Wednesday, November 3, 2010

ನಾ ಕಂಡ ತಿರುವನಂತಪುರಂ ಮತ್ತು ಕನ್ಯಾಕುಮಾರಿ
(ಒಂದು ಅಪೂರ್ವ ಪ್ರವಾಸ ಕಥನ)-1

ನಾನು ಮೂವತ್ತು ವರ್ಷ ಮೂರು ತಿಂಗಳು ಟೆಲಿಕಾಂ ಇಲಾಖೆಯಲ್ಲಿ ಸೇವೆಸಲ್ಲಿಸಿ ಸ್ವಯಂ ನಿವೃತ್ತಿ ಪಡೆದೆ.  ನನ್ನ ಸೇವಾ ಅವಧಿಯಲ್ಲಿ ಅನೇಕ ಅನುಭವಗಳಾಗಿವೆ. ಅವುಗಳಲ್ಲಿ ಕೆಲವಂತು ಬೇಡವೆಂದರೂ ನೆನಪಿನಲ್ಲಿ ಉಳಿದಿವೆ. ಆ ನೆನಪುಗಳಲ್ಲಿ ಸಿಹಿ ಕಹಿ ಎರಡೂ ಇವೆ. ನನಗೆ ತುಂಬ ಸಿಹಿಯೆನಿಸಿ ಸಂತಸ ಸಮಾಧಾನ ನೀಡಿದ ಪ್ರವಾಸಾನುಭವದ ಬಗ್ಗೆ ಈಗ ಹೇಳ ಬಯಸುತ್ತೇನೆ. ಅದು ೧೯೯೮ ಫೆಬ್ರವರಿ ತಿಂಗಳು. ಆಗಷ್ಟೇ ಚಳಿ ಹೋಗುತ್ತಾ ಬೇಸಿಗೆ ಕಾಲಿಡುತ್ತಿದ್ದ ಕಾಲ.  ನಮ್ಮ ಆಡಳಿತ ಕಛೇರಿಯಿಂದ ಕೇರಳದ ತಿರುವನಂತಪುರದಲ್ಲಿ ‌ಒಂದು ತಿಂಗಳ ಕಂಪ್ಯೂಟರ‍್ ಟ್ರೈನಿಂಗ್ ಗೆ ಇಬ್ಬರು ಹಿರಿಯ ನೌಕರರನ್ನು ಕಳುಹಿಸಬೇಕಿತ್ತು. ನಮ್ಮ ಕಿರಿಯ ಲೆಕ್ಕಾಧಿಕಾರಿಗಳೂ ಸೇರಿದಂತೆ ಅದೇಕೋ ಬೇಡವೆಂದು ನಿರಾಕರಿಸಿದವರೇ ಬಹಳ.  ಹಾಗೆ ಹೋಗುವ ಅವಕಾಶ ನಂತರದ ಹಿರಿಯ ನೌಕರನಾದ ನನಗೆ ತಾನಾಗಿಯೆ ಒದಗಿಬಂದಿತ್ತು. ನೋಡಿ, ಮೊದಲೇ ನಿಮ್ಮ ಆರೋಗ್ಯ ಸ್ವಲ್ಪ ಸೂಕ್ಷ್ಮ, ಕೇರಳದಲ್ಲಿ ಕಾರಾವಳಿಯ ಉರಿಬಿಸಿಲ ಬೇಗೆ ಆರಂಭವಾಗಿಬಿಡುತ್ತದೆ. ಹೋಗುವ ಮುನ್ನ ಇನ್ನೊಮ್ಮೆ ಯೋಚಿಸಬಾರದೇ ಎಂದೂ ಎಚ್ಚರಿಸಿದ್ದರು ಅವರೆಲ್ಲ.  ಆದರೆ, ನನಗೆ ಅದೇನು ಧೈರ್ಯವೋ ಏನೋ ಯಾರ ಮಾತಿಗೂ ಕಿವಿಗೊಡದೇ ಹೊರಟು ನಿಂತಿದ್ದೆ.  ನಮ್ಮ ಕಛೇರಿಯಲ್ಲಿ ನಮ್ಮ ಸೆಕ್ಷನ್ನಲ್ಲೇ ಇದ್ದ  ಸಹೋದ್ಯೋಗಿ ಬಾಲಾಜಿ ಕೂಡ  ಹೊರಡಲು ಸಿದ್ಧನಾದ. ನನಗೆ ಜೊತೆಯಾಗಿದ್ದ.

ಆ ತಿಂಗಳ ೧೫ರಂದು ಶನಿವಾರ ಸಂಜೆ ೫ ಗಂಟೆಯ ಬಸ್ಸಿಗೆ ಹೊರಟು ಆ ರಾತ್ರಿ ಮಂಗಳೂರು ತಲುಪಬೇಕಿತ್ತು. ನಾನು ಎಲ್ಲ ಪೂರ್ವ ಸಿದ್ಧತೆಯೊಂದಿಗೆ ಅಂದು ಸಂಜೆ ೪ ಗಂ. ಮನೆಯಿಂದ ಹೊರಟೆ. ನಮ್ಮ ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಪುಟ್ಟ ಮಕ್ಕಳಿಗೆ ಟಾಟಾ ಹೇಳಿ,  ಮಕ್ಕಳೊಂದಿಗೆ ಹುಷಾರಾಗಿ ಮನೆಯ ಕಡೆ ನೋಡಿಕೋ ಎಂದು ಹೆಂಡತಿಗೆ ಹೇಳಿ, ಲಗ್ಗೇಜಿನ ಸಮೇತ ಪಿ.ಯು.ಸಿ ಓದುತ್ತಿದ್ದ ಹಿರಿಯ ಮಗನೊಂದಿಗೆ ನನ್ನ ಗಾಡಿ ಎಂ ೮೦ ಏರಿ ಬಸ್ ಸ್ಟ್ಯಾಂಡಿಗೆ  ಬಂದಿದ್ದೆ. ಮಂಗಳೂರಿನ ಬಸ್ಸು ಬಂದ ಹಾಗೆ ಕಾಣಲಿಲ್ಲ. ಸುತ್ತೆಲ್ಲ ಕಣ್ಣಾಡಿಸಿದೆ ಸಹೋದ್ಯೋಗಿ ಬಾಲಾಜಿಯೂ ಬಂದಿಲ್ಲ ಅಂದುಕೊಂಡೆ.

ಅಷ್ಟರಲ್ಲಿ ಅನ್ನಪೂರ್ಣ ಟ್ರಾವಲ್ಸ್ ಮಿನಿ ಬಸ್ಸು ಎದುರಿನ ಪೆಟ್ರೋಲ್ ಪಂಪ್ ನಲ್ಲಿ ನಿಂತಿತ್ತು. ಅದೇ ಮಂಗಳೂರಿಗೆ ಹೋಗುವುದೆಂದೂ ತಿಳಿಯಿತು. ತಕ್ಷಣ ಅಲ್ಲಿಗೇ ಹೋಗಿ ನೋಡಿದರೆ, ಅದಾಗಲೆ ಬಾಲಾಜಿ ಹಿಂಬದಿಯ ಸೀಟಿನಲ್ಲಿದ್ದುದು ಕಂಡಿತು. ನನಗೆ ಹೇಳಿ ಕಾದಿರಿಸಿದಂತೆ ಮುಂಭಾಗದ ಬಾಗಿಲ ಬದಿಯ ಸೀಟು!  ನಾನು ಬಾಲಾಜಿಯನ್ನು ನೋಡಿ ನಕ್ಕು ಮಾತನಾಡಿಸಿದ್ದನ್ನು ಕಂಡ ಕಂಡಕ್ಟರ್ ಸುಮ್ಮನಿರಲಾರದೇ ನಿಮ್ಮ ಹೋಗಿ ಸರ್ ನಿಮ್ಮ ಫ್ರೆಂಡ್ ಜೊತೆ ಕುಳಿತುಕೊಳ್ಳಿ ಎಂದಾಗ, ಅಲ್ಲಿದ್ದವರು ಮುಂದಿನ ಸೀಟಿಗೆ ತಟ್ಟನೆ ಎದ್ದು ಬಂದಿದ್ದರು.  ನಾನು ಬಾಲಾಜಿ ಪಕ್ಕ ಕುಳಿತೆ. ಬಸ್ಸಿನ ತುಂಬಾ ಜನ! ತಡೆಯಲಾಗದ ಸೆಖೆ ಬೇರೆ. ಬಸ್ಸು ಹೊರಟರೆ ಸಾಕೆನಿಸಿತ್ತು. ಬಸ್ಸು ಹೊರಡುವ ತನಕ ಗಾಳಿಯಿಲ್ಲದೆ ಹಿಂಸೆಯೇ.  ಬಸ್ಸೇನೋ ಹೊರಟಿತು. ಆಗ ಅರಿವಾಯಿತು; ನಮಗೆ ಮುಂದೆ ಬರಬರುತ್ತ ಕ್ರಮಿಸಲಿರುವುದು ಘಾಟ್ ಸೆಕ್ಷನ್ ಪ್ರಯಾಣವೆಂದು. ಆ ಸೆಖೆಯಲ್ಲೂ ಮೈ ನಡುಗಿತೋ ಮನಸ್ಸು  ಅಳುಕಿತೋ ...ಅಂತೂ ಎಂಥ ಕೆಲಸ ಮಾಡಿಬಿಟ್ಟೆ!  ನನಗಿಂತ ಇಲಾಖೆಯಲ್ಲಿ ಕಿರಿಯ ಸಹೋದ್ಯೋಗಿ ಬಾಲಾಜಿಗೆ ಇಂತಹ ಇಕ್ಕಟ್ಟಿನ ಬಿಕ್ಕಟ್ಟಿನ ಉಸಿರುಗಟ್ಟಿಸುವ ಸಂದರ್ಭ ಸಹಿಸಿಕೊಳ್ಳಲು ವಯಸ್ಸಿದೆಯಲ್ಲ!  ನನಗೋ ಕೆಲವೊಮ್ಮೆ ನನ್ನ ಸ್ವಹಿತಕ್ಕಿಂತ ಸ್ನೇಹ  ಸಾಹಚರ್ಯೆಯೆ ಮೇಲಾಗಿ ಕಾಡಿಬಿಡುತ್ತದೆ. ಕೊನೆಗೂ ಬಸ್ಸು ಅನ್ನಪೂರ್ಣ ಹೊರಟಾಗ “ಉಸ್” ಎಂದು ನಿಟ್ಟುಸಿರು ಬಿಡುವಂತಾಯ್ತು.

ಇನ್ನೊಂದು ಕಿರಿಕಿರಿಯೆಂದರೆ ಈ ಮಿನಿ ಬಸ್ಸು ಮುಂದೆ ಘಾಟ್ ಸೆಕ್ಷನ್ ನಲ್ಲಿ ನುಸುಳಿ ತಿರುವುಗಳಲ್ಲಿ ಹೊರಳಿ ಸಾಗುತ್ತದೆ; ಅದೂ ಸಂಜೆಗತ್ತಲಲ್ಲಿ. ಅಂತಹದರಲ್ಲಿ ಜನರನ್ನು ತುಂಬಿಸಿಕೊಳ್ಳುತ್ತಲೇ ಇದ್ದಾನೆ ಕಂಡಕ್ಟರ್ ಮಹಾಶಯ.  ಆ ಜನರೋ  ತಮಗೆ ಇದು ನಿತ್ಯ ಸಹಜವೆಂಬಂತೆ ಎರಡು ಸಾಲಿನ ಸೀಟುಗಳ ಮಧ್ಯೆ ಉದ್ದ ಸಾಲಿನಲ್ಲಿ ನಿಂತು ಒಬ್ಬರ ಹಿಂದೊಬ್ಬರು ಜೋತಾಡಲು ತಯಾರಾಗಿಯೆ ಬಂದಿದ್ದಾರೆ! ಇವರಲ್ಲಿ ಕೆಲವರು ಉಡುಪಿಯವರೆಗೂ ಹೊರಟವರಿದ್ದಾರೆ!! ಮಧ್ಯೆ ಅವರಿಗೆ ಸೀಟು ಸಿಗುವುದೇನು ಗ್ಯಾರಂಟಿ ಇಲ್ಲ.  ಒಬ್ಬಾತ ಇದು ಹೊಸತೇನಲ್ಲವೆಂಬಂತೆ ಹೇಳಿದ: ಶಿವಮೊಗ್ಗಾದಿಂದ ಮಂಗಳೂರು ಕಡೆಗೆ ಇದೇ ಕಡೆಯ ಬಸ್ಸು.  ಇದು ಹೋಗುವ ಮಾರ್ಗವೆಂದರೆ ಆಗುಂಬೆ ಘಾಟ್ ಸೆಕ್ಷನ್ ನಲ್ಲಿ. ಪ್ರಯಾಣದಲ್ಲಿ ಓದುವ ಅಭ್ಯಾಸ ನನಗೆ.  ಬಸ್ಸ್ ನಲ್ಲಿ ಹುಡುಗನೊಬ್ಬ “ಹಾಯ್ ಬೆಂಗಳೂರು” ಪತ್ರಿಕೆ ಮಾರಾಟಕ್ಕೆ ಬಂದ. ಅದನ್ನು ಕೊಂಡು ಹಾಳೆ ತಿರುವ ತೊಡಗಿದೆ.  ಅದರಲ್ಲಿ ನಾನು ಮೊದಲು ನೋಡುವುದು “ಬಾಟಮ್ ಐಟಮ್” ರವಿ ಬೆಳಗೆರೆ ತಮ್ಮ ಅನುಭವದ ಮೂಸೆಯಿಂದ ಅಲ್ಲಿ ಬಿಚ್ಚಿಕೊಳ್ಳುತ್ತಾರಲ್ಲ… ನನ್ನ ಎಡ ಪಕ್ಕಕ್ಕೆ ಕುಳಿತವರು ಮಣಿಪಾಲ್ ಕಾರ್ಪೋರೇಷನ್ ಮೇನೇಜರ್.  ಮಣಿಪಾಲ್ ಗೇ ಅವರ ಪ್ರಯಾಣ. ಅವರೊಡನೆ ಮಾತು ಮೊಳೆತು ಬೆಳೆದಂತೇ ಒಳ್ಳೇ ಕಂಪೆನಿ ಸಿಕ್ತಿತೆನಿಸಿತು.  ಯಾಕೆಂದರೆ, ನನ್ನ ಜೊತೆಗಿದ್ದ  ಬಾಲಾಜಿ ಅಷ್ಟು ಮಾತುಗಾರನಲ್ಲ.  ನನ್ನ ವೈಚಾರಿಕತೆಯೂ ಕೆಲವೊಮ್ಮೆ ಅವನಿಗೆ ಹಿಡಿಸಲಾರದೇನೋ…

ಬಸ್ಸು ತೀರ್ಥಹಳ್ಳಿಯನ್ನು  ಸಮೀಪಿಸುತ್ತಿತ್ತು.  ಓಹ್,  ನನ್ನ ದೈಹಿಕ  ಜಲಭಾದೆಯ ತುರ್ತು ಶುರುವಾಗಿತ್ತು.  ಪ್ರಾಯಶಃ  ನನಗೆ ಪ್ರಯಾಣದಲ್ಲಿ ಇದು ಮೊದಲ ಅನುಭವ.  ಪಕ್ಕದಲ್ಲಿ ಅಡ್ಡ ಪಂಚೆ ಕಟ್ಟಿಕೊಂಡು ನಿಂತಿದ್ದ ಮನುಷ್ಯ ಘಟ್ಟದ ಕೆಳಗಿನವನು. ಆತನಿಗೆ ಕೇಳಿದೆ- “ ಬಸ್ಸು ಮುಂದೆಲ್ಲಿ ನಿಲ್ಲುತ್ತದೆ?”    “ಮುಂದೆ ಬರುವ  ಆಗುಂಬೆ ಘಾಟ್ ಇಳಿಯಬೇಕಲ್ಲ; ಸಂಜೆಗತ್ತಲು ಕಳೆಯುವುದರೊಳಗೇ,  ಘಟ್ಟ ಇಳಿಯುವವರೆಗೆ ಎಲ್ಲೂ ನಿಲ್ಲುವುದಿಲ್ಲವೆನ್ನಬೇಕೇ…! 
ತೀರ್ಥಹಳ್ಳಿಯಲ್ಲಿ…?” ಹುಬ್ಬೇರಿಸಿ ಮತ್ತೆ ಕೇಳಿದೆ.   “ಉಹೂಂ...” ಇಲ್ಲವೆಂದು ತಲೆಯಾಡಿಸಿದ್ದ.  ಹೊಯ್! ನನ್ನ ಜಲಭಾದೆ ಇನ್ನೂ ತೀವ್ರವಾಗಿ ಕಾಡಿತ್ತು.  ಎಲಾ ತಿರುಪತಿ ವೆಂಕಟ ರಮಣನೇ ನೀನೇ ಈ  ಸಂಕಟ ಪರಿಹರಿಸಬೇಕು,  ಅಷ್ಟಕ್ಕೂ ನಾನು ಧೈರ್ಯ ಮಾಡದಿದ್ದರೆ ಅವನೇನು ಮಾಡಿಯಾನು?  ತೀರ್ಥ ಹಳ್ಳಿ ಬಂದೇ ಬಂತು....ನಾನು ಏಳಬೇಕೆನ್ನುವಷ್ಟರಲ್ಲಿ,
ಆತ ಹೇಳಿದಂತೆಯೆ ಬಸ್ ಸ್ಟ್ಯಾಂಡಿನಲ್ಲಿ ನಿಂತಂತೆ ಮಾಡಿ ಹೊರಟೇ ಬಿಟ್ಟಿತು ನಮ್ಮ ಬಸ್ಸು ಅನ್ನಪೂರ್ಣ!  ಹೇಗೆ ಕಟ್ಟಿ ಹಾಕಲಿ ಡೀಸೆಂಟಾಗಿ ನಾನು ನನ್ನ ಪಾಪಿ ದೇಹವನ್ನಿಲ್ಲಿ…?  ಯಾಕೆ ಡೀಸೆಂಟಾಗಿ ಎಂದು ಹೇಳಿದೆನೆಂದು ಕೇಳುವಿರೇನು? ಹಳೆಯ ಘಟನೆಯೊಂದು ನೆನಪಿಗೆ ಬಂತು. ಇದೇ ತೀರ್ಥಹಳ್ಳಿಯ  ತುಂಗಾ ಮಹಾ ವಿದ್ಯಾಲಯಕ್ಕೆ ಮುಖ್ಯ ಅತಿಥಿಯಾಗಿ ಒಂದು ಸಮಾರಂಭಕ್ಕೆ ನನ್ನನ್ನು  ಆಹ್ವಾನಿಸಿದ್ದರು.  ಆ ಸಮಾರಂಭ  ಮುಗಿದು ಮರಳಿ ಶಿವಮೊಗ್ಗಾಕ್ಕೆ  ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ.   ಆಗ ಬಸ್ ನಲ್ಲೇ ಕಂಡದ್ದನ್ನು ಹೇಳಿದರೆ ನೀವು ಬಂಬಲಾರಿರಿ.  ಏನಾಯಿತೆಂದರೆ,  ಪಾಪ ಒಬ್ಬ ಹಳ್ಳಿ ಹೈದ.  ನೋಡಲು ಸಭ್ಯನಂತೇ ಕಾಣುತ್ತಾನೆ.   ತನ್ನ ಲುಂಗಿ ಪಂಚೆಯನ್ನೆತ್ತಿ ಮೊಣಕಾಲವರೆಗೆ ಕಟ್ಟಿಕೊಂಡಿದ್ದಾನೆ.  ಮೇಲ್ಕಂಬಿ ಹಿಡಕ್ಕೊಂಡು ಜೋತಾಡುತ್ತಾ ನಿಂತವನು  ಇದ್ದಕ್ಕಿದ್ದಂತೆ  ತನ್ನ ಪಂಚೆಯೋಳಗಿಂದ ನೀರು ಚುರ್ರನೆ ಬಿಟ್ಟೇ ಬಿಟ್ಟ….!  ಎಲ ಎಲಾ ಕತ್ತೆಗೂ ಈ ಮನುಷ್ಯನಿಗೂ ಏನೇನೂ ವ್ಯತ್ಯಾಸವಿಲ್ಲವಲ್ಲ.  ಕಂಡಕ್ಟ್ ರ್ ಥೂತ್  ತೇರಿಕೆ ಅಂತ ಗೊಣಗಿದ.   “ನಾ ಕೂಗಿದ್ರ  ನೀನೇನ್ನ ನಿಲ್ಲಿಸ್ತಿದ್ದೇನೂ….” ಅವನೆಂದ ಮೂತಿ ಸೊಟ್ಟಗೆ ಮಾಡಿ.  ಏನ್ ಕೂಗ್ತೀ  ನಿನ್ನ  ತಲಿ…. ನೀನೆಂಥ ಮನುಷ್ಯನಯ್ಯ ! ಗೊಣಗಿದ ಕಂಡಕ್ಟರ್ ಅವನಿಗೊಂದಿಷ್ಟು ಉಗಿದ  ಎಲ್ಲಿಂದಲೋ ಒಂದು ಬಾಟಲಿ ನೀರು ತಂದು ಅಲ್ಲಿ  ಸುರುವಿದ್ದನಷ್ಟೇ  ಎಲ್ಲಿ ವಾಸನೆ ಬಸ್ಸೆಲ್ಲಾ ಆವರಿಸೀತೋ ಎಂದು.

ಈಗ ಮುಂದೆ ಕೇಳಿ ನನ್ನ ಡೀಸೆಂಟ್ ಅವಸ್ಥೆನಾ….
ಇನ್ನೇನು,  ಈ  ಬಸ್ಸು ಅನ್ನಪೂರ್ಣ ತೀರ್ಥಹಳ್ಳಿಯ ಗಡಿಯನ್ನೂ ಬಿಡಲಿದ್ದಾಳೆ.  ಆಗ ಯಾಕೋ ಮುಖ್ಯ ರಸ್ತೆಯಲ್ಲೇ ಗಕ್ಕನೆ ನಿಂತಳಲ್ಲ ನಾನೂ ತಟ್ಟನೆ ಚುರುಕಾದೆ.....
ನಾನು ಹಿಂದೆ ಕುಳಿತಿದ್ದೆನಲ್ಲ, ಸಾಲಾಗಿ ನಿಂತು ಜೋತಾಡಲಿರುವ ಜನರನ್ನೆಲ್ಲ ಸರಸರನೆ ತಳ್ಳಿ ದಾರಿ ಮಾಡಿಕೊಳ್ಳುತ್ತ ಹೊರಬೀಳುವ ಮುನ್ನ ಎದುರಿಗೆ ಸಿಕ್ಕ ಕಂಡಕ್ಟರ್ ಗೆ ಸನ್ನೆ ಮಾಡಿ ನನ್ನ ಅವಸ್ಥೆ ಹೇಳಿಕೊಂಡೆ. “ಹೋಗ್ ಬನ್ರಿ ಬೇಗಾ..” ಅಂದ ಅಸಹನೆಯಿಂದ.  ಎಲ್ಲಿಗೆ ಹೋಗೋದು?  “ಮೂತ್ರಿ” ಎಂಬುದೆಲ್ಲಿದೆಯೋ ಕಾಣಸುತ್ತಿಲ್ಲ!  ಧೈರ್ಯವೋ ಧೈರ್ಯ ನಂದು. ಇನ್ನೊಂದೆರಡು ಹೆಜ್ಚೆ ಮುಂದೆ ನಡೆದೇ ಬಿಟ್ಟೆ.  ಅಲ್ಲೇ ಪೆಟ್ಟಿಗೆ ಅಂಗಡಿಗಳ ಮಧ್ಯೆ ಕಾಣಿಸಿತು ಎಂತದೋ ಕೊಳಕು ವಾಸನೆಯದು.  ಸಧ್ಯ ಅದೇ ಸಾಕಾಗಿತ್ತು. ಓಡಿ ಹೋಗಿ ನಿಂತೆನಲ್ಲಿ; ದೇಹ ಹಗುರವಾಯ್ತು.   ಪ್ಯಾಂಟು ಜಿಪ್ ಎಳೆದು ತಿರುಗಿ ಬಂದರೆ ಬಸ್ಸೆಲ್ಲಿ ? ಕಾಣಿಸಲೇ ಇಲ್ಲ!  ಅಯ್ಯ! ಅದ್ಹೇಗೆ ಹೇಳಿದ್ದರೂ ನನ್ನ ಬಿಟ್ಟು ಹೋಗ್ಬಿಡ್ತಾನೆ!  ನನ್ನ ಸ್ನೇಹಿತ ಬೇರೆ ಒಳಗಿದ್ದಾನಲ್ಲ; ಅವನಿಗೆ ಹೇಳಲಿಕ್ಕೇ.  ಓಹ್ ಅದು ಅಲ್ಲೇ ದೂರದಲ್ಲಿ ನಿಂತಿದೆ!  ಓಡೋಡಿ ಹೋಗಿ ಹತ್ತಿಕೊಂಡೆ. ನಿರಾಳ ನಿಟ್ಟುಸಿರಿಟ್ಟೆ… “ಅಂತೂ ಮುಗಿಸ್ಕೊಂಡ್ ಬಂದ್ರಿ ಈಗ ಆರಾಮಾಗಿ ಕೂತ್ಕೊಳ್ಳಿ ಎಂದರು ಪಕ್ಕದಲ್ಲಿದ್ದ ಮೇನೇಜರ್ ಸಾಹೇಬರು.  ನಾನು ಇಳಿದು ಹೋದದ್ದಕ್ಕೆ  ಜನ, ಯಾಕೆ ನಿಲ್ಸಿದಾರೆ ಬಸ್ಸು, ಲೇಟಾಗತ್ತೇಂತ ಕೂಗ್ತಾ ಇದ್ರಂತೆ!  ಅಲ್ಲಾ, ಎಂಥ ಬಹುತೇಕ ಜನರೇ ಹೀಗಲ್ಲವೇ…ತಮ್ಮದಾದ್ರೆ ಕಷ್ಟ, ಇತರರದಾದ್ರೆ ಏನೂ ಅಲ್ಲ...ಅಲ್ಲಾ ಇದೇನ್ರಿ ನಿಮ್ಮದು ಪ್ರವಾಸ ಕಥನ ಜಲಭಾದೆಯಿಂದಲೇ ಆರಂಭವಾಗಬೇಕೇ… ಸಹಿಯಾದ ಅನುಭವ ಆಗಿದೇಂತಿರಾ,  ಆರಂಭದಲ್ಲೇ ನಿಮ್ಮ ಕಹಿ ಅನುಭವ ಮುಂದಿಡ್ತೀರಲ್ಲ  ಎನ್ನದಿರಿ. ಯಾಕಂದ್ರೆ ಮೊದಲು ಒಂಚೂರು ಪಾರಾದ್ರು ಕಹಿಯಿದ್ದರೇನೆ ಆಮೇಲೆ ಸಿಹಿ ರುಚಿಸೋದು ಏನಂತೀರಿ…?  ಆಗುಂಬೆ ಘಾಟ್ ಸೆಕ್ಷನ್ ಬಂತು. ಬಸ್ಸು ಘಟ್ಟ ಇಳಿಯತೊಡಗಿತು. ಪಕ್ಕದಲ್ಲಿ ನಿಂತು ಘಟ್ಟ ತಗ್ಗಿನ ಹಿರಿಯಡ್ಕಕ್ಕೆ ಪ್ರಯಾಣಿಸು ತ್ತಿದ್ದಾತನಿಗೆ ಕೇಳಿದೆ- “ಎಷ್ಟು ನಿಮಿಷ ತಗೊಳ್ತಾನೆ; ಘಾಟ್  ಇಳಿಯಲಿಕ್ಕೇ? ಆತ 15 ನಿಮಿಷ ಸಾಕು” ಎಂದ. ಹತ್ತಲಿಕ್ಕೆ 25ರಿಂದ 30 ನಿಮಿಷ ಬೇಕು ಎಂದ.  ಓಹ್! ಎಂದೆ.                      
ಮುಂದುವರೆಯವುದು...