Friday, November 5, 2010

ನಾ ಕಂಡ ತಿರುವನಂತಪುರಂ ಮತ್ತು ಕನ್ಯಾಕುಮಾರಿ
(ಒಂದು ಅಪೂರ್ವ ಪ್ರವಾಸ ಕಥನ)-2

Mangalore Railway Station.
ಮಂಗಳೂರು ರೈಲ್ವೆ ಸ್ಟೇಷನ್ ತಲುಪಿದ್ದೆವು.  ಕೌಂಟರ್ ನಲ್ಲಿ ನಾನು ವಿಚಾರಿಸುವಾಗ ಕನ್ನಡ ಉಪಯೋಗಕ್ಕೆ ಬರಲಿಲ್ಲ. ಇಂಗ್ಲೀಷ್ ನೆರವಿಗೆ ಬಂತು.  ತಿರುವನ್ ದ್ರಮ್ ಗೆ ಪರಶುರಾಮ್ ಎಕ್ಸ್ ಪ್ರೆಸ್ ಬೆಳಗಿನ ಜಾವ 3-30 ಕ್ಕೆ ಇದೆಯೆಂದು ತಿಳಿಯಿತು. ಸ್ಲೀಪಿಂಗ್ ಕೋಚ್ ಕೇಳ ಬೇಡಿ, ಫಸ್ಟ್ ಕ್ಲಾಸ್ ಕೂಡ ಇಲ್ಲ. ಇರುವುದೊಂದೇ ಎ.ಸಿ.ಚೇರ್ ಕಾರ್ ಭೋಗಿಗಳು.  ಮನಸ್ಸು ಕೊಂಚ ಅಳುಕಿತು. ಆದರೇನು! ಮುಂದಿನ ದೂರದ ಪ್ರಯಾಣ ಎದುರಿಸಲು ಎದೆಯಲ್ಲಿ ಧೈರ್ಯ ಧುತ್ತನೆದ್ದಿತ್ತು.

ಅಲ್ಲಿಯವರೆಗೆ ಫ್ಲಾಟ್ ಫಾರಂನಲ್ಲೇ ನಿದ್ರೆ ಹೋಗುವುದೋ ಕಾಲಾಹರಣ ಮಾಡುವುದೋ ಆಗಬೇಕಿತ್ತು. ಅಲ್ಲೇ ಸೊಳ್ಳೆಗಳ ಕಾಟ ಬೇರೆ ವಕ್ಕಸಿಕೊಳ್ಳಬೇಕೇ… ಹೊಟ್ಟೆಬೇರೆ ತಾಳ ಹಾಕತೊಡಗಿತ್ತಲ್ಲ;  ಟೀ ಸ್ಟಾಲ್ ಬಿಟ್ಟರೆ ಬೇರೇನೂ ಕಾಣಿಸಲಿಲ್ಲ.
ಅಲ್ಲೋ ಬನ್ ಬಿಟ್ಟರೆ ಇನ್ನೇನು ಇರಲಿಲ್ಲ.  ಟೀ ಮಲಬಾರಿಗಳ  ಮಸಾಲೆ ವಾಸನೆಗೆ ಅದಾಗಲೇ ಹತ್ತಿರವಾಗಿತ್ತು.  ಬನ್ ತಿಂದು ಟೀ ಕುಡಿದೆವು. ಬಿಲ್ ಅಷ್ಟೇ ಮಸಾಲೆ ಹಾಕಿದಷ್ಟೇ ಖಾರವಾಗಿತ್ತು. ತೆತ್ತು ಬಂದು ವೈಟಿಂಗ್ ರೂಂ ನೋಡಿದರೆ ಅದೂ ಭರ್ತಿ. ಹೊರಗೆ ಫ್ಲಾಟ್ ಫಾರಂ ಕಟ್ಟೆಯಲ್ಲೇ ಎಲ್ಲಂದರಲ್ಲಿ ಜಾಗ ಹುಡುಕಿಕೊಂಡು ಹೆಂಗಸರು ಮಕ್ಕಳು, ಮಧ್ಯಮ ವರ್ಗದವರು, ಕೆಳವರ್ಗದವರು ಹಾಗೂ ಮೇಲ್ವರ್ಗದವರೂ ಸಹ ಮನಷ್ಯ ಜೀವಕ್ಕೆ ಯಾವೊಂದು ಬೇಧವಿಲ್ಲವೆಂಬಂತೆ ಅಲ್ಲಲ್ಲಿ  ತಮ್ಮ ವಸ್ತ್ರಗಳನ್ನು  ಹಾಸಿ ಉರುಳಿಕೊಂಡಿದ್ದಾರೆ.  ಕೆಲವರಂತೂ ನ್ಯೂಸ್‌ ಪೇಪರ್ ಮೇಲೇ ಮಲಗಿದ್ದಾರೆ.  ನಾವಿಬ್ಬರೂ ಒಂದು ಗೋಡೆ ಮಗ್ಗುಲು ಹಿಡಿದೆವು. ನನ್ನ ಶಾಲು ಮತ್ತು ಟವೆಲ್ ಉಪಯೋಗಕ್ಕೆ ಬಂದವು. ಸೊಳ್ಳೆಗಳೋ ರಕ್ತ ಹೀರಲು ಮುಂದಾದವು. ಬಾಲಾಜಿ ಕುಳಿತೇ ಇದ್ದ ಜಪಮಾಡುವವನಂತೆ.  ನಾನೋ ಮಲಗುವುದು ಏಳುವುದು ಮಾಡುತ್ತಲೆ ಇದ್ದೆ.

ಅಷ್ಟರಲ್ಲಿ, ಉತ್ತರ ಭಾರತದ ಕಡೆಯ ಕಾಲೇಜೊಂದರ ಟೇನೇಜ್ ಹುಡುಗಿಯರ ಗುಂಪೊಂದು ನಮ್ಮ ಸನಿಹಕ್ಕೇ ಬಂದಿತ್ತು.  ಸುಮಾರು 25-30 ಹುಡುಗಿಯರ ಗುಂಪದು. ಅವರ ಯುವ ಮಾಸ್ತರ ಆ ಹುಡುಗಿಯರ ಮಧ್ಯೆ ಕುಳಿತು ಕೊಂಡು ಏನೋ ತಮಾಷೆಯ ಕಥೆ ಹೇಳತೊಡಗಿದ್ದ.  ಹುಡುಗಿಯರು ಆಗಾಗ್ಗೆ ಅವನ ಹಾಸ್ಯ ಚಟಾಕಿಗಳಿಗೆ ಸ್ಪಂದಿಸುತ್ತಿದ್ದರೆ ನೋಡಲು ಮೋಜೆನಿಸುತ್ತಿತ್ತು.   ಅವರಲ್ಲಿ ಬಹುತೇಕ ಪಿಟಿಪಿಟಿ ಟಾಪ್ ಮತ್ತು ಜೀನ್ಸ್ ಪ್ಯಾಂಟ್ ನಲ್ಲಿದ್ದ ಹುಡ್ಗೀರು. ಅವರ ಸ್ಟೈಲೋ ಸ್ಟೈಲು! ಕಿಲಕಿಲ ನಗುವೇ ಚೆಂದ,  ಇನ್ನು ಹೇಳುವುದೇನು?  ಓಹ್! ಅವರ ತಕ ಪಕ ಡ್ಯಾನ್ಸ್ ಗೆ  ಸೊಳ್ಳೆಗಳ ಸಪೋರ್ಟ್  ಸಹ  ಇತ್ತಲ್ಲ! ಅವರ ಗುಜರಾತಿ ಬೆರೆತ ಹಿಂದಿ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಅವರ ಹರೆಯದ ಹುಮ್ಮಸ್ಸಿನ  ನೋಟದ ಮುಂದೆ ನಮಗೆ ಸೊಳ್ಳೆ ಕಾಟ ಮರೆತೇ ಹೋಗಿತ್ತು. ಬೆಳಗಿನ ಜಾವ 3-45 ರ ಹೊತ್ತಿಗೆ ಪರಶುರಾಮ್ ಎಕ್ಸ್ ಪ್ರೆಸ್ ನ ಭೋಗಿಗಳು  ಮೊದಲ ಫ್ಲಾಟ್ ಫಾರಂನಲ್ಲೆ ಬಂದು ನಿಲ್ಲತೊಡಗಿದವು.
photos Courtesy- URL of respective owners           
ಸಂಪೂರ್ಣ  ಇ_ಪುಸ್ತಕ ಇಲ್ಲಿದೆ ಓದಿ...

No comments:

Post a Comment