಷ್ಟೇ ... ” ನಕ್ಕಳು ಸಂಧ್ಯಾ ಅರ್ಥಗರ್ಭಿತವಾಗಿಯೆ.
“ ಪರವಾಗಿಲ್ಲ.... ನೀನು ಕಲಾವಿದೆ ಮಾತ್ರವಲ್ಲ ಕವಿಯತ್ರಿಯೂ ಆಗಿರುವೆ... ” ಮಹೇಶನೆಂದ.
“ ಎಲ್ಲರ ಹೃದಯಗಳಲ್ಲೂ ಹೃದಯಗೀತೆಯೊಂದು ಅಜೀವ ಪರ್ಯಂತ ಶೃತಿ – ಲಯದೊಂದಿಗೆ ಮೀಟುತ್ತಲೇ ಇರುತ್ತದಲ್ಲ... ” ಮತ್ತೆ ಮಂದಸ್ಮಿತೆ ಅವಳು.
“ ನಿನ್ನೊಂದಿಗೆ ಮಾತನಾಡುವದೇ ಒಂದು ಹಿತವಾದ ಅನುಭವ ನೋಡು ” ಅವನೆಂದರೆ, “ ಹೌದೂರೀ.... ಅವರು ನಿಮ್ಮ ಸ್ನೇಹಿತೆಯಾಗಿರುವುದರಿಂದಲೇ ನಾನು ಅವರಿಂದ ಬದುಕಿನ ಬಗ್ಗೆ ಬಹಳ ಚಿಂತನೆ ಮಾಡುವುದನ್ನು ಕಲಿತೆನಲ್ಲ... ” ಸುಲಕ್ಷಣಾ ತಾನೂ ಮನಸಾರೆ ನಕ್ಕಳು.
“ ಮಗು ಸುರಮ್ಯ ಹೇಗಿದ್ದಾಳೆ ? ನಿನ್ನ ಅಮ್ಮ ... ? ” ಕೇಳಿದ. “ ಎಲ್ಲರೂ ನಿಮ್ಮನ್ನೇ ನೆನಪಿಸಿಕೊಳ್ಳುತ್ತಿದ್ದಾರೆ. ನಿಮ್ಮ ಬರುವಿಕೆಯನ್ನೇ ಎದುರು ನೋಡುತ್ತಿರುತ್ತಾರಲ್ಲ....” ಅವಳೆಂದಳು.
“ ನನ್ನ ಸ್ನೇಹಿತ ರಾಮಚಂದ್ರ ಮೂರ್ತಿಯಿಂದ ನಿನಗೆಷ್ಟೋ ಸಹಾಯವಾಯ್ತಲ್ಲ ...” ಎನ್ನುತ್ತಿದ್ದಂತೇ ಮೂರ್ತಿ ಅಲ್ಲಿಗೆ ಪ್ರತ್ಯಕ್ಷನಾದ.
ಅವನೊಂದಿಗೆ ಹೆಂಡತಿಯ ಮುಖದಲ್ಲೀಗ ನಿಚ್ಚಳ ನಿರ್ವಿಕಾರ ಭಾವವನ್ನೇ ಗುರುತಿಸಿದ ಮಹೇಶ.
ಮುಗಿಯಿತು.
No comments:
Post a Comment