Saturday, April 17, 2010

ಇರುಳು ನಕ್ಷತ್ರ-1 (ರಾಗಸಂಗಮ ಮಾಸ ಪತ್ರಿಕೆಯಲ್ಲಿ ಪ್ರಕಟಿತ )

"ಇರುಳು ನಕ್ಷತ್ರ" ೧೯೯೯ ರಲ್ಲಿ ರಾಗಸಂಗಮ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ. ನಂತರ ಪುಸ್ತಕ ರೂಪದಲ್ಲಿ ಬಂದಿದೆ.
ಓದಿ ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ,

ಲಾವಣ್ಯ, ಮುಂದೇನ್ಮಾಡ್ಬೇಕೂಂತ ಇದೀಯಾ ? ಅಡುಗೆ ಮನೆಯಿಂದ ಬಿಸಿಬಿಸಿ ಕಾಫಿಯ ಲೋಟಾ ತಂದು ಎದುರಿಗಿಟ್ಟು ಕೇಳಿದಳು ಸಹನಾ. ಆಗಷ್ಟೇ ಸಿಟಿ ಬಸ್ ಇಳಿದು ಅಕ್ಕನ ಮನೆಗೆ ಬಂದಿದ್ದ ಲಾವಣ್ಯ ಕಾಫಿಯ ಕಪ್ಪನ್ನು ಕೈಗೆತ್ತಿಕೊಂಡಳು. ತಲೆ ಎತ್ತಿ ನೋಡಿದಳು. ಅವಳ ದೈನ್ಯ ನೋಟ ಅಕ್ಕನ ದೃಷ್ಟಿಯಲ್ಲಿದ್ದ ನಿಷ್ಟೂರ ಸತ್ಯವನ್ನು ಎದುರಿಸಲಾಗದೆ ಸೋತಿತ್ತು. ತಲೆ ಬಾಗಿಸಿ ಕಾಫಿ ಗುಟುಕರಿಸಿದಳು.
“ ಲಾವಣ್ಯ, ಈವಾಗ ತಾನೆ ಬಂದಿದ್ದಾಳೆ, ಸ್ವಲ್ಪ ಸುದಾರಿಸಿಕೊಳ್ಳಲಿ. ಆಮೇಲೆ ಮಾತಾಡೋದು ಇದ್ದೆ ಇದೆ ” ಅಭಿರಾಮ ತನ್ನ ನೆರವಿಗೆ ಬಂದಾಗ ಲಾವಣ್ಯ ನಿರಾಳವಾಗಿ ಕಾಫಿ ಸೇವಿಸಿದಳು.

ಅಕ್ಕನ ಮನೆಯಲ್ಲಿ ತನಗೆ ರಾಜೋಪಚಾರ ಮಾಡುವರೆಂದೇನೂ ನಿರೀಕ್ಷಿಸಿ ಬಂದ ಸ್ಥಿತಿ ಅವಳದಲ್ಲ. ಬಾಡಿದ ಮುಖ, ಅದೇನೋ ನೋವು ತುಂಬಿದ ಕಣ್ಣುಗಳು. ಅದರೇನು, ಸಾಧಾರಣ ಬಳೀ ಸೀರೆಯಲ್ಲೂ ತಿಳಿಗೆಂಪಿನ ಮೈ ಬಣ್ಣದಲ್ಲಿ ಎದ್ದು ತೋರುವ ಅಂಗಸೌಷ್ಟವ ಈಕೆಯ ಚೆಲುವನ್ನು ಅಕ್ಕನ ಚೆಲುವಿನೊಂದಿಗೆ ಹೋಲಿಸಲಾಗದು. ಇಂಥ ರೂಪಸಿಗೆ ಎಲ್ಲಿದೆ ಸುಖಪಡುವ ಅದೃಷ್ಟ ? ಎಲ್ಲಿದೆ ನೆಮ್ಮದಿ, ನೆಲೆ ? ಅಭಿರಾಮನ ಅನುಕಂಪನೀಯ ನೋಟದಿಂದ ಲಾವಣ್ಯಳ ಮನವೊಂದಿಷ್ಟು ಹಗುರವೆನಿಸಿತು. ಆದರೆ ಬಯಸಿ ಬಂದವಳಿಗೆ ಅದೇ ಆತ್ಮ ಸ್ಥೆರ್ಯ.
ಆದಾಗಲೇ, ಒಳಮನೆಯಿಂದ ಬಿರುಸಾಗಿ ಬಂದ ಸಹನಾ “ ಬಿಸಿನೀರು ಇದೆ ಏಳು, ಸ್ನಾನ ಮಾಡುವೆ ಎಂದಳು ಅವಳ ದನಿ ಗಡುಸಾಗಿತ್ತು ” ಪುನಃ ಅಭಿರಾಮನೆಡೆಗೆ ನೋಟ ಹರಿಸಿದಳು ಲಾವಣ್ಯ.
“ ಊಂ ಏಳು ಲಾವಣ್ಯ, ಸ್ನಾನ ಮಾಡ್ಕೊಂಡು ಬಾ. ಊಟದ ಸಮಯವಾಗಿದೆ. ಬೆಳಿಗ್ಗೆ ಸರಿಯಾಗಿ ತಿಂಡಿ ತಿಂದಿದ್ಯೊ ಇಲ್ವೋ ! ” ಅಭಿರಾಮನ ದನಿಯಲ್ಲಿ ಮತ್ತದೇ ಸಾಂತ್ವನವಿತ್ತು.
ಲಾವಣ್ಯ ತಲೆಯಾಡಿಸಿದಳು. ಹೌದು, ಅವಳು ಬೆಳಿಗ್ಗೆ ತಿಂಡಿಯನ್ನು ತಿಂದಿರಲಿಲ್ಲ. ಸ್ನಾನವು ಬೇಕಾಗಿರಲಿಲ್ಲ. ಗಂಡನ ಮನೆ ಬಿಟ್ಟು ಬಂದಿದ್ದಳು. ಅಲ್ಲ ಗಂಡನನ್ನೆ ಬಿಟ್ಟು ಬಂದಿದ್ದಳು.
ಸ್ನಾನ ಮಾಡಿ ಬಂದಾಗ ಊಟ ಸಿದ್ದವಾಗಿತ್ತು. ಡೈನಿಂಗ್ ಟೇಬಲ್‌ ಮುಂದೆ ಭಾವ, ನಾದಿನಿ ಕುಳಿತುಕೊಂಡರು. ಮೂಲಂಗಿ ಬೇಳೆ ಹುಳಿ, ಉಪ್ಪಿನಕಾಯಿ, ಕರಿದ ಹಪ್ಪಳ, ಸಂಡಿಗೆ ತಿನ್ನಲು ರುಚಿಕರವಾಗಿತ್ತು. ಸಹನಾ ಊಟಕ್ಕೆ ಬಡಿಸುತ್ತಾ ತಾನೂ ಅವರ ಜತೆಗೆ ಕುಳಿತಳು. ಮೂವರು ಸಾಕು-ಬೇಕು ಅಷ್ಟೇ ಹೇಳಿಕೊಂಡು ಊಟ ಮುಗಿಸಿದ್ದರು.

ಲಾವಣ್ಯ ತನ್ನ ಸೂಟ್‌ ಕೇಸ್‌ನೊಂದಿಗೆ ಮುಂದಿನ ವರಾಂಡದಲ್ಲಿದ್ದ ಪುಟ್ಟ ಕೋಣೆ ಸೇರಿದಳು. ಬಾಗಿಲು ಹಾಕಿ ಹಾಗೆ ಕಾಟಿನ ಮೇಲೆ ಉರುಳಿಕೊಂಡಳು. ಬೇಡ ಬೇಡವೆಂದರು ಚಿಂತೆ ನುಸುಳುತಿತ್ತು. ಹಿಂದಿನ ನೆನಪೆಲ್ಲವೂ ಮಿದುಳಿನಲ್ಲಿ ಮರುಕಳಿಸುತ್ತಲೇ ಇತ್ತು. ಅಷ್ಟಕ್ಕೂ, ಮೈ ಮನಸ್ಸುಗಳೆರಡೂ ದಣಿದಿದ್ದುವಲ್ಲ ! ಮನದ ಚಿಂತೆ ದೂರ ಮಾ ಬೇಕೆಂದೇ ಜೀವ ಹಾತೊರೆಯುತ್ತಿತ್ತಲ್ಲ ! ಸ್ವಲ್ಪ ಜೊಂಪು ಹತ್ತಿತ್ತು.

ಇತ್ತ ಅವಳ ಅಕ್ಕ ಭಾವ ಹಾಲ್‌ನಲ್ಲಿದ್ದ ತಮ್ಮ ಕೋಣೆಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದರು.
“ ಅಲ್ಲಾರಿ, ಇವಳು ಹೀಗೆ ಬರಬಾರದಿತ್ತು ! ”ಸಹನಾ ಆತಂಕದಿಂದ ಹೇಳಿದಳು.
“ ಮತ್ತೇ ಅವಳೆನು ಮಾಡ ಬೇಕೂಂತಿಯಾ.... ” ಅಭಿರಾಮನೆಂದ.
“ ಅಲ್ಲೇ ಇದ್ದು ಬಂದುದೆಲ್ಲವನ್ನೂ ಧೈರ್ಯವಾಗಿ ಎದುರಿಸಬೇಕಿತ್ತು . ”
“ಮದುವೆ ಮಾಡಿಕೊಂಡು ಒಂದೂವರೆ ವರುಷದಿಂದ ಗಂಡನ ಜತೆ ಏಗುತ್ತಿದ್ದಾಳೆ. ಏನೆಲ್ಲ ಎದುರಿಸುತ್ತಿದ್ದಾಳೆ. ಅವನೇ ಸರೀಗಿಲ್ಲದಿದ್ದರೆ ಇವಳಿಗ್ಯಾರು ದಿಕ್ಕು ? ”
“ಹೆಣ್ಣಿಗೆ ಭೂದೇವಿಯ ತಾಳ್ಮೆ ಇರಬೇಕೂಂತಾರೆ . ”
“ ಈಗಿನ ಕಾಲದಲ್ಲಿ ತಾಳ್ಮೆಗೆಟ್ಟರೆ ಭೂದೇವಿ ಕೂಡ ಬಾಯ್ ಬಿಡ್ತಾಳೆ. ”
“ ಹ್ಞೂಂ, ಗಂಡನ್ನ ಬಿಟ್ಟು ಬಂದಿದ್ದಾಳೆ. ಇಲ್ಲಿ ನಮಗೇನ್ ತರ್ತಾಳೋ ! ”
“ ಇವಳು ಗಂಡನನ್ನ ಬಿಟ್ಟು ಬರಲಿಲ್ವೇ. ಗಂಡನಾದವನು ಇವಳ್ನ ಬಿಡಬಾರದ ಕಡೆ ಒಂಟಿಯಾಗಿ ಬಿಟ್ಟು ಹೋದ್ರೆ, ಪಾಪ ಇವಳು ಓಡಿ ಬರದೇ ಏನ್ಮಾಡ್ತಾಳೆ ? ”
“ ನನಗೇಕೋ ಭಯವಾಗುತ್ತೇರಿ. ಇವಳಿಗೆ ಮುಂದ್ಯಾರು ಗತಿಯೋ....”
“ ಹೆದರ್ಕೊಬೇಡ್ವೇ.... ಅವಳಿಗಾದರು ಬೇರೆ ಯಾರಿದ್ದಾರೆ ? ಎಲ್ಲ ನಾವೇ ತಾನೇ ?”
“ ಹೌದು, ನಾಳೆ ಏನ್ ಬಂದ್ರೂ ನಾವ್ ತಾನೆ ಇವಳ ಜತೆ ಅನುಭವಿಸ ಬೇಕೂ ! ”
“ ಸಹನಾ, ಯಾಕಷ್ಟು ಬೇಸರ ಪಡ್ತೀಯಾ...... ? ಅವಳು ಎಷ್ಟೇ ಆಗಿರಲಿ ನಿನ್ನ ಒಡಹುಟ್ಟಿದ ತಂಗಿ ಅನ್ನೋದನ್ನ ಮರೀಬೇಡ. ಅವಳ ಬದುಕಿಗೆ ಏನಾದರೂ ಒಂದು ದಾರಿ ಹುಡುಕೊಣ. ಸುಮ್ನೆ ಮನಸ್ಸು ಕೆಡಿಸಿಕೊಳ್ಳಬೇಡ. ಈಗ ನಂಜೋತೆ ಹಾಯಾಗಿ ಮಲಗುವ ಸಮಯದಲ್ಲಿ.....” ಅಭಿರಾಮ ಹೆಂಡತಿಯ ಕೆನ್ನೆ ಹಿಂಡಿ ಅವಳನ್ನು ಹತ್ತಿರಕ್ಕೆಳೆದುಕೊಂಡ.
“ ಸಾಕು ಬಿಡ್ರಿ, ಈ ನಿಮ್ಮ ರಸಿಕತೆ ಹಗಲು ಹೊತ್ನಲ್ಲೇ.... ” ಸಹನಾ ಕೊಸರಿಸಿಕೊಂಡಳು.
“ ಥೂ, ಇವಳು ಯಾವಾಗಲು ಹೀಗೆ.... ಪೆದ್ದು ಪೆದ್ದಾಗಿ ಆಡ್ತಾಳೆ...... ! ” ಅಭಿರಾಮ ಗೊಣಗಿದ.
* * * * * *
ಮಧ್ಯಾಹ್ನ ನಾಲ್ಕು ಗಂಟೆಗೆ ಚಟಕ್ಕನೆ ಎದ್ದಳು ಲಾವಣ್ಯ. ಅಕ್ಕನ ಮನೆಯನ್ನೆಲ್ಲ ಕಸ ಗುಡಿಸಿ ಒಪ್ಪ , ಓರಣ ಮಾಡಿದಳು. ಅಡುಗೆ ಮನೆಗೆ ಹೋಗಿ ಗ್ಯಾಸ್ ಸ್ಟೌವ್ ಹೊತ್ತಿಸಿ ಕಾಫಿಗಿಟ್ಟಳು. ಅಭಿರಾಮ ಟೀ ಕುಡಿಯುತ್ತಾನೆಂದು ತಿಳಿದಿದ್ದಳಲ್ಲ. ಆಕೆ ಆತನಿಗೆಂದೇ ಟೀ ಸಹನಾ ತಯಾರಿಸಿದಳು.
ಸಹನಾ ಎದ್ದು ಬಂದು ನೋಡಿದರೆ ಕಾಫಿ, ಟೀ ರೆಡಿಯಾಗಿದೆ. ಮನೆಯಲ್ಲ ಸ್ವಚ್ಛವಾಗಿದೆ. “ ಓ ಇದೆಲ್ಲ ನಮ್ಮನ್ನು ಮೆಚ್ಚಿಸುವಂಥ ನಾಟಕವೋ. ಇವಳು ಬರುತ್ತಿದ್ದಂತೆ ಈ ಮನೆಯ ಪಾರುಪತ್ಯ ತಾನೆ ವಹಿಸಿಕೊಂಡು ಬಿಡುವುದೇನು ? ಮಹಾ ಮಳ್ಳಿಯ ಹಾಗೇ .... ” ಸಹನಾ ತನ್ನಷ್ಟಕ್ಕೆ ವಟಗುಟ್ಟಿದಳು.
ಲಾವಣ್ಯಳಿಗೆ ತನ್ನ ಅಸಹಾಯಕತೆಗೆ ದುಃಖ ಒತ್ತರಿಸಿ ಬಂತು. ಸೆರಗಿನಿಂದ ಕಣ್ಣೊರೆಸಿಕೊಂಡಳು. ಬಾವ ನೋಡಿದರೆ ಏನೆಂದುಕೊಂಡಾರು ? ಆದರೂ ತಾನೇ ಕಪ್ಪಿಗೆ ಟೀ ಸುರಿದಳು. ಕಪ್ ತೆಗೆದುಕೊಂಡು ಬಂದಳು. ಅಭಿರಾಮ ಕೋಣೆಯಲ್ಲಿದ್ದ.
‘ಅದನ್ನ ಅಲ್ಲಿಡು, ಅವರು ಇನ್ನೂ ಎದ್ದು ಮುಖ ತೊಳೆಯಬೇಕಲ್ಲ.... ’ ಗದರಿಸಿದಳು ಸಹನಾ.
ಲಾವಣ್ಯಳ ಜೀವ ಹಿಡಿಯಾಯ್ತು. ಕೈಯಲ್ಲಿದ್ದುದನ್ನು ಅಲ್ಲೇ ಇಟ್ಟು ಹೊರಬಂದಳು. ‘ ಈ ಮನೆಯಲ್ಲಿ ಇನ್ನು ತಾನು ಹೇಗೆ ದಿನಗಳೆಯಬೇಕೋ . ಮುಂದೇನು ಮಾಡ್ಬೇಕೋ ತೋಚದಾಯಿತು. ಬಾವನ ಮುಖ ನೊಡಿಕೊಂಡು ಸಹಿಸಬೇಕಲ್ಲ ! ’ ಅಷ್ಟರಲ್ಲಿ. ಕೈಯಲ್ಲಿ ಟೀ ಕಪ್ಪು ಹಿಡಿದು ಹೊರಬಾಗಿಲಿಗೆ ಬಂದಿದ್ದಾನೆ ಅಭಿರಾಮ.
“ ಏಳು ಲಾವಣ್ಯ, ನೀನು ಕಾಫಿ ಕುಡಿ, ಇಂದು ಭಾನುವಾರವಲ್ಲವೇ ? ಲಾಲ್ ಬಾಗ್ ಕಡೆ ಹೋಗೋಣ. ಸೀರೆಯುಟ್ಟು ರೆಡಿಯಾಗು. ಹೊರಗೆ ತಿರುಗಾಡಿ ಬಂದರೆ ಎಲ್ಲ ಮರೆಯುತ್ತೆ... ” ಎಂದ.
ಬೇಗ ಮರೆಯುವಂತಹ ನೋವೇನು ತನ್ನದು ? ತನಗಾದ ಗಾಯ ಸಣ್ಣದಲ್ಲ. ಅದು ವಾಸಿಯಾಗಲು ಬಹಳ ಕಾಲವೇ ಬೇಕಾಗಬಹುದು ಅಥವಾ ವಾಸಿಯೇ ಆಗುವುದಿಲ್ಲವೆನೋ... !
“ ಏನ್ ಯೋಚ್ನೆ ಮಾಡ್ತಾಇದೀಯ..... ? ” ಅಭಿರಾಮ ಕೇಳಿದ.
“ ಇಲ್ಲ ಬಾವ, ನಾನು ಇಲ್ಲಿಗೆ ಬಂದಿದ್ದು ಸರಿಯಾಗಲಿಲ್ಲ. ನನ್ನಿಂದ ನಿಮಗೆ ತೊಂದರೆ........” ಲಾವಣ್ಯಳ ಕೆನ್ನೆಯ ಮೇಲೆ ಕಂಬನಿ ಉರುಳುವುದರಲ್ಲಿತ್ತು. ತನ್ನ ಬೆರಳಿನಿಂದ ಅದನ್ನು ತೊಡೆದ ಅಭಿರಾಮ.
“ ತೊಂದರೆ ಏನ್‌ ಬಂತು ಲಾವಣ್ಯ ! ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗಿದಿದ್ದರೆ ಮನುಷ್ಯತ್ವಕ್ಕೇನು ಬೆಲೆ? ನಿನ್ನ ಅಕ್ಕನಿಗೆ ನಾನು ಹೇಳ್ತಿನಿ, ಅವಳಿಗೇನೋ ಹೆದರಿಕೆಯಷ್ಟೇ, ನಿನ್ನ ಬದುಕಿಗೆ ಒಂದು ದಡ ಕಾಣಿಸುವುದು ಸುಲಭ ಅಲ್ಲಾಂತ. ಅಷ್ಟಕ್ಕೂ ನೀನು ನಮಗೆ ಬೇರೆಯವಳೇನು ? ಅವಳಿಗೆ ಹೀಗಾಗಿದ್ದರೆ ಎಲ್ಲಿಗೆ ತಾನೆ ಹೋಗಿರೋಳು ಹೇಳು ? ” ನಾದಿನಿಯ ತಲೆ ತಡವಿದ್ದ.
“ಏಳು ಮುಖ ತೊಳೆದುಕೊ, ಕಾಫಿ ಕುಡಿದು ಒಳ್ಳೆ ಸೀರೆ ಉಟ್ಟುಕೊಂಡು ರೆಡಿಯಾಗು. ” ಪುನಃ ಹೇಳಿದ್ದ.
“ ಬೇಡಿ ಬಾವ , ನೀವೂ ಅಕ್ಕ ಹೋಗಿಬನ್ನಿ. ನಾನು ಮನೇಲಿ ಇರ್ತೀನಿ. ” ಅವಳೆಂದಳು.
“ ಹೂಂ ಸಾಕು ಏಳೇ ಮಳ್ಳಿ.... ಬಾವ ನಿನ್ನನ್ನು ಇನ್ನೂ ಮುದ್ದು ಮಾಡಿ ಕರೀಬೇಕೆನೋ... ? ” ಟವೆಲ್‌ನಿಂದ ಮುಖ ಒರೆಸಿಕೊಳ್ಳುತ್ತಾ ಬಂದ ಸಹನಾ ಮೋರೆಯೂದಿಸಿಕೊಂಡು ಹೇಳಿದವಳೆ ಒಳ ಕೋಣೆಯತ್ತ ಸರಕ್ಕನೆ ನಡೆದಳು.
ಅಭಿರಾಮ ನಕ್ಕುಬಿಟ್ಟ.
“ ನೋಡಿದೆಯಾ ಲಾವಣ್ಯ ನಿನ್ನ ಅಕ್ಕನ ಮನಸ್ಸು ! ಚಿಕ್ಕಂದಿನಿಂದ ನೀನು ಅವಳನ್ನು ಅರ್ಥ ಮಾಡಿಕೊಂಡದ್ದು ಇಷ್ಟೇ ಏನು ? ” ಎಂದ.
“ ಆ ವಯಸ್ಸೇ ಬೇರೆ ಬಾವ, ನಾವೀಗ ಬೆಳೆದಿದ್ದೇವೆ. ನಮ್ಮ ಬದುಕೂ ಬೇರೆ ಬೇರೆಯಾಗಿವೆಯಲ್ಲ...”
“ ಆದರೂ ಈವಾಗಲೂ ಭಾವನೆಗಳೆಲ್ಲ ಒಂದೇ..... ನಾವೆಲ್ಲರೂ ಚೆನ್ನಾಗಿ ಬದುಕಬೇಕು ತಾನೇ... ? ಹ್ಞೂಂ , ಏಳು ಏಳು. ”
ಅಭಿರಾಮ ನಾದಿನಿಯನ್ನು ದಿಟ್ಟಿಸಿದ.
ಆ ನೋಟದಲ್ಲಿ ಪ್ರೀತಿಯೇ ಹೊಮ್ಮಿತ್ತು. ಯಾವುದೋ ದೂರದ ಭರವಸೆ ತುಂಬಿ ಬಂದಿತ್ತು. ಲಾವಣ್ಯ ನಿಡಿದಾದ ನಿಟ್ಟುಸಿರು ಬಿಟ್ಟಳು, ಒಳಕೋಣೆಗೆ ಸೇರಿದಳು.
ಮುಂದಿನ ಕೆಲ ನಿಮಿಷಗಳಲ್ಲೇ ಹೊಸ ಸೀರೆಯುಟ್ಟು ಅಕ್ಕನೊಂದಿಗೆ ಹೊರಡು ನಿಂತಳು. ಅವಳು ಅಲಂಕಾರ ಪ್ರಿಯೆಯಾದರೂ ಇಂದವಳ ಮನಸ್ಸು ಸರಿ ಇಲ್ಲವಾದ್ದರಿಂದ ಆಸಕ್ತಿ ಕಡಿಮೆಯಾಗಿತ್ತು. ನಿರಾಡಂಬರ ಸುಂದರಿಯಾದ ಅವಳನ್ನೇ ಅಭಿರಾಮ ಎವೆ ಇಕ್ಕದೆ ನೋಡುತ್ತಾ ನಿಂತುಬಿಟ್ಟ ! ಅವನ ಅತಿಶಯ ಸೌಂದರ್ಯ ಪ್ರಜ್ಞೆ ಜಾಗ್ರುತವಾಗಿತ್ತು.
“ ಹ್ಞೂಂ ನಡೆಯಿರಿ.... ” ಸಹನಾ ಗಂಡನನ್ನು ತಿವಿದು ಎಚ್ಚರಿಸಿದಳು. ಲಾಲ್‌ಬಾಗ್ ಮೆಯಿನ್ ಗೇಟ್ ನ ಬಲಗಡೆಯ ಕಾಂಪೌಡಿನ ಉದ್ದಕ್ಕೂ ಹಾದು ಹೋಗುತ್ತದೆ ಕ್ರುಂಬಿಗಲ್‌ ರಸ್ತೆ. ಇದು ಚಿಕ್ಕ ಮಾವಳ್ಳಿಗೆ ಸೇರಿದ ಭಾಗವು ಹೌದು . ಜಯನಗರಕ್ಕೆ ಹೋಗುವ ಎಲ್ಲ ಸಿಟಿ ಬಸ್ಸುಗಳೂ ಇದೇ ಮಾರ್ಗವಾಗಿಯೇ ಹೋಗುತ್ತವೆ. ಇದೇ ರಸ್ತೆಯ ಮೂರನೇ ಕ್ರಾಸಿನಲ್ಲಿಯೇ ಅಭಿರಾಮನ ಮನೆ ಇರುವುದು. ಇಲ್ಲಿಂದ ನಾಲ್ಕಾರು ಹೆಜ್ಜೆಹಾಕಿದರೆ ಸಿಗುವುದೇ ಲಾಲ್ ಬಾಗ್ ನ ದ್ವಾರ.

ಮೂವರೂ ಲಾಲ್‌ ಬಾಗ್‌ನಲ್ಲಿ ಸುತ್ತಾಡಿದರು. ಗಾಜಿನ ಮನೆ ದಾಟಿ, ಬ್ಯೂಗಲ್ ರಾಕ್ ಏರಿದರು. ಜಗತ್ತಿನ ಭೂಗೋಳದಲ್ಲಿ ಅತಿ ವಿರಳವೆನಿಸಿದ ಆ ಹೆಬ್ಬಂಡೆಯ ಮೇಲೆ ಕುಳಿತರು. ಭಾನುವಾರವಾದ್ದರಿಂದ ಅಲ್ಲಲ್ಲಿ ಯುವ ಜೋಡಿಗಳು, ಪುಟ್ಟ ಮಕ್ಕಳೊಂದಿಗೆ ದಂಪತಿಗಳು, ಚೂಡಿ, ಮಿಡಿ ಹುಡುಗಿಯರು, ಜೀನ್ಸ ಲಲನೆಯರು, ಅವರ ಬೆನ್ನು ಬಿದ್ದ ಪಡ್ಡೆ ಹುಡುಗರು ಹೆಸರಾಂತ ಕೆಂಪು ಉದ್ಯಾನಕ್ಕೆ ಹೊಸ ಕಳೆ ತಂದಿದ್ದರು.
“ ನೋಡು ಲಾವಣ್ಯ, ನನಗೆ ಇಲ್ಲಿನ ನೋಟ ಹೊಸದಲ್ಲ. ಪ್ರತಿಸಲ ಬಂದಾಗಲೂ ಅದೇನೋ ಹೊಸತನ ತುಂಬಿರುವಂತೆ ನಮಗೆ ಭಾಸವಾಗುತ್ತದೆ. ” ಎಂದನು ಅಭಿರಾಮ.
“ಹೌದೂರೀ, ಪ್ರತಿ ಸಲವೂ ಇಲ್ಲಿ ನಿಮಗೆ ಹೊಸ ಹೊಸ ಸುಂದರಿಯರು ಕಾಣಸಿಗುತ್ತಾರಲ್ಲ.... ” ಸಹನಾ ಗಂಡನನ್ನು ಛೇಡಿಸಿದಳು.
ಬಾವನ ಮುಖ ಸಪ್ಪಗಾದುದನ್ನು ನೋಡಿದ ಲಾವಣ್ಯಳಿಗೆ, ‘ ಅಯ್ಯೋ ಪಾಪ ’ ಎನಿಸಿತು.
ತಾನು ಇನ್ನೇನಾದರೂ ಹೇಳಿದರೆ ಸಹನಾ ವಾಗ್ಯುದಕ್ಕೆ ನಿಲ್ಲುತ್ತಾಳೆ ಎಂಬುದೂ ಅಭಿರಾಮನಿಗೆ ಗೊತ್ತಿರುವುದೇ, ಅದಕ್ಕೆ ತೆಪ್ಪಗಿರುವುದೇ ಲೇಸೆಂದುಕೊಂಡುಬಿಟ್ಟ ಅಭಿರಾಮ.

No comments:

Post a Comment