Saturday, April 17, 2010

ಇರುಳ ನಕ್ಷತ್ರ-5 (ಕಿರು ಕಾದಂಬರಿ)

-5-
“ ನನಗೆ ಮನೆಯಿಂದ ಪೋನ್ ಬಂದಿತ್ತೇನೂ ? ”
ಹಾಸ್ಟೆಲ್ ಗೆ ಬಂದವಳೆ ರೋಸಿಯನ್ನು ಕೇಳಿದಳು ಲಾವಣ್ಯ.
“ ಹೂಂ, ಪೋನ್ ಕಾಲ್ ಬಂದಿತ್ತು. ನಿಮ್ಮ ಅಕ್ಕನಿಗೆ ಪುನಃ ಸುಸ್ತಾಗಿದೆಯಂತೆ. ಅವಳಿಗೇನೋ ಹೆದರಿಕೆ, ನೀನು ಹೋಗ್ಬೇಕಂತೆ..... ” ರೋಸಿ ಹೇಳಿದಳು. ಅನಂತರ, ಲಾವಣ್ಯಳನ್ನೂ ಪರೀಕ್ಷಕ ದೃಷ್ಟಿಯಿಂದ ನೋಡಿದಳು. “ ನೀನು ಹೋದ ಕೆಲಸ ಏನಾಯಿತು ? ಛಾಯಾಪತಿ ನಿನ್ನನ್ನು ಚೆನ್ನಾಗಿ ನೋಡಿಕೊಂಡಿರಬೇಕಲ್ಲಾ...... ! ” ಕಣ್ ಮಿಟುಕಿಸಿದಳು.
“ ಏನೋ..... ನಾನಂತೂ ಅವನನ್ನು ಪೂರ್ಣ ನಂಬಿದ್ದೆನೆ, ” ಲಾವಣ್ಯ ಎತ್ತಲೋ ನೋಡುತ್ತಾ ಹೇಳಿದಳು.
“ ಸಂಪೂರ್ಣ ಒಪ್ಪಿಸಿಕೊಂಡು ಬಿಟ್ಟೆ ಅನ್ನೂ.... ”
ಈ ಹುಡುಗಿ ಸಾಮಾನ್ಯಳಲ್ಲವೆನಿಸಿ ದುರುಗುಟ್ಟಿದಳು. ಈಗ ರೋಸಿಗೆ ಎತ್ತಲೋ ನೋಡುವ ಸರದಿ.
ಇಬ್ಬರಿಗೂ ಮಾತು ಬೇಡವಾಗಿತ್ತು.

ಲಾವಣ್ಯ ತಡಮಾಡದೆ ಅಕ್ಕನ ಮನೆಗೆ ಹೊರಟು ಬಂದಳು.
ಅಕ್ಕ ಕೋಣೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ. ಅವಳಿಗೆ ಸಿಸೇರಿಯನ್ ಆದ್ರೆ ತಾನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಉಳಿಯುವ ಸಾಧ್ಯತೆಯಷ್ಟೇ ಇದೆ ಎಂಬುದಾಗಿ ಡಾಕ್ಟರುಗಳು ಹೇಳಿದ್ದು ಹೇಗೋ ತಿಳಿದುಹೋಗಿದೆ. ಗಾಬರಿಯಾಗಿದ್ದಾಳೆ.

ಆದರೇನು, ಡಾಕ್ಟರು ದೇವರೇನಲ್ಲ. ಮಗು, ತಾಯಿ ಇಬ್ಬರೂ ಉಳಿಯುತ್ತಾರೆ ಎಂಬುದು ಅಭಿರಾಮನ ಅಚಲವಾದ ನಂಬಿಕೆ, ಲಾವಣ್ಯ ಬಂದವಳೇ ಸಹನಾಗೆ ಆತ್ಮಸ್ಥೈರ್ಯ, ವಿಶ್ವಾಸ ತುಂಬಲೆತ್ನಿಸಿದ್ದಳು. ಆ ದಿನದ ರಾತ್ರಿಯನ್ನೂ ಅವಳ ಪಕ್ಕದಲ್ಲೇ ಮಲಗಿ ಕಳೆದಳು.

ಮಾರನೆಯ ದಿನ ಬೆಳಿಗ್ಗೆ.........
ಸುಪ್ರಭಾತದ ಹೊಂಗಿರಣಗಳು ಕಿಟಕಿಯಿಂದ ಪ್ರವೇಶಿಸಿವೆ. ಬೆಳಗಿನ ತಿಂಡಿಗೆ ದೋಸೆ, ಚಟ್ನಿ ತಯಾರಿಸಿದ್ದ ಲಾವಣ್ಯ ಬಾವನನ್ನು ಹುಡುಕಿಕೊಂಡು ಅವನ ಕೋಣೆಗೆ ಬಂದವಳು. ಅಭೀರಾಮ ತನ್ನ ಕೋಣೆಯಲ್ಲಿ ಕೆಲವು ಚಿತ್ರಗಳನ್ನು ತೂಗು ಹಾಕಿದ್ದಾನೆ. ಅವುಗಳಲ್ಲಿ ಒಂದು ಹೆಣ್ಣಿನ ಅರೆನಗ್ನ ಚಿತ್ರ ಲಾವಣ್ಯಳ ಗಮನ ಸೆಳೆದಿತ್ತು. ಅವಳ ಕಣ್ಣುಗಳನ್ನು ಅವಳೇ ನಂಬದಾದಳು. ಅಭಿರಾಮ ಅವಳ ಆಳೆತ್ತರದ ನಿಲುವಿನ ಅಪೂರ್ವ ಸೌಂದರ್ಯವನ್ನೂ ತನ್ನ ಕುಂಚದಲ್ಲೀ ಸೆರೆಹಿಡಿದಿದ್ದ.

“ ಬಾವಾ ........ , ನನ್ನ ಚಿತ್ರ ಯಾವಾಗ ಬರೀತೀರಿ....” ಎಂಬ ತನ್ನ ಬಹುದಿನದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.
“ ಅದಕ್ಕೂ ಸಂದರ್ಭ ಕೂಡಿ ಬರ್ಬೇಕು. ಸಮಯ ಸ್ಪೂರ್ತಿ ಸಿಗಬೇಕು.... ” ಹಿಂದೆ ಅಭಿರಾಮ ಹೇಳಿದ್ದ.

ಆ ಸಂದರ್ಭ ಯಾವುದಾಗಿತ್ತು ? ಆ ಸ್ಪೂರ್ತಿ ಕೆಲವೇ ಕ್ಷಣಗಳದಾಗಿತ್ತು. ತಾನು ತಾಸುಗಟ್ಟಲೆ ಕುಳಿತು ಪೋಸು ಕೊಡಲಿಲ್ಲ. ಬಾವನ ಸ್ಪೃತಿಪಟಲದಲ್ಲಿ ಅದೆಂತಹ ಸೂಕ್ಷ್ಮತೆ, ಅದ್ಭುತ ಶಕ್ತಿ ! ಕುಸುರಿ ಕೆಲಸ ! ಆಧುನಿಕ ಛಾಯಾಗ್ರಹಣಕ್ಕೂ ಮಿಗಿಲಾದ ಪರಿಪೂರ್ಣ ಸೃಷ್ಟಿ. ತನ್ನನ್ನು ಅಂದು ನೋಡಿದಂತೆ ಸಜೀವಗೊಳಸಿಬಿಟ್ಟಿದ್ದಾರೆ, ನಿರ್ವಾಣ ಸ್ಥಿತಿಯಲ್ಲೆ ! ನೋಡುತ್ತಿದ್ದಂತೇ ನಾಚಿ ನೀರಾದಳು ಲಾವಣ್ಯ. ತನ್ನ ಬಾವ ಅಭಿರಾಮನ ಅಂತರ್ ದೃಷ್ಟಿ ಅನುಪಮವೆನಿಸಿತು.
ಹೀ ಈಸ ರಿಯಲೀ ಗ್ರೇಟ್, ಹೆಣ್ಣನ್ನು ಹೇಗೆಂದರೆ ಹಾಗೆ ಎದುರಿಗೆ ಬೆತ್ತಲೆ ನಿಲ್ಲಿಸಿಕೊಂಡು ಬಾಯಿ ಚಪ್ಪರಿಸುತ್ತಾ ಹಣದಾಸೆಗಾಗಿ ಪೋಟೋ ಕ್ಲಿಕ್ಕಿಸುವ ಪೋಟೋಗ್ರಾಫರ್ ಗಳೆಲ್ಲಿ ? ಅಮೋಘ ತೈಲವರ್ಣ ಸಂಯೋಜನೆ! ತನ್ನ ಬಾವನ ನೈಪುಣ್ಯತೆಗೆ ಹೆಣ್ಣಿನ ನಗ್ನತೆಯೂ ಶೋಭೆಯಿಂದ ಕಂಗೋಳಿಸಿದೆ! ಸೌಂದರ್ಯವೆಂಬುದು ನೋಡುವ ಕಣ್ಣುಗಳಲ್ಲಿ ಎಂಬ ಮಾತು ನಿಜವಾಗಿದೆಯಲ್ಲ !

“ ಈ ಚಿತ್ರ ನಿನಗೆ ಹಿಡಿಸಿತೇ ಲಾವಣ್ಯ ? ” ಮೆಲ್ಲನೆ ಹೆಜ್ಜೆ ಹಾಕಿ ಹಿಂದಿನಿಂದ ಒಳಬಂದ ಅಭಿರಾಮ ಕೇಳಿದ್ದ.
“ ಅದ್ಬುತ ರಚನೆ ! ಬಾವಾ ಕಲಾ ಸೃಷ್ಟಿಯಲ್ಲಿ ಹೆಣ್ಣಿನ ಔನತ್ಯವನ್ನೂ ಕ0ಡಿದೆ.” ಲಾವಣ್ಯ ಎದೆ ತುಂಬಿ ಹೊಗಳಿದಳು.
“ ಇದನ್ನು ನಿನಗೆ ಕೊಡಲೇನು .... ? ”
“ ಬೇಡ ಬಾವಾ, ನನ್ನ ಪ್ರೀತಿಯ ಕಾಣಿಕೆಯಾಗಿ ಇದು ನಿಮ್ಮಲ್ಲೇ ಇರಲಿ ” ಅವಳೆ0ದಳು.
“ ಇದನ್ನೇಲ್ಲಾ ಅಶ್ಲೀಲ ಎನ್ನುತ್ತಿಯೋ ಎಂಬ ಅಂಜಿಕೆ ಇತ್ತು. ನಿನ್ನ ಅಭಿಮಾನವು ಅಳತೆಗೆ ಮೀರಿದ್ದು ಲಾವಣ್ಯ. ”
ತಾನು ಅದೆಷ್ಟೋ ಅಶ್ಲೀಲ ಭಂಗಿಗಳಲ್ಲಿ ಪೋಸು ಕೊಟ್ಟು ದೈಹಿಕ ಸೌಂದರ್ಯವನ್ನೇ ಮಾರಾಟಕ್ಕಿಟ್ಟಿದ್ದಳು. ಅವಳ ಕಣ್ಣುಗಳು ಒಮ್ಮೇಲೆ ತುಂಬಿ ಬಂದಿದ್ದವು.
“ ಯಾಕೆ ಲಾವಣ್ಯ ಕಣ್ಣೀರು ? ” ಕೇಳಿದ ಅಭಿರಾಮ.
“ ಏನಿಲ್ಲ ಬಾವಾ, ನಾನೀಗ ಹೊರಗಿನ ಪ್ರಪಂಚವನ್ನು ಸಾಕಷ್ಟು ಕಂಡಿದ್ದೇನೆಲ್ಲ.... ” ಏನೋ ನೆನಪಿಗೆ ಬಂತು..... ಸತ್ಯ ಯಾವಾಗಲೂ ನಗ್ನವೇ. ಆದರೂ, ನಿಮ್ಮ ಕಲೆ ಶ್ರೇಷ್ಟವಾದದ್ದು. ಅದಕ್ಕೆ ಬೆಲೆ ಕಟ್ಟಲಾದೀತೇ... ! ಸೆರೆಗಂಚಿನಿಂದ ಕೆನ್ನೆಯೊರೆಸಿಕೊಂಡಳು.
ಅಭಿರಾಮ ಅವಳ ನೋವು ಅರ್ಥಮಾಡಿಕೊಳ್ಳಲೆತ್ನಿಸಿದ್ದ.
“ ನನ್ನ ಈ ಚಿತ್ರವನ್ನು ಅಕ್ಕ ನೋಡಿರ್ಬೇಕಲ್ವಾ......” ಕೇಳಿದಳು ಲಾವಣ್ಯ.
“ ಅವಳು ಎಷ್ಟೇ ಆಗಲಿ..... ನಿನ್ನ ಅಕ್ಕ. ಈ ಕಲಾವಿದರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ ”ಅಭಿರಾಮ ಸಾವಾಕಾಶವಾಗಿ ನುಡಿದಾಗ,
"ಹೌದೇನೂ..." ಲಾವಣ್ಯ ದಿಗ್ಮೂಡಳೇ ಆದಳು.
* ***

ಕಂಡು ಕಾಣದ ದಾರಿಯಲ್ಲಿ ಲಾವಣ್ಯ ಬಹುದೂರ ಕ್ರಮಿಸಿಬಿಟ್ಟಳು. ಛಾಯಾಪತಿಯೊಂದಿಗೆ ಅವಳ ಸ್ನೇಹ, ಸಂಬಂದ ಮತ್ತಷ್ಟು ರಂಗೇರಿತ್ತು. ವಾರಕ್ಕೆರೆಡು ಬಾರಿಯಾದರೂ ಲಾವಣ್ಯಳಿಗೆ ಪೋನ್ ಮಾಡಿ ತನ್ನ ಸ್ಟುಡಿಯೋ ಕಡೆ ಬರಲು ಹೇಳುತ್ತಿದ್ದ. ಆಗಾಗ್ಗೆ ಮಾಡೆಲಿಂಗ್ ಕ್ಷೇತ್ರದ ಘಟಾನುಘಟಿಗಳಿಗೆ ಇವಳನ್ನು ಪರಿಚಯಿಸಿ ಹೋಗಳುತ್ತಿದ್ದ. ಕೆಲವೊಮ್ಮೆ ಇವಳನ್ನು ಕರೆದುಕೊ0ಡು ಊರೂರು ಅಲೆಯುತ್ತಿದ್ದ. ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಮಾಡಿಕೊಂಡು ಸ್ವರ್ಗಸುಖವನ್ನು ತೋರಿಸಿದ್ದ.

ತನ್ನೊಂದಿಗೆ ರಮಿಸುವಂತಹ ಕ್ಷಣಗಳಲ್ಲಿ ಆಕೆ ದುಗುಡದಿಂದ ದನಿ ಎತ್ತಿದ್ದರೆ, “ ನಾನೀದ್ದೇನೆ, ನಿನ್ನನ್ನು ರಿಜಿಸ್ಟರ್ಡ ಮದುವೆ ಮಾಡಿಕೊಳ್ಳುವೆ. ಯಾಕೆ ಹೆದರುತ್ತಿ ! ಹುಚ್ಚುಹುಡುಗಿ ನೀನು ” ಎ0ದು ಅವಳ ಕೆನ್ನೆ ಹಿಂಡುತ್ತಿದ್ದ, ಚುಂಬಿಸುತ್ತಾ ಹತ್ತಿರಕ್ಕೆಳೆದುಕೊಳ್ಳುತ್ತಾ ಇದ್ದ. “ ನೀನು ಮನಸ್ಸು ಮಾಡಿದರೆ ದೊಡ್ಡ ಸಿನಿಮಾ ತಾರೆಯೇ ಆಗುತ್ತಿಯೇ.” ಅದೇ ಪಲ್ಲವಿ ಹಾಡುತ್ತಾ ಇದ್ದ.
ಹೀಗೊಂದು ತಿಂಗಳು ಕಳೆಯುವುದರಲ್ಲಿ ಲಾವಣ್ಯ. ಛಾಯಾಪತಿಯೇ ತನ್ನ ‘ ಭಾವಿ ಪತ್ನಿ ’ ಎಂದೇ ವೃತ್ತಿನಿರತರಲ್ಲಿ ಹೇಳಿಕೊಂಡು ಬರುವಂತಾದಳು ಕೂಡ. ಅವನೋ ಕೇಳಿದವರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದುದು ಇವಳೀಗೆ ಗೊತ್ತಾಗಲೇ ಇಲ್ಲ !
ಲಾವಣ್ಯ ನಿಜಕ್ಕೂ ಭ್ರಮಾ ಲೋಕದಲ್ಲಿ ಮುಳುಗಿದ್ದಳು. ಆದರೆ, ಅದರ ಅರಿವು ಅವಳಿಗೆಲ್ಲಿತ್ತು ?

ಕಡೆಗೂ ಒಂದು ದಿನ ಛಾಯಾಪತಿಯ ಬಣ್ಣ ಬಯಲಾಗಿತ್ತು. ಒಬ್ಬ ಮಹಾನ್ ಬಿಸಿನೆಸ್ ಮ್ಯಾಗ್ನೆಟ್ ಬಳಿ ಇವಳನ್ನು ಕಳುಹಿಸಿಕೊಡೋ ಏರ್ಪಾಟು ಮಾಡಿಬಿಟ್ಟ!
ಆತನ ಕಂಪೆನಿಯ ಯಾವುದೋ ಜಾಹೀರಾತು ಕೆಲಸಗಳಿಗೆ ಲಾವಣ್ಯಳೇ ಮಾಡೆಲ್ ! ಆತನ ಕಂಪೆನಿಯಿಂದ ತನಗೆ ಒಂದು ಲಕ್ಷ ರೂಪಾಯಿ ಬರುವುದಿದೆ. ನೀನೇ ಹೋಗಿ ಬಂದರೆ ಆ ಹಣ ಕೈಗೆ ಬೇಗ ಸಿಗುತ್ತದೆ ಎಂದು ಅವಳನ್ನೇ ಹೋಗಲು ಒತ್ತಾಯಿಸಿದ್ದ. ಲಾವಣ್ಯ, “ ನಾನೇಕೆ ಅಲ್ಲಿಗೆ ಹೋಗ್ಬೇಕು ? ” ನೀನೇ ಹೋಗಿಬರಬಾರೆದೇ ? ಎಂದು ವಾದಿಸಿದಳಾದರೂ ಪ್ರಯೋಜನವಾಗಲಿಲ್ಲ.
“ ಹಾಗೆಲ್ಲ, ವ್ಯಾಪಾರ – ವ್ಯವಹಾರಗಳಲ್ಲಿ ಸುಂದರಳಾದ ಹೆಣ್ಣಿನ ಆಕರ್ಷಣೆ ಅದೆಷ್ಟು ಕೆಲಸ ಮಾಡುತ್ತದೆಂದು ನಿನಗೆ ಮತ್ತೆ ಹೇಳಬೇಕಾಗಿಲ್ಲ ಲಾವಣ್ಯ ! ” ಆಗ್ರಹಪಡಿಸಿದ್ದ.
ಆ ಮಹಾಶಯ ಇಳಿದುಕೊಂಡಿದ್ದ ತ್ರೀ ಸ್ಟಾರ್ ಹೋಟೆಲಿನ ವಿಳಾಸವನ್ನು ಪಡೆದು ಹೊರಟಳು ಲಾವಣ್ಯ. ಆ ಹೋಟೆಲಿನ ಪಾವಟಿಗೆಗಳನ್ನು ಏರಿ ರಿಸೆಪ್ಷನಿಸ್ಟ್ ಕೌಂಟರ್ ನಲ್ಲಿ ವಿಚಾರಿಸಲಾಗಿ ಆತ ತನ್ನ ಕೋಣೆಯಲ್ಲಿ ಇಲ್ಲ. ಹೊರಗೆಲ್ಲೋ ಹೋಗಿರುವನೆಂದೂ, ಇನ್ನರ್ಧ ಗಂಟೆ ಕಾದರೆ ಖಂಡಿತಾ ಬರುವನೆಂದೂ ತಿಳಿಯಿತು, ಅಲ್ಲೇ ಕೌಂಟರಿನ ಎದುರಿನಲ್ಲಿಯೇ ಕಾಯುತ್ತಾ ಕುಳಿತಳು. ಅವಳ ತಲೆಯ ತುಂಬಾ ಕೆಟ್ಟ ಯೋಚನೆಗಳೇ. ಈ ಛಾಯಾಪತಿ ಹೀಗೇಕೆ ತನ್ನನ್ನು ಇಲ್ಲಿಗೆ ಒಂಟಿಯಾಗಿ ಕಳುಹಿಸಿದ್ದಾನೆ ! ಅವನ ಉದ್ದೇಶವೇನಿದ್ದಿತು ? ಹೀಗೆ ಸುಂದರ ಮುಖ ನೋಡಿದರೆ ಸಾಕು, ಈ ದೊಡ್ಡ ಮನುಷ್ಯನಿ0ದ ಹಳೆಯ ಬಾಕಿ ವಸೂಲಿ ಖಚಿತವೆಂದೇ ಇರಬೇಕು. ಈವಾಗಿದೆಲ್ಲ ಮಾರುಕಟ್ಟೆಯಲ್ಲಿ ಸಹಜವೇ, ಹೆಣ್ಣನ್ನೂ ಮುಂದಿಟ್ಟುಕೊಂಡು ದುಡಿಯುವ ಗಂಡಸರಿಗೆ, ಹೀಗೆ ತನ್ನಷ್ಟಕ್ಕೇ ಸಮಜಾಯಿಸಿಕೊಂಡಳು. ‘ ನಾನು ಮೋಹಕ ನಗೆ ನಗುತ್ತಲೇ ಇಲ್ಲಿಂದ ಕೆಲಸ ಸಾಧಿಸಿಕೊಂಡು ಹೋಗಬೇಕಲ್ಲ ! ’
ಅಷ್ಟರಲ್ಲಿ, ಹೊರಗೆ ಹೋಗಿದ್ದ ಆ ದೊಡ್ಡ ಮನುಷ್ಯ ಬಂದಿದ್ದ. ನೀಲಿ ಸೂಟಿನಲ್ಲಿದ್ದ ಆತ ಸರಸರನೆ ಪ್ರವೇಶಿಸಿದ್ದ. ಕೌಂಟರಿನ ಮುಂದೇಯೆ ಅವನು ಹಾದು ಹೋಗಲಿದ್ದಾಗ ಲಾವಣ್ಯ ಹುಬ್ಬೇರಿಸಿ ಅವನನ್ನೇ ನೋಡುವುದಕ್ಕೂ, ಲೇಡಿ ರಿಸೆಪ್ಷನಿಸ್ಟ್,
“ ಅವರೇ ಕೃಷ್ಣಾನಂದ್ ” ಎಂದು ಹೇಳುವುದಕ್ಕೂ ಸರಿಹೋಗಿತ್ತು. ಲಾವಣ್ಯ ಹೌಹಾರಿದಳು.
ಮತ್ತೆ ಮತ್ತೆ ಕೇಳಿದಳು, “ ಅವರೇನಾ ..... ನಿಜವಾಗ್ಲು..... ” ತನ್ನ ಕಣ್ಣುಗಳನ್ನು ತಾನೇ ನಂಬದಾದಳು.
“ ಹೌದು ಮೇಡಮ್ , ಅವರೇ...... ” ಸ್ವಾಗತಕಾರಿಣೀ ಒತ್ತುಕೊಟ್ಟು ನುಡಿದಳು.
“ ಆಂ ! ಅಂದು ರಾಕೇಶ ...... ಇಂದು ಕೃಷ್ಣಾನಂದ್ ! ”
ಅಂದು ತನ್ನ ಗಂಡನಾಗಿದ್ದ ಮದನ್‌ಕುಮಾರ್ ಈ ದೊಡ್ಡ ಮನುಷ್ಯನಿಗೆ ಅಲ್ಲವೇ ತನ್ನನ್ನು ಪಶುವಂತೆ ಮಾರಾಟ ಮಾಡಲು ಸಿದ್ದನಾಗಿದ್ದು ? ಇಂದು ? ತನಗೆ ಎರಡನೆಯ ಗಂಡನಾಗಿ ಬರಲಿರುವ ಛಾಯಾಪತಿ ಇದೇ ನೀಚನಿಗೆ ತನ್ನನ್ನು ಒಪ್ಪಿಸಲೆಂದು ಹೂಡಿರುವ ಸಂಚಲ್ಲದೇ ಇದು ಮತ್ತೇನು ! ಲಾವಣ್ಯ ಥರಥರ ನಡುಗಿಹೋದಳು.
“ ಓಹ್ ! ನೀವು ...... ಏನಿಲ್ಲಿಗೆ ಬಂದರಿ.... ? ” ತನಗೇನೂ ಗೊತ್ತಿಲ್ಲದವನಂತೆ ನಾಟಕೀಯ ನಗೆ ನಕ್ಕನವನು.
“ ನಿಮಗೇನು ಗೊತ್ತಿಲ್ಲವೇ ? ನನ್ನನ್ನು ಯಾರು ಇಲ್ಲಿಗೆ ಕಳುಹಿಸಿದ್ದೂಂತ ” “ ಇಲ್ಲವಲ್ಲ..... ! ”
“ ಛಾಯಾಪತಿ ;ಯಾರು ಗೊತ್ತಿಲ್ಲವೇ ನಿಮಗೆ ? ”
“ ಯಾರು ? ಆ ಪೋಟೋಗ್ರಾಫರ್ ಛಾಯಾಪತಿಯೇ..... ಗೊತ್ತು ಗೊತ್ತು..... ಆದರೆ...... ”
“ ಆದರೆ ....... ನಿವ್ಯಾಕೆ ನನ್ನನ್ನು ಬರಹೇಳಿದಿರಿ..... ನನಗೆ ಗೊತ್ತಿಲ್ವೇ ..... ! ”
“ ಛೇ, ಛೇ ..... ನೀನು ತಪ್ಪು ತಿಳಿಯಬೇಡ, ಇದು ಕೇವಲ ವ್ಯವಹಾರಿಕ . ಪ್ಯೂರ್ ಲೀ ಬಿಸಿನೆಸ್ ಆಫೇರ್. ”
‘ ವ್ಯವಹಾರವಂತೆ ! ನನ್ನನ್ನು ನೀನು ಎಂದೇ ಸಂಬೋದಿಸುತ್ತಿದ್ದಾನೆ. ಎಷ್ಟು ಸೊಕ್ಕಿದ್ದಿತ್ತು ! ನಾನು ಅಗ್ಗಕ್ಕೆ ಸಿಕ್ಕಿದ ವಸ್ತುವೆಂಬಂತೆ. ’
“ ಈ.... ಇಲ್ಲೇನು ನಮ್ಮ ಮಾತು. ರೂಮಿಗೆ ಬಾ ಲಾವಣ್ಯ.... ” ಪುನಃ ಅವನೇ ನಯವಾಗಿ ನುಡಿದಿದ್ದ. ಲಾವಣ್ಯಳಿಗೆ ಮೈಯೆಲ್ಲಾ ಉರಿದುಹೋಯಿತು. ಇವನ ಮುಖಕ್ಕೆ ಉಗಿದು ಇಲ್ಲೇ ಚೆನ್ನಾಗಿ ಮಂಗಳಾರತಿ ಮಾಡಿಬಿಡಲೇ ಎನಿಸಿತ್ತು. ಉಹೂಂ, ತಾನು ಹಾಗೆ ಮಾಡಿದರೆ ಜಾಣೆಯಾಗಲಾರೆ. ಇಲ್ಲಿಂದ ಸುಲಭವಾಗಿ ಜಾರಿಕೊಳ್ಳಲಾರೆ ಎಂದು ಅವಳ ಮನಸ್ನು ಎಚ್ಚರಿಕೆ ನೀಡಿತ್ತು.
“ ಸಾರಿ, ನೀವು ತುಂಬಾ ತಡ ಮಾಡಿದಿರಿ..... ನಾನೀಗ ತುಂಬಾ ಅರ್ಜೆಂಟಾಗಿ ಹೋಗಬೇಕು. ಆಮೇಲೆ ನಾನೇ ಪೋನ್ ಮಾಡಿ ಬರುತ್ತೇನೆ. ಹಣ ರೆಡಿಯಾಗಿರಲಿ, ಕ್ಯಾಷ್ ಬೇಕು. ಓ.ಕೆ. ಸೀಯೂ. ವೈಯಾರದ ನಗೆ ಬೀರಿದಳು.
ಅಲ್ಲಿಂದ ಕಾಲ್ತೆಗೆದವಳೇ ಹಿಂದುರುಗಿ ನೋಡದೇ ಹುಲಿಯನ್ನು ಕಂಡ ಹುಲ್ಲೇಯಂತೆ ಹಾರಿ ಆ ಹೋಟೆಲಿನ ಮೆಟ್ಟಿಲುಗಳನ್ನು ಸರಸರನೆ ಇಳಿದು ಬಂದಳು ಲಾವಣ್ಯ.
ಕೃಷ್ಣಾನಂದ್ ಅಲಿಯಾಸ್ ರಾಕೇಶ ನಿಂತಲ್ಲೇ ಕೈ ಕೈ ಹಿಸುಕಿಕೊಂಡ.
*** ***

ದಾರಿಯುದ್ದಕ್ಕೂ ತನ್ನ ವಿಧಿಯನ್ನು ಶಪಿಸಿಕೊಂಡಳು. ‘ ತಮ್ಮ ತೀಟೆ, ತೆವಲುಗಳನ್ನು ತೀರಿಸಿಕೊಂಡು ಕೈ ಬಿಡಬಯಸುವ ಛಾಯಾಪತಿಯಂಥ ಗೋಮುಖ ವ್ಯಾರ್ಘ, ಮೈಖೇಲ್ ನಂಥ ಕಾಮುಕ ನೋಟದ ಗಂಡಸರ ನಡುವೆ ಈ ಕ್ಷೇತ್ರದ ತೆರೆಮರೆಯಲ್ಲಿ ಸುಂದರಳಾದ ಹೆಣ್ಣು ಎಷ್ಟೋಂದು ಅಗ್ಗದ ವಸ್ತುವಾಗಿ ಬಿಡುತ್ತಾಳೆ.! ಇಲ್ಲಿ ನನ್ನಂಥ ಅಮಾಯಕಳೀಗೆ ಜಾಗವಿರಲಾರದು. ಈಗೀಂದೀಗಲೇ ಹೋಗಿ ಆ ಛಾಯಾಪತಿಗೆ ಛೀಮಾರಿ ಹಾಕಲೇ, ಅದರಿಂದ ತನಗೇನು ಉಪಕಾರವಾದೀತು ? ನೆಮ್ಮದಿ ಸಿಕ್ಕಿತು ? ಅಷ್ಟಕ್ಕೂ, ನಾನು ಏನು ಸಾಧಿಸಿಬೇಕೆಂದು ಈ ಮಾಡೆಲಿಂಗ್ ಫೀಲ್ಡ್‌ಗೆ ಬಂದೇ ? ಹಣ ಮಾಡಬೇಕೆಂದೇ..... ಭೋಗ ಜೀವನ ನಡೆಸಬೇಕೆಂದೇ..... ಅಥವಾ ಮಿಸ್ ವರ್ಲ್ಡ್ ಆಗುವುದು ನನ್ನ ಗುರಿಯಾಗಿತ್ತೇನು ? ಏನು ಇಲ್ಲದೆ ಸುಮ್ಮನೆ ನನ್ನ ಸೌಂದರ್ಯ ಮೆರೆಸುವ ಹವ್ಯಾಸವಾಗಿಯೇ ಇದನ್ನು ಆರಿಸಿಕೊಂಡೆನೇ ? ’
ಉಹೂಂ ಯಾವೊಂದಕ್ಕೂ ಅವಳಲ್ಲಿ ಉತ್ತರವಿರಲಿಲ್ಲ. ಆದರೆ, ಈಗ ಅವಳಿಗೆ ತನ್ನ ದಾರಿ ಯಾವುದೇಂದು ಸ್ಪಷ್ಟವಾಗುತ್ತಿದೆ. ಇದು ತನ್ನ ಪಾಲಿಗೆ ಇರುಳಿನ ಲೋಕದ ನಂಟೇ ಆಯಿತಲ್ಲ.... ಒಳ್ಳೆಯ ರೀತಿಯಲ್ಲೇ ಮುಂದುವರೆದು ಬೆಳಕಿನ ನಕ್ಷತ್ರದಂತೆ ಮಿನುಗುವ ಭಾಗ್ಯ ಅದೆಷ್ಟು ಹೆಣ್ಣುಗಳಿಗೆ ಲಭೀಸಿತು ಇಲ್ಲಿ !
ಲಾವಣ್ಯ ದಾಪುಗಾಲಿಕ್ಕುತ್ತ ಹಾಸ್ಟೆಲ್‌ಗೆ ಬಂದಾಗ ಸಂಜೆ ಆರು ಗಂಟೆಯಾಗಿತ್ತು. ಕೋಣೆಯೊಳಗೆ ಕಾಲಿಡುತ್ತಿದ್ದಂತೆ ರೋಸಿ ಹೇಳಿದಳು. “ ನಿಮ್ಮ ಬಾವ ಪೋನ್ ಮಾಡಿದ್ದರು. ನಿಮ್ಮ ಅಕ್ಕನಿಗೆ ಡೆಲಿವರಿ ಆಯಿತೆಂದು ತಾಯಿ, ಮಗು ಸುಖವಾಗಿದಾರಂತೆ. ಗಂಡುಮಗು. ಪಾಪ, ಸಿಸೇರಿಯನ್ ಕಷ್ಟವಾದ್ರೂ ದೇವರ ದಯೆಯಿಂದ ನಿಮ್ಮ ಅಕ್ಕ ಬದುಕುಳಿದಿದ್ದಾಳೆ. ನೀನು ಹೋಗಿ ಬಾ .....”
“ ನಾನೀಗಲೇ ಹೊರಟೆ ......” ಎಂದವಳೇ ಲಾವಣ್ಯ ಲಗುಬಗೆಯಿಂದ ತನ್ನ ಸೀರೆ, ಬಟ್ಟೆಗಳನ್ನು ಸೂಟ್ ಕೇಸಿಗೆ ಒತ್ತಿ ತುಂಬಿದಳು.
ರೋಸಿ ಚಕಿತಳಾಗಿ ನೋಡುತ್ತಲೇ ಇದ್ದಾಳೆ. “ ಯಾಕೇ ನೀನು ಅಕ್ಕನ ಬಾಣಂತನಕ್ಕೆ ಹೋಗುವ ಹಾಗಿದೆ.....” ಅಂದಳು.
“ ಅದನ್ನಾದ್ರೂ ಮಾಡೋಣ, ಪುಣ್ಯ ಬರುತ್ತೇಂತ, ರೋಸಿ, ನಾನು ಮರಳಿ ಬರಲಾರೆ ” ಎಂದಳು.
“ ನಿನಗೇನಾಯ್ತು ಇದ್ದಕ್ಕಿದ್ದ ಹಾಗೇ..... ”
“ ನಕ್ಷತ್ರ ಲೋಕದಲ್ಲಿ ಉಲ್ಕಾ ಪಾತ ಆಗೋದು ಸಹಜ ತಾನೇ...... ಅದನ್ನ ಯಾರು ಗಮನಿಸೋಕೆ ಹೋಗಲ್ಲ ಅಲ್ವಾ..... ? ಆಕಸ್ಮಾತ್ ಅಲ್ಲಿಂದ ಯಾರಾದ್ರೂ ಕೇಳಕೊಂಡು ಬಂದ್ರೆ ನಾನೆಲ್ಲಿದ್ದಿನೀಂತ ಹೇಳ್ಬೇಡ ಪ್ಲೀಸ್..... ”
“ ನಿನ್ನಿಷ್ಟದಂತೆ ಬದಕೋ ಸ್ವಾತಂತ್ರ್ಯ ನಿನಗಿದೆ. ನಿನ್ಯಾಕೆ ಉಲ್ಕೇಂತ ಭಾವಿಸ್ಬೇಕೂ ? ಆಗಲಿ ಸಿಸ್ಟರ್, ನೀನಿನ್ನು ಹೊರಡು. ಯಾಕೋ ನಿನ್ನ ಮನಸ್ಥಿತಿ ಸರಿಯಿಲ್ಲ. ”
“ ರೋಸಿ, ನಿನಗೆ ತುಂಬಾ ಹೆಲ್ಪಿಂಗ್ ನೇಚರ್ ಇದೆ. ನೀನು ಒಳ್ಳೆ ದಂತವೈದ್ಯೆಯಾಗಿ ಬಡವರ ಸೇವೆ ಮಾಡಬಹುದಲ್ಲಾ.... ? ” ಎಂದಳು ಲಾವಣ್ಯ.
“ ಅದ್ಸರಿ ನೀನು ? ”
“ ನಾನು ಪುಟ್ಟ ಮಕ್ಕಳಿಗಾಗಿ ಒಂದು ನರ್ಸರಿ ಸೆಂಟರ್, ಬೇಬಿ ಕೇರ್ ಅಂಥಾದ್ದೇನಾದ್ರೂ ಮಾಡೋಣಾಂತ. ”
“ ಅಂತೂ ನೀನು ಒಂದು ನಿರ್ಧಾರಕ್ಕೆ ಬಂದಿದ್ದಿಯಾನ್ನು. ಇಷ್ಟು ಬೇಗ ನನ್ನಿಂದ ದೂರ ಹೋಗ್ತಿಯ ಅಂದುಕೊಂಡಿರಲಿಲ್ಲ. ಗಾಡ್ ಬ್ಲೆಸ್ ಯೂ ಮೈ ಸಿಸ್ಟರ್ ! ನಿನ್ನ ಬದುಕಿನ ಲೋಕದಲ್ಲಾದ್ರೂ ನೀನೋಂದು ಬೆಳಕಿನ ನಕ್ಷತ್ರವಾಗ್ಬೇಕು ! ” ರೋಸಿ ತನ್ನ ಕಣ್ಣೊರೆಸಿಕೊಂಡಳು.
ಅವಳಿಗೆ ವಿದಾಯ ಹೇಳಿ ಹೊರಟಾಗ ಲಾವಣ್ಯಳ ಕಣ್ಣಂಚಿನಲ್ಲೂ ಕಂಬನಿ ತುಂಬಿ ಬಾರದಿರಲಿಲ್ಲ.

ನರ್ಸಿಂಗ್ ಹೋಮ್‌ನ ವಾರ್ಡಿನಲ್ಲಿ ಸಹನಾ ಬೆಡ್‌ನಲ್ಲಿ ಮಲಗಿದ್ದಾಳೆ. ಪಕ್ಕದಲ್ಲಿ ಅವಳ ಮುದ್ದಾದ ಗಂಡುಮಗು ನಿದ್ರಿಸುತ್ತಿತ್ತು. ತಂಗಿಯ ಆಗಮನವಾಗುತ್ತಿದ್ದಂತೆ ಲವಲವಿಕೆಯಿಂದಲೇ ಕಣ್ಣರಸಿಕೊಂಡಳು.
“ ಬಂದೆಯಾ ಲಾವಣ್ಯ ? ಹೇಗಿದ್ದಿಯಾ ..... ? ” ಕ್ಷೀಣ ಸ್ವರವೆತ್ತಿದ್ದಳು. ಲಾವಣ್ಯಳಿಗೆ ಒಮ್ಮೇಲೆ ದುಂಖ ಒತ್ತರಿಸಿಬಂತು.
“ ನಾನ್ ಕೇಳ್ಬೇಕೂ ಅಕ್ಕಾ, ನೀನು ಹೇಗಿದ್ದಿಯಾಂತ ? ಎಲ್ಲಿ ಮಗು ? ಓ, ಎಲ್ಲಾ ಬಾವನ ಹಾಗೇ ಸುಂದರ ಪುರುಷ ಬಿಡು ! ” ಮಗುವನ್ನು ಎತ್ತಿ ಮುತ್ತಿಟ್ಟಳು. ಅವಳ ಕಂಗಳೂ ತುಂಬಿಬಂದವು.
“ ಯಾಕೆ .... ? ” ಸಹನಾ ಆತಂಕಗೊಂಡಳು. “ ಇಲ್ಲ. ಇದು ಆನಂದಬಾಷ್ಪ ಕಣೇ. ನೀನು ತಾಯಿಯಾದುದಕ್ಕೇ, ನಾನು ಚಿಕ್ಕಮ್ಮನಾದುದಕ್ಕೆ, ಈ ಮಗು ನನ್ನನ್ನು ಚಿಕ್ಕಮ್ಮ ಎಂದು ಕರೆಯುವಾಗ ಎಂಥಾ ಸುಖವಿದೆ ಗೊತ್ತಾ....... ? ”
ಸಹನಾ ಮಂದಸ್ಮಿತೆಯಾದಳು. ಅದೇ ವೇಳೆಗೆ ಅಭಿರಾಮನೂ ಬಂದಿದ್ದ.
“ ಯಾಕೋ ನಿಮ್ಮ ನಾದಿನಿ ತೀರಾ ಡಲ್ ಆಗಿದ್ದಾಳೆ ” ಸಹನಾ ಹೇಳಿದಳು.
“ ಇಲ್ಲವಲ್ಲ..... ! ” ಲಾವಣ್ಯ ಸೆರೆಗಿನಿಂದ ಮುಖ ಒರೆಸಿಕೊಂಡು ಬೆರೆತ್ತಲೋ ನೋಡಿದಳು.
ಆದರೂ, ಅಭಿರಾಮ ಅವಳ ಮುಖವನ್ನು ಓದದೆಯೂ ಇರಲಿಲ್ಲ.
“ ಯಾಕೆ ಲಾವಣ್ಯ.....” ಎಂದು ಪ್ರಶ್ನಾರ್ಥಕ ನೋಟ ಹರಿಸಿದ್ದ.
ಆ ನೋಟವನ್ನು ಎದುರಿಸಲಾರದಾದವಳು ಲಾವಣ್ಯ.
ಮತ್ತೆ ಕೆಲವು ಕ್ಷಣಗಳು ಕಳೆದಿದ್ದವು. ನಾದಿನಿಯೊಂದಿಗೆ ನರ್ಸಿಂಗ್ ಹೋಮ್‌ನಿಂದ ಮನೆಗೆ ಮರಳಿದಾಗ ಅಭಿರಾಮ ಕೇಳಿದ. “ ಒಂದೆರಡು ದಿನ ಇರ್ತಿಯಲ್ಲ ಲಾವಣ್ಯ.....”
“ ಒಂದೆರಡು ದಿನ ಏನು ಬಾವಾ.... ನೀವು ಅವಕಾಶ ಮಾಡಿಕೊಟ್ಟರೆ, ನಾನು ಇಲ್ಲೇ....” ಎನ್ನುತ್ತಿದ್ದಂತೇನೆ ದುಃಖ ಉಮ್ಮಳಿಸಿ ಬಂತು ಅವಳಿಗೆ, “ ಬಾವಾ, ನಾನು ನಿಮ್ಮ ಮಾತು ಕೇಳೆದೇನೆ ತಪ್ಪು ದಾರಿ ತುಳಿದಿಬಿಟ್ಟೆ. ನನ್ನನ್ನು ಕ್ಷಮಿಸಿ ಬಿಡಿ ಬಾವಾ.....” ಅವನ ಕಾಲಿಗೆರಗಲು ಮುಂದಾದಳು.
ಅಭೀರಾಮ ಥಟ್ಟನೆ ತನ್ನಕಾಲು ಹಿಂತೆಗೆದುಕೊಂಡು ಸರಿದಿದ್ದ. “ ಛೇ ಇದೇನ್ ಮಾಡ್ತಾ ಇದೀಯಾ ! ಏಳು ಲಾವಣ್ಯ. ” ಅವಳ ಕಂಕುಳಿಗೆ ಕೈ ಹಾಕಿ ಎಬ್ಬಿಸಿದ್ದ. “ ನೋಡು ಲಾವಣ್ಯ, ನಡೆಯುವವರು ಎಡವದೇ ಇರಲಾರರಲ್ಲ. ಹಾಗೆಂದು ನಡೆಯುವದನ್ನು ನಿಲ್ಲಿಸಿಬಿಡಬಹುದೇ ಹೇಳು ! ನಾವು ಮುಂದೆ ನಡೆಯುತ್ತಲೇ ಇರಬೇಕು. ನಮ್ಮೊಳಗೆ ಬದಲಾಗುತ್ತಲೂ ಇರಬೇಕು. ”

“ಬಾವಾ, ನೀನೆಷ್ಟು ಸಹೃದಯರು. ನಿಮ್ಮ ತಿಳಿವಿನ ಹರವೂ ದೊಡ್ಡದು. ನಾನೂ ಮುಂದೆ ನಡೆಯುತ್ತೀನಿ. ಹೊಸ ಬದುಕು ಕಾಣಬಯಸುತ್ತಿನಿ.ನಿಮ್ಮ ಆಸರೆಯಲ್ಲಿ ಬಾವ. ” ಲಾವಣ್ಯ ಬಿಕ್ಕಳಿಸುತ್ತ ಅಭಿರಾಮನ ಎದೆಗೊರಗಿದ್ದಳು.

( ಮುಗಿಯಿತು)
"ರಾಗ ಸಂಗಮ" ದಲ್ಲಿ ಪ್ರಕಟಿತ

No comments:

Post a Comment