Wednesday, April 14, 2010

ಏಪ್ರಿಲ್ ಫೂಲ್ಸ್ ಡೇ

ಏಪ್ರಿಲ್ ಫೂಲ್ಸ್ ಡೇ" ಅಂದರೆ, ನಾವುಗಳು ನಿಜಕ್ಕೂ ಫೂಲ್ಸ್ ಆಗುವ ದಿನವಲ್ಲ. ಅರೆಕ್ಷಣ ನಮ್ಮವರು ನಗೆಚಾಟಿಕೆಯಿಂದ ತುಸುವೆ ಚುರುಕು ಮುಟ್ಸಿಸಿದಾಗ, ನಾವು ಛಂಗನೆ ನಗೆಗಡಲಲಿ ತೇಲಿ ಉಕ್ಕುತ್ತಾ ಧುಮ್ಮಿಕ್ಕುವ ಫಾಲ್ಸ್ ನಂತೆ ಹಾರಿ ಜಿಗಿಯುವ ದಿನವೆನ್ನಬಹುದಾಗಿದೆ. ಆದರೆ, ಅದು ನಮ್ಮ ಮುದುಡಿದ ಮನಗಳನ್ನು ತೆರೆದುಕೊಳ್ಳುವಂತೆ ಒಳಗಿರುವ ದುಗುಡವನ್ನೆಲ್ಲ ಹೊರಹಾಕುವಂತಿರಬೇಕಷ್ಟೇ. ನಗೆಚಾಟಿಕೆ ಎಂಬದು ನಿಜಕ್ಕೂ ಬರೆ ಹಾಕುವ ಛಾಟಿ ಏಟಾಗಬಾರದೆಂಬ ಎಚ್ಚರವಿರಬೇಕಲ್ಲ...

ನನಗಂತು ನಗಲು ಸಣ್ಣ ಪುಟ್ಟವಿಷಯಕ್ಕೆ ನಗು ಬರುವುದಿಲ್ಲ. ಒಮ್ಮೆ ನಾನು ಕೆಲಸ ಮಾಡುತ್ತಿದ್ದ ಆಫೀಸಿನಲ್ಲಿ ಹೀಗಾಯಿತು-
ಸಂಜೆ ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದೆ. ಮಾರನೆಯ ದಿನ ಬೆಳಿಗ್ಗೆ ಎಂಟುಗಂಟೆಗೆಲ್ಲ ಎಂದಿನಂತೆ ಆಫೀಸಿನಲ್ಲಿರಬೇಕು. ಸರಿ ಬೆಳೆಗಾಗೆದ್ದು ಪ್ರಾತಃವಿಧಿಗಳನ್ನು ಪೂರೈಸಿ ಹೊರಡಲು ಸಿದ್ಧನಾಗುತ್ತಿರುವಾಗ, ನೋಡಿದರೆ, ಆಫೀಸಿನಲ್ಲಿ ಬಳಸುವ ನನ್ನ ಮೇಜಿನ ಡ್ರಾದ ಕೀಲಿ ಕೈ ಕಾಣೆಯಾಗಿದೆ. ನಿನ್ನೆದಿವಸ ತಂದವನ್ನು ಎಲ್ಲಿಟ್ಟೆನೆಂಬುದು ನೆನಪೇ ಆಗುತ್ತಿಲ್ಲ! ಈಗ ಹಾಗೆಯೆ ಹೋದರೆ, ಆಫೀಸಿನಲ್ಲಿ ದೊಡ್ಡ ರಾದ್ಧಾಂತವೆ ಆಗಿಬಿಡುತ್ತದೆ; ಸಾಹೇಬರ ಎದುರಿನಲ್ಲಿ. ಯಾಕೆಂದರೆ, ಅದಿಲ್ಲದೇ, ಸಾರ್ವಜನಿಕ ಸಂಪರ್ಕ ಹೊಂದಿರುವಂತ ನನ್ನ ಪಾಳಿಯ ಕೆಲಸಗಳು ನಡೆಯುವಂತೆಯೆ ಇಲ್ಲ. ಒಂದೋ ಎಲ್ಲರೆದುರಿಗೆ ನನ್ನ ಡ್ರಾದ ಬೀಗ ಒಡೆದೇ ತೀರಬೇಕು; ಅದರ ಮುಂದಿನ ಕೆಲಸಗಳಿಗೆ ಅಷ್ಟು ಜವಾಬ್ದಾರಿಯದು.
ಸರಿ, ಆದದ್ದಾಗಲಿ ಎಂದು ದೇವರ ಮೇಲೆ ಭಾರಹಾಕಿ ಆಫೀಸಿಗೆ ಹೊರಟೆ. ಸಪ್ಪೆ ಮುಖ ಹಾಕಿಕೊಂಡು ನನ್ನ ಮೇಜಿನ ಬಳಿ ಹೋಗಿ ಕುಳಿತೆ. ಇನ್ನೂ ಸಾಹೇಬರು ಬಂದಿರಲಿಲ್ಲ.
ಮೇಜಿನ ಡ್ರಾಕ್ಕೆ ಇಂಟರ‍್ ಲಾಕ್ ಆಗಿತ್ತಲ್ಲ. ಬೇಸರದಿಂದ ಅದನ್ನೆಳೆದೆ ನೋಡಿ, ಹೊರಗೆ ಬಂದು ಬಿಡಬೇಕೇ... ಒಳಗೆ ನೋಡುತ್ತೇನೆ ಅದರ ಕೀಲಿ ಕೈ ಅದರೊಳಗೇ ಬಿದ್ದಿದೆ. ಅಂದರೆ ಡ್ರಾ ಲಾಕ್ ಆಗಿರಲಿಲ್ಲ.!. "ಓಹ್ ಹೊಹ್ಹೋ ಹೋ... ಎಂದು ನನಗೆ ನನಾನೆ ಹಣೆ ಚಚ್ಚಿಕೊಂಡು ಹುಚ್ಚನಂತೆ ನಗತೊಡಗಿದ್ದೆ. ಆಗ ನನ್ನ ಸಹೋದ್ಯೋಗಿಗಳು ನನ್ನ ಬಳಿ ಬಂದು,
"ಯಾಕೋ ನಿನಗ್ಯಾರು ಏಪ್ರಿಲ್ಲ ಫೂಲ್ ಮಾಡಿದ್ರೋ" ಅಂದರು.
"ಏನು ಇವತ್ತು ಏಪ್ರಿಲ್ ಫೂಲ್ ದಿನವೇನು?" ಎಂದೆ.
"ಹೌದಲ್ಲೋ..ಎಲ್ಲಿದ್ದೀಯ ಆಫೀಸಿಗೆ ಬಂದಿದ್ದೀ ತಾನೇ.."
"ಅಯ್ಯೋ ಮಹರಾಯ ನನಗೆ ಯಾರೂ ಫೂಲ್ ಮಾಡಲಿಲ್ಲ; ನನಗೆ ನಾನೇ ಫೂಲ್ ಆಗಿಬಿಟ್ಟಿದ್ದೇನೆ" ಎಂದು ವಿಷಯ ತಿಳಿಸಿದೆ.
ಅವರೆಲ್ಲರೂ ನನ್ನ ಜೊತೆಗೂಡಿ ನಕ್ಕರು.
ಅಷ್ಟೊತ್ತಿಗೆ ಬಂದ ಸಾಹೇಬರೂ ನಗುತ್ತಾ- "ಈ ಡ್ರಾದಲ್ಲೇ ಕೀ ಬಿಡುವ ಬದಲು, ನನ್ನ ಟೇಬಲ್ ಮೇಲೆ ಬಿಡಬೇಕಿತ್ತು ನೀವು. ನಿಮಗೆ ಇನ್ನೂ ಹುಚ್ಟು ಹಿಡಿಸುತ್ತಿದ್ದೆ " ಎಂದರು.
****
ಏನಿದು ಏಪ್ರಿಲ್ ಫೂಲ್ ಡೇ..?
ಹೌದು, ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲ ದಿನವನ್ನು ಏಪ್ರಿಲ್ ಫೂಲ್ಸ್ ಡೇ ಎಂದು ಆಚರಿಸಲಾಗುತ್ತದೆ. ಅದೆಷ್ಟೋ ಶತಮಾನಗಳಿಂದ ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಸೇರಿದಂತೆ ಈ ದಿನವು ದೇಶ ವಿದೇಶಗಳಲ್ಲಿ ಆಚರಣೆಯಲ್ಲಿದ್ದರೂ, ಇದು ಮೊದಲು ಎಲ್ಲಿ ಆರಂಭವಾಯಿತು ಎಂದು ತಿಳಿದು ಬಂದಿಲ್ಲ. ಈ ದಿನವು ಪ್ರಾಚೀನ ಕಾಲದಿಂದ ರೋಮ್ ನಲ್ಲಿ ಆಚರಣೆಯಲ್ಲಿರುವ (ಮಾರ್ಚ್ ೨೫) ಹಿಲಾರಿಯ ಹಬ್ಬವನ್ನು ಸಾಂಕೇತಿಸುತ್ತದೆಯಲ್ಲದೇ ನಮ್ಮ ದೇಶದಲ್ಲಿಯೂ ಸಹ ಹೋಲಿ ಹಬ್ಬದ ನಂತರ ದ ಬಳಿಕ ಬರುವ ಅಂದರೆ ಮಾರ್ಚ್ ೩೧ ರ ಮಾರನೆಯ ದಿನ ಏಪ್ರಿಲ್ ೧ ರಂದು ಆಚರಿಸಲ್ಪಡುತ್ತದೆ. ಯಾವಾಗ ಈ ಅನೂಚಾನವಾದ ಪದ್ಧತಿಯು ಬ್ರಿಟನ್ ನಿಂದ ಅಮೆರಿಕಾಕ್ಕೆ ಕಾಲಿಟ್ಟಿತೋ ಆಗ ವಿಶ್ವದಾದ್ಯಂತ ಹೆಚ್ಚು ಹೆಚ್ಚು ಪ್ರಚಲಿತವಾಯಿತು. ಅಂದಿನ ದಿನ ಸ್ನೇಹಿತರು ಸಂಬಂಧಿಕರನ್ನು ಪ್ರಯೋಗಿಕವಾಗಿ ತಮಾಷೆ ಮಾಡಿ ನಗೆಪಾಟಲಿಗೀಡು ಮಾಡುವುದು, ಹಾಗೆ ನಗಿಸಿ ನಕ್ಕು ನಲಿಯುವ ರಸಮಯ ಕ್ಷಣಗಳಿವು.

ಆದರೆ, ತಮಾಷೆ ಅಮವಾಸ್ಯೆಯಾಗದಿರಬೇಕಷ್ಟೇ... ಏನೇ ಆಗಲಿ, ನಗಿಸಬೇಕು, ನಗಬೇಕು; ಒಂದಾಗಿ ನಕ್ಕು ನಲಿಯಬೇಕು. ವರ್ಷಕ್ಕೊಮ್ಮೆ ಈ ದಿನದಂದು ತಮಾಷೆಗಾಗಿ, ಹಸಿ ಹಸಿಯಾಗಿ ಹುಸಿಯಾಗಿ ಅರೆಕ್ಷಣ ಹುಂಬರೆನಿಸಿಕೊಂಡರೂ, ಒಬ್ಬರಿಗೊಬ್ಬರ ಮನಸ್ಸುಗಳು ನಕ್ಕು ನಲಿದಾಡಬೇಕು; ಹದವಾಗಬೇಕು; ಬದುಕಿನ ಏನೆಲ್ಲಾ ನೋವುಗಳೂ ಮರೆತು ನಾವು ಹಗುರಾಗಬೇಕು ಎನ್ನೋಣವೇ..

No comments:

Post a Comment