Monday, November 1, 2010

54ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಸಪ್ನ ಬುಕ್ ಹೌಸ್ ನ ಪುಸ್ತಕಗಳ ಬಿಡುಗಡೆ

54ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ
ತಾ|| 01-11-2010 ರಂದು ಸಪ್ನಬುಕ್ ಹೌಸ್
54 ಮಕ್ಕಳ ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿತು.
ಇನ್ ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.




ಖ್ಯಾತ ನ್ಯಾಯವಾದಿ ರಾಮಾಜೊಯಿಸ್ ಪುಸ್ತಕಗಳು ಮಕ್ಕಳಿಗೆ ಜ್ಞಾನ ಭಂಡಾರ. ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು, ಸಮಾಜ ನಿರ್ಮಾಣದಲ್ಲಿ ಮಕ್ಕಳ ಸಾಹಿತ್ಯ ಅತ್ಯಂತ ಪರಿಣಾಮಕಾರಿ ಎಂದು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಮಕ್ಕಳ ಸಾಹಿತ್ಯದ  ಪ್ರಾಮುಖ್ಯತೆ ಕುರಿತು ಹೇಳಿದರು. ಚಿಕ್ಕಂದಿನಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವುದು ಅತ್ಯವಶ್ಯವೆಂದೂ ಹೇಳಿದರು.

ಸುಧಾಮೂರ್ತಿ ಮಕ್ಕಳು ಕನ್ನಡದ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಿಕೊಳ್ಳಬೇಕು, ಕಥೆಗಳು ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡಿಸುತ್ತವೆ ಎಂದರು. ತಂದೆ ತಾಯಿಗಳೂ ಈ ಬಗ್ಗೆ ಗಮನ ಹರಿಸಬೇಕೆಂದರು. ಇಲ್ಲದಿದ್ದರೆ, ದೊಡ್ಡವರಾದಮೇಲೆ ಅವರಿಗೆ ಹೇಗೆ  ಸಾಧ್ಯವೆಂದರು.



ಕನ್ನಡದ  ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಕವಿ ಶಿವರುದ್ರಪ್ಪನವರು ಮಕ್ಕಳು ಮಾತೃಭಾಷೆ ಕನ್ನಡದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕೆಂದರೆ, ಕನ್ನಡ ಶಿಕ್ಷಣ 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕಾದ ತುರ್ತು ಅಗತ್ಯವಿದೆ.  ಇದು ಜಾರಿಯಾಗದಿದ್ದರೆ ಕನ್ನಡಕ್ಕೆ ಉಳಿಗಾಳವಿಲ್ಲವೆಂದರು.
ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೊಳಗಾಗಿದೆ, ಸೃಜಶೀಲ ಬರಹಗಾರರು ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿ ನೈತಿಕತೆ ಮಾನವೀಯತೆಗೆ ಬೆಳೆಯಲು ಮಕ್ಕಳ ಸಾಹಿತ್ಯ ಸಹಕಾರಿ. ಪಂಚೆ ಮಂಗೇಶರಾಯರು, ಜಿ.ಪಿ.ರಾಜರತ್ನಂ, ಶಿವರಾಮ ಕಾರಂತ ಮುಂತಾದ ಹಿರಿಯರು ಮಕ್ಕಳಿಗಾಗಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.

54 ಮಂದಿ ಶಾಲಾ ಮಕ್ಕಳಿಗೆ (ಪ್ರತಿಯೊಂದು ಪುಸ್ತಕವೂ 54 ಪುಟಗಳು) ವೇದಿಕೆಯ ಮೇಲೆ ಕರೆದು ಪುಸ್ತಕ ವಿತರಣೆ ಮಾಡಿದ್ದು ಒಂದು ವಿಶೇಷ.
ಸಮಾರಂಭದಲ್ಲಿ ಸಾಹಿತಿಗಳಾದ ಸಾ.ಶಿ.ಮರುಳಯ್ಯ, ಕವಿ ಸುಮತೀಂದ್ರನಾಡಿಗ್, ರಾಜಶೇಖರ ಭೂಸನೂರ ಮಠ, ಸು. ರುದ್ರಮೂರ್ತಿ ಶಾಸ್ತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಬರೀ ನೆರೆತ ತಲೆಗಳಿಂದ ಹೆಚ್ಚು ತುಂಬಿದ್ದ ಸಮಾರಂಭವು ಕಳೆದ ತಲೆಮಾರಿನಲ್ಲಿ ಯುವ ಪೀಳಿಗೆಯಿಂದ ಕಿಕ್ಕಿರಿದು ತುಂಬಿರುತ್ತಿದ್ದ ಇಂತಹ ಸಮಾರಂಭಗಳನ್ನು ಸ್ಮರಿಸಿ ಕೊಳ್ಳುವಂತಿತ್ತು.

ಸಮಾರಂಭದ ಕೊನೆಯಲ್ಲಿ ಸಪ್ನ ಕನ್ನಡ ವಿಭಾಗದ ಮುಖ್ಯಸ್ಥರಾದ  ದೊಡ್ಡೇಗೌಡರು ವಂದನಾರ್ಪಣೆ ಮಾಡಿದರು.

No comments:

Post a Comment