ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ. ಹಾಗೇ ದೂರ ದಿಗಂತದತ್ತ ಕಣ್ಣಂಚಿನವರೆಗೂ ಎಟುಕದಂತೆ ಗೋಚರಿಸುವ ಕ್ಷಿತಿಜದಾಚೆಗೆ ಜೀವಿತದ ಏನೆಲ್ಲ ನಿಗೂಢ ರಹಸ್ಯಗಳನ್ನು ಬೇಧಿಸುವ ತವಕವೋ, ಅದೇನು ಜನ ಜೀವನದ ಚಿಂತನಯೋ ಏನೋಂದು; ಹೇಳಲಾಗುವುದೇ ಇಲ್ಲ.
ಆದರೇನು ! ಆ ಸಮುದ್ರದ ಗಂಭೀರ ಅಲೆಗಳು, ಒಮ್ಮೆ ಜೀವನದ ಕಷ್ಟಕೋಟಲೆಗಳನ್ನು ಏಳುಬೀಳುಗಳಲ್ಲಿ ಪ್ರತಿನಿಧಿಸುವಂತೆ ಕಂಡರೂ, ಮತ್ತೊಮ್ಮೆ ತನ್ನೋಳಗೆ ಸೆಳೆದುಕೊಳ್ಳುವ ಒಲವಿನ ಮಹಾಪೂರದಂತೆ ಜೀವಸೆಲೆಯುಕ್ಕಿಸುವಾಗ ಮನದಾಳದಿಂದ ಹೊಮ್ಮಿದ ನಗೆ ತುಟಿಯಲ್ಲಿ ಮುಗುಳಾಗಿ ತೊನೆಯುತ್ತದೆಯಲ್ಲ... ಆಗ ಅವನು ಅವನಾಗಿ ಇಹ ಲೋಕದಲ್ಲಿ ಇರುವುದೇ ಇಲ್ಲವಲ್ಲ.... ಅದಕ್ಕೆ ಮುಂಬೈಗೆ ಬಂದನೆಂದರೆ, ಅದೆಂಥದೋ ಚುಂಬಕ ಶಕ್ತಿಗೆ ಒಳಗಾದವನಂತೆ ಈ ಕಡಲ ಕಿನಾರೆಗೆ ಬಂದೇ ತೀರುತ್ತಾನೆ.
ಈ ಸಮುದ್ರದ ದೃಶ್ಯವನ್ನು ಅನೇಕ ಬಾರಿ ತನ್ನ ಕಲೆಯ ಕೈ ಚಳಕದಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲಿಗೂ ಎಷ್ಟೇ ಸವಿದರೂ ಸವಿಯದ ದೃಶ್ಯಾವಳಿಯಲ್ಲೂ ಮೀಯುತ್ತಾ ಕುಳಿತೇ ಹೊತ್ತು ಕಳೆಯುತ್ತಾನೆ... ಭೇಲ್ ಪುರಿ, ಐಸ್ ಕ್ರೀಮ್ ಗಳನ್ನು ತಿನ್ನುತ್ತಾ ನಲಿದು ನಡೆಯುತ್ತಲಿರುವ ಸುಂದರ ಜೋಡಿಗಳತ್ತ ದೃಷ್ಟಿ ಹರಿಸುತ್ತಾ, ಅಲ್ಲೆ ಚೆಂಡು ಬೆಲೂನುಗಳೋಂದಿಗೆ ಕುಣಿವ ಪುಟ್ಟ ಮಕ್ಕಳ ಆಟದಲ್ಲೀ ಕಣ್ಣನ್ನು ಕೀಲಿಸುತ್ತಾನೆ.
ಮತ್ತೆ ಮತ್ತೆ ಬೇಡವೆಂದರೂ ವಿಶಾಲ ಸಮುದ್ರದ ರುದ್ರ ಗಂಭೀರ ಮೌನದಲ್ಲಿ ಲೀನನಾಗಿ ಬಿಡುತ್ತಾನೆ. ಸೂರ್ಯಾಸ್ತಮಾನದವರೆಗೂ ಅವನಿಗೆ ಅಲ್ಲಿಂದ ಕದಲಲು ಮನಸ್ಸಾಗುವುದೆಂತು !
ಹಾಗೆ ನಸುಗತ್ತಲೆ ಕವಿಯುವವರೆಗೂ ಮುಂಬೈ ಮಹಾನಗರಕ್ಕೆ ಬೆನ್ನು ಹಾಕಿ ಕುಳಿತವನಿಗೆ ತನ್ನ ಹಿಂದೊಂದು ಜನನಿಬಿಡ ಮಹಾ ಜೀವಸಮುದ್ರವೇ ಆಗಿರುವ ಮುಂಬೈನ ನಿಷ್ಥೂರ ಬದುಕಿನ ಚಿತ್ರಣವೆಲ್ಲವೂ ತನ್ನ ಕುಂಚ ಹಾಗೂ ಕ್ಯಾಮೆರಾಗಳಿಗೆಟುಕಿಯೇ ಇಲ್ಲವೇ ಕಟು ಸತ್ಯವೂ ಹೊಳೆಯದೇ ಇರುವುದಿಲ್ಲ.....
ಹಾಗೆ ಸಮುದ್ರದ ಅಲೆಗಳು ತೀರದತ್ತಲೇ ಬರುಬರುತ್ತಲೇ ಒಮ್ಮೆ ದಂಡೆಗೆ ಬಡಿದೇಳುವ ಗಂಭೀರ ಮೊರೆತವನ್ನು ಆಲಿಸುವಾಗ ಎದುರಿಗೆ ಕಾಣಿಸುವ ಮೂರು ದಿಕ್ಕಿನ ಜಲಾವೃತ ದೃಶ್ಯ ರುದ್ರ ರಮಣೀಯವೆನಿಸಿದರೂ ತನ್ನ ಬೆನ್ನ ಹಿಂದಿರುವ ಮಹಾ ಜೀವ ಸಮುದ್ರ ಮುಂಬೈನ ಚಿತ್ರ ವಿಚಿತ್ರ ವೈರುಧ್ಯಗಳಿಗೆ ಸಾಟಿಯೇ ಎನಿಸುವಾಗಲಂತೂ ಮನಸ್ಸಿನಲ್ಲಿ ಅಲೌಕಿಕ ತಾಕಲಾಟವೇ ಹತ್ತಿಕ್ಕುತದಲ್ಲ... ದಿಗ್ಮೂಢನಾಗುತ್ತಾನೆ ಕುಳಿತಲ್ಲೆ ಮಹೇಶ. ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಕಲಿಯುವಾಗ ತನ್ನ ಜೊತೆಗಾತಿ ಸಂಧ್ಯಾಳ ಜೊತೆ ಇದೇ ಬೀಚಿಗೆ ಹಲವು ಬಾರಿ ಬಂದ ನೆನಪು ಮರುಕಳಿಸುತ್ತದೆ.
ಈ ಕಡಲ ಮರಳ ತಡಿಯಲ್ಲಿ ತಾವು ಇಬ್ಬರೂ ಕುಳಿತು ಚರ್ಚಿಸುತ್ತಿದ್ದುದು ತಮ್ಮ ಕಲೆಯ ವಿಷಯವನ್ನಷ್ಟೇ ಆಗಿರಲಿಲ್ಲ.... ಗಂಡು ಹೆಣ್ಣಿನ ಸ್ನೇಹ ಸಂಬಂಧಗಳಾಚೆಗೂ ಮೀರಿ ಮತ್ತೇನೋ ತಮ್ಮೊಳಗೆ ನಿಕಟವಾದುದಿದೆ. ಎಂದೇ ಶೋಧನೆಗೆ ಇಳಿಯುತ್ತಿದ್ದೆವೆಲ್ಲ...
ಹೌದು, ಅವಳು ಅಪೂರ್ವ ಸುಂದರಿ. ಅನನ್ಯ ಗೆಳತಿಯಾಗಿದ್ದಳು. ತಮ್ಮಿಬ್ಬರ ನಡುವೆ ಅದೆಂಥ ಪ್ರೀತಿ ಪ್ರೇಮದ ಹುಡುಕಾಟವಿತ್ತು! ಎಂಬುದನ್ನು ಈಗ ಊಹಿಸಿಕೊಂಡರೆ ನಿಜಕ್ಕೂ ಆಶ್ಚರ್ಯ. ಪ್ರಕೃತಿ ದೈಹಿಕ ವಾಸನಾ ಸಂಬಂಧ ತಮ್ಮನ್ನು ಸೆಳೆದುಕೊಳ್ಳಲೇ ಇಲ್ಲ... ಊಹೂಂ ಹಾಗೆ ಸೆಳೆದುಕೊಳ್ಳುವಂತೆ ತಾನು ಹಗುರವಾಗಿ ಏಕೋ ಎಂದು ವರ್ತಿಸಲಿಲ್ಲ. ಅವಳೂ ಅಷ್ಟೇ... ತನ್ನ ಕೆಲವಾರು ಚಿತ್ರಗಳಿಗೆ ರೂಪದರ್ಶಿಯಾಗಿ ಅರೆಬರೆ ಪ್ರದರ್ಶನದಲ್ಲಿ ಅನೇಕ ಭಾವ ಭಂಗಿಗಳಲ್ಲಿ ತನ್ನೆದುರೇ ಕುಳಿತಿದ್ದಾಳೆ. “ ಹಾಯ್ ಮಹೇಶ್ ನಿನಗೆ ಏನೂ ಅನ್ನಿಸುವುದಿಲ್ಲವೇ. ನಿನಗೇ ಏನೂ ಆಗುವುದಿಲ್ಲವೇ “ ಎಂದು ಕೆಣಕಿ ಕೇಳುತ್ತಿದ್ದಳು.
“ ಆಗದೇ ಏನು ... ನಿನ್ನಂಥ ಬ್ಯೂಟಿಕ್ವೀನ್ ಎದುರಿಗೆ ವೆರಿ ಪ್ರೆಟಿ ಸ್ಟೈಲಿನಲ್ಲಿ ಕುಳಿತರೆ, ಉಪ್ಪು ಖಾರ ಉಂಡ ಈ ಗಂಡು ಶರೀರಕ್ಕೇನೂ ಆಗುವುದಿಲ್ಲವೆಂದೂ ಹೇಗೆ ಹೇಳಲಿ...? ”
“ ಮತ್ತೇಕೆ ನೀನು ಇನ್ನಾದರೂ ಡಿಸೈಡ್ ಮಾಡಬಾರದು ಹೇಳು ?”
“ಏನಂತ ಡಿಸೈಡ್ ಮಾಡಲಿ ”
“ ಅದನ್ನೂ ನಾನೆ ಹೇಳಿಕೊಡಬೇಕೇನು ” ಕಿಲಕಿಲನೇ ಮೈ ಕುಲಕಿಸಿದಳಾಕೆ. ಅವನು ನಕ್ಕು ತನ್ನ ಕೈಲಿದ್ದ ಕುಂಚದ ಸಾಮಗ್ರಿಯನ್ನು ಕೆಳಗಿಟ್ಟು ಅವಳ ತೀರ ಸನಿಹಕ್ಕೆ ಬಂದು ಅವಳ ಎರಡು ಕಪೋಲಗಳನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಂಡು ಹೇಳಿದ್ದ-
“ಪೂರ್ಣಚಂದ್ರಬಿಂಬದಂತೆ ಹೊಳೆಯುವ ಈ ಮುಖ ಕಮಲಕ್ಕೆ ನಾನು ಮಸಿ ಬಳಿಯಲಾರೆ ಸಂಧ್ಯಾ”
“ಓಹ್ ಯೂ ಆರ್ ರಿಯಲೀ ಸೆಂಟಿಮೆಂಟಲ್ ... ಕಮಾನ್ ಔಟ್ ಆಫ್ ದಟ್.. ” ಅವನಿಗೆ ಬಳ್ಳಿಯಂತೆ ಸುತ್ತಿಕೊಂಡಳು. ಅವನ ಉದ್ರೇಕ ನಿಜಕ್ಕೂ ಇನ್ನಷ್ಟೂ ಹೆಚ್ಚಿಸಿ ಬಿಡುತ್ತಿದ್ದಳು. ಆಗ ಅವನೂ ಕೆಲ ಕ್ಷಣಗಳೇ ಅವಳನ್ನು ತಬ್ಬಿಕೊಂಡಿರುತ್ತಿದ್ದ. ಮರುಕ್ಷಣಗಳಲ್ಲಿ ಅವನಿಗೆ ಅವಳು ನಲುಗಿ ಹೋದ ಕುಸುಮವಾಗಿ ಬಿಟ್ಟರೆಂಬ ಭಯವೇ ಕಾಡುತ್ತಿತ್ತಲ್ಲ .... ಹಿಂಜರಿಯುತ್ತಿದ್ದ...ತಮ್ಮಿಬ್ಬರ ನಡುವೆ ಆಗಾಧವಾದ ಅಂತರ. ಅದೇನು ಎಂಬುದು ಇಬ್ಬರಿಗೂ ಗೊತ್ತಿತ್ತು. ಅದು ಅಂತರವೇ ಅಲ್ಲ ಎಂಬುದು ಅವಳ ವಾದ. ಅದೇ ಈ ಜಗತ್ತಿನ ಜೀವ ಸಮುದೃದ ಅತಿ ದೊಡ್ಡ ನೀರ್ಗಲ್ಲು... ಮಂಜಿನ ನಢುಗಡ್ಡೆ... ಅವನು ಹೇಳಿದ್ದ-
“ಟ್ಯೆಟಾನಿಕ್ ಸಿನಿಮಾ ನೋಡಿರುವೆಯಲ್ಲ...ಆ ಪ್ರೇಮಿಗಳ ನಡುವೆ ಎದುರಾಗಿ ಅವರ ಪ್ರೀತಿಯ ಹಡಗನ್ನೇ ಮಹಾ ನೀರ್ಗಲ್ಲ ಬಂಡೆ ಗೊತ್ತಲ್ಲ... ನಿಂಗೆ “ಅವಳು ಅಷ್ಟಕ್ಕೆಲ್ಲ ಬಗ್ಗುವವಳಲ್ಲ.. ಅವಳ ಮನಸ್ಸೇ ಒಂದು ಮಹಾ ಬಂಡೆಯಂತೆ ನಿಶ್ಚಲ ನಿರ್ಧಾರ ನಿಂತು ಬಿಟ್ಟಿತ್ತಲ್ಲ.... ಅವನನ್ನು ಬರಸೆಳೆದು ಬಾಚಿಕೊಳ್ಳುತ್ತಾ ತನ್ನದೆಲ್ಲವನ್ನೂ ಅರ್ಪಿಸುವುದಕ್ಕೆಂದೆ ಒಂದೆ ನಿಲುವುನಲ್ಲಿ ವಿಲಪಿಸುತ್ತಿದ್ದಳು...
ಮಹೇಶ ಆಗ ಮನಸ್ನು ಮಾಡಿದ್ದರೆ ಅವಳ ಅಂದಚೆಂದವನ್ನೇ ಒಂದೇ ಬೊಗಸೆಯಲ್ಲಿ ಸೂರೆ ಹೊಡೆದು ಬಿಡಬಹುದಾಗಿತ್ತಲ್ಲ....ಊಹೂ ಅಂಥವನಲ್ಲ ಅವನು. ಅವನಲ್ಲಿ ಅವಳನ್ನು ಮುದ್ದಿಸುವುದರಲ್ಲಿ ರಮಿಸುವುದರಲ್ಲಿ ಸದಾ ಅವಳ ಮೊಗದಲ್ಲಿ ಹಸಿರು ಚಿಗುರೋಡೆದು ತೋರುವ ನಗೆ ಮುಗುಳಲ್ಲಿ ಅವನು ತನ್ನದೆಲ್ಲ ಜೀವ ಸೆಲೆಯನ್ನು ಚಿಮ್ಮಿ ಕಾರಂಜಿಯಂತೆ ಪುಟಿಯಲೆತ್ನೆಸುತಿದ್ದ. ಆ ಕಾರಂಜಿ ಒಮ್ಮೆಲೆ ಸ್ತಬ್ದವಾಗಿ ನೀರೆಲ್ಲ ಬತ್ತಿಹೋದಂತಾಗಿ ಇದ್ದರೂ ಸತ್ತಾಂತಾಗಬಾರದೆಂದೇ ದೀರ್ಘವಾಗಿ ಚಿಂತಿಸುತ್ತಿದ್ದ. ಇಂಥ ಸುರ ಸುಂದರಿಯ ಸನಿಹ ಸಾಮೀಪ್ಯದಲ್ಲೇ ಅದೇನೋ ಅನಿರ್ವಚನೀಯ ಆನಂದವಿದೆ ಎಂದು ಅನ್ನಿಸುತ್ತಿತ್ತು.
ಅಂದೋಮ್ಮೆ ತಾನು ಕಲಾ ಪ್ರದರ್ಶನಕ್ಕೆಂದು ಸಿದ್ದಪಡಿಸುತ್ತಿದ್ದ ‘ಸ್ತ್ರೀ ’ ಚಿತ್ರ ಕಲಾಕೃತಿಗೆ ಅವಳೇ ಮಾಡೆಲ್ ಆಗಿ ಗಂಟೆಗಟ್ಟಲೇ ಕುಳಿತಾಗ ಅವಳ ದೇಹದ ಉಬ್ಬು ತಗ್ಗುಗಳಲ್ಲಿ ಉಸಿರಿನ ಏರಿಳಿತದಲ್ಲಿ ಸ್ತ್ರೀ ಸೌಂದರ್ಯದ ಔನತ್ಯವನ್ನೇಲ್ಲ ಸೆರೆಹಿಡಿವ ಸಂಚು ಹೊಂಚಿನಲ್ಲೇ ಅವನಿದ್ದಾಗ ಅವಳ ಮನಸ್ಸೋ ಇವನನ್ನು ತನ್ನೋಳಗಿನ ಬಯಕೆಯಲ್ಲಿ ಹೇಗೆ ಬಂಧಿಸಬೇಕು. ತನ್ನ ದೇಹವನ್ನು ಅವನದರೋಂದಿಗೆ ಹೇಗೆ ಬೆಸೆದು ಸುಖವನ್ನೆಲ್ಲ ಹೀರಿಕೊಳ್ಳಬೇಕೇಂಬ ತವಕವೇ ತುಂಬಿರುತ್ತಿತ್ತು...
ಅವನು ಮಧ್ಯಾಹ್ನದ ವೇಳೆಗೆ ಕೊಂಚ ವಿರಮಿಸಿದ್ದ.
ಇವಳು ಅವನನ್ನು ಹತ್ತಿಕ್ಕಿಕೊಂಡಳು- ” ಅಲ್ಲಾ ....... ನೀವೇನು ಗಂಡಸೋ ....... ಅಥವಾ ...”
“ಅದೂ ನಿನಗೆ ಗೊತ್ತಿದೆಯಲ್ಲ ........ ”
“ ಇಲ್ಲ ಇಲ್ಲ ...... ನನಗೆ ಗೊತ್ತೇ ಇಲ್ಲ.... ನೀವು ಹೀಗೆ ಅಂಜಿ ದೂರ ಸರಿಯುತ್ತಿದ್ದರೆ ಎಂದಿಗೂ ಗೋತ್ತೆ ಆಗುವುದಿಲ್ಲ....... ನೀವೂ, ನೀವು ...... ಎರಡೂ ಕೈಗಳಿಂದ ಅವನ ಎದೆಯನ್ನು ಗುದ್ದಿದಳು. ಗೋಳೋ ಅಂತ ಅಳಲಿಕ್ಕೆ ಷುರು ಮಾಡಿದ್ದಳು.”
“ ನೋಡು ಸಂಧ್ಯಾ, ನೀನೂ ಹೀಗೆ ಹುಚ್ಚು ಹುಚ್ಚು ಆಗಿ ಆಡಬಾರದು... ನಾನು ನಿನ್ನನ್ನು ಅದೆಷ್ಟು ಪ್ರೀತಿಸುತ್ತೇನೆ ಎಂಬುದನ್ನೂ ನೀನೂ ತಿಳಿದಿದ್ದೀಯಾ... ನಿನ್ನ ದೈಹಿಕ ಸೌಂದರ್ಯವನ್ನು ನನ್ನನ್ನೂ ಹುಚ್ಚನನ್ನಾಗಿ ಮಾಡಿದೆ. ಅದರ ದೃಷ್ಟಿ ಸುಖದಲ್ಲಿ ನಾನೆಷ್ಟೊ ಸಲ ಉನ್ಮಾದವಸ್ಥೆಯನ್ನೇ ತಲುಪಿಬಿಟ್ಟಿದ್ದೇನೆ. ಆದರೆ, ಸ್ಪರ್ಶಸುಖದಲ್ಲಿಯೂ ಅನೇಕ ಬಾರಿ ಅಪ್ಪಿಮುದ್ದಾಡಿದ್ದೇನೆ. ಅದರಾಚೆಗೆ ನಾನು ಖಂಡಿತ ಮುಂದುವರೆಯಲಾರೆ..” ಯಾಕೆ ಗೊತ್ತೆ ....?"
“ ನನಗೆ ಗೊತ್ತು; ಬಿಡಿ ....... ನಿಮಗೆ ಹೆದರಿಕೆ... ನೀವು ಗಂಡಸಾಗಿ ಇಷ್ಟೇಕೆ ಹಿಂಜರಿಯುತ್ತೀರಿ. ಹೆಂಗಸಾದ ನನಗೆ ಇಲ್ಲದ ಹೆದರಿಕೆ ನಿಮಗ್ಯಾಕೆ.....”
ಅವನು ನಕ್ಕು ಬಿಟ್ಟ. ಕುಳಿತಲ್ಲಿಂದ ಎದ್ದು ಅವಳ ಹತ್ತಿರಕ್ಕೆ ಹೋಗಿ ಅವಳ ಸ್ಲಿವ್ ಲೆಸ್ ನಳಿದೋಳುಗಳನ್ನು ನಯವಾಗಿ ನೇವರಿಸಿದ. ಅವಳ ನಡುಗುವ ಅಧರಗಳಿಗೂ ಲಘುವಾಗಿ ಚುಂಬಿಸಿದ್ದ. “ ನೀನು ಎಂದಿಗೂ ನಲುಗಿ ಹೋಗಬಾರದಲ್ಲ.....” “ ಈ ಅಪ್ಪುಗೆಯಲ್ಲಿ ಇರುವ ಆನಂದ ಅಳಿದು ಹೋಗಿ ಬಿಡಬಾರದಲ್ಲ..... “ ಅವಳ ಕೆನ್ನೆಗಳನ್ನು ಅಷ್ಟೇ ನಯವಾಗಿ ಹಿಂಡಿಬಿಟ್ಟ.
“ ಛೀ ಬಿಡಿ ನಿಮ್ಮ ಲಾಜಿಕ್ ನನಗೆ ಅರ್ಥವಾಗುವುದೇ ಇಲ್ಲ....... ನೀವು ಗಂಡಸೇ ಅಲ್ಲ....”
“ ಇಲ್ಲ ನಿನ್ನ ಆತ್ಮ ಸಾಕ್ಷಿ ಎಂದು ಹಾಗೆ ಹೇಳಲಾರದು.. ನನ್ನಂಥ ಅಪರೂಪದ ಗಂಡಸನ್ನು ನೀನು ಬಹುಶಃ ಎಂದಿಗೂ ನೋಡಲಾರೆಂದರೆ ನನ್ನನ್ನು ನಾನೇ ಹೊಗಳಿಕೊಂಡಂತಾಗುತ್ತದೆ.....ಅಲ್ಲವೇ ? ”ಅಂದ. ಅವಳು ತಟ್ಟನೆ ಅಲ್ಲೆ ಇದ್ದ ಕಾಟಿನ ಮೇಲೆ ಕುಳಿತು ಮುಖವನ್ನು ಎರಡು ಕಾಲಿನ ಮೊಂಡಿಯಲ್ಲಿ ಮುಚ್ಚಿಕೊಂಡು ಅಳಲಾರಂಭಿಸಿದಳು.
“ಹೀಗೆ ಹೆಣ್ಣು ಅಳುವುದು ಯಾವಾಗ ಗೊತ್ತೇ ....ಅವಳದೆಲ್ಲವನ್ನು ಒಬ್ಬ ಕಿಡಿಗೇಡಿ ದೋಚಿ ಸೂರೆ ಹೊಡಿದಾಗ ....” ಅವನು ಪಕ ಪಕನೆ ನಕ್ಕ . “ ಹೌದೂರಿ .... ಈಗಲೂ ಹೇಳ್ತಾ ಇದ್ದೀನಲ್ಲ .... ಅದನ್ನೇ ಮಾಡಿ ...”
“ ನನಗೆ ಗೊತ್ತು... ನಾನು ಸಂಯಮಿಯಾದರೂ ನಿನಗೆ ಹತ್ತಿರವಾಗುತ್ತಿದ್ದೇನೆಂತ... ಆದರೆ ನೀನು ಹೇಳುವಂತೆ ಎಲ್ಲಾ ಗಂಡಸರಂತೆ ಅದಷ್ಟನ್ನೇ ಮಾಡಿ ಸುಖವನ್ನು ಸೂರೆ ಹೊಡೆದೆನೆಂದರೆ... ಹೇಳು ? ” ನನ್ನ ನಿನ್ನ ನಡುವೆ ಏನಾದೀತು ? ಏನಿದ್ದೀತು.? “ ಏನಾಗುತ್ತದೆ ? ” ಇನ್ನೂ ನೀವು ನನಗೆ ಬೇಕಾದವರಾಗುತ್ತೀರಿ... ಅಷ್ಟೇ..” ” ಅದೇ ಒಮ್ಮೆ ರುಚಿ ನೋಡಿದ ಮಗುವಿಗೆ ಅದೇ ಚಾಕಾಲೇಟ್ ಮತ್ತೆ ಮತ್ತೆ ಬೇಕೆನಿಸುತ್ತದಲ್ಲ ಹಾಗೇನು .....”
“ ಊಹೂಂ... ಅದು ಹಾಗೇನೆ ... ನನಗೂ ಅದೇ ಬೇಕೆನಿಸುತ್ತದೆಯಷ್ಟೆ.... ಆಮೇಲೆ ನಿನ್ನ ನನ್ನ ನಡುವೆ ಮೊದಲಿನ ಉತ್ಕಟತೆ ಏನೂ ಉಳಿದಿರೋಲ್ಲ....”
“ ಯಾಕೆ ! ಯಾಕೆ ಉಳಿದಿರೋಲ್ಲ.... ಗಂಡ ಹೆಂಡತಿ ಒಬ್ಬರೊನ್ನೋಬ್ಬರು ಅನುಭವಿಸಿದ ಮೇಲೆ ಜೀವನದಲ್ಲಿ ಏನೂ ಉಳಿದಿರೋಲ್ವೇನು ...”
“ ಆ ಮಾತು ಬೇರೆ ... ಅದು ಮದುವೆಯಾದ ಮೇಲೆ ... ಅವರ ಬದುಕೇ ಎರಡು ಮಹಾ ಸಾಗರಗಳ ಸಂಗಮದಂತೆಯೆ. ಅಲ್ಲಿ ಅಬ್ಬರ ಬೋರ್ಗರೆತಗಳಿದ್ದರೂ ಅದರ ಗಂಭೀರ ತೆರೆಗಳೇಳುವ ಸೊಗಸೇ ಬೇರೆ... ಮತ್ತೆ ಮತ್ತೆ ಒಳಗೋಳಗೆ ಸೆಳೆದುಕೊಳ್ಳುವ ಆ ಪರಿಯೇ ಬೇರೆ...”
“ ಓಹ್ ! ನಿಮಗೆ ಹೇಗೆ ಹೇಳ್ಬೇಕೋ ಗೊತ್ತೆ ಆಗುವುದಿಲ್ಲ.... ನಾವು ಮದುವೆ ಆಗೋಣ ಬಿಡಿ.... ”ಎಂದಳು. ಮಹೇಶ್ ಈದೀಗ ಗಹಗಹಿಸಿ ನಕ್ಕು ಬಿಟ್ಟ. ”ಅಬ್ಬಾ ಬೇಡ ಬೇಡ .... ಈ ನಿನ್ನ ಅಪ್ಯಾಯಮಾನವಾದ ಸ್ನೇಹ ಸಾನಿಧ್ಯ ಹೀಗೆ ಉಳಿಯಗೊಡುವುದಿಲ್ಲ... ಯೋಚಿಸಿದ್ದೀಯಾ....ನಿಮ್ಮಪ್ಪ ಚಂದೂಲಾಲ್ ಸೇಟ್ ... ಎಂಥ ಬಾರಿ ಅಪಾಯಕಾರಿ ಮನುಷ್ಯಾಂತ... ” ಮತ್ತೆ ನಗೆ ಹರಿಸಿದ್ದ. ಅವಳೂ ಅಳು ಜೋರಾಗಿಸಿದ್ದಳು.
ಇವನು ಅವಳನ್ನು ಸಣ್ಣ ಮಗುವಿನಂತೆ ಮುದ್ದಿಸಿ ರಮಿಸಿ, ಸಮಾಧಾನ ಮಾಡುವ ಹೊತ್ತಿಗೆ ಸಾಕುಸಾಕಾಗಿತ್ತು.
ಹೀಗೇಯೆ.... ಅದೇಷ್ಟೋ ಅಗಣಿತ ಕ್ಷಣಗಳಲ್ಲಿ ಅವಳು ಅವನ ಕೈಗೊಂಬೆಯಾಗಿ ಸಿಗುತ್ತಿದ್ದಳು. ಅವನ ಮನಸ್ಸು ಮಾಡಿದ್ದರೆ ಆ ಬೊಂಬೆಯನ್ನು ಸುಲಿದು ಸಿಪ್ಪೆ ಮಾಡಿಬಿಡಬಹುದಾಗಿತ್ತು. ಹಾಗೆ ಮಾಡುವಂತ ವಿಕೃತ ಮನಸ್ಸು ಅವನದಲ್ಲ.......
ಅವನು ಚಿಕ್ಕಂದಿನಿಂದಲೂ ಹಾಗೆಯೆ. ಯಾವುದೇ ಆಟಿಕೆ ಕೈಗೆ ಸಿಕ್ಕರೂ ಅದನ್ನು ನಯವಾಗಿ ಮುಟ್ಟಿ ಮುದ್ದಿಸುವುದರಲ್ಲಿ ಜೋಪಾನವಾಗಿ ಮುಚ್ಚಟೆಯಾಗಿಟ್ಟುಕೊಳ್ಳುವುದರಲ್ಲಿ ಅತೀವ ಆನಂದ ಕಾಣುತ್ತಿದ್ದನಲ್ಲ..... ಅದೆಲ್ಲ ಹಳೇಯ ನೆನಪು. ಬಿಟ್ಟರೂ ಬಿಡದೆ ಕಾಡುವ ನೆನಪು. ಸಂಧ್ಯಾ ಅವನ ಮನದಾಳದಿಂದ ದೂರವಾಗದೆ ಸದಾ ಹಸಿರಾಗಿಯೇ ಇರುವಳಲ್ಲ. ಅದೇ ಇಂದಿಗೆ ತನ್ನ ದೈಹಿಕ ಕಾಮನೆಯನ್ನು ಅಣಕಿಸುವಂತಾದುದೇ ವಿಪರ್ಯಾಸ ! ಹೆಣ್ಣೂ ಎಂದರೆ ಹೀಗೂ ಇರುತ್ತಾಳಾ...ಅನ್ನಿಸಿದ್ದು ಸುಲಕ್ಷಣಗಳನ್ನು ಕೈ ಹಿಡಿದು ಅವಳಲ್ಲಿ ಏನೆಲ್ಲ ಜೀವ ಸೌಖ್ಯವನ್ನಲ್ಲದೇ ದೇಹ ಸೌಖ್ಯವನ್ನರುಸುತ್ತಿರುವ ಕ್ಷಣಗಳಲ್ಲೆ...... ಛೇ ಈ ಬದುಕು ಎಷ್ಟು ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆಯಲ್ಲ..... ಬೇಕೆನಿಸಿದಾಗ ಸಿಕ್ಕುವುದಿಲ್ಲ.... ದಕ್ಕುವುದು ಇಲ್ಲ... ಬೇಡವೆನಿಸಿದಾಗ ಕೈಗೆಟುಕವಂತಿದ್ದರೂ ನಮ್ಮ ಒಳ್ಳೆತನವೇ ತಮಗೆ ಮುಳುವಾಗಿ ಬಿಡುತ್ತದಲ್ಲ....
ಮಹೇಶ ಕೈ ಕೈ ಹಿಸುಕಿಕೊಳ್ಳುತ್ತಾನೆ. ಮತ್ತೋಮ್ಮೆ ತನ್ನತನವನ್ನೆ ಸರಿಯೆಂದು ತಾನೆ ಸಮರ್ಥಿಸಿಕೊಳ್ಳುತ್ತಾನೆ... ತನ್ನ ಮನಸ್ಸಿನ ಖಿನ್ನತೆಗೆಲ್ಲ ಕಾರಣಳಾಗಿರುವ ತನ್ನ ಸುಂದರ ಪತ್ನಿ ಸುಲಕ್ಷಣಾ ಎಲ್ಲಿದ್ದರೂ ಬಿಡದೇನೆ ಕಣ್ಮುಂದೆ ಸುಳಿಯುತ್ತಾಳೆ. ಆದರೆ, ಇನ್ನೊಬ್ಬಳು ಸುಂದರಿ ಸಂಧ್ಯಾಳಂತೆ ಮೈಬಳಸಿ ಸುತ್ತಿಕೊಳ್ಳಲಾರಳಲ್ಲ...
ಅವಳಂತೆ ಅಪ್ಯಾಯಮಾನತೆಯಿಂದ ಚುಂಬಿಸಲಾರಳಲ್ಲ... ಯಾಕೆ ಹೀಗೆ ತಾನೊಂದು ಭೋಗದ ವಸ್ತುವೋ ಹೆರುವ ಯಂತ್ರವೋ .. ಅನುಭವಿಸಿದರೆ ಸವೆದು ಚಿಪ್ಪಾಗಿ ಬಿಡುವೆನೆನೋ ಎಂದೇ ಹಪಹಪಿಸುವಂತ ಅವಳ ಪರಿಗೆ ಮಹೇಶ ದಿಗ್ ಭ್ರಾಂತನೇ ಆಗಿ ಕುಳಿತು ಬಿಡುತ್ತಾನೆ ಈಗೀಗ....
ಸುಲಕ್ಷಣ ! ಹೆಸರಿನಷ್ಟೆ ಸುಲಕ್ಷಣವಾದ ಹುಡುಗಿ. ಅವಳು ಹೊರಗೆ ಕಾಲಿಟ್ಟರೆ ಸಾಕು ತನ್ನಾಕೆಯ ಉಡುಗೆ ತೊಡುಗೆಯ ಅಲಂಕಾರದಲ್ಲಿ ಅವಳನ್ನು ಮನದಣಿಯೆ ನೋಡ ಬಯಸುವ ಕಲಾ ತಪಸ್ವಿ ಮಹೇಶನಿಗೆ ತೀವ್ರ ನಿರಾಶೆಯೆ..... ಮೊದಮೊದಲು ಇವಳು ತೀರ ಸರಳ ಸೌಮ್ಯ ಸ್ವರೂಪಿಣಿಯೆಂದು ಬಗೆದಿದ್ದೆನಲ್ಲ... ಆದರೆ, ಅವಳು ಇತರರಿಗೆ ತನ್ನ ಸೌಂದರ್ಯವೆಲ್ಲಿ ಕಣ್ಣು ಕುಕ್ಕಿಸುವುದೋ ಅವರ ಹದ್ದು ಕಣ್ಣು ತನ್ನನ್ನು ಹರಿದು ಮುಕ್ಕುವುದೋ ಎಂದೋ ಏನೋ ಸಿಂಗರಿಸಿಕೊಳ್ಳಲಾರಳು. ತೆಳುವಾದ ಒಂದು ಒಳ್ಳೆ ಸೀರೆಯನ್ನು ಉಡಲಾರಳು. ಗೋಣಿ ತಾಟಿನಂತದ್ದನ್ನೆ ಹಳ್ಳಿಯ ಗದ್ದೆ ಕೆಲಸದ ಹೆಂಗಸಿನಂತೆ ಸುತ್ತಿಕೊಂಡು ಗಂಡನೊಡನೆ ಮದುವೆ ಸಮಾರಂಭಗಳಿಗೆ ಹೊರಡುವುದೆಂದರೆ.....? ಮೊದಲೇ ಕಲಾವಿದನಾದ ಅವನಿಗೆ ಹೇಗಾಗಿರಬೇಡ....
ದಿನ ದಿನಕ್ಕೂ ಮಿಂಚು ಬಳ್ಳಿಯೆಂತೆ ತನ್ನನ್ನು ಹೊಸ ಹೊಸ ಅಲಂಕಾರದಲ್ಲಿ ನಕ್ಕು ನಲಿಸುತ್ತ ಸೆಳೆವಂಥ ಚೆಲುವೆಯೊಬ್ಬಳನ್ನು ಹೆಂಡತಿಯಾದಕೆಯಲ್ಲಿ ಮಹೇಶ ಕಾಣ ಬಯಸುತ್ತಿದ್ದರೆ ತಪ್ಪೇನು..... ಇನ್ನು ನಾನೊಬ್ಬ ಕಲಾವಿದನಾಗಿ ಅವಳನ್ನೆ ತನ್ನ ಚಿತ್ರ ಕಲೆಗೆ ಮಾಡೆಲ್ ಆಗಿ ಕೂರಿಸಿ ಚಿತ್ರ ಬರೆಯುವುದಂತೂ ದೂರವೇ ಉಳಿದಿತ್ತಲ್ಲ... ಮದುವೆಯಾಗಿ ಎರಡು ವರ್ಷಗಳೇ ಸಂದಿದ್ದರೂ ಹೆಂಡತಿಯ ದೇಹವು ಸಂಪೂರ್ಣ ತೆರೆದ ಸೌಂದರ್ಯದಿಂದ ಅನಾವರಣಗೊಂಡದ್ದನ್ನು ಅವನು ಕಂಡಿರಲೇ ಇಲ್ಲ...
ಅಗೆಲ್ಲ ಅವನಿಗೆ ಮತ್ತೆ ಮತ್ತೆ ಅವಳೇ ಅಪರೂಪದ ಹೆಣ್ಣು ಸುಂದರಿ ಸಂಧ್ಯಾ ಸ್ಮೃತಿಪಟಲದ ಮೇಲೆ ಹಾಯಿ ಹರಿದ ನಾವೆಯೆಂತೆ ಬರತ್ತಲೇ ಇದ್ದಳು... ಆಗೆಲ್ಲ ನಿಡಿದಾದ ನಿಟ್ಟುಸಿರೊಂದನ್ನು ಚೆಲ್ಲುತ್ತಿರುತ್ತಾನೆ.....
” ಇಲ್ನೋಡು ಸುಲೂ... ನಿನಗೋಸ್ಕರ ಮಲ್ಲಿಗೆ ದಂಡೆ ತಂದಿದ್ದೀನಿ...” ಅವಳನ್ನು ಅವಳ ಸಾಂಪ್ರದಾಯಿಕ ದಾರಿಯಲ್ಲೆ ತನ್ನಡೆಗೆಳೆಯಲೂ ಯತ್ನಿಸಿದ್ದ.
“ ಹೂಂ... ಬೇಗ ಆ ತೆಳು ಗುಲಾಬಿ ಮೈಸೂರು ಸಿಲ್ಕ್ ಸೀರೆ ಉಟ್ಟು ಬಾ... ಈವತ್ತು ಹೊರಗೆ ಊಟ ಮಾಡಿಕೊಂಡು ಬರೋಣ .... ಪಾಪ ನಿನಗೂ ಮನೆಯಲ್ಲಿ ದುಡಿದು ಸಾಕಾಗಿರುತ್ತೆ ಅಲ್ಲಾ... ಬೇಗ ರೆಡಿಯಾಗಿ ಬಾ...”
“ ಅಯ್ಯೋ ಬೇಡಾರಿ ಈವತ್ತು ಸಂಕಷ್ಠಿ ಚತುರ್ಥಿ..... ನಾನು ಪೂಜೆ ಮಡೀಲಿದ್ದೀನಿ.... ಅನ್ನಬೇಕೆ... ”
“ ಓಹ್ ! ಹಾಳಾದ್ದು ನನಗೆ ಮೂಡ್ ಈವತ್ತೇ ಬರಬೇಕೇನು..... ಸರಿ ಬಿಡು ಸುಲೂ ನಿನ್ನ ಇಷ್ಟಕ್ಕೆ ನಾನೆಂದದಾರೂ ಅಡ್ಡಿ ಬಂದಿದ್ದೇನೆಯೇ.....”
“ ಬೇಗ ಕೈಕಾಲು ಮುಖ ತೊಳೆದುಬನ್ನಿ ..... ನಿಮಗೆ ಖಾಲಿ ದೋಸೆ ಮಾಡಿದ್ದೀನಿ ಕೊಡ್ತೀನೀಂದ್ರೆ....” ಎಂದಳು ಅಡುಗೆ ಮನೆಯಿಂದಲೇ. ಮಹೇಶ ಮತ್ಯಾವುದೋ ಗುಂಗಿನಲ್ಲಿ ಕುಳಿತಲ್ಲೆ ಕುಳಿತಿದ್ದಾಗ, ” ಅಯ್ಯೋ ಇಲ್ಲೆ ಕುಳಿತಿದ್ದೀರಾ...ಹೋಗ್ರಿ ಮೊದ್ಲು ಕ್ಯೆ ತೊಳ್ಕೊಂಡು ಬನ್ನೀಂದ್ರೆ....”ಎಂದೇ ತಿಂಡಿ ತಟ್ಟೆ ಹಿಡಿದು ಬಂದೇ ಬಿಟ್ಟಿದ್ದಳಲ್ಲ.. ಸರಿ ನಿರ್ವಾಹವಿಲ್ಲದೇನೇ ಮಹೇಶ ಬಚ್ಚಲ ಮನೆಗೆ ಹೊರಟಿದ್ದ ಹೆಗಲಿಗೆ ಟವೆಲ್ ಏರಿಸಿಕೊಂಡು. ಅನಂತರ, ಅವಳು ದೇವರ ಮನೆ ಸೇರಿಕೊಂಡರೆ ಇವನು ಹೊರಗೆ ಯಾವುದೋ ಚಿತ್ರ ರಚನೆಗೆ ಹೊಸ ಹೊಳಪಿನಲ್ಲಿರುತ್ತಿದ್ದ. ಆದರೇನು! ಅವನ ಕಲಾ ಜೀವನದ ಕೇಂದ್ರಬಿಂದುವೇ ಸುಂದರ ಹೆಣ್ಣು ! ಅದೇ ಅವನ ದುರಾದೃಷ್ಟವು ಆಗಿ ತೋರುತ್ತಿತ್ತಲ್ಲ....ಓಹ್ ! ದೇವಾನು ದೇವತೆಗಳೇ ತನ್ನ ಹೆಂಡತಿಗೊಂದಿಷ್ಟು ರಸಿಕತೆಯ ಬುದ್ದಿ ದಯಪಾಲಿಸಬೇಕೆಂದೇ ತನ್ನೊಳಗೆ ಪ್ರಾರ್ಥಿಸುತ್ತಿದ್ದನಲ್ಲ ಹಗಲಿರಳು ಮಹೇಶ. ಅವಳ ಮಹಾರಸಿಕತೆಗೊಂದಿಷ್ಟು ನಿದರ್ಶನಗಳಿವೆಯಲ್ಲ..
ಮಹೇಶ ಒಮ್ಮೆ ಆಫೀಸಿನಿಂದ ಬಂದವನೇ ಲುಂಗಿ ಸುತ್ತಿಕೊಂಡು ಸೀದಾ ಬಚ್ಚಲಿಗೆ ಹೋಗಿ ಬಂದವನೇ ಟವೆಲಿನಿಂದ ಮುಖ ಒರೆಸಿಕೊಳ್ಳುತ್ತಾ ಕುರ್ಚಿಯಲ್ಲಿ ಕುಳಿತಾಗ ಅವನ ಪ್ರೀತಿಯ ಸುಲೂ ಟೀ ಕಪ್ಪು ತಂದವಳೇ ಎದುರಿಗೆ ಬಳುಕುತ್ತ ನಿಂತಾಗ ಇವನಿಗೆ ಹೇಗೇಗೋ ಆಗಿತ್ತಲ್ಲ..ಟೀ ಗುಟುಕರಿಸುತ್ತಲೇ ಅವಳ ದ್ಯೆಹಿಕ ಸೊಬಗನ್ನು ಹೀರಿಕೊಳ್ಳಲೆತ್ನಿಸುತ್ತಾ ತಾನು ಬರೆಯಲಿರುವ ಹೊಸ ಕಲಾಕೃತಿಗೆ ಸ್ಫೂರ್ತಿ ಪಡೆಯುವವನಂತೆಯೇ ಕೊನೆಯ ಗುಟಿಕಿಗೆ ಮುನ್ನವೇ ಟೀ ಕಪ್ಪನ್ನು ಬದಿಗಿಟ್ಟು ಅವಳ ಸಪೂರ ಸೊಂಟಕ್ಕೆ ಕ್ಯೆಹಾಕಿ ತನ್ನ ತೊಡೆಯ ಮೇಲೇ ಬೀಳುವಂತೆ ಬರಸೆಳೆದುಕೊಂಡಿದ್ದ.
ಹಾಗೇ ಅವಳ ಬೆನ್ನು ನಯಾವಾಗಿ ಸವರುತ್ತಾ ಅಂದು ಚಿತ್ರಕಲಾಶಾಲೆಯಲ್ಲಿ ನಡೆದ ಹುಡುಗಿಯೊಬ್ಬಳ ಸ್ವಾರಸ್ಯಕರ ಪ್ರಂಸಂಗವನ್ನು ವಿವರಿಸತೊಡಗಿದಾಗಲೇ ಈ ಸುಲಕ್ಷಣಳಿಗೆನಾಯಿತೋ ಏನೋ ಹಾವು ಮೆಟ್ಟಿದವಳಂತೆ... ಅವನ ತೊಡೆಯ ಮೇಲೆ ಅರೆಕ್ಷಣವೂ ಕುಳಿತಿದ್ದಳೊ ಇಲ್ಲವೋ ಬೆಚ್ಚಿಬಿದ್ದವಳಲ್ಲ.... ಎಲ್ಲಿಲ್ಲದ ಹತಾಶೆ ಬೇಗುದಿಯಿಂದ ಬಳಲಿದ ಮಹೇಶ. ಅವಳೋ ಗೊಣಗುತ್ತಲೇ ಇದ್ದಳಲ್ಲ...
“ ಅಯ್ಯೋ ಬಿಡ್ರಿ... ನಿಮ್ಮ ಹುಚ್ಚಾಟ ಸಾಕು... ನಂಗೊಂಥರಾ ಆಗುತ್ತೇ... ನೀವೋ ನಿಮ್ಮ ಸರಸಾನೋ ದೇವರೇ....”
“ ಅದ್ಯಾಕೆ ಸುಲೂ ಹಾಗಾಡ್ತೀಯಾ....ನನ್ನ ಕಂಡ್ರೆ ನಿಂಗೆ ಭಯವೇನು ರಾತ್ರಿ ಹೊತ್ತಂತೂ ನಾನೊಂದು ಭೂತ ನಿಂಗೆ ಅಲ್ಲಾ....” ರೋಸಿ ನುಡಿದರೂ ಪುನಃ ಸಾವರಿಸಿಕೊಂಡು, ಮೆಲ್ಲನೆ ಅವಳ ಸೆರಗು ಹಿಡಿದು ಬೇಡಿಕೊಳ್ಳುವವನಂತೆಯೇ... “ಇಲ್ನೋಡು ಸುಲೂ ಗಂಡು – ಹೆಣ್ಣಿನ ಸಂಬಂಧವೆಂದರೆ ಏನೆಂದುಕೊಂಡಿದ್ದೀಯ.... ನಾವಿಬ್ಬರೂ ಎರಡು ದೇಹವಾದರೂ ಒಂದಾಗಿ ದೇಹ ಸೌಖ್ಯವನ್ನು ಪಡೆಯುವುದರಲ್ಲಿ ಈ ಜೀವನಾನಂದವೆ ಅಡಗಿದೆ. ”
“ ಅಯ್ಯೋ ಬಿಡೀಂದ್ರೆ, ಅದೆಲ್ಲ ಸಿನಿಮಾ ಕಥೆಗಳಲ್ಲಿ ಕೇಳಲಿಕ್ಕೆ ನೋಡಲಿಕ್ಕಷ್ಟೆ ಚೆಂದ... ನಿಜ ಜೀವನದಲ್ಲಿ ಅನುಭವಿಸಲಿಕ್ಕಲ್ಲ.... ” ಅಂದಿದ್ದಳು. ಅವನಿಗೆಷ್ಟು ಸಿಟ್ಟು ಬಂದಿತ್ತೆಂದರೆ ಇವಳನ್ನು ಇಲ್ಲೆ ಬಲವಂತದಿಂದ ಹಿಂಡಿ ಹಿಪ್ಪೆ ಮಾಡಿ ಕೊಳ್ಳೆ ಹೊಡೆಯುವ ದರೋಡೆ ಕೋರನಾಗಬಾರದೇಕೆ ತಾನು ಅನ್ನಿಸಿತ್ತು... ಆಗ ? ಮತ್ತದೆ ಸಂಧ್ಯಾಳ ನೆನಪು... ತಾನಾಗಿ ಒಲಿದು ಬಂದವಳ ಸುಮಧುರ ನೆನಪು... ಅವಳನ್ನೆ ತಿರಸ್ಕರಿಸಿ ಸುಖದಿಂದ ವಂಚಿತನಾದ ಮೂರ್ಖನೇನು ... ಆಗ ಎಲ್ಲಿ ಹೋಗಿತ್ತು.... ಈ ಆತುರ ಕಾತರ. ಸುಖದ ಅಭೀಪ್ಸೆಯ ಹುನ್ನಾರ...ಛೇ...ತನ್ನತನಕೊಂದು ದಿಕ್ಕಾರ... ಎಂದೂ ಪರಿತಪಿಸುವನು. ಮತ್ತೆ ಬಿಡದದೋ ಸಂಧ್ಯಾಳ ಸುಂದರ ವದನ. ಬಳುಕಿ ಬಳಸುವ ಮನೋಹರ ದೇಹ, ಎಲ್ಲಿದ್ದಾಳೋ ಅವಳು ? ಈಗ ಅವಳನ್ನು ನಯವಾಗಿಯೇ ನೋಡಿಕೊಳ್ಳುವ ಅಪ್ಯಾಯತೆಯಿಂದ ಸಂತೃಪ್ತಗೊಳಿಸುವಂಥ ಭಾಗ್ಯಶಾಲಿ ಯಾರಾಗಿರಬಹುದು ? ..... ಚಿಂತಾಕ್ರಾತನಾಗಿಬಿಡುತ್ತಾನೆ ಮಹೇಶ.
ಮಹೇಶ ತನ್ನ ಕಛೇರಿ ಕೆಲಸಕ್ಕೆ ರಜೆ ಹಾಕಿ ಕ್ಯಾಮೆರಾ ಕುಂಚ ಹಿಡಿದು ಬೆಂಗಳೂರು ಮುಂಬೈ ಮಹಾನಗರಗಳಲ್ಲಿ ಈಗಲೂ ಅಲೆಯುವನು. ಆಗ ವಾರಗಟ್ಟಲೆ ಮನೆಗೆ ಬಾರದೇನೆ ಎಲ್ಲೋ ಇರುವನು ಆಗಂತು ಸುಲಕ್ಷಣಳ ಚಡಪಡಿಕೆ ಹೇಳತೀರದು. ಅದ್ಯಾವ ಹೊತ್ತಿಗೆ ಅದೆಲ್ಲಿ ಗಂಡನ ಜೀವಕ್ಕೆ ಅಪಾಯ ಕಾದಿದೆಯೋ ಎಂಬ ಭಯದಿಂದಲೇ ತತ್ತರಿಸಿ ಹೋಗುವಳು..... ಹೌದೌದು, ದಿನದಿನಕ್ಕೂ ಮಹಾ ಸಮುದ್ರದಂತೆ ಒಂದಾಗಿ ಬೆಳೆಯುತ್ತಿವೆ ನಗರಗಳು.
ಜಗತ್ತಿನ ಮೂರು ಭಾಗ ಜಲರಾಶಿಯೂ ಸೇರಿದಂತೆ ಎಲ್ಲೆಲ್ಲೂ ಜೀವ ರಾಶಿಗಳು ! ಇರುವುದೊಂದು ಭೂಭಾಗದಲ್ಲೋ0ತು ಗಿಜಿಗುಡುವ ಜನ ಜಂಗುಳಿಯೆ ಕಿವಿಗಡಚಿಕ್ಕುವ ಶಬ್ದದೊಂದಿಗೆ ವಾಹನ ಸಂಚಾರಗಳು. ಇಲ್ಲಿ ನಿಜಕ್ಕೂ ಈ ಜೀವನವೆಂಬ ಮಹಾ ಹಡಗನ್ನು ಜೀವಿಗಳ ಸಮುದ್ರದಲ್ಲಿ ತೇಲಿಸಲು ಅವಿರತ ಹುಟ್ಟು ಹಾಕುತ್ತಿರುತ್ತೇವೆ !, ಆದರೆ, ತೇಲಿಸುತ್ತಿರುವವರು ಯಾರು ? ಈ ನಮ್ಮ ಜೀವ ಜಲಧಿಯಲ್ಲೂ ಭಾರಿ ಮೀನು ತಿಮಿಂಗಲಗಳೇ ಇವೆಯಲ್ಲ... ಜೊತೆಗೆ ಭೂಮಿಯಲ್ಲೂ ಕ್ರೂರ ಮೃಗಗಳು. ಮನುಷ್ಯರಲ್ಲೂ ಸಹ ..... ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಸಾವಿನ ರೌದ್ರ ಅಲೆಯೊಂದು ಕಬಳಿಸಿಕೊಳ್ಳುವುದೋ... ಯಾರು ಬಲ್ಲರು? ಏನೇ ಆಗಲಿ ಈ ಜೀವ ಸಮುದ್ರದ ಪರಿ ಸೋಜಿಗವೇ....ಅನ್ನಿಸಿದಾಗ ಮುಂಬೈನ ರಸ್ತೆಗಳಲ್ಲಿ ಸಂಧ್ಯಾ ಈಗಲೂ ಕಾಣಸಿಗುವಳೇ ಅಥವಾ ಯಾವುದಾದರೂ ಆರ್ಟ್ ಗ್ಯಾಲರಿಯಲ್ಲಿ ಅನಿರೀಕ್ಷಿತ ಭೇಟಿಯಾಗುವಳೇ ..... ಎಂಬ ಎದೆಯಾಸೆಯೂ ಅದಮ್ಯವಾಗಿಯೇ ಇದೆಯಲ್ಲ ಮಹೇಶನಿಗೆ. ಈ ಹೆಂಡತಿಯಾದವಳೂ ... ತನ್ನ ಈ ದೇಹಕ್ಕೆ ಸುಖ ನೀಡುವುದಷ್ಟೆ ಇದ್ದರೂ ತನ್ನಿ ಜೀವದ ಹಕ್ಕು ಸಂಪಾದಿಸಿರುವವಳಂತೆಯೆ ಆಡುವವಳಲ್ಲ.... ಇವಳಿಗೇನಾದರೂ ಬುಧ್ದಿ ಇದೇಯೆ.... ಗಂಡನನ್ನು ಏನೆಂದುಕೊಂಡಿದ್ದಾಳೆ ? ನಾನೀ ನನ್ನ ದೇಹವನ್ನು ಎಲ್ಲಿ ಬಿಟ್ಟರೇನು ? ಎಲ್ಲಿ ಯಾರೋದಿಗೆ ಕಳೆದುಕೊಂಡರೇನು...
ಈ ಜೀವಸೆಲೆಯ ಸಹಜ ಪರಿ ತಿಳಿಯದಾಕೆಗೆ..... ? ತಾನಾಗಿಯೆ ತನ್ನ ಗಂಡನೊಡನೆ ಸಹಜೋತ್ಕರ್ಷದಲ್ಲಿ ತೆರೆದುಕೊಳ್ಳದ ಮೂರ್ಖಳಿಗೇಕೆ ಅವನ ಜೀವದ ಮೇಲಿನ ಹಂಗು...ಮಹೇಶ ಮುಂಬೈ ಬೀದಿಯ ಚೌಪಾಟಿಯಲ್ಲಿ ಹೆಜ್ಜೆ ಹಾಕುವಾಗಲೂ ಹೀಗೆ ಯೋಚಿಸುತ್ತಾ ಯಾರಿಂದಲೋ ಬೈಸಿ ಕೊಂಡಿದ್ದಾನೆ. ‘ ಏಯ್ ಜರಾ ದೇಖ್ ಕೆ ಚಲೋ....’ ನಗುತ್ತಾನೆ ಅವನು ಆಗ ಹುಚ್ಚನಂತೆ. ಮತ್ತದೇ ಬೇಸರ ಕಾಡುತ್ತದೆಯಲ್ಲ .... ಎಲ್ಲಿ ನೋಡುವುದು ಇನ್ನೋಮ್ಮೆ ಸಂಧ್ಯಾಳನ್ನು ?
ಈ ಜೀವ ಸಮುದಾಯದಲ್ಲಿ ಇನ್ನೊಂದು ಬಾರಿ ಕಂಡಾಳೇನು? ಅದೇಕೆ ಅವಳ ಚಿಂತೆ ಹೀಗೆಲ್ಲ ತನ್ನ ಮೈ ಆವರಿಸಿಕೊಳ್ಳುತ್ತದೆ. ಮಹೇಶ ನಿಜಕ್ಕೂ ತಬ್ಬಿಬ್ಬುಗೊಳ್ಳುತ್ತಾನೆ.
ತುಂಬಾ ತುಂಬಾ. ಇಷ್ಟವಾಯಿತು ಸರ್,
ReplyDeleteತುಂಬಾ ತುಂಬಾ ತುಂಬಾ ಕಾಡುವ ಬರಹ
ReplyDelete