Sunday, July 31, 2011

ಕಥೆ ಏಕೆ ಮತ್ತು ಹೇಗೆ ಬರೆಯಬೇಕು...?

ಯಾವುದೇ ವಸ್ತು, ವಿಷಯ, ಘಟನೆ ಬಿಡದೇ ತಿಂಗಳಾನುಗಟ್ಟಲೇ, ವರ್ಷಗಳೇ ಕಾಡಿದಾಗ ಅದು ಕಥೆಯೋ ಕಾದಂಬರಿಯೋ ಆಗಿ ರೂಪ ತಳೆಯುತ್ತದೆ. ಕಥಾ ವಸ್ತುವಿನ ಆಯ್ಕೆ, ಅದು ಬೆರಗೊಡೆದು ಹೇಳಬಹುದಾದ ಹೊಸದೊಂದು ಕಥೆಯಾಗುತ್ತದೆಯೇ ಎಂಬ ಸೂಕ್ತ ಪರಾಮರ್ಶೆ ಮೊದಲಾಗಬೇಕು. ನಂತರ ಕಥಾ ರಚನೆ, ದಟ್ಟವಾದ ವಿವರಣೆ ಇದ್ದೂ ಓದುಗನನ್ನು ಸೆಳೆದುಕೊಳ್ಳುವ  ಆಕರ್ಷಕ ಕಲ್ಪನೆ, ನಿರೂಪಣಾ ತಂತ್ರಗಳಂತಹ ತಾಂತ್ರಿಕ ಸಂಗತಿಗಳವರೆಗೆ ಕಥೆಯ ವ್ಯಾಪ್ತಿ ಹರವು ಇರುತ್ತದೆ.  ಕಥೆ ಬರೆಯುವುದಕ್ಕೆ ಅಗತ್ಯವಾದ ಮೂಲ ಪ್ರೇರಣೆಗಳೆಂದರೆ- ಸ್ವಂತ ಅನುಭವ, ಸಂವೇದನೆ ಮತ್ತು ಸೃಜನಶೀಲ ಪ್ರತಿಭೆಗಳಿಂದ ಬರುತ್ತದೆ.

ಆದರೂ ಕಥಾ ರಚನೆಯ ಕಲೆಗಾರಿಕೆಯು ಅನೇಕ ಶ್ರೇಷ್ಠವಾದ ಕಥೆಗಳ ಆಭ್ಯಾಸಪೂರ್ಣ ಅಧ್ಯಯನದಿಂದ ಮಾತ್ರ ಬರುತ್ತದೆ. ಕನ್ನಡದಲ್ಲಿ  ಮತ್ತು ಅನ್ಯಭಾಷೆಗಳಲ್ಲಿ ಬಂದಿರುವ ನೂರಾರು ಕಥೆಗಳನ್ನು ಎಚ್ಚರದಿಂದ ಓದಿದಾಗ ಆಗುವ ಅನುಭವಗಳಿಂದ ಮತ್ತು ಅವುಗಳ ಅರ್ಥವಂತಿಕೆ ಸೋಪಜ್ಞತೆ ಹಾಗೂ ಶೈಲಿಗಳ ಹಲವು ಸಂಕೀರ್ಣ ಬಗೆಗಳು ಬರೆಯುವವನಿಗೆ ಗೋಚರವಾಗುತ್ತವೆ. ಅಂತಹ ಸಂದರ್ಭದಲ್ಲೂ  ಸ್ವಂತಿಕೆಯಿಂದ ಸೃಜಿಸಲ್ಪಡುವ ಬರವಣಿಗೆಯಲ್ಲಿ ಬರೆಯುವವಗೆ ಅಂತರಂಗದ ಧ್ವನಿಯೊಂದು ಕೇಳಿ ಬರಬೇಕು; ಆಗ ಮಾತ್ರ ಬರವಣಿಗೆ ಸರಾಗ ಸಲಲಿತವಾಗಿ ಸಾಗುತ್ತದೆ. ಸುಭಗ ಶೈಲಿ ಎಂಬುದು ಆನಂತರವಷ್ಟೇ ಪೂರ್ವಭಾವಿ ಸಿದ್ದತೆಯಲ್ಲಿ ಆಗಿರಬಹುದಾದ ಏನೆಲ್ಲ ಅಧ್ಯಯನದಿಂದ ತಂತಾನೆ ಕೂಡಿಬರಲು ಸಾಧ್ಯವಾಗುತ್ತದೆ.

ಕಥೆ ಕಾದಂಬರಿಗಳ ಬಗ್ಗೆ ಪ್ರಸಿದ್ಧ ಲೇಖಕರು ಹಾಗೂ ವಿಮರ್ಶಕರು ಏನು ಹೇಳುತ್ತಾರೆ ನೋಡೋಣ-
ಇತ್ತೀಚೆಗೆ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಕೃತಿಗಳ ಬಗ್ಗೆ ಟೀಕೆ ವಿಮರ್ಶೆಗಳು ಬಹಳ ಬರುತ್ತಿವೆ. ಪತ್ರಿಕೆಗಳೂ ಅವುಗಳಿಗೆ ಪ್ರಾಶಸ್ತ್ಯವೀಯುತ್ತ ಪ್ರಕಟಿಸುತ್ತಿವೆ.
ಒಂದು ರೀತಿ ಪೂರ್ವಾಗ್ರಹ ಪೀಡಿತರಾಗಿ ಭೈರಪ್ಪನವರ ಕೃತಿಗಳನ್ನು ಟೀಕಿಸಿದವರೆಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು.ಆರ್. ಅನಂತ ಮೂರ್ತಿಗಳು. ಅವರ ಮಾತಂತಿರಲಿ, ಯಾಕೆಂದರೆ, ಅ.ನ.ಕೃಷ್ಣರಾಯರ ಕಾಲದಿಂದಲೂ ಜನಪ್ರಿಯ ಲೇಖಕರನ್ನು ಅಕೆಡಮಿಕ್ ಲೆವೆಲ್ ನಲ್ಲಿ ಮೇಧಾವಿಗಳೆಂದು ಕರೆಸಿಕೊಳ್ಳುವ ಸಾಹಿತ್ಯ ದಿಗ್ಗಜರು ಮತ್ತು ವಿಮರ್ಶಕರೂ ಅವರನ್ನು ಅಸ್ಪೃಶ್ಯರೆಂಬಂತೇ ಅಲ್ಲಗೆಳೆದಿದ್ದಾರೆ. ಆದರೇನು! ಅನಕೃ ಕನ್ನಡ ಚಳುವಳಿಗಾರರೂ ಆಗಿ ಕಥೆ ಕಾದಂಬರಿಕಾರರೂ ಆಗಿ ಮನೆ ಮಾತಾಗಿದ್ದರು. ಈಗ ಎಸ್.ಎಲ್.ಭೈರಪ್ಪನವರ ಸರದಿ. ಭೈರಪ್ಪನವರು ತಮ್ಮ ಕೃತಿಗಳಿಂದ ಕನ್ನಡವನ್ನೂ ವಿದೇಶಕ್ಕೂ ಕೊಂಡೊಯ್ದುವರಲ್ಲಿ ಹೆಚ್ಚು ಪ್ರಸಿದ್ಧರೂ ಆಗಿ ಇನ್ನೂ ಒಂದು ಹೆಜ್ಜೆ ಮಂದೆ ಹೋಗಿದ್ದಾರೆ ಎಂದರೆ ತಪ್ಪಾಗಲಾರದು.

ಆದರೆ, ಯಾವುದು ಸಮಾಜದ ಕಟ್ಟಕಡೆಯ ಓದುಗನನ್ನು ತಲುಪಬಲ್ಲದೋ ಅವನನನ್ನು ಸೆಳೆದುಕೊಳ್ಳಬಲ್ಲದೋ ಅದೇ ಶ್ರೇ ಷ್ಠವಾದ ಜನಪರ ಕಾಳಜಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯ ಎಂಬುದನ್ನು ಮರೆಯಲಾಗದು.     ಕುವೆಂಪು, ಬೇಂದ್ರೆ, ಕೆ.ಎಸ್ .ನ., ದೇವುಡು, ಮಾಸ್ತಿ ಮುಂತಾದ ವರ ಸಾಹಿತ್ಯ ಕೃತಿಗಳೆಷ್ಟೋ ಆ ಬಗೆಯಲ್ಲಿ ವೈಶಿಷ್ಟ್ಯಪೂರ್ಣವೆನಿಸಿ ಸರ್ವಕಾಲಿಕ ಸತ್ಯವನ್ನು ಶೃತಪಡಿಸಿವೆಯಲ್ಲವೇ...?  ಈ ಚರ್ಚೆಯಂತಿರಲಿ, ಇದೀಗ ಕಥಾ ಸಾಹಿತ್ಯ ಕೃತಿಯೊಂದು ಹೇಗಿರಬೇಕೆಂದರೆ ತಾನು ಪ್ರತಿಪಾದಿಸವುದರ ವಿರುದ್ಧವಾದ ದೃಷ್ಟಿಕೋನವನ್ನೂಸಹ  ಕಥೆ ಕಾದಂಬರಿಯಲ್ಲಿ ಒಳಗೊಂಡಿರಬೇಕೆಂದೂ ಸಾಹಿತಿ ವಿಮರ್ಶಕ ರಾಮಚಂದ್ರದೇವ ಹೇಳುತ್ತಾರೆ. ಅವರ ಈ ಮಾತು ನಿಜಕ್ಕೂ ಒಪ್ಪುವಂತಹದ್ದು.  ಎಷ್ಟೋ ಸಂದರ್ಭಗಳಲ್ಲಿ ಕಥೆಯೊಂದರಲ್ಲಿ ಒಂದು ದೃಷ್ಟಿಕೋನದ ಪ್ರತಿಪಾದನೆ ಮಾತ್ರ ಇದೆಯೋ ಅದರೊಂದಿಗೇ ಆದಕ್ಕೆ ವಿರುದ್ಧವೆನ್ನಬಹುದಾದ ಇನ್ನೊಂದು ದೃಷ್ಟಿಕೋನವೂ ಅದು ಒಳಗೊಂಡಿದೆಯೋ ಎಂಬುದೇನೂ  ಓದುಗನ ಗಮನಕ್ಕೆ ಬರುವುದೇ ಇಲ್ಲ.  ಸಾಮಾನ್ಯ ಓದುಗನೊಬ್ಬನನ್ನು ಸೆಳೆದುಕೊಳ್ಳಲು ಅದು ಅತ್ಯಗತ್ಯವೂ ಆಗಿರುವುದಿಲ್ಲ ಅಲ್ಲವೇ...?  ಅಂತಹದೇನಿದ್ದರೂ ದೊಡ್ಡವರೆನಿಸಿಕೊಂಡ ಲೇಖಕರು ಮತ್ತು ಕಟು ವಿಮರ್ಶಕರಿಗೆ ಮಾತ್ರ ಅಗತ್ಯವಾಗಿರುತ್ತದೆ.

ಏನೇ ಆಗಲಿ, ಕನ್ನಡ ಕಾದಂಬರಿಯ ಇತಿಹಾಸ ನಡೆದು ಬಂದ ದಾರಿಯಲ್ಲಿ  ಗಳಗನಾಥರು, ಬಿ.ವೆಂಕಟಾಚಾರ್ಯ ರ ಮಾರ್ಗದಲ್ಲಿ  ಕನ್ನಡ ಓದುಗರೇ ಇಲ್ಲದ ಆ ಕಾಲಘಟ್ಟದಲ್ಲಿ  ಸಾವಿರಾರು ಓದುಗರನ್ನುಸೃಷ್ಟಿಮಾಡಿದ ಅವರಂತಹ ಮಹಾನ್ ಲೇಖರ ಸಾಲಿನಲ್ಲಿ, ಕಾದಂಬರಿ ಸಾರ್ವಬೌಮರೆನಿಸಿದವರು ಅನಕೃ ಅವರು. ಆನಂತರ ,  ಬಂದಿರುವವರೆಂದರೆ ಎಸ್.ಎಲ್. ಭೈರಪ್ಪನವರು ಎಂಬದು ನಿರ್ವಿವಾದವೇ ಆಗಿಬಿಟ್ಟಿದೆ. 

ಇದೀಗ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಸಾಮಾನ್ಯ ಓದುಗರ ಸಂಖ್ಯೆ ದಿನೇ ದಿನೇ ಸೊರಗುತ್ತಿರುವ ಐಟಿಯುಗ- ಮಾಹಿಯುಗದ ಬೃಹತ್ ಜಾಲದಲ್ಲಿ  ಇಂದು ನಾವಿದ್ದೇವೆ.  ಸಾಹಿತ್ಯವೆಂಬುದು ಕೇವಲ ವಿಶ್ವವಿದ್ಯಾಲಯ ಮಟ್ಟದ ವಿದ್ವಜ್ಜನರಿಗೆ ವಿದ್ವಾಂಸರಿಗೆ  ಅಕೆಡೆಮಿಕ್ ಮಟ್ಟದಲ್ಲಿ ಗುರುತಿಸಿಕೊಂಡ ದೊಡ್ಡ ಸಾಹಿತಿಗಳ  ದೃಷ್ಟಿಕೋನಕ್ಕಷ್ಟೇ ಸೀಮಿತವೇ...?  ಅಥವಾ  ಅಂತಹ ದೊಡ್ಡವರನ್ನು ತೃಪ್ತಿಪಡಿಸಬಲ್ಲ ಹೊಸ ಲೇಖಕರಿಗೆ ಮತ್ತು ಅಂತಹ ಕೃತಿಗಳನ್ನಷ್ಟೇ ಓದಬಲ್ಲ ಕೇವಲ ಸಾಹಿತ್ಯಾಸಕ್ತ ರಿಗೆ ಮಾತ್ರವೇ  ಎಂಬ ಪ್ರಶ್ನೆಗಳೂ  ಈ ಕಾಲಮಾನದಲ್ಲಿ ಗಂಭೀರ ಚರ್ಚೆಗೆ ಮುಖ್ಯವೆನಿಸುತ್ತವೆಯಲ್ಲವೆ...?
ಅದಿರಲಿ,  ಮತ್ತೆ  ಕಥೆ ಹೇಗಿರಬೇಕೆಂಬುದರ  ಬಗ್ಗೆ  ಹಿರಿಯರ ಅಭಿಪ್ರಾಯ  ಒಂದಿಷ್ಟು ತಿಳಿಯೋಣ-
ಖ್ಯಾತ ಪತ್ರ ಕರ್ತ ಲೇಖಕ ಲಂಕೇಶ್ ಕತೆಗಾರನಿಗೆ ಹೀಗೆ ಹೇಳುತ್ತಾರೆ-

ಕ್ರಿಯಾಶೀಲ ಬರಹ ಯಾವುದು?

ಖ್ಯಾತ ಪತ್ರ ಕರ್ತ ಲೇಖಕ ಲಂಕೇಶ್ ಕತೆಗಾರನಿಗೆ ಹೀಗೆ ಹೇಳುತ್ತಾರೆ-

"ನಿನ್ನ ಕತೆಯಲ್ಲಿ ಜನ ಬರಹಗಾರನಾದ ನಿನ್ನ ಹಂಗು ತೊರೆದು, ತಮ್ಮದೇ ಆದ ಒಂದು ಜೀವ ಪಡೆಯುವಂತಿರಬೇಕು. ಒಂದು ಸಾಹಿತ್ಯ ಕೃತಿಯ ಪ್ರತಿಯೊಂದು ಪಾತ್ರವೂ ಸಾಹಿತಿಯ ನಿಯಂತ್ರಣದಲ್ಲಿ ಇರುವಂತೆ ಕಂಡರೂ ಸ್ವತಂತ್ರವಾಗಿ ವರ್ತಿಸಬೇಕು. ತನ್ನ ಹಿನ್ನೆಲೆ, ಬೆಳೆದ ರೀತಿಗೆ ತಕ್ಕಂತೆ ಘಟನೆ ಮತ್ತು ಸಹಪಾತ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಮಾಡಿಕೊಳ್ಳಲಾಗದೇ ತನ್ನ ಜೀವ ಬೆಳೆಸಿಕೊಳ್ಳಬೇಕು. ಅದು ನಿನ್ನ ಕಥೆಯಲ್ಲಿ ಆಗುವುದೇ...? ಕತೆ ಬರೆಯಬೇಕೆಂದು ಎಲ್ಲೋ ಆದ ಘಟನೆಯನ್ನು ಮಂಡಿಸಿವುದಷ್ಟೇ ಕ್ರಿಯಾಶೀಲ ಬರಹವಾಗಲಾರದು.. (ಲಂಕೇಶ ರ ಮರೆಯುವ ಮುನ್ನ ಅಂಕಣದಲ್ಲಿ)

ಕವಿ ಪು.ತಿ. ನರಸಿಂಹಾ ಚಾರ್ಯ್ಯ ರು ಹೇಳುತ್ತಾರೆ

ಉಲ್ಲಂಘನೆ ಇಲ್ಲದೇ ಕವಿತೆ ಇಲ್ಲ. ಮತ್ತು irreverance ಇಲ್ಲದೇ ಸೌಂದರ್ಯವಿಲ್ಲ. ಯಾಕೆಂದರೆ, ರೂಢಿಯನ್ನು ಬಿಟ್ಟು ಮನಸ್ಸು ಎಡವುದರಲ್ಲೇ ಅದು ತನ್ನ  ಹಾಜರಿಯನ್ನು ಅರ್ಥವನ್ನು ಗಳಿಸಿಕೊಳ್ಳುತ್ತದೆ ಎಂದು ತಿಳಿದವರು ಪು.ತಿ.ನ. ರೂಢಿ ಎನ್ನುವುದು ಭವ. ಅದನ್ನು ಮುರಿದದ್ದು ಭಾವ ಅವರಿಗೆ. imagination ಎಂದರೆ ಅದು ಬರಿಯ ಕಾವ್ಯದ ತಂತ್ರವಲ್ಲ. ಅದು ಅಗತ್ಯವಾದ ಪರ್ಯಾಯ ಜೀವನ ದೃಷ್ಟಿ ಮತ್ತು ವ್ಯಕ್ತಿತ್ವ.

Monday, January 17, 2011

ಶ್ರೀಮಂತರ ಮೋಜು ಮಾಯೆಯಾಗಿ ಕಾಡದಿರಲಿ...

ಬೆಂಗಳೂರು ಶ್ರೀಮಂತರ ಮೋಜಿನ ಬಡವರ ಕನಸಿನ ರಸ್ತೆಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್- ಪ್ರವೇಶಿಸುತ್ತಿದ್ದಂತೆಯೆ ತಲೆ ಎತ್ತಿ ನೋಡುವುದೇ ಬೇಡ, ನಾವು  ಆ ರಸ್ತೆಯಲ್ಲಿದ್ದೇವೆಂಬುದು ತಟ್ಟನೆ ಖಾತ್ರಿಯಾಗಿ ಬಿಡುತ್ತದೆ. ಅದು ಶ್ರೀಮಂತರ ಮೋಜಿನ ಷಾಪಿಂಗ್ ತಾಣ ಬಡವರ ಕನಸಿನ ಕಂಗಳಿಗೆ ಬಿರುಸಿನ ಬಾಣ.  ಮನಸ್ಸಿಗೇನು ಬಿಡಿ! ಶ್ರೀಮಂತ ಬಡವ ಎಂಬ ತಾರತಮ್ಯವೇನಿಲ್ಲ; ಅದರ ಇರವು ಹೊರಬೀಳುವುದು ಕಣ್ಣಿನಲ್ಲಿ, ಅಲ್ಲದೇ ಅದನ್ನು ಹೊರಹಾಕಿದಾಗ ಬಳಸುವ ಕೈಗಳಲ್ಲಿಯೆ..ಮನಸ್ಸು ಮುಗಿಲಾಚೆಗೂ ಹಾರಿಬಿಡುತ್ತದೆ. ಮನಸ್ಸಿನೊಂದಿಗೆ ಮೈಯನ್ನೂ ಹೊಂದಿಸಿಕೊಂಡು ಸಾಗಿದರೇನೇ ನಿಯಂತ್ರಣ ಗೊತ್ತಾದೀತು! ಆಗ ನಿಜಕ್ಕೂ ಮುಗಿಲ ಮೋಹ ಹಾರಿಹೋಗುತ್ತದೆ. ಬದುಕಿಗೆ ಒಂದು ಮಜಲಾದರೂ ಸಿಗುತ್ತದೆ.
ಅಷ್ಟಕ್ಕೂ ಸಿಕ್ಕುವುದೆಷ್ಟೆಂಬುದಕ್ಕಿಂತ ದಕ್ಕಿಸಿಕೊಳ್ಳವುದೆಷ್ಟೆಂಬುದು ಸ್ವಾರ್ಥವಷ್ಟೇ ಅಲ್ಲ; ಸಾಮರ್ಥ್ಯದ ಕೆಲಸ. ದಕ್ಕಿಸಿಕೊಳ್ಳಲು ಸಾಧ್ಯವಿದ್ದರೂ ದೊರೆಯದಂತೆ ಮಾಡುವುದೂ ಮೋಸದ ಮನಸ್ಸಿನ ಕೆಲಸ. ಇಂತಹ ಮನಸ್ಸುಗಳ ನಡುವೆ ಪ್ರಕೃತಿ ಸಹಜ ಸ್ನೇಹದಲಿ ಮೊಳೆತು ಮೊಗ್ಗಾಗಿ ಅರಳುವುದೇ ಹೂವಿನಾ ಸೊಗಸು;  ಅದೇ ಫಲಕೊಡುವ ನನಸು.   ಆಂ, ಇಲ್ಲವೇಇಲ್ಲ, ಶುದ್ಧ ಮನಸಿನ ಹಿಡಿತವಿರುವ ಬದುಕಿನಲಿ ಇರಿಸು ಮುರಿಸು. ಕ್ಷಣ ಭೃಂಗುರವಾಗಿ ಕಾಡದಿರಲಿ ಮಾಯೆಯ ಮುಸುಕು.