Saturday, April 17, 2010

ಇರುಳ ನಕ್ಷತ್ರ-2 (ಕಿರು ಕಾದಂಬರಿ)

-2-
ಲಾವಣ್ಯ ಅಕ್ಕನ ಮನೆಗೆ ಬಂದಿರುವುದು ಮದುವೆಯಾದ ಮೇಲೆ ಮೊದಲ ಸಾರಿಗೆ. ಹಾಗೆ ನೋಡಿದರೆ ಅವಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗೋವರೆಗೂ ಇದ್ದದ್ದೇ ಅಕ್ಕನ ಮನೆಯಲ್ಲಿ. ತಾಯಿಯ ಪ್ರೀತಿಯನ್ನೇ ಕಾಣದ ತಬ್ಬಲಿ. ತಂದೆಯ ನೆನಪು ಎಲ್ಲೋ ಅಲ್ಪ ಸ್ವಲ್ಪ ಇದೆಯಷ್ಟೇ. ಆಗಿಂದಲೂ ಈ ಅಕ್ಕ, ಬಾವನಿಗೆ ತಕ್ಕ ಅಭಿರುಚಿಯುಳ್ಳವಳಲ್ಲ ಎನ್ನಿಸಿದೆ. ಬಹುರಾಷ್ಟ್ರಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ, ತಿಂಗಳಿಗೆ ಹನ್ನೆರಡು ಸಾವಿರ ಸಂಬಳ ತರುವ , ಒಳ್ಳೆ ಸಿನಿಮಾ ಹೀರೋ ಥರಾ ಇರುವ, ಅಂತರಂಗದಲ್ಲಿ ರಸಿಕನಾಗಿ ಸೌಂದರ್ಯ ಪ್ರಜ್ಞೆ ಹೊಂದಿರುವ, ಹವ್ಯಾಸಿ ಚಿತ್ರ ಕಲಾವಿದನೂ ಆಗಿರುವ ಅಭಿರಾಮನ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಸಹನಾ ಇನ್ನೂ ಹೊಂದಿಕೊಂಡಿಲ್ಲವೇಕೆ ?

ಸಹನಾ ಎಸ್ಸೆಸೆಲ್ಸಿಯವರೆಗೂ ಓದಿದ್ದಾಳೆ. ಕಥೆ , ಕಾಂದಬರಿಗಳಲ್ಲಿ ಆಸಕ್ತಿ ಅವಳಿಗೂ ಇದೆ. ಟಿ.ವಿ. ಧಾರಾವಾಹಿ ನೋಡುತ್ತಾಳೆ . ನಗರದಲ್ಲಿದ್ದೂ ಹಿಂದುಳಿದವಳಂತೆ ಇರುತ್ತಾಳಲ್ಲ ಏಕೆ ? ಮದುವೆಯಾಗಿ ಏಳು ವರುಷಗಳೇ ಆಗಿದ್ದರೂ ಮಕ್ಕಳ ಭಾಗ್ಯವಾಗಿರಲಿಲ್ಲ. ದೇವರು ಅದನ್ನಾದರೂ ಕರುಣಿಸಿದ್ದರೆ ಸಹನಾ ಸದಾ ನಗು ನಗುತ್ತಾ ಇರುತ್ತಿದ್ದಳೇನೋ ! ಈಗ ಅವಳ ಮುಖದಲ್ಲಿ ಅತೃಪ್ತಿಯ ಹೊಗೆ. ಬದಲಿಗೆ ಆಕೆಯಿಂದಲೇ ತನಗೇನೋ ಕೊರತೆಯಿಲ್ಲವೆಂಬಂತೆ ಅಬಿರಾಮನ ನಡೆ. ಅದೇ ಆಶ್ಚರ್ಯ ಲಾವಣ್ಯಳಿಗೆ.
ಕಡಲೆಕಾಯಿ ಮಾರುವ ಹುಡುಗ, “ ಬೇಕೆ ಸಾರ್ ? ” ಕೇಳಿದಾಗ ಅಭಿರಾಮ ಕೊಂಡುಕೊಂಡ. ಮೊದಲು ಲಾವಣ್ಯಳ ಕೈಗೆ ಹಾಕಿದ್ದ. ಸಹನಾ ಏಕೋ ಬೇಡವೆಂದಳೂ. ಬಾವ, ನಾದಿನಿ ಮೆಲ್ಲತೊಡಗಿದರು.
“ ಲಾವಣ್ಯ, ನೀನು ಕಂಪ್ಯೂಟರ್ ನಲ್ಲಿ ಕೆಲವು ಕೋರ್ಸಗಳನ್ನು ಮಾಡಿದ್ದಿಯಲ್ಲ ! ನಿನಗೆ ಈ ಮಹಾನಗರದಲ್ಲಿ ಕೆಲಸ ಸಿಗೋದೇನೋ ಕಷ್ಟವಿಲ್ಲ. ನಮ್ಮ ಪ್ಯಾಕ್ಟರಿಯಲ್ಲಿ ಸ್ನೇಹಿತರಿಗೆ ಹೇಳಿದರೆ ಎಲ್ಲಾದರು ಕೆಲಸ ಕೊಡಿಸುತ್ತಾರೆ. ”
“ಹೌದು ಬಾವ ನನಗೊಂದು ಕೆಲ್ಸಾಂತ ಸಿಕ್ಕರೆ ನಾನು ಯಾವುದಾದರೂ ಒಳ್ಳೆ ಲೇಡಿಸ್ ಹಾಸ್ಟೆಲ್ ಸೇರಿಕೊಳ್ತಿನಿ. ”
“ ಯಾಕೆ ! ನಮ್ಮ ಮನೆ ಏನಾಗಿದೆಯೆಂದು ? ” ಒಮ್ಮೆಲೆ ಸಹನಾ ಮಧ್ಯ ಬಾಯಿ ಹಾಕಿದಳು.

“ ಅಕ್ಕಾ, ಸುಮ್ನೆ ನಿಮಗ್ಯಾಕೆ ತೊಂದರೆ ನಾನು ಗಂಡನ್ನ ಬಿಟ್ಟು ಬಂದೋಳು. ನನ್ನ ಜೊತೆ ನಿಮ್ಮನ್ನ ಸೇರಿಸಿ ಆಡಿಕೊಳ್ತಾರೆ ಜನ. ಹೇಗೋ ಕೆಲ್ಸ ಸಿಗೋವರೆಗೂ ನಿಮ್ಮ ಜತೆ ಇರಲಿಕ್ಕೆ ಅವಕಾಶ ಮಾಡಿಕೊಟ್ಟರೆ ಸಾಕು."
ಲಾವಣ್ಯ ಹೀಗನ್ನುತ್ತಿದ್ದಂತೇ,
“ ಹೌದೇ, ಈ ಅಕ್ಕ ತುಂಬಾ ಕೆಟ್ಟವಳು. ಜನರೆಲ್ಲರ ಬಾಯಿಗೆ ಬಿದ್ದಂತೆ ಇವಳ ಬಾಯಿಗೆ ನಿನ್ಯಾಕೆ ಬೀಳ್ತಿಯಾ ಹೇಳು ! ”
ಸಹನಾ ಮುಸಿಮುಸಿ ಅಳಲು ಶುರುಮಾಡಿದಳು. ಅಭಿರಾಮನಿಗೆ ಇವರಿಬ್ಬರ ನಡುವೆ ದಿಕ್ಕೆ ತೋಚದಂತಾಯಿತು.
ತನ್ನ ನೇರ ನುಡಿಗಳಿಂದ ಅಕ್ಕನ ಮನಸ್ಸಿಗೆ ಚುಚ್ಚಿದಂತಾಯಿತು. ಎಂಬುದನ್ನು ಗ್ರಹಿಸಿದಳು ಲಾವಣ್ಯ.

ಬಾವನ ಮುಖ ನೋಡಲಾರಂಬಿಸಿದಳು. ಅಭಿರಾಮ ಕೂಡಲೇ ಸಾವರಿಸಿಕೊಂಡ.
ಹೆಂಡತಿಯ ಭುಜ ತಟ್ಟಿ, “ ಯಾಕೆ ಸಹನಾ ಈಗೇನಾಯ್ತುಂತ...... ಅವಳೇನ್ ಹೇಳಬಾರದ್ದನ್ನ ಹೇಳಿದಳೂಂತ.... ಅವಳು ತುಂಬಾ ನೊಂದಿದ್ದಾಳೆ. ಎಷ್ಟು ದಿನಾಂತ ನಮ್ಮನ್ನೇ ಅವಲಂಬಿಸಿರಬೇಕೂಂತ ಯೋಚ್ನೆಮಾಡ್ತಾಳೆ. .. ತಪ್ಪೇನು ? ” ಎಂದ.

ಏನೇ ಆಗಲಿ, ಅಕ್ಕನ ಮಾತು ಒರಟಾದರೂ ಹೃದಯ ಒಳ್ಳೆಯದು. ಅದು ತನಗೆ ಒಳಿತನ್ನೇ ಬಯಸುತ್ತದಲ್ಲ !
“ ಅಕ್ಕಾ, ನಾನೇನ್ ಈಗ್ಲೇ ಹೊರಟಿರೋ ಹಾಗೆ ಆಡ್ತಿಯಲ್ಲ, ತನಗಿನ್ನೂ ಕೆಲ್ಸ ಸಿಗಬೇಕು. ನನ್ನ ಗಂಡನಿಂದ ಪೂರ್ಣ ಬಿಡುಗಡೆಯಾಗಬೇಕು. ಆಮೇಲೆ ತಾನೇ ಮುಂದಿನ ಯೋಚ್ನೆ ? ನಿನ್ನನ್ನೂ ಬಾವನ್ನೂ ಬಿಟ್ಟು ಬೇರೆ ಎಲ್ಲಿಗೆ ಹೋಗಲಿ ನಾನು ? ನಾನು ಎಂದಿದ್ದರೂ ನಿಮ್ಮವಳೇ ಗದ್ಗದಿತಳಾದಳು ಲಾವಣ್ಯ. ”

ಅಭಿರಾಮ ಅವಳ ಬೆನ್ನ ಮೇಲೆ ಕೈ ಇಟ್ಟು ಸಾಂತ್ವನದ ನೋಟ ಬೀರಿದನು.
ಅದಾಗಲೇ ಹಕ್ಕಿಗಳ ಕಲರವದೊಂದಿಗೆ ಸಂಜೆಗತ್ತಲಾರಂಭಿಸುತ್ತಿತ್ತು.
ಪಾರ್ಕಿನಲ್ಲಿರುವ ಜನ ನಿರ್ಗಮಿಸುತ್ತಿದ್ದರು. ಅಭಿರಾಮ ಹೆಂಡತಿಯ ಕೈ ಹಿಡಿದು,
“ ಏಳೂ ಸಹನಾ, ಮನೆಗೆ ಹೋಗೋಣ ” ಎಂದು ಎಬ್ಬಿಸಿದ್ದ.
ಮೂವರು ಮನೆಯತ್ತ ಹೆಜ್ಜೆ ಹಾಕಿದರು.
* ************* *

ಲಾವಣ್ಯ ಹೆಸರಿನಂತೆಯೆ ತುಂಬು ಚೆಲುವಿನ ಖನಿ. ತನ್ನ ಸೌಂದರ್ಯದ ಬಗ್ಗೆ ಅವಳಿಗೆ ಎಲ್ಲಿಲ್ಲದ ಹೆಮ್ಮೆ. ಹದಿಹರೆಯದಿಂದಲೇ ತನ್ನ ಮೈಸಿರಿಗೆ ತಾನೇ ಬೀಗುತ್ತಿದ್ದಳು. ಟಿ.ವಿ. ಯಲ್ಲಿ ಪ್ರತ್ಯಕ್ಷಗೊಳ್ಳುವ ರೂಪಸಿಯರ ನಡುವೆ ತನ್ನನ್ನು ಕಲ್ಪಿಸಿಕೊಳ್ಳುವಳು. ತನ್ನ ನೀಳವಾದ ಹೆರಳಿಗೆ ಶ್ಯಾಂಪೂ ಪೂಸಿಕೊಂಡು ಸ್ನಾನ ಮಾಡಿ ಬಂದಳವಳೆಂದರೆ ಒಬ್ಬಳೆ ಕೋಣೆಯ ನಿಲುವುಗನ್ನಡಿಯ ಮುಂದೆ ನಿಂತು ಬಿಡುವಳು. ತನ್ನ ನಗ್ನ ಸೌಂದರ್ಯವನ್ನು ತಾನೇ ಸವಿಯತೊಡಗುವಳು. ವಿಶಿಷ್ಟ ಶೈಲಿಯಲ್ಲಿ ಉಡುಪುಗಳನ್ನು ಧರಿಸುವಳು. ಅವ್ಯಾಹತವಾಗಿ ಅಲಂಕಾರ ಮಾಡಿಕೊಳ್ಳುತ್ತಲಿದ್ದಳು. ವಿದ್ಯಾರ್ಥಿ ದೆಸೆಯಲ್ಲಿ ಇಡಿ ಕಾಲೇಜಿನಲ್ಲಿ ಸೂಜಿಗಲ್ಲಿನಂತೆ ಸೆಳೆದಿದ್ದಳು. ಅಧ್ಯಾಪಕ ವೃಂದದಲ್ಲೂ ಅದೇಕೋ ಇವಳೆಂದರೆ ವಿಶೇಷ ಕಾಳಜಿ. ಕಾಲೇಜಿನ ಸಾಂಸ್ಕೃತಿಕ ಸಮಾರಂಭಗಳಲ್ಲಿಯೂ ತನ್ನ ಪ್ರತಿಭೆಯಿಂದ ಗಮನ ಸೆಳೆದಳು. ನೃತ್ಯ, ನಾಟಕಗಳಲ್ಲಿ ಬಹುಮಾನ ಗಳಿಸಿದ್ದಳು. ಇವಳ ಒಂದು ಕುಡಿನೋಟಕ್ಕೆ, ಪ್ರೀತಿಯ ನುಡಿಗೆ ಉಬ್ಬಿ ಹೋಗುತಿದ್ದ ಲೆಕ್ಕವಿರಲಿಲ್ಲ. ಇವಳೂ ಮಾತ್ರ ಯಾರಿಗೂ ಮರುಳಾದವಳಲ್ಲ. ಇವಳ ಹವ್ಯಾಸವೆಂದರೆ, ಕಾಲೇಜಿನ ಕೆಲ ಶ್ರೀಮಂತ ಕನ್ಯೆಯರು ನಗರದಲ್ಲಿ ಎಲ್ಲಾದರೂ ಸೌಂದರ್ಯ ಸ್ಪರ್ಧೆ, ಫ್ಯಾಷನ್ ಶೋಗಳು ನಡೆಯುತ್ತವೆಯೆಂದರೆ ಹೋರಾಡಲು ಉತ್ಸುಕಾರುಗುತ್ತಿದರಲ್ಲ, ಅವರ ಜತೆ ಅವಳು ಸೇರಿಕೊಂಡಿರುತ್ತಿದ್ದಳು. “ ನಾನು ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಹೇಗೆ ? ” ಎಂದು ಕನಸು ಕಾಣುತ್ತಿದ್ದಳು. ಅವಳೂ ಗೆಳತಿಯರಲ್ಲೆ ಕೆಲವರು ಹಣ ಸುರಿದು ಮಾಡೆಲಿಂಗ್ ಕಲಿತವರಿದ್ದರು ಇವಳು ಹೋಗಬೇಕಲ್ಲ ! ಅದೆಲ್ಲ ತನ್ನಂಥ ಮಧ್ಯಮ ವರ್ಗದ ಹುಡುಗಿಯರಿತಲ್ಲ. ಈ ಮಧ್ಯಮ ವರ್ಗದ ಕೋಟೆಯೊಳಗೆ ಎಲ್ಲ ಆಚಾರ, ವಿಚಾರ ಶೀಲವಂತಿಕೆಗಳು ಇನ್ನು ಭಧ್ರವಾಗಿವೆಯಲ್ಲ ! ಅವೆಲ್ಲವನ್ನೂ ದುಡ್ಡಿದವರೂ ಸಲೀಸಾಗಿ ಕಿತ್ತೆಸೆದು, ತನ್ನಂಥೆ ಸುಂದರಿಯಾದ ಹೆಣ್ಣು ಇಲ್ಲಿ ಕನಸು ಕಾಣುವುದಷ್ಟೇ. ತಾನೇನಿದ್ದರೂ ಚೆನ್ನಾಗಿ ಓದಿ ಮುಂದೆ ಬರಬೇಕು. ತನ್ನ ತಲೆಯಲ್ಲಿ ಇಂತಹ ವಿಚಾರಗಳೆಲ್ಲಾ ತುಂಬಿಕೊಂಡಿವೆಯೆಂದರೆ ಆಯಿತು. ತನಗೆ ಏನೆಲ್ಲವೂ ಆಗಿರುವ ಅಕ್ಕ ಭಾವ ತನ್ನನ್ನೇ ಹೊರಗೆ ಹಾಕಿ ಬಿಡುತ್ತಾರೆ ಹೀಗೆ ಲಾವಣ್ಯ ಕಟ್ಟೆಚ್ಚರದಿಂದಲೇ ಓದುತ್ತಾ ಬೆಳೆದಳು. ಏರು ಜವ್ವನೆಯಾದಂದಿನಿಂದಲೂ ತನ್ನ ಶೀಲ ವ್ಯಕ್ತಿತ್ವದ ಮೇಲೆ ಯಾವೋಂದು ಕಪ್ಪು ಛಾಯೆಯೂ ಬೀಳದಂತೆ ಜಾಗ್ರತೆಯಿಂದಿದ್ದಳು.ಚಿಕ್ಕಂದಿನಿಂದಿಲೇ ತಂದೆ ತಾಯಿಯರನ್ನು ಕಳೆದುಕೊಂಡ ಲಾವಣ್ಯಳನ್ನು ಅಕ್ಕ ಬಾವ ಅಕ್ಕರೆಯಿಂದ ಸಾಕಿ ಬೆಳೆಸಿದರು. ಇವಳು ಬಿ.ಎಸ್.ಸಿ.ಗೇ ಓದು ಮುಗಿಸಿ ಕಂಪ್ಯೂಟರ್ ಟ್ರೈನಿಂಗ್ ಮಾಡುತ್ತಿದ್ದಂತೆ, ಅವರೇ ಇವಳು ಮೆಚ್ಚಿಕೊಂಡ ಹುಡುಗನಿಗೆ ತಾವೇ ಮುಂದೆ ನಿಂತು ಮದುವೆ ಮಾಡಿಕೊಟ್ಟರು. ಆ ಹುಡುಗನೇ ಮದನ್ ಕುಮಾರ್ ! ಲಾವಣ್ಯಳನ್ನು ನೋಡಲು ಬಂದವನು ಮೇಲ್ನೋಟಕ್ಕೆ ಆಕರ್ಷಿಸಿದನಾದರೂ ಅವನೊಳಗೆ ಅವನದೇ ಆದ ವಿಚಿತ್ರ ವಿಕೃತ ರೂಪವಿತ್ತು. ಹೊರಗೆ ಸಭ್ಯತೆ, ಸೋಗಲಾಡಿತನದ ಸೋಗು ಹಾಕುತ್ತಾ ಅವನು ದುಂಡುದುಂಡಗೆ, ಬೆಳ್ಳಗೆ ಕಂಡ ಹೆಣ್ಣುಗಳೊಡನೆ ಸ್ನೇಹ ಬೆಳಸುವುದರಲ್ಲಿ ನಿಸ್ಸೀಮನಾಗಿದ್ದ. ಲೈಫ್ ಎಂಜಾಯ್ ಮೆಂಟ್ ಎಂದರೆ ಅದೇ ಎಂದು ಭಾವಿಸಿದ್ದ. ಅವನ ಮೋಡಿಗೆ ಜಾಣೆಯಾದ ಲಾವಣ್ಯ ಕೂಡ ಅದ್ಹೇಗೆ ಒಳಗಾದಳೋ ದೇವರೇ ಬಲ್ಲ ! ಮದುವೆಯಾದ ಮೇಲಂತೂ ಲಾವಣ್ಯ ಊಹಿಸಿರದ ರೀತಿಯಲ್ಲೀ ಅವನ ಬೋಗವಿಲಾಸ ಮುಂದುವರೆದಿತ್ತು. ಲಾವಣ್ಯ ಏನೇ ಪ್ರತಿಭಟಿಸಿದರೂ, ಗೋಗರೆದರೂ, ಅವನ ದಾರಿಯಲ್ಲಿ ಸಾಗಿದ್ದವನು. ತೀರ ತಿರುಗಿಬಿದ್ದಳೆಂದರೆ ಹೊಡೆತಗಳೂ ಬೀಳುತ್ತಿದ್ದವು.
ಈಗೀಗ ಅವನಿಗೆ ದಿನಕ್ಕೊಂದು ಹೆಣ್ಣಿನ ಸುಖ ಬೇಕಿತ್ತು. ಅಂತಹ ವಿಕೃತ ಕಾಮಿ ಅವನು. ಅತಿಶಯ ರೂಪಸಿ, ಅತಿ ವಿನಯ, ನಾಜೂಕಿನ ಲಾವಣ್ಯ ಹೆಂಡತಿಯಾಗಿ ಇವನೊಂದಿಗೆ ಹೇಗೆ ಏಗುತ್ತಿದ್ದಳೊ ! ಅದಂತೂ ಇವನಿಗೆ ಹೇಗೆ ಸಿಕ್ಕಳೋ ! ದಿನ ರಾತ್ರಿ ಪಡಬಾರದ ಯಾತನೆ ಪಡುವಂತಾದಳು. ಇಷ್ಟು ಸಾಲದೇ ಹಗಲೆಲ್ಲ ಅವನು ಹೇಳಿದಂತೆ ಅತಿರೇಕದ ಮೇಕಪ್ ಮಾಡಿಕೊಂಡಿರಬೇಕವಳು ಆಕೆ ತನ್ನ ದೇಹಸಿರಿ ಕಾಪಾಡಿಕೊಳ್ಳಲು, ತನ್ನ ಸೌಂದರ್ಯ ವರ್ಧಿಸಿಲು ಬ್ಯೂಟಿ ಪಾರ್ಲರಿಗೆ ಹೋಗುತ್ತಿದ್ದಳು ನಿಜ. ಅವಳಿಗೂ ತನ್ನ ಸೌಂದರ್ಯ ಕಾಯ್ದುಕೊಳ್ಳಬೇಕೆಂಬ ಹುಚ್ಚು ಹಂಬಲವು ಬಹಳವಿತ್ತಲ್ಲ ! ಅನೇಕ ನಮೂನೆಯ ಬೆಲೆಬಾಳುವ ಉಡುಪು, ರೇಷ್ಮೆ ಸೀರೆ, ಒಡವೆ ಧರಿಸಲು ಅವಳೂ ಇಚ್ಚಸುತ್ತಿದ್ದಳು. ಆದರೆ, ಮದನ್ ಕುಮಾರನ ಆಜ್ಞೆಯಂತೆ ಡ್ರೆಸ್ ಮಾಡಿಕೊಳ್ಳುವುದೆಂದರೆ ಜೀವ ಅಂಗೈಗೆ ಬರುತ್ತಿತ್ತು. ಅದಕ್ಕಿಂತಲೂ ಅವಳಿಗೆ ಒಂದೋಳ್ಳೆ ಜಾಹಿರಾತು ಕಂಪೆನಿಯ ಮಾಡೆಲ್ ಆಗಿ ಪ್ರದರ್ಶನ ನೀಡುವುದೇ ಮೇಲೆನಿಸುತ್ತಿತ್ತು . ಅವನಿಷ್ಟದಂತೇ ಅವಳು ಹೊಚ್ಚ ಹೊಸ ಡಿಸೈನಿನ ಅರೆನಗ್ನ ಡ್ರೆಸ್‌ ತೊಟ್ಟು ಪಾರ್ಟಿಗಳಿಗೆ ಬರಬೇಕು. ಲೋನೆಕ್, ಸ್ಲೀವ್‌ಲೆಸ್‌ ! ಮನೆಯಲ್ಲಿದ್ದಾಗಲೂ ಅಷ್ಟೇ. ತೆಳುವಾದ ಸ್ಯಾಟಿನ್ ಮ್ಯಾಕ್ಸಿ ತೊಡಬೇಕು. ಪಾರದರ್ಶಕ ನೈಟಿಯಲ್ಲಿ ಅವನೊಂದಿಗೆ ಬೆಡರೂಂ ಸೇರಬೇಕು. ಟೇಪ್‌ ರೇಕಾರ್ಡರ್ ಆನ್ ಮಾಡಿದರೂ ಬರುವ ಪಾಶ್ಚಿಮಾತ್ಯ ಸಂಗೀತಕ್ಕೆ ಅವನು ತನ್ನ ಹೆಂಡತಿಯ ಸೊಂಟ ಬಳಸಿಕೊಂಡರೆ ಲಯಬದ್ದ ಹೆಜ್ಜೆಹಾಕುತ್ತ ಕುಣಿಯಲೂಬೇಕು. ‘ ಇದೇನು ಪೀಡೆಯೋ ಪ್ರಾರಬ್ದವೋ, ನನಗೆ ಇವನು ಗಂಟು ಬಿದ್ದನಲ್ಲ. ನಾನೇ ಬುದ್ದಿವಂತೆ ಎಂದರೆ ನನ್ನನ್ನೇ ಏಮಾರಿಸಿಬಿಟ್ಟ ! ’ ಎಂದು ಕೊರಗುತ್ತಿದ್ದಳು ಲಾವಣ್ಯ. ಇವನೊಂದಿಗಿನ ರಾತ್ರಿಗಳು ಯಾಕಾದರೂ ಬರುತ್ತವೋ ಎಂದು ಕೊಳ್ಳುತ್ತಿದ್ದಳು. ಮೃಗೀಯ ಸ್ವಭಾವ ;ಅವನದು. ಮರುದಿನ ಬೆಳಿಗ್ಗೆ ಬಾತ್ ರೂಮ್‌ನಲ್ಲಿ ದಂತದಂತೆ ಹೊಳೆವ ಮೈರಾತ್ರಿ ನಡೆದ ಧಾಳಿಯ ಪರಿಣಾಮವಾಗಿ ತಣ್ಣೀರಿನಿಂದ ಶಮನಗೊಳ್ಳಲು ತವಕಿಸುತ್ತಿತ್ತು. ಹೇಗಾದರೂ ಇವನ ಬಂಧನದಿಂದ ಬಿಡುಗಡೆ ಪಡೆದು ಹೊರಗೆ ಹಕ್ಕಿಯಂತೆ ಹಾರಿಹೋಗಬೇಕು. ಡೈವರ್ಸ್‌ ಪಡೆದರೆ ಹೇಗೋ ಆದಿತೆಂಬ ಆಲೋಚನೆಯೂ ಬರುತ್ತಿತ್ತು. ತನ್ನದೇ ಸ್ವತಂತ್ರ, ಸ್ವಚ್ಛಂಧ ಬದುಕು ಕಾಣಬೇಕೆನಿಸುತ್ತಿತ್ತು.
ಹೆಂಡತಿಯ ಮನಸ್ಸು ಹೇಗಿದ್ದರೇನು ? ಅವಳ ದುಂಡು ಮುಖದಲ್ಲಿ ನಗೆ ಮಿಂಚು ತುಳುಕುತ್ತಿರಲೇಬೇಕು. ಇಲ್ಲದ್ದಿದ್ದರೆ, “ ಏ ಗೂಬೆ , ನಿನಗೇನಾಗಿದೆ ಧಾಡಿ ಈ ಮನೆಯಲ್ಲಿ ? ” ಎಂದು ಅವಾಚ್ಯವಾಗಿ ಬೈಯುವನು. ಮನೆಗೆ ಅವನನ್ನು ಅರಸಿ ಬರುವ ಸನ್ಮಾನ್ಯ ಸಂದರ್ಶಕರನ್ನು ರೂಪಸಿ ಹೆಂಡತಿಯೆ ಬೆಡಗಿನ ನಗೆ ಬೀರಿ ಸ್ವಾಗತಿಸಬೇಕು. ಅವರ ಬೇಕು- ಬೇಡಗಳನ್ನು ಅವಳೇ ಕೇಳಿಪೂರೈಸಬೇಕು. ತನ್ನಿಂದ ಇವೆಲ್ಲ ಆಗುವುದಿಲ್ಲವೆಂದರೆ ಕೇಳಬೇಕಲ್ಲ ! ಅವನಿಂದ ರಾತ್ರಿ ಹೊಡೆತ ಬೀಳುವುದನ್ನು ತಪ್ಪಿಸಿಕೊಳ್ಳಲು ಆದೀತೇ... ಅದೊಂದು ದಿನ, ಒಬ್ಬ ದೊಡ್ಡ ಮನುಷ್ಯ ಮನೆಗೆ ಬಂದಿದ್ದ. ಆಗ ಮದನ್ ಕುಮಾರ್ ಹೇಳಿದ್ದ, “ ನೋಡು ಲಾವಣ್ಯ , ಇವನು ನನ್ನ ಬಿಸಿನೆಸ್ ಫೈನಾನ್ಶಿಯರ್ ರಾಕೇಶ್‌, ಇವನನ್ನು ನೀನು ಸರಿಯಾಗಿ ಟ್ರೀಟ್ ಮಾಡ್ಬೇಕು. ಇವನಿಗೇನೋ ಕಡಿಮೆಯಾಗ್ಬಾರದು. ಒಂಚೂರು ನೋವು ಕೊಡಬಾರದು. ಒಳ್ಳೆ ಖುಷಿಪಡಿಸ್ಬೇಕು, ತಿಳೀತಾ... ? ಈಗ ನನಗೊಂದ್ಸೊಲ್ಪ ಅರ್ಜೆಂಟ್ ಕೆಲ್ಸ ಇದೆ. ಹೊರಗೆ ಹೋಗಿ ಬರ್ತೀನಿ............. ” ಹೇಳಿ ಹೊರಟೇಬಿಟ್ಟಿದ್ದ.
“ ಸ್ವಲ್ಪ ನನ್ನ ಮಾತು ಕೇಳಿಂದ್ರೆ..... ” ಲಾವಣ್ಯ ಮುಂಬಾಗಿಲಿಗೆ ಬರೋ ಹೊತ್ತಿಗಾಗಲೇ ಅವನ ಹೀರೋಹೊಂಡಾ ರೊಯ್ಯನೆ ಶಬ್ದಿಸುತ್ತಾ ಗೇಟು ದಾಟಿ ರಸ್ತೆಗಿಳಿದಿತ್ತು. ಲಾವಣ್ಯ ಬೆವರೊಡೆದು ನಿಂತಿದ್ದಳು.
“ ಯಾಕ್ರಿ, ಹೆದರಿಕೆನಾ ? ನಾನೇನು ಹುಲೀನಾ.. ? ಪಾಪ, ಅವನಿಗೇನೊ ಅರ್ಜೆಂಟ್‌ ಇದೆ... ನೀವು ಒಳಗೆ ಬನ್ನಿ.... ” ರಾಕೇಶ ಮೆಲ್ಲ ಮೆಲ್ಲನೆ ಸರಿದು ಮುಂಬಾಗಿಲು ಎಳೆದುಕೊಂಡ.
ಲಾವಣ್ಯ ನಡುಗಿಹೋದಳು.
ಅವಳು ತುಂಬಿದ ಸ್ತನಗಳು , ಮಿನುಗುವ ಲೋನೆಕ್ ಸ್ಯಾಟಿನ್ ನೈಟಿಯಲ್ಲಿ ಏರಿಳಿಯುತ್ತಿದ್ದವು. ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟಿದ್ದವು. “ ಇಲ್ಲ ಇಲ್ಲ ನನಗೆಂಥ ಹೆದರಿಕೆ ! ನಾನು ಒಬ್ಬಳೇ ಈ ಬಂಗಲೆಯಲ್ಲಿದ್ದು ಅಭ್ಯಾಸವಿದೆ. ಜತೆಗೆ ಮನೆ ಆಳು ಬೇರೆ ಇದಾನಲ್ಲ ...! ” ಎಲ್ಲಲ್ಲದ ಧೈರ್ಯ ತಂದುಕೊಂಡಳು. ಹೊರಬಾಗಿಲಿಗೆ ಬಂದು ಆತನನ್ನು ಕೂಗೋಣವೆಂದರೆ ಬಾಗಿಲು ಹಾಕಿಬಿಟ್ಟಿದ್ದಾನೆ ರಾಕೇಶ್‌. ಕಿಟಕಿಯ ಬಳಿ ನಿಂತು. “ ರಾಮೋಜಿ... ” ಎಂದು ಕೂಗು ಹಾಕಿದ್ದಳು.
“ ನಿಮ್ಮ ವಾಚ್‌ಮನ್‌ ಸಿಗರೇಟು ತರಲಿಕ್ಕೆ ಹೋಗಿದ್ದಾನೆ....... ಹ್ಹಿ ಹ್ಹೀ..... ” ವಿಕಟ ನಗೆ ನಕ್ಕ ರಾಕೇಶ ತೀರಾ ಸನಿಹಕ್ಕೆ ಬಂದು ನಿಂತ. ಅವನ ಹಸಿದ ಕಣ್ಣುಗಳು, ಎದುರಿಗೆ ತಿವಿಯುವಂತೆ ತೊನೆವ, ತುಂಬಿದೆದೆಯ ಸೊಗಸನ್ನೆ ದಿಟ್ಟಿಸುತ್ತಿದ್ದವು.
“ ನೋಡು ನಿನ್ನ ಗಂಡನಿಗೆ ಐದು ಲಕ್ಷ ರೂಪಾಯಿ ಸಾಲಾ ಕೊಟ್ಟು ಐದಾರು ತಿಂಗಳುಗಳಾಗಿವೆ. ಪಾಪ ! ಅವನಿಂದ ಅಸಲು, ಬಡ್ಡಿ ಏನೂ ಚುಕ್ತಾ ಆಗಿಲ್ಲ... ನೀನು ಮನಸ್ಸು ಮಾಡಿದರೆ ಅವನೂ ಋಣಮುಕ್ತನಾಗುತ್ತಾನೆ. ನಿನ್ನಂಥ ಬ್ಯೂಟೀ ಗಂಡನಾದವನಿಗೆ ಅಷ್ಟೂ ರೀಲಿಫ್ ಕೊಡಿಸಿದಿದ್ದರೆ ಹೇಗೆ ? ” ಅವಳ ನುಣ್ಣನೆಯ ಕಪೋಲ ಸವರಿದ್ದ. ಲಾವಣ್ಯ ಕೊಸರಾಡಿದಳು. ಇಂತಹದೊಂದು ದುರ್ಭರ ಪ್ರಸಂಗ ತನಗೆ ಬಂದಿತೇಂದು ಊಹಿಸಿರಲಿಲ್ಲ ಅವಳು. ಗಂಡನ ಬಂಡತನ ತಿಳಿದಿತ್ತು. ತಲೆ ಹಿಡುಕುತನ ! ಉಹೂಂ ಅದರ ಪರಿಕಲ್ಪನೆ ಎಲ್ಲಿತ್ತು ?
ತಾನು ತಿಳಿದವಳು. ಹೇಗಾರರೂ ಬುದ್ದಿವಂತೆಕೆಯಿಂದಲೇ ಈ ಅಪಾಯದಿಂದ ಪಾರಾಗಬೇಕು. ತನ್ನ ಶೀಲ ಉಳಿಸಿಕೊಳ್ಳಬೇಕು, ಹೇಗೆ, ಹೇಗೆ ? ತನ್ನನ್ನು ಬಳಸಿದ್ದವನ ಕೈಯನ್ನು ನಯವಾಗಿಯೇ ನೂಕಿದಳು. ಬಾರದ ನಗೆ ತಂದುಕೊಂಡಳು. ಸಂಚು ಹೊಡಲುನುವಾದಳು. ಆಗ ಬಾಗಿಲ ಬಳಿ ಸದ್ದಾಯಿತು.
“ ಸಾಬ್‌ ಸಿಗರೇಟ್.. ” ರಾಮೋಜಿ ನಿಂತಿದ್ದ !
“ ಅಲ್ಲಿಡು.......” ಟೀಪಾಯ್ ತೋರಿಸಿದ ರಾಕೇಶ.
ರಾಮೋಜಿ ಸಿಗರೇಟು ಪ್ಯಾಕು ಅಲ್ಲಿಟ್ಟು ಬೇಕೆಂತಲೇ, “ ಮತ್ತೇನಾದ್ರು.......” ತಲೆ ಕೆರೆದುಕೊಂಡ. ಮನೆಯೊಡತಿಯ ದೈನಾವಸ್ಥೆಗೆ ಒಳಗೆ ಮರುಗಿದ್ದ.
“ ಏನೂ ಬೇಡ...... ನೀನಿನ್ನು ಹೊರಡು...... ” ರಾಕೇಶ ಗುಡುಗಿದ್ದ. ಅಷ್ಟರಲ್ಲಿಯೇ, ಲಾವಣ್ಯ ಪಾದರಸದಂತೆ ಚುರುಕಾದಳು ಮಲಗುವ ಕೋಣೆ ಸೇರಿ, ಬಾಗಿಲು ಭದ್ರಪಡಿಸಿಕೊಂಡುಬಿಟ್ಟಳು.
ರಾಕೇಶ ಬಾಗಿಲ ಮೇಲೆ ಕುಟ್ಟಿದ. “ತೆಗೀತೀಯೋ.....ಬಾಗಿಲೊಡೆದು ಒಳಗೆ ಬರಲೋ..? ” ಬೆದರಿಕೆ ಹಾಕಿದ.
ಲಾವಣ್ಯ ಅವನ ಬೆದರಿಕೆಗೆ ಬಗ್ಗದಾದಳು.
ಅವನೇನಾದರೂ ಬಾಗಿಲೊಡೆದು ಒಳಗೆ ಬಂದರೆ, ಏನು ಮಾಡುವುದು ಎಂಬ ಭೀತಿಯೆ ಕಾಡುತ್ತಿತ್ತು, ‘ಹಾಗೇನಾದರೂ ಮಾಡಿದರೆ ರಾಮೋಜಿ ಬಂದು ಸಹಾಯ ಮಾಡದಿರಲಾರ ’ ಅಂದುಕೊಂಡಳು. ಅವಳಿಗೂ ಎಲ್ಲಿಲ್ಲದ ಭಂಡ ಧೈರ್ಯ “ ಥೂ ಹಾಳಾದವನು..... ಹೆಂಡತಿಯನ್ನು ಬಿಟ್ಟು ಹೋದವನು ಹೋದ. ಜತೆಗೆ ಕಾಯಲಿಕ್ಕೆ ವಾಚ್‌ಮನ್‌ನನ್ನೂ ಇಟ್ಟು ಹೋಗಿದ್ದಾನಲ್ಲ........ ಮುಠ್ಠಾಳ ...... ! ”ನಿಂತಲ್ಲಿ ನಿಲ್ಲದೆ ಹಪಹಪಿಸಿದ ರಾಕೇಶ . ಈಗ ಆತುರ ಪಟ್ಟರೆ ಆಗಲಾರದು ಅನ್ನಿಸಿತೇನೊ ! ಮತ್ತೇನೋ ಗಲಾಟೆ . ರಂಪಕ್ಕೆ ಹೋಗದೇ ಹಾಲ್‌ನಲ್ಲಿದ್ದ ಸೋಫಾದ ಮೇಲೆ ಬಿದ್ದುಕೊಂಡ. ಜೋರಾಗಿ ಸಿಗರೇಟಿನ ‘ದಂ ’ ಎಳೆಯುತ್ತಿದ್ದವನು, ಕುಡಿದು ಮತ್ತು ಏರುತ್ತಿದ್ದುದ್ದರಿಂದ ಹಾಗೇ ನಿದ್ರೆ ಹೋಗಿದ್ದ.
ಬೆಳಗಾಗುವುದನ್ನೇ ಕಾದಿದ್ದಳು ಲಾವಣ್ಯ. ರಾತ್ರಿಯೆಲ್ಲ ನಿದ್ರೆ ಇಲ್ಲದೆ ಹಾಸಿಗೆಯಲ್ಲಿ ಹೊರಳಿದ್ದೆ ಆಗಿತ್ತು. ತನ್ನ ಅಸಹಾಯಕತೆಗೆ ದುಂಖ ಬಂದರೆ, ಕ್ರೌರ್ಯಕ್ಕೆ ಕ್ರೋಧ ಉಕ್ಕೇರುತ್ತಿತ್ತು. ‘ ಈಗ ಏನು ಮಾಡಲಿ ? ಹೇಗೆ ಈ ಬಂಗಲೆಯಿಂದ ಹೊರಬೀಳಲಿ ? ’ ಇರುಳನ್ನು ಚಿಂತಿಸುತ್ತಲೇ ಕಳೆದಳು.
ಸೂರ್ಯ ಕಿರಣಗಳು ಕಿಟಕಿಯಿಂದ ಪ್ರವೇಶಿಸಿದಾಗ ಬೆಳಗಿನ ಎಂಟು ಗಂಟೆಯಾಗಿರಬೇಕು. ಹಾಲು, ದಿನಪತ್ರಿಕೆ ಬಂದಿರಬಹುದು. ಆಗಲೆ ಅಡುಗೆಯ ಚಿನ್ನಮ್ಮ ಬಂದು ತನ್ನ ಕೆಲಸ ಆರಂಬಿಸಿದ್ದಾಳೆ. ಪಾತ್ರೆ ಪಡಗಗಳ ಶಬ್ಧ ಕೇಳಬರುತ್ತಿತ್ತು.
“ ಅಮ್ಮಾವ್ರೆ ....... ಕಾಫಿ ರೆಡಿ..... ಬಾಗಿಲು ತೆಗೀತೀರ...? ” ಕೇಳಿದಳು.
“ ಹೌದು, ಅವಳದೇ ದೊಡ್ಡ ದನಿ ! ” ನಿಟ್ಟುಸಿರಿದಳು ಲಾವಣ್ಯ. ನೈಟಿ ಸರಿಪಡಿಸಿಕೊಂಡು ಹಾಸಿಗೆಯಿಂದ ಎದ್ದವಳೇ ಬಾಗಿಲು ತೆರೆದಳು. ಕೆಲಸದಾಕೆ ಕಾಫಿ ತಂದು ಬೆಡ್ ಪಕ್ಕದ ಮೇಲಿನ ಸ್ಟೂಲಿನ ಮೇಲಿನ, “ ಗೆಸ್ಟ್‌ಗೆ ಕಾಫಿ ಕೊಟ್ಟೆಯಾ ...... ? ” ಕೇಳಿದಳು ಅಸಹನೆಯಿಂದಲೇ. ‘ ಇಲ್ಲ ಅಮ್ಮಾವ್ರೆ, ಯಜಮಾನರ ಜೊತೆ ವಾಕಿಂಗ್‌ ಹೋಗಿದ್ದಾರೆ. ’
‘ಸಧ್ಯ ಈ ಗಂಡ ಅನ್ನಿಸಿಕೊಂಡವನು ಬೆಳಿಗ್ಗೆಗೆ ಮುಂಚೇನೆ ಬಂದ್ಬಿಟ್ಟಿದ್ದಾನಲ್ಲ ! ’ ಇನ್ನೊಂದು ಏದುಸಿರು ಹೊರಚೆಲ್ಲಿದಳು.
ಕಾಫಿ ಕುಡಿದಳು. “ ನೀನಿನ್ನು ಟಿಫಿನ್‌ಗೆ ರೆಡಿ ಮಾಡು, ಸ್ನಾನ ಮಾಡಿ ಬರ್ತೀನಿ ” ಎಂದಳು.
ಪುನಃ ಕೋಣೆಯ ಬಾಗಿಲು ಹಾಕಿಕೊಂಡಳು. ಅಟ್ಯಾಚ್ಡ್‌ ಬಾತ್ ರೂಂ ಹೊಕ್ಕಳು. ಗೀಸರ್ ಇದ್ದರೂ ಬಿಸಿ ನೀರು ಬೇಡವಾಗಿತ್ತು, ಶವರ್‌ ಗೆ ತಲೆಕೊಟ್ಟು ತಣ್ಣೀರಿನಲ್ಲಿ ಮೀಯಲಾರಂಬಿಸಿದಳು. ಜುಳು ಜುಳು ಹರಿವ ನೀರು ! ಕೊರಳಿಂದ ಎದೆಯ ಕಣಿವೆಯಲ್ಲಿಳಿದು ನಾಭಿಯಿಂದಲೂ ಕೆಳಗಿಳಿಯುತ್ತಿದ್ದಂತೆ ‘ ಹಾಯ್ ’ ಎನಿಸಿತು ಜೀವಕ್ಕೆ. ರೂಢಿಯಂತೆ ಕನ್ನಡಿಯ ಮುಂದೆ ಮೈ ಒರೆಸಿಕೊಳ್ಳುತ್ತಾ ನಿಂತಾಗ ತನ್ನ ದೈಹಿಕ ಸೊಗಸೇ ತನಗೆ ಶತ್ರುವೇನೋ ಎನ್ನಿಸದಿರಲಿಲ್ಲ. ಸುಂದರಳಾದ ಹೆಣ್ಣು ಬುದ್ದಿವಂತಳೂ ಆದರೆ ಜಗತ್ತನ್ನೇ ಜಯಿಸಬಲ್ಲಳು. ಆದರೇನು, ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಶೀಲ ರಕ್ಷಣೆ ಮಾತ್ರ ಸುಲಭ ಸಾಧ್ಯವೇನಿಲ್ಲ.
ಹೊರಗೆ ಗೇಟಿನ ಬಳಿ ಯಾರೋ ಮಾತನಾಡುತ್ತ ಬರುವಂತೆ ಭಾಸವಾಯಿತು. ‘ ಇನ್ಯಾರು ? ಅವರಿಬ್ಬರೂ ಬಂದಿರಬೇಕು ’ ಆದಷ್ಟೂ ತನ್ನ ದುಗುಡವನ್ನೂ ನಿಯಂತ್ರಿಸಿಕೊಂಡಳು. ಒಂದು ನಿರ್ಧಾರಕ್ಕೆ ಬಂದಿದ್ದಳು. ಸಡಿಲವಾಗಿರುವ, ಪಾರದರ್ಶಕವಲ್ಲದ ತಿಳಿ ನೀಲ ಬಣ್ಣದ ಮ್ಯಾಕ್ಸಿಯನ್ನು ತೊಟ್ಟು ಕೋಣೆಯಿಂದ ಹೊರಬಂದಳು.
ಹೆಂಡತಿಯ ಮುಖ ಕಾಣುತ್ತಿದ್ದಂತೆ ಮದನ್ ಕುಮಾರ್ ಹಾವಿನಂತೆ ಭುಸುಗುಟ್ಟಿದ್ದ. ಅವನ ಪ್ರಿಯ ಮಿತ್ರ ರಾಕೇಶ ಲಾವಣ್ಯಳನ್ನೇ ಇಡಿಯಾಗಿ ನುಂಗಿಬಿಡುವಂತೆ ದುರುಗುಟ್ಟಿದ್ದ. ಅವಳ ಮೈಮಾಟ ಮರೆಯಾಗಿಸುವಂತೆ ಇದ್ದ ಸಾದಾ ಉಡುಪು ಅವನನ್ನು ತೀವ್ರ ನಿರಾಶೆಗೊಳಿಸಿತ್ತು. ರಾತ್ರಿ ಮುಖ ಭಂಗವಾದರೆ, ಈಗ ಅವಳ ನೋಟದಲ್ಲಿ ಕೆಂಡಗಳು.
ಕೆಲಸದಾಕೆ ಚಿನ್ನಮ್ಮ ಬೆಳಗಿನ ತಿಂಡಿಗೆ ದೋಸೆ, ಚಟ್ನಿ ರೆಡಿ ಮಾಡಿದ್ದಳು. ಲಾವಣ್ಯ ಡೈನಿಂಗ್ ಟೇಬಲ್ ಎದುರಿಗೆ ಗಂಡನ ಜತೆ ಕುಳಿತರೂ ಅಪರೂಪದ ಮಹಾನ್ ಅತಿಥಿ ರಾಕೇಶ್‌ನನ್ನು ನೋಡುತ್ತಿದ್ದಾಳೆ. ದೋಸೆ, ಚಟ್ನಿ ಗಂಟಲಲ್ಲಿ ಇಳಿಯದಾಯ್ತು. ತಟ್ಟೆಯಲ್ಲಿ ಕೈ ತೊಳೆದವಳೇ ಎದ್ದು ಬಿಟ್ಟಳು.

“ನಿನ್ನ ಮಿಸೆಸ್‌ ತುಂಬಾ ಬ್ಯೂಟಿ. ಕೋಪ ಮಾಡಿಕೊಂಡ್ರೆ ಇನ್ನೂ ವಂಡರ್‌ಪುಲ್‌. ಆದರೆ ನಮ್ಮ ಹೈ ಸೊಸೈಟಿ ರೀತಿ ನೀತಿಗೆ ಬಹಳ ಅಡ್ಜೆಸ್ಟ್ ಆಗ್ಬೇಕಮ್ಮಾ..... ” ಪೆಟ್ಟು ತಿಂದ ಹುಲಿಯಂತಾಗಿದ್ದ ರಾಕೇಶ ಹೇಳಿದ.
“ಹ್ಞೂಂ ........ ಆಗ್ತಾಳೆ. ಆಗಲೇಬೇಕು. ಇನ್ನೋಂದ್ಸೊಲ್ಪದಿವ್ಸ. ಸರಿ ಮಾಡಿಸ್ತೀನಿ... ” ಮದನ್ ಕುಮಾರ್ ಗುನುಗಿದ್ದ.
“ ಇನ್ನೋಮ್ಮೆ ಬರ್ತೀನಮ್ಮಾ ನಾನು ” ರಾಕೇಶ ಹೊರಟವನು ಇವಳನ್ನೆ ಹರಿದು ಮುಕ್ಕುವಂತೆ ಕೆಕ್ಕರಿಸಿ ನೋಡಿದ.
“ ಆಗಲಿ, ಬಾ ಬಾ ..... ಯು ಆರ್ ವೆಲ್‌ಕಮ್ ! ” ಮದನ್‌ನ ಉವಾಚ.
‘ ಮತ್ಯಾಕೆ ಬರ್ತಾನೋ ಪಾಪಿ ! ’ ಅಂದುಕೊಂಡಳು ಲಾವಣ್ಯ, ಸೆಟೆದದ್ದು ತನ್ನ ಕೋಣೆಗೆ ನಡೆದಳು. ಪುನಃ ಹಾಸಿಗೆಯಲ್ಲಿ ಹೊರಳಿದಳು. ಅವಳಿಗೇನೋ ಸೇರದಾಗಿತ್ತು. ಮದನ್ ಕುಮಾರ್ ಮರಳಿ ಬಂಗಲೆಗೆ ಬಂದಾಗ ಬೆಳಗಿನ ಹನ್ನೋಂದುವರೆ ಗಂಟೆ. ಲಾವಣ್ಯ ಆ ಮೊದಲೇ ನಿರ್ಧರಿಸದ್ದಂತೆ ಒಂದು ಸಾಧಾರಣ ಬಿಳಿ ಸೀರೆಯುಟ್ಟು ಕೈಯಲೊಂದು ಸೂಟ್‌ಕೇಸ್ ಹಿಡಿದು ಆ ಬಂಗಲೆಯಿಂದ ಹೊರಟೇ ಬಿಟ್ಟಳು. ತಾನು ಒಳ್ಳೇ ವಂಶಜನೆಂದೂ, ತನ್ನ ತಂದೆ ತಾಯಿಗಳು ಗೌರವಸ್ಥರೆಂದು, ತಂದೆ ಹುಬ್ಬಳಿಯಲ್ಲಿ ಹೆಸರಾಂತ ಉದ್ಯಮಿಗಳಾಗಿದ್ದರೆಂದೂ, ಅನಂತರ ಪಾರ್ಟನರ್ಸ್ ಮೋಸ ಮಾಡಿದ್ದರಿಂದ ಅದೇ ವ್ಯಥೆಯಾಗಿ ಸ್ವರ್ಗಸ್ಥರಾದರೆಂದೂ, ಅನಂತರ ತಾಯಿಯೂ ತೀರಿಕೊಂಡು ಒಬ್ಬನೇ ಮಗನಾದ ನಾನು ತಬ್ಬಲಿಯಾದೆನೆಂದೂ, ಬೆಂಗಳೂರಿಗೆ ಬರಿಗೈಲಿ ಬಂದವನು ಸ್ವತಃ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿರುವೆನೆಂದು, ಹೇಳಿಕೊಂಡಿದ್ದ. ಮದನ್ ಕುಮಾರ್ ನ ಬೊಗಳೆ, ಭಂಡತನಗಳೆಲ್ಲ ಬಯಲಾಗಿದ್ದವು. ಅವನ ವ್ಯವಹಾರಗಳೆಲ್ಲ ಕುಟಿಲ ಕಪಟವೆಂದೇ ತಿಳಿದುಹೋಗಿತ್ತು.
“ ನಾನು ಹೋಗ್ತಾ ಇದ್ದೀನಿ.......” ಲಾವಣ್ಯ ಅವನನ್ನು ಉದ್ದೇಶಿಸಿ ಸ್ಪಷ್ಟವಾಗಿಯೇ ಹೇಳಿದಳು.
“ಎಲ್ಲಿಗೆ ? ” ಅಬ್ಬರಿಸಿದ ಮದನ್‌ಕುಮಾರ್‌. ‘ ನಾನೋಬ್ಬ ಸುಂದರ ಪುರುಷ, ನಾನು ಮನಸ್ಸು ಮಾಡಿದರೆ ಏನನ್ನು ಪಡೆಯತ್ತೇನೆ. ಏನನ್ನು ಅದಕ್ಕಾಗಿಯೆ ಮಾಡುತ್ತೇನೆ. ಸ್ವರ್ಗಸುಖ ನನ್ನ ಪಾದದ ಬಳಿಯೆ ’ ಎಂಬ ಕೊಬ್ಬು ! “ ನೀವು ಮನಸ್ಸು ಮಾಡಿದರೆ ಎಲ್ಲಿಗೆ ಅಂದ್ರೆ ಅಲ್ಲಿಗೆ ಹೋಗ್ಬಹುದು ಅಲ್ಲಾ .......”
“ ಅದಕ್ಕೆ ... ? ”
“ ನೀವು ನನ್ನನ್ನು ಏನಾದರೂ ಮಾಡ್ಬಹುದು...... ಅದಕ್ಕೆ ನಾನು ಮನೆಬಿಟ್ಟು ಹೋಗ್ತಾ ಇದೀನಿ . ” ಹೊರಡಲನುವಾದಳು.
“ ನಿಲ್ಲು ... ”
ತಿರುಗಿ ನೋಡಿದಳು, ತೀಕ್ಷ್ಣವಾಗಿ. “ ನೀನು ಹೊರಗೆ ಕಾಲಿಟ್ಟರೆ ಆಯ್ತು. ಈ ಮನೆ ಬಾಗಿಲು ನಿನಗೆ ಶಾಶ್ವತವಾಗಿ ಮುಚ್ಚಿದ ಹಾಗೇ... ”
“ ಓಹ್ ! ಅಷ್ಟೇ ತಾನೇ..... ನಿನ್ನಂಥ ಗಂಡಸಿಗೆ ಹೆಂಡತಿಯ ಅವಶ್ಯಕತೆ ಇಲ್ಲವಲ್ಲ. ಹೆಣ್ಣು ಬೇಕು ಅಷ್ಟೇ.... ” ವ್ಯಂಗವಾಗಿ ಹೇಳಿದಳು.
“ ಯೋಚ್ನೆ ಮಾಡು ಗಂಡನನ್ನು ಬಿಟ್ಟು ಬಂದೋಳಂತ ಸಮಾಜ ಛೀ ಥೂ ಅನ್ನುತ್ತೆ. ಸಮಾಜದ ಈ ದೃಷ್ಟಿಗೆ, ಹೆಣ್ಣಿನ ಈ ಅಸಹಾಯಕತೆ, ನೀಚರ ಕೆಲಸವನ್ನು ಕಂಡು ಕಾಣದಂತೆ ಕಣ್ಮುಚ್ಚಿಕೊಂಡಿರೋ ಸಮಾಜಕ್ಕೆ, ನಾನೇಕೆ ಹೆದರಲಿ? ”
“ ಹೋಗು ........ನಿಲ್ಲಬೇಡ, ಆದರೆ, ನಿನಗೆ ಎಲ್ಲೂ ನಿಲ್ಲಗೊಡೊದಿಲ್ಲ ಈ ಸಮಾಜ. ಅದೆಷ್ಟು ಘೋರ ಎಂದು ನಿನಗೆ ಗೊತ್ತಾಗುತ್ತೆ...”
“ ನಿನ್ನಂಥ ರಾಕ್ಷರನ್ನು ಕ್ರೂರ ಇರಲಿಕ್ಕಿಲ್ಲ. ಅದು ತುಂಬ ವಿಶಾಲವಾಗಿದೆ.....” ಕೊರಳೂ ಕೊಂಕಿಸಿ ದನಿ ಏರಿಸಿದ್ದಳು. ಸೊಂಟಕ್ಕೆ ಸೆರಗು ಬಿಗಿದು ಸರಕ್ಕನೆ ತಿರುಗಿ ಹೊಸ್ತಿಲು ದಾಟಿದಳು ಲಾವಣ್ಯ.
ಪ್ರಪಂಚ ವಿಶಾಲವಾಗಿದೆ ನಿಜ, ತನ್ನಂಥ ಯೌವನ ಭರಿತ ಹೆಣ್ಣಿನ ಬಯಕೆ, ಅವಳ ಬದುಕಿನ ಆಸೆ, ಅಕಾಂಕ್ಷೆಗಳನ್ನು ಈಡೇರಿಸುವಂಥ ಸಹೃದಯ ಒಬ್ಬ ತನಗಾಗಿ ಎಲ್ಲಿರುವನೋ.... ತನ್ನ ವಿಧಿ ಎಂಬುದು ಹೇಗಿದೆಯೋ..... ಲಾವಣ್ಯ ಕಂಗಾಲಾಗಿದ್ದಾಳೆ.
ಅಭಿರಾಮ ನಾದಿನಿಯ ಬದುಕಿಗೊಂದು ದಾರಿ ಕಾಣಿಸುವ ಸನ್ನಾಹದಲ್ಲಿದ್ದ. ಬಹಳ, ದುಡಿಮೆ ಮಾಡಿದರೂ ಹೆಣ್ಣಿಗೆ ಒಂಟಿ ಬದುಕು ಆರ್ಥಿಕ ಸ್ವಾತಂತ್ರದ ಪ್ರಾಮುಖ್ಯತೆಯೇ ಹತ್ತಿರದ ಸಂಬಂದಿಕರೊಡನೆ ಬದುಕುವುದೂ ಲಾವಣ್ಯಳಂಥ ಸ್ವಾಭಿಮಾನಿ ಹೆಣ್ಣಿಗೆ ಮದುವೆ ಇಲ್ಲದೆಯೂ ಎಷ್ಟೋ ಹೆಣ್ಣುಗಳುಒಂಟಿ ಬದುಕು ಸಾಗಿಸುತ್ತಿಲ್ಲವೇನು ! ತಾನು ಗಂಡಿನಿಂದ ಸುಖಪಟ್ಟಿದ್ದು ಸಾಕು. ತಾನು ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಹಠವೇ ಕಾಡುತ್ತಿತ್ತು. ಆದರೇನು ! ಒಂಟಿ ಹೆಣ್ಣಾಗಿ ಮಧ್ಯಮ ವರ್ಗದ ಬಡ ಕುಟುಂಬದಿಂದ ಬಂದ ತಾನು ನಡೆಯುವ ದಾರಿಯಲ್ಲಿ ಏನೆಲ್ಲ ಕಲ್ಲು ಮುಳ್ಳೂಗಳು, ಕಾಕದೃಷ್ಟಿಯ ಗಂಡಸರ ವರ್ತನೆಗಳು! ಅವರು ತನ್ನಂಥ ಚೆಲುವೆಯರನ್ನು ತಮ್ಮ ಕಪಿಮುಷ್ಢಿಯಲ್ಲಿ ಸಿಲುಕಿಕೊಂಡು ಹಿಂಸಿಸುವ ಉದಾಹರಣೆಗಳೆಷ್ಟೋ ಇವೆ !
“ ಲಾವಣ್ಯ, ಹೆಣ್ಣಿಗೆ ಮದುವೆಯಿಂದಲೆ ಸಾಮಾಜಿಕ ಸ್ಥಾನಮಾನ ನೋಡು, ನಿನಗೆ ಆದರೆಆಶ್ರಯಬೇಕು. ನೀನೇಕೆ ಮರು ಮದುವೆಗೆ ಮನಸ್ಸು ಮಾಡಬಾರದು? ” ಅಭಿರಾಮ ನಾದಿನಿಯನ್ನು ಒತ್ತಾಯಿಸಿದ್ದ.
ಲಾವಣ್ಯ ಶುಷ್ಕ ನಗೆ ನಕ್ಕಳು.
“ ಮೊದಲು ನನಗೊಂದು ಕೆಲಸ ಕೊಡಿಸಿ ಬಾವಾ....”
ಅಂದಳು ಖಾರವಾಗಿಯೇ. ಮದುವೆಯ ಬಂಧನ ಅವಳಿಗೆ ಸಿಹಿ ಎನ್ನಿಸಿರಲಿಲ್ಲ. ಗಂಡಿನ ಅಂಕೆ, ಆಜ್ಞೆಗಳೊಳಗೆ ಜೀವಿಸುವ ರೀತಿಯೂ ಅವಳಿಗೆ ಹಿಡಿಸಿರಲಿಲ್ಲ. ಅದೇನೋ ಅವಳಲ್ಲಿ ಛಲ, ಸ್ವೇಚ್ಛೆಯಿಂದ ಬದುಕಬೇಕೆಂಬ ಹಂಬಲ. “ ಹೆಣ್ಣಗೆ ಈ ಒಂಟಿತನ, ಹಠಮಾರಿತನ ಒಳ್ಳೆಯದಲ್ಲ ಕಣೇ ” ಸಹನಾ ಸಹ ಹೇಳಿದಳು.
“ ಅಕ್ಕಾ ನನ್ನನ್ನು ನನ್ನಷ್ಟಕ್ಕೆ ಒಂಟಿಯಾಗಿ ಬಿಟ್ಟು ಬಿಡ್ತಿಯಾ ..... ? ” ಎಂದಿದ್ದಳು ಲಾವಣ್ಯ.
“ ಏನೋಮ್ಮ..... ನಾನು ನಿನ್ನಷ್ಟು ಬುದ್ದಿವಂತೆಯಲ್ಲ.... ! ” ಸಹನಾ ಸುಮ್ಮನಾಗಿಬಿಟ್ಟಳು.
“ ಏನ್ ಬಾವಾ, ಚಿಂತಿಸುತ್ತಲೇ ಇದೀರ.... ? ” ಲಾವಣ್ಯ ಹಗುರವಾಗಿಯೇ ಕೇಳಿದಳು.
“ ಇಲ್ಲ ಲಾವಣ್ಯ . ಇದು ಚಿಂತಿಸುವ ವಿಷಯವೇ, ಯಾಕೆಂದ್ರೆ, ನಿಂಗೆ ಈವತ್ತು ಗೊತ್ತಾಗುವುದಿಲ್ಲ, ಮುಂದೊಂದು ದಿನ ನೀನು ಪಶ್ಚಾತಾಪ ಪಡುವಂತಾಗಬಾರದು. ”
“ ನನ್ನ ಮೇಲೆ ನನಗೆ ಭರವಸೆ ಇದೆ ಬಾವಾ. ”
“ ಅದೇ, ನಿನ್ನ ಸೌಂದರ್ಯದ ಮೇಲೆ ನೀನು ಭರವಸೆ ಇಟ್ಟು ಬದುಕೋದು ತೀರ ಕಷ್ಟ.........”
“ ಅದೇನ್ ಕಷ್ಟಾ....... ನನ್ನ ಸೌಂದರ್ಯ ನನ್ನನ್ನೇ ಕೊಲ್ಲುತ್ತದೇಂತಾನಾ... ಸ್ವಲ್ಪ ವಿವರಿಸಿ ಹೇಳ್ತೀರಾ..... ಹೇಗೇಂತ....” ಅಂದದ ಎದೆಗಾತಿ ಹೇಳಿದಳು.
“ ಇಲ್ಲ ಲಾವಣ್ಯ, ಈಗ ನಾನೇನು ಹೇಳಲಾರೆ. ಈ ಸಾಮಾಜಿಕ ವ್ಯವಸ್ಥಯಲ್ಲಿ ಹೆಣ್ಣಿನ ಕೆಲವೊಂದು ಸಮಸ್ಯೆಗೆ ಉತ್ತರ ಸಿಗಲಾರದಲ್ಲ... ! ” ಅಭಿರಾಮನಿಗೆ ನಾದಿನಿಯ ಭವಿಷ್ಯವನ್ನು ಊಹಿಸಿದರೇನೆ ಭಯವೆನಿಸುತ್ತಿತ್ತು.
“ಬಾವಾ, ನೀವು ಚಿತ್ರಕಲಾವಿದರೂ ಅಲ್ಲವೆ..... ನೀವು ಹೆಣ್ಣಿನ ಸೌಂದರ್ಯವನ್ನು ಚರ್ಚೆ ಮಾಡಬಲ್ಲಿರಿ.... ಹೇಳಿ. ”
“ ಇಲ್ಲ, ನನಗೆ ಆಶಕ್ತಿ ಇಲ್ಲ. ಹೆಚ್ಚೆಂದರೆ ನಿನ್ನಂಥ ಸುಂದರ ಹೆಣ್ಣಿನ ಸೌಂದರ್ಯವನ್ನು ಕುಂಚದಲ್ಲಿ ಸೆರೆಹಿಡಿಯಬಲ್ಲೆ.........”
“ ಅಂದಹಾಗೆ, ಬಾವಾ, ನೀವು ನನ್ನ ಸುಂದರೆ ಭಾವ ಚಿತ್ರವನ್ನು ಯಾಕೆ ಬರೆಯಬಾರದು ? ”
“ ಅದಕ್ಕೂ, ಒಂದು ಸಂಧರ್ಬ ಕೂಡಿ ಬರ್ಬೇಕು. ಸಮಯಸ್ಪೂರ್ತಿ ಸಿಗಬೇಕು ಲಾವಣ್ಯ. ಅದಿರಲಿ, ನಮ್ಮ ಮಾತು ಎಲ್ಲಿಂದ ಎಲ್ಲಿಗೋ ಹೋಯಿತಲ್ಲ. ನಾನು ಮೊದಲು ನಿನಗೊಂದು ಕೆಲ್ಸ ಹುಡುಕಿಕೊಡಬೇಕು ತಾನೇ ? ನಾಳೆ ಸಂಜೆ ನನ್ನ ಜೊತೆ ಹೊರಡು. ನಿನ್ನನ್ನು ಒಂದು ಕಂಪ್ಯೂಟರ್ ಕಂಪೆನಿಗೆ ಕರಕೊಂಡು ಹೋಗ್ತೀನಿ. ” ಅಭಿರಾಮ ಹೇಳಿದಾಗ, ಲಾವಣ್ಯ ಳ ಮುಖ ಅರಳಿತ್ತು.
ಅಭಿರಾಮ ತಂದೆಗೆ ಒಬ್ಬನೇ ಮಗ, ಚಿಕ್ಕಂದಿನಿಂದಲೇ ತುಂಬ ಕಷ್ಟಪಟ್ಟವನು. ಎಮ್.ಎಸ್.ಸಿ. ಎಮ್.ಬಿ.ಎ. ಓದಿ ಇಂದಿನ ಸ್ಥಿತಿಗೆ ತಲುಪಿದವನು. ಅವನ ತಂದೆ ವೆಂಕಟಪ್ಪನವರು ತಮ್ಮ ಹೆಂಡತಿ ತೀರಿಕೊಂಡಾಗ ತಾಯಿ ಇಲ್ಲದ ಈ ತಬ್ಬಲಿ ಮಗನನ್ನು ಚೆನ್ನಾಗಿ ಬೆಳೆಸಿದರು. ತಾವು ಮರುಮದುವೆ ಮಾಡಿಕೊಳ್ಳಲು ಇಚ್ಛಸಿದೆ ಅಭಿರಾಮನೇ ತಮ್ಮ ಸರ್ವಸ್ವವೆಂದು ಬಗದರು.ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದ ಅವರುಪ್ರಾಮಾಣಿಕವಾಗಿಯೇ ದುಡಿದರು. ರೈಟರ್ ಆದ ಮೇಲೆ ಚಿಕ್ಕಮಾವಳ್ಳಿಯಲ್ಲಿ ಮನೆ ಕಟ್ಟಿಸಿದರು. ಅವರು ತಮ್ಮ ಅರವತ್ತನೇ ವಯಸ್ಸಿನಲ್ಲಿ ಹೃದಯಘಾತದಿಂದ ತೀರಿಕೊಂಡರು. ಅಭಿರಾಮ ತಾನು ಈ ಜೀವನದಲ್ಲಿ ಬೆಳೆದು ಮುಂದೆ ಬಂದರೂ , ಹಿಂದಿನ ಕಷ್ಟದ ದಾರಿಯನ್ನು ಮರೆತಿರಲಿಲ್ಲ. ಇನ್ನೋಬ್ಬರ ಕಷ್ಟಕ್ಕೆ ಮರುಗುವ ಮನಸ್ಸೂ ಅವನಿಗಿದೆ. ಇನ್ನೂ ನಾದಿನಿ ಲಾವಣ್ಯಳ ಕಷ್ಟಕ್ಕೆ ಸ್ಪಂದಿಸದಿರುವನೇ ? ಲಾವಣ್ಯ ತಮಗೇನೂ ಭಾರವೆನಿಸುವುದಿಲ್ಲವಲ್ಲ. ಅವಳ ಮನಸ್ಸಿಗೆ ಅವಳು ಬಾರವಾಗಬಾರದಷ್ಟೇ. ಮಾನಸಿಕವಾಗಿ ತೊಳಲಾಡುವ ಒಂಟಿ ಹೆಣ್ಣಿಗೆ ನೌಕರಿಯ ಸ್ಥಿರತೆಯನ್ನು ತಂದುಕೊಡುತ್ತದೆ.
ಅಭಿರಾಮ ಅವಳಿಗೆ ಹೇಳಿದಂತೆಯೇ ಮಾರನೆಯ ದಿನ ಬ್ರಿಗೇಡ್ ರಸ್ತೆಯಲ್ಲಿನ ದಾಸ್ ಕಂಪ್ಯೂಟರ್ ಹೌಸ್ ಗೆ ಕರೆದುಕೊಂಡು ಹೋಗಿದ್ದ.
“ ಬನ್ನಿ, ನಿಮ್ಮ ಬಗ್ಗೆ ನಿಮ್ಮ ಫ್ಯಾಕ್ಟರಿಯವರೇ ಆದ ಪ್ರಸಾದ್ ಎಲ್ಲಾ ಹೇಳಿದಾರೆ. ನಮ್ಮಲ್ಲಿ ಕೆಲ್ಸ ಏನೋ ಇದೆ. ಸಂಬಳ ಕಡಿಮೆ ” ಅಂದರು ಇವರನ್ನು ನೋಡುತ್ತಿದ್ದಂತೆ ಆ ಸಂಸ್ಥೆಯ ಮಾಲೀಕರಾದ ಕರುಣಾಕರನ್. ಅಭಿರಾಮ ತಾನು ತನ್ನ ಸಹೋದ್ಯೋಗಿ ಪ್ರಸಾದ್‌ಗೆ ಹೇಳಿದ್ದ. ನಾದಿನಿಯ ಕೆಲಸದ ಬಗ್ಗೆ. ಅದೇನೋ ವಿಫಲವಾಗಿರಲಿಲ್ಲ. ಕರುಣಾಕರನ್ ಸುಮಾರು ಐವತ್ತರ ಪ್ರಾಯದ ಪ್ರಬುದ್ದ ಮನುಷ್ಯ. ಮಾತಿನಲ್ಲಿ ಬಿಗುವಿದ್ದರೂ ಮೊದಲ ನೋಟಕ್ಕೆ ಸೆಳೆಯುವ ಸಹೃದಯಿ ವ್ಯಕ್ತಿಯಾತ. ಅಭಿರಾಮ, ‘ ಪರವಾಗಿಲ್ಲ, ಇವರ ಜತೆ ಲಾವಣ್ಯ ಹೊಂದಿಕೊಂಡು ಕೆಲಸ ಮಾಡ್ತಾಳೆ ’ ಅಂದುಕೊಂಡ. ಆದರೆ, ಈ ಸಂಸ್ಥೆಗೆ ಮ್ಯಾನೆಜರ್ ಒಬ್ಬ ಇದ್ದಾನೆ. ಆತನದೇ ಎಲ್ಲ ಕಾರುಬಾರು ಎಂಬುದೇನೋ ಆ ಕ್ಷಣಕ್ಕೆ ತಿಳಿಯಲಿಲ್ಲ. ಕರುಣಾಕರನ್ ಲಾವಣ್ಯಳನ್ನು ಒಮ್ಮೆ ನೇರವಾಗಿ ದಿಟ್ಟಿಸಿದವರೆ, ನೋಡಮ್ಮ, ನಿನಗೆ ಒಳ್ಳೆಯ ರೂಪವಿದೆ.......... ನೀನು ಕಂಪ್ಯೂಟರ್ ಆಪರೇಟರ್ ಕಮ್ ರಿಸೆಪ್ಶನಿಷ್ಟ ಆಗಿಯೂ ಕೆಲಸ ಮಾಡಿದರೆ ನಮ್ಮ ಕಂಪೆನಿಗೆ ಹೆಚ್ಚಿನ ಲಾಭವಾದೀತು ಎಂದು ಅರ್ಥಪೂರ್ಣ ನಗೆ ನಕ್ಕರು.
ಲಾವಣ್ಯ ಅವರ ನೋಟಕ್ಕೆ ನಸು ನಾಚಿದಳು.
“ ಸಂಬಳ ಎಷ್ಟೋಂದು ನೀವು ಕೇಳಲಿಲ್ವೆ..... ? ಅವರೆಂದರು.”
“ನೀವೆ ಹೇಳಿಬಿಡಿ.....” ಅಭಿರಾಮನೆಂದ. “ ಈಗ ಒಂದು ಸಾವಿರ....... ನಿಮ್ಮ ಹುಡುಗಿಯ ಪರ್‌ಫಾರ್‌ಮೆನ್ಸ್ ನೋಡಿ ಹೆಚ್ಚಿಸೋಣ.......”
ಅಭಿರಾಮ ಆಗಬಹುದೇ ಎಂಬಂತೆ ಲಾವಣ್ಯಳ ಕಡೆ ನೋಡಿದ. ಲಾವಣ್ಯ ತಲೆಯಾಡಿಸಿದಳು.
ಅಷ್ಟೋತ್ತಿಗೆ ನೀಲಿ ಜೀನ್ಸ್ ಪ್ಯಾಂಟ್ ನಲ್ಲಿ ಕೆಂಪು ಷರ್ಟ್ ಇನ್ ಮಾಡಿದ್ದ ಯುವಕನೊಬ್ಬ ಅಂಗಡಿಯೊಳಗೆ ಧಾವಿಸಿ ಬಂದಿದ್ದ. ಅವನು ಛೇಂಬರ್ ಪ್ರವೇಶಿಸಿ ಕರುಣಾಕರನ್ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತ.
“ ನೋಡು ಲಾವಣ್ಯ, ಇವನು ನನ್ನ ಮಗ ಪ್ರಿಯಂಕರ್, ನಮ್ಮ ಸಂಸ್ಥೆಯ ಮ್ಯಾನೆಜರ್. ಇವನದ್ದೇ ಎಲ್ಲಾ ಜವಬ್ದಾರಿ. ನಾನು ಎಲ್ಲ ವಿಧದಲ್ಲೂ ರಿಟೈರ್ಡ್ ಮನುಷ್ಯ. ಇವನು ಹೇಳಿದಂತೆ ನಡೆಯೊದೆಲ್ಲ. ಈಗ ನಿಮ್ಮಂಥ ಯುವಕ ಯುವತಿಯರ ಕಾಲ ಅಲ್ಲವೇ ? ” ಕರುಣಾಕರನ್ ಮಗನತ್ತ ನೋಡಿ ನಾಟಕೀಯ ನಗೆ ನಕ್ಕರು. “ ನಿನಗೆ ಲೇಡಿ ಸೆಕ್ರೆಟರಿ ಬೇಕೂಂತ ಹೇಳಿದ್ದೆಯಲ್ಲ....... ನೋಡು, ಇವರು ಸ್ಮಾರ್ಟ್ ಲೇಡಿ ಲಾವಣ್ಯ..... ! ” ಎಂದರು.
ಪ್ರಿಯಂಕರ್ ತನ್ನ ಕುಡಿ ಮೀಸೆಯ ಅಂಚಿನಲ್ಲಿ ನಕ್ಕ.
ಲಾವಣ್ಯ ಏಕೋ ನಗಲೆತ್ನಿಸಿ ವಿಫಲಳಾದಳು.
ಅವಳ ಉಬ್ಬಿದೆದೆಯ ಮೇಲೆ ನೆಟ್ಟಿತ್ತು ಅವನ ದೃಷ್ಟಿ.
“ ನಾಳೆಯಿಂದಾನೇ ನೀವು ಕೆಲಸಕ್ಕೆ ಬರಬಹುದು ಲಾವಣ್ಯ. ಟೈಮಿಂಗ್ಸ್ ಬೆಳಿಗ್ಗೆ ಒಂಭತ್ತೂವರೆಯಿಂದ ಸಂಜೆ ಆರು. ” ಕಿರುನಗೆಯಲ್ಲಿ ಹೇಳಿದ ಪ್ರಿಯಂಕರ್ ತನ್ನ ನೋಟವನ್ನು ಬೇರೆಡೆಗೆ ಹೊರಳಿಸಿದ್ದ. ಅಭಿರಾಮ ಥ್ಯಾಂಕ್ಸ ಹೇಳಿದ್ದ. ಲಾವಣ್ಯ ಕೈ ಜೋಡಿಸಿದ್ದಳು.
ಆ ಸಂಸ್ಥೆಯ ಕಟ್ಟಡದ ಮೆಟ್ಟಿಲಿಳಿದು ಹೊರಬರುತ್ತಿದ್ದಂತೆ ಅಭಿರಾಮ ಹೇಳಿದ, “ ನೋಡಿದೆಯಾ ಲಾವಣ್ಯ. ನಿನ್ನ ರೂಪ, ಲಾವಣ್ಯಕ್ಕೆ ಮೊದಲ ಆದ್ಯತೆ .”
“ ಅದು ದುಡಿಯುವ ಹೆಣ್ಣಿಗೆ ಪ್ಲಸ್ ಪಾಯಿಂಟ್ ತಾನೇ...... ? ” ಮೋಹಕವಾಗಿ ನಕ್ಕಳು ಲಾವಣ್ಯ.
“ ಅದೇ ಇಂದಿನ ಮಾರ್ಕೆಟನಲ್ಲಿ ಫೇಲ್ಯೂರ್ ಪಾಯಿಂಟೂ ಆಗ ಬಹುದು ಅವಳಿಗೆ. ಹ್ಞಾಂ, ಸ್ವಲ್ಪ ಹುಶಾರಾಗಿರು ; ಅಪ್ಪಾಏನೋ ಒಳ್ಳೆಯ ಮನುಷ್ಯನೇ ಮಗನಲ್ಲೇನೋ ದೃಷ್ಟಿದೋಷವಿದ್ದೀತು.....”
“ ಹೋಗಿ ಬಾವಾ ನಂಗೇನೋ ಗಂಡಸರಿಗೆಲ್ಲ ಕಣ್ಣಲ್ಲೇ ದೋಷ ಅನ್ಸುತ್ತೇ......”
“ ಮತ್ತೆ ಹೆಂಗಸರಿಗೆ ಬೇರೆಲ್ಲಾದ್ರು ದೋಷ ಇರುತ್ತೇನೋ ! ” ಅಭಿರಾಮ ಅಣಕವಾಡಿದ.
“ ಓ ಬಾವಾ ನೀವು ಕೀಟಲೆ ಮಾಡುವುದರಲ್ಲಿ ಚತುರರು. ”
“ ಈಗಲೇ ಸರ್ಟಿಫಿಕೇಟ್ ಕೊಡ್ಬೇಡಾ........ ”
“ ಮತ್ತೇ........ ಬಾವ........ ನಂಗೆ ಈ ಕೆಲ್ಸ ಆಯಿತಲ್ಲ ಯಾವುದಾದ್ರೂ ಒಳ್ಳೆ ಲೇಡಿಸ್ ಹಾಸ್ಟೆಲ್ ಸೇರಿಕೊಳ್ತಿನಿ. ನೀವು ಬೇಡ ಅನ್ಬಾರ್ದೂ........ ”
“ ಯಾಕೆ ಅಷ್ಟು ಅವಸರ ? ”
“ ಅವಸರ ಅಂತ ಅಲ್ಲ .......”
“ ಮತ್ತೇ ಈ ಬಾವನ ಕಣ್ಣಲ್ಲೂ ನಿನಗೆ ದೃಷ್ಟಿ ದೋಷ ಕಾಣಿಸುತ್ತೇನೂ.......”
“ ಇಲ್ಲ...... ಬಾವಾ........ ” ದನಿ ನಡುಗಿತು.
“ ನೀನೇ ಹೇಳಿದೆಯಲ್ಲ ಗಂಡಸರಿಗೆಲ್ಲ ಕಣ್ಣಲ್ಲೇಂತ....... ” ಮೆಲುವಾಗಿ ಹೇಳಿದ.
“ ಮತ್ತೇ....... ಮತ್ತೇ .....ನೀವೋಬ್ಬರು ಎಕ್ಸ್‌ಸೆಪ್‌ಶನ್, ಅದಿಕ್ಕೇ......... ” ತಡೆ ತಡೆದು ದನಿ ಪೋಣಿಸಿದಳು ಲಾವಣ್ಯ.
“ ಅಂದರೆ .......”
“ ನಿಮ್ಮ ಕಣ್ಣ ನೋಟದಲ್ಲೇ ಒಂದು ಸೆನ್ಸಿಟೀವ್‌ನೆಸ್ ಹಾಗೂ ಸ್ಪೆಷಾಲಿಟಿ ಇದೆ ”
“ ಏನಪ್ಪಾ ಅದು ? ”
“ ನೀವು ಕೀಟಲೆ ಮಾಡಬಾರದ್ದು...... ಹೇಳ್ತಿನಿ. ”
“ ಇಲ್ಲ ಹೇಳೂ..... ”
“ ಗಂಡಸರ ಬಗ್ಗೆ ನನ್ನ ಅಭಿಪ್ರಾಯ ಬದಲಿಸಿದೋರೂಂದ್ರೆ ನೀವೇ ನೋಡಿ..... ನೀವು ಸುಂದರಳಾದ ಹೆಣ್ಣಿನ ಶರೀರವನ್ನು ಆರಾಧನಾ ಭಾವದಿಂದ ನೋಡ್ತೀರಾ ! ” ನಗೆ ತೇಲಿಸಿದಳು.
“ ನಿನ್ನ ದಿಟ್ಟತನವನ್ನ ನಾನು ಮೆಚ್ಚುತ್ತೀನಿ, ಲಾವಣ್ಯ. ”
“ ಭಾವ, ಎಷ್ಟೇ ಆಗಲಿ, ಹೆಣ್ಣು ಮಾಯೆ ಎಂಬುದನ್ನ ಮರೆಯಬೇಡಿ. ” ಕೀಟಲೆ ಮಾಡುವ ಸರದಿ ಅವಳದಾಯಿತು.
“ ಹೌದು ಲಾವಣ್ಯ, ನಿನ್ನಂಥ ಅಪೂರ್ವ ಸುಂದರಿ ಮತ್ತೂ ಮಾಯೆ ! ” ಮೊರೆಯುಬ್ಬಿಸಿ ಅಭಿರಾಮ ಹೇಳಿದೆನಾದರೂ ಧ್ವನಿಯಲ್ಲಿ ಗಾಂಬೀರ್ಯವಿತ್ತು. ಲಾವಣ್ಯ ಥಟ್ಟನೆ ಮಾತು ಮೂಂದುವರಿಸದೆ ಸುಮ್ಮನಾದಳು.
ಇಬ್ಬರೂ ಮೌನವಾಗಿಯೆ ನಡೆಯುತ್ತಿದ್ದರು.
ಇನ್ನೇನು ಸಿಟಿ ಬಸ್ ಸ್ಟಾಪ್‌ ಹತ್ತಿರ ಬರಬೇಕು, ಆಗ ಅಭಿರಾಮ ಕೇಳಿದ, “ ನನ್ನ ಮಾತು ನಿನಗೆ ಇಷ್ಟವಾಗಲಿಲ್ಲ ಅಲ್ವಾ ಲಾವಣ್ಯ ? ”
“ ಏನಿಲ್ಲ ಬಾವಾ, ನಾನೇ ಅದೆಲ್ಲಿ ಮಾಯೆಗೆ ಸಿಕ್ಕಿ ಹೊಯ್ದಾಡಬೇಕಾಗುತ್ತೋಂತ ಯೋಚಿಸಿದ್ದೆ........ ”
“ ಮಾಯೆ ಯಾರನ್ನು ಬಿಟ್ಟಿದ್ದಲ್ಲ....... ಅದರಿಂದ ಯಾರ ಬದುಕೂ ಹಾಳಾಗಬಾರದು. ”
“ ನಾನು ನಿಮ್ಮಿಂದ ದೂರ ಹೋಗೋದು ನಿಮಗೆ ಇಷ್ಟ ಇಲ್ಲಾಂತ ಕಾಣ್ಸುತ್ತೇ. ”
“ ನೀನು ಹಾಸ್ಟೆಲ್ ಸೇರ್ಬೇಕೂಂದ್ರೆ ನನ್ನದೇನೂ ಅಭ್ಯಂತರವಿಲ್ಲ. ನಿನ್ನ ಅಕ್ಕ ನೊಂದುಕೊಳ್ಳುತ್ತಾಳೇನೋ. ಅವಳು ನಿನಗೆ ಬೇರೆ ಮದುವೆ ಮಾಡಿದರೆ ಹೇಗೆಂದೇ ಯೋಚಿಸುತ್ತಾಳೆ. ನೀನು ಸುಖ, ಸಂತೋಷದಿಂದ ಇರಬೇಕು. ” ಅವನೆಂದ.
“ ಅಕ್ಕನಿಗೆ ನಾನು ಒಂಟಿಯಾಗಿ ಬದುಕೋದು ಬೇಕಿಲ್ಲ. ನೀವಾದ್ರೆ ಅರ್ಥ ಮಾಡ್ಕೋತೀರಿ, ಈಗಿನ ದಿನಗಳಲ್ಲಿ ಅದೇನೂ ನ್ಯೂಸೆನ್ಸ್ ಅಲ್ಲವಲ್ಲ .... ! ”
“ ಲಾವಣ್ಯ ಸ್ವಲ್ಪ ಕಾಲ ಒಂಟಿ ಬದುಕು ನಡೆಸುವುದೇ ಸರಿ, ಆ ಒಂಟಿತನದ ಕಷ್ಟ ನಷ್ಟಗಳು ಅವಳ ವ್ಯಕ್ತಿತ್ವವನ್ನು ರೂಪಿಸಬಹುದು. ಆ ಬದುಕಿನ ಅರ್ಥವೂ ಅವಳಿಗೆ ಆಗುವುದಾದರೆ ಆಗಲಿ. ಪ್ರತಿಯೊಬ್ಬರಿಗೂ ಅವರದೆ ರೀತಿಯಲ್ಲಿ ಬದುಕುವ ಸ್ವಾತಂತ್ರಯವಿದೆಯಲ್ಲ. ಇತ್ತಿತ್ತಲಾಗಿ ಹೆಣ್ಣು ಯೋಚಿಸುವುದೂ ಅದೇ ದಾರಿಯಲ್ಲಿ ಎನ್ನುವುದಾದರೆ ಬೇಡವೆನ್ನಲು ನಾವು ಯಾರು ? ” ಅನ್ನಿಸಿತು ಅಭಿರಾಮನಿಗೆ. * ********************** *
ಈ ನಡುವೆ ಸಹನ ತಲೆ ಸುತ್ತು, ವಾಂತಿ ಎನ್ನುತ್ತಿದ್ದಳು.
“ ಬಾವ, ನೀವು ಫ್ಯಾಕ್ಟರಿಗೆ ರಜೆ ಹಾಕಿ ಅಕ್ಕನ್ನ ಡಾಕ್ಟರ್ ಹತ್ತಿರ ಕರಕೊಂಡು ಹೋಗ್ಬಾರದೇ ? ” ಅಗ್ರಹ ಪಡಿಸಿದಳು ನಾದಿನಿ.
“ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಕಣೇ ಅಕ್ಕಾ..... ಇಷ್ಟು ದಿವಸದ ಮೇಲಾದ್ರು ಈ ಮನೆಯಲ್ಲಿ ದೇವರು ಕಣ್ ಬಿಟ್ಟನಲ್ಲ ! ” ಅಕ್ಕನೊಡನೆ ಸಂತಸ ಹಂಚಿಕೊಳ್ಳಲೆತ್ನಿಸಿದ್ದಳು ಅವಳು.
ಅಭಿರಾಮ, ಅನಂತರ ತಡಮಾಡುವನೇ ? ಫ್ಯಾಕ್ಟರಿಗೆ ರಜೆ ಹಾಕಿ ಹೆಂಡತಿಯನ್ನು ಕರೆದೊಯ್ದು ಲೇಡಿ ಡಾಕ್ಟರಿಗೆ ತೋರಿಸಿದ್ದ. “ ಗರ್ಭಕೋಶ ದುರ್ಭಲವಾಗಿದೆ. ಗರ್ಭ ನಿಂತಿದ್ದರೂ ಎಚ್ಚರಿಕೆಯಿಂದಿರಿ. ” ಅಂದರು ಅವರು.
ಮತ್ತದೇ ಬೇಸರ ! ಮೂರು ತಿಂಗಳು ಕಳೆಯುವುದರೋಳಗೆ ಸಹನಾಳ ಗರ್ಭ ಇಳಿದೆಹೋಗಿತ್ತು. ಸಹನಾ ಎಲ್ಲಾ ತನ್ನ ಹಣೆ ಬರಹ ಎಂದು ಕಣ್ಣಿರಿಟ್ಟಳು. ಲಾವಣ್ಯ ಪರಿಪರಿಯಲ್ಲಿ ಅಕ್ಕನನ್ನು ಸಮಾದಾನಿಸಿದಳು.
“ ಒಂದ್ಸಾರಿ ಗರ್ಭ ಧರಿಸಿದೋಳು ನೀನು, ಅದು ಮತ್ತೆ ನಿಲ್ಲುತ್ತೆ....... ಯೋಚ್ನೆ ಮಾಡಬೇಡ.... ”ಎಂದಿದ್ದಳು ಲಾವಣ್ಯ. “ ನಿನಗಾದ್ರು ಮಕ್ಕಳಾಗಿದ್ರೆ, ಈ ಹಾಳು ಕಣ್ಣು ತುಂಬಿಕೊಂಡು ಸಂತೋಷ ಪಡ್ತಾ ಇದ್ದೆ ಕಣೇ. ” ಸಹನಾ ದುಃಖ ತಡೆಯದಾದಳು.
“ ಹುಚ್ಚು ಹುಚ್ಚಾಗಿ ಏನಾದ್ರೂ ಹೇಳ ಬೇಡ...... ನಿನಗೇ ಎಲ್ಲ ಸರಿಹೋಗುತ್ತೆ. ನೀನೇನೂ ಮುದುಕಿಯಲ್ಲ.... ” ಲಾವಣ್ಯ ಗದರಿಕೊಂಡಳು. ಸಹನಾ ಸಹನೆ ತಂದುಕೊಳ್ಳಲು ಯತ್ನಿಸಿದಳು.
ದಾಸ್ ಕಂಪ್ಯೂಟರ್‌ನಲ್ಲಿ ಎಲ್ಲರನ್ನು ಆಕರ್ಷಿಸುವ ಕೇಂದ್ರ ಬಿಂದುವಾದಳು ಲಾವಣ್ಯ. ಅವಳ ಚುರುಕಿನ ಮಾತುಗಾರಿಕೆ, ವ್ಯಾವಹಾರಿಕ ರೀತಿನೀತಿಗಳನ್ನು ಕಂಡು ಬೆರಗಾದರು ಕರುಣಾಕರನ್. ಕೆಲಸದಲ್ಲೂ ಅಷ್ಟೇ, ಬಿಡಿ ಭಾಗಗಳ ಮಾರಾಟ ಹಾಗೂ ಡೇಟಾ ಪ್ರಾಸೆಸಿಂಗ್‌ನಿಂದ ಹಿಡಿದು, ಸಾಫ್ಟ್‌ವೇರ್‌ ಪ್ಯಾಕೇಜ್‌ಗಳನ್ನು ಗಿರಾಕಿಗಳ ಬೇಡಿಕೆಗೆ ತಕ್ಕಂತೆ ಪೂರೈಸುವದರಲ್ಲಿ ಅವಳು ತೋರುತ್ತಿದ್ದ ಚಾಕಚಕ್ಯತೆ, ಕಾರ್ಯದರ್ಶನಿಯ ಹೊಣೆ ಹೊತ್ತು ಫರ್ಮನಿ ಇತರೆ ಸಿಬ್ಬಂದಿ ವರ್ಗದವರೊಂದಿಗೆ ವರ್ತಿಸುವ ಬಗೆ, ಹೊಸ ಕೆಲಸಗಳನ್ನು ಕೈಗೊಳ್ಳುವ ಪರಿಪನ್ನು ಕಂಡು ಮ್ಯಾನೇಜರ್‌ನಾದ ಪ್ರಿಯಂಕರ್ ನೂ ಬಹುವಾಗಿ ಮೆಚ್ಚಿಕೊಂಡುಬಿಟ್ಟ.
“ ಲಾವಣ್ಯ, ನಿನ್ನ ರೂಪ ನೋಡಿ ನಾವು ಕೆಲ್ಸ ಕೊಟ್ಟೆವು ಅಂದುಕೊಂಡಿದ್ದೆವು. ಈಗ ನೋಡಿದರೆ, ನಾನು ನಾಲ್ಕಾರು ದಿನ ಊರಲ್ಲಿ ಇಲ್ಲದ್ದಿದ್ದರೂ ನೀನು ಎಲ್ಲಾ ಕೆಲ್ಸ ನಿಭಾಯಿಸಿಬಲ್ಲೆ... ” ಪ್ರಿಯಂಕರ್‌ ಹೊಗಳಿದ್ದ.
ಮೂರು ತಿಂಗಳ ಅವಧಿಯಲ್ಲೇ ಅವಳೋಡನೆ ತೀರ ಸಲಿಗೆ ತೆಗೆದುಕೊಂಡುಬಿಟ್ಟ. ಕೆಲ ವೇಳೆ ತಮಾಷೆಯಾಗಿ ಕಚಗುಳಿ ಇಡುವಂತಹ ಅಣಿಮುತ್ತುಗಳನ್ನು ಉದುರಿಸುತ್ತಿದ್ದ. ಆಗೆಲ್ಲ ತಾನೂ ನಗುತ್ತಲೇ ಪ್ರತಿಕ್ರಿಯೆಸುತ್ತಿದ್ದಳು ಲಾವಣ್ಯ . ನಗುವುದಂತೂ ಅವಳಿಗೆ ಸಹಜ ಪ್ರವೃತ್ತಿಯಾಯಿತು. ವ್ಯಾಪಾರದಲ್ಲಿ ಜನಾಕರ್ಷಣೆ ಮುಖ್ಯ ತಾನೆ ? ಮೂರು ತಿಂಗಳು ಕಳೆಯುವುದರೊಳಗೆ ಅವಳ ಸಂಬಳ ಎರಡು ಸಾವಿರಕ್ಕೇರಿತು. ಇತ್ತ ಕರುಣಾಕರನ್ ಫರ್ಮಿನತ್ತ ಬಂದರೆ ಬಂದರು, ಇಲ್ಲವಾದರೆ ಇಲ್ಲ. ಪ್ರಿಯಂಕರಗೆ ಎಲ್ಲಾ ಉಸ್ತುವಾರಿ ವಹಿಸಿಕೊಟ್ಟಿದ್ದರು. ಲಾವಣ್ಯ ಬಂದ ಮೇಲೆ ಅವನು ಉತ್ಸಾಹದ ಚಿಲುಮೆಯಾಗಿದ್ದ. “ ನಿನ್ನಂಥ ಬ್ಯೂಟಿ ಜತೆ ಕೆಲಸ ಮಾಡುವುದೆಂದರೆ ಇಟ್ ಇಸ್ ರಿಯಲೀ ಎ ಪ್ಲೆಷರ್ ! ಸೋಮಾರಿ ಕೂಡಾ ಚುರುಕಾಗ್ತನೇ... ” ಕಣ್ಣರಳಿಸಿ ಇಣುಕುವನು ಅವಳೆಡೆಗೆ.
ಆ ಕಣ್ಣುಗಳ ಇಂಗಿತಾರ್ಥಕ್ಕೆ ಬೆಚ್ಚಿ ಬೀಳುವಳಲ್ಲ ಲಾವಣ್ಯ. ‘ಈ ಗಂಡಸು ದುಡಿಯುವ ಮಹಿಳೆ ಎಂದರೆ ಏನೆಂದುಕೊಂಡಿದ್ದಾನೋ... ’
ಅಲ್ಲದೆ, ಪ್ರಿಯಂಕರ್ ದಿನಕ್ಕೊಂದು ತಾಕೀತು ಮಾಡುತ್ತಾ ಬಂದಿದ್ದ. “ ನೀನು ಹೀಗೆ ಡ್ಯೂಟಿಗೆ ಬಂದರೆ ಆಗೊಲ್ಲ..... ಮಾಡ್ ಡ್ರೆಸ ಧರಿಸ್ಕೊಬೇಕು. ಒಂದಿನ ಸೀರೆ ಉಟ್ಟರೆ, ಇನ್ನೋಂದಿನ ಚೂಡಿದಾರ್, ಮತ್ತೋಂದಿನ ಜೀನ್ಸ್ ಪ್ಯಾಂಟ್, ಟೀ ಷರ್ಟ್ ಹಾಕಿಕೊಂಡು ಬರ್ಬೇಕು, ಇಲ್ಲದಿದ್ದರೆ,ನಮ್ಮ ಕಸ್ಟಮರ್ಸ ಅಟ್ರಾಕ್ಟ್ ಮಾಡೋದು ಹೇಗೆ ” ಸ್ಟ್ರಿಕ್ಟ್ ಆಗಿ ಆದೇಶಿಸಿದ್ದ. ‘ ನಿನಗೆ ಡ್ರೆಸ್ , ಮೇಕಪ್ಗೆಂದೆ ನಮ್ಮ ಫರ್ಮನಿಂದ ಹಣ ತಗೋ ! ’ ಮೂರು ಸಾವಿರದ ಮುಂಗಡವನ್ನೂ ಕೊಟ್ಟಿದ್ದ. ಅಂದು, ತನ್ನ ಉಡುಪು ತೊಡುಪುಗಳ ಬಗ್ಗೆ ಗಂಡನಾಗಿದ್ದ ಮದನ್‌ ಕುಮಾರ್‌ ನಿಂದ ದೊಡ್ಡ ಆದೇಶವನ್ನೇ ಪಾಲಿಸಬೇಕಿತ್ತು. ಇಂದು ? ಎಂತಹ ವಿಚಿತ್ರ ಪರಿಸ್ಥಿತಿ !
ಮನೆಯಲ್ಲಿ ಅಭಿರಾಮನಿಗೆ ಲಾವಣ್ಯಳ ಮನಸ್ಥಿತಿ ಅರ್ಥವಾಗುತ್ತಿತ್ತು.
ಸಹನಾಳಂತೂ, “ ಅದೆಂಥ ಉದ್ಯೋಗಕ್ಕೆ ಸೇರಿಸಿದಿರಿ ನೀವು ? ಛೀ, ಛೀ......... ” ಸಿಡುಕುತ್ತಿದ್ದಳು.
“ ಇದನ್ನೇಲ್ಲ ನಾವು ಕೂಲ್ ಆಗಿ ತೆಗೆದುಕೊಳ್ಳಬೇಕು ಸಹನಾ ಪ್ರಪಂಚ ಹೇಗೆ ಚಲಿಸುತ್ತೋ ಹಾಗೆ ನಾವು ಹೋಗಬೇಕಾಗುತ್ತೆ. ನಿನ್ನ ಹಾಗೆ ಗಜಗೌರಮ್ಮನಂತೆ ಮನೆಯಲ್ಲಿರೋ ಹೆಂಗಸಿಗೇನ್ ಗೊತ್ತಾಗುತ್ತೆ... ” ಅಭಿರಾಮ ಸಮಜಾಯಿಸಿದ.
“ ಅಲ್ವೇ ನೀನು ಲಕ್ಷಣವಾಗಿದ್ದೀಯಾ, ಆದರೆ, ನಿನ್ನ ತಂಗಿಯನ್ನು ನೋಡಿ ನೀನೂ ಕಲಿಯಬೇಕಾಗುತ್ತೆ ಕಣೇ. ”
“ ಸಾಕು ಸುಮ್ನಿರಿ........ ಅವಳ ಹಾಗೆ ನಾನು ಜೀನ್ಸ್ ಪ್ಯಾಂಟು, ಟೀ ಷರಟು ಹಾಕ್ಕೋಂಡ್ರೆ ದೇವರೆ ಗತಿ..... ! ” ಲಾವಣ್ಯ ಅಕ್ಕನ ಮಾತು ಕೇಳಿ ಫಕ್ಕನೆ ನಕ್ಕು ಬಿಟ್ಟಳು.
ಅಲ್ಲಿ ನಿಲ್ಲದೆ ಮರೆಯಾಗಿದ್ದಳು.
“ ಹಾಗಲ್ವೆ..... ನಿನಗೆ, ನಿನ್ನ ಮೈಮಾಟಕ್ಕೆ ಒಪ್ಪುವ ಹಾಗೆ ಸೀರೆ ಬ್ಲೌಸ್ ಧರಿಸೋದು ಗೊತ್ತಿಲ್ಲಾಂತ ಹೇಳಿದೆ. ನನ್ನ ಹೆಂಡತಿ ಚೆನ್ನಾಗಿ ಕಾಣಿಸಲೀಂತ ಯಾವ ಗಂಡಸು ತಾನೇ ಇಷ್ಟಪಡೋಲ್ಲ ಹೇಳು ಚಿನ್ನಾ... ” ಅಭಿರಾಮ ಮುಗುಳುನಗೆ ಹರಿಸಿ ಹೆಂಡತಿಯನ್ನು ತಬ್ಬಿಕೊಂಡ. ಅವಳು ಕೊಸರಿಕೊಂಡು ಮುನಿಸು ತೋರುತ್ತಾ ಅಡುಗೆ ಮನೆ ಸೇರಿದಳು.
ಒಂದು ದಿನ ಲಾವಣ್ಯ ಜೀನ್ಸ್ ತೊಟ್ಟು ಕನ್ನಡಿಯ ಮುಂದೆ ನಿಂತು ಮುಖಕ್ಕೆ ರಂಗನ್ನು ತೀಡುತ್ತಲ್ಲಿದ್ದಾಗ ಅಭಿರಾಮ ಕೇಳಿದ, “ ಪ್ರವಾಹದ ವಿರುದ್ದ ಈಜಿ ಜಯಿಸೋದೂಂದ್ರೆ ಹುಚ್ಚುತನ. ಹೊಂದಿಕೊಂಡು ಹೋಗುವುದೆ ಜಾಣತನ ಅಲ್ಲವೆ ಲಾವಣ್ಯ ? ”
“ ಏನೇ ಆಗಲಿ ಬಾವಾ, ಈಗಿನ ಸಂದರ್ಭಗಳಲ್ಲಿ ಹೆಣ್ಣಿಗೆ ಡೇರ್‌ನೆಸ್‌ ಇರ್ಬೇಕು ನೋಡಿ.”
“ ಜೊತೆಗೆ ಗ್ಲಾಮರ್ ಸಹಾ ಇರಬೇಕೂ ಅನ್ನು .........”
“ ಇಲ್ಲದಿದ್ದರೆ ಅವಳನ್ಯಾರು ಲೈಕ್ ಮಾಡುತ್ತಾರೆ ಅಂತೀರ .......... ? ”
“ ಅದ್ಸರಿ, ನಿಮ್ಮಫರ್ಮ್‌ನಲ್ಲಿ ಮೂರು ತಿಂಗಳಲ್ಲೆ ಎರಡು ಸಾವಿರ ಸಂಬಳಕ್ಕೆ ಜಂಪ್ ಸಿಕ್ಕಿತಲ್ಲ, ಅದೇನು ಮೋಡಿ ಮಾಡಿದೆಯೆ ಹುಡುಗಿ ನೀನು ! ”
“ ಅದೇ ಗ್ಲಾಮರ್ ಪ್ರಪಂಚ, ಲಾಭದ ದೃಷ್ಟಿಯಿಂದಾನೇ ನೋಡೋದಲ್ಲಾ........”
“ ನೀನು ಯಾವುದಾದ್ರೂ ಜಾಹಿರಾತು ಪ್ರಪಂಚಕ್ಕೆ ಹೋಗ್ಬಿಟ್ಟಿಯೆ ಜೋಕೆ ! ”
ಅಭಿರಾಮನೆಂದಾಗ ಲಾವಣ್ಯ ಹುಬ್ಬೇರಿಸಿದ್ದಳು, ತನ್ನ ಅಂತರಂಗದ ಗುಟ್ಟು ಬಯಲಾದವಳಂತೆ.
“ ಹೋಗಿ ಬಾವಾ, ಹೇಗಿದ್ದರೂ ಹೆಣ್ಣನ್ನ ಹೊರಗಿನ ಪ್ರಪಂಚ ನೋಡೋ ದೃಷ್ಟೀನೇ ಬೇರೆ. ”
“ ನಿನ್ನಂಥ ಛಲಗಾತಿಗೆ ಯಾವ ಕೆಟ್ಟ ದೃಷ್ಟಿಯೂ ತಾಗೋದಿಲ್ಲ ಬಿಡು. ” ಅಭಿರಾಮ
ಅಭಿಮಾನದಿಂದಲೇ ನುಡಿದಿದ್ದ.

ಇನ್ನೋಂದು ದಿನ ಪೋಸ್ಟ್‌ನಲ್ಲಿ ಮದನ್ ಕಳುಹಿಸಿದ್ದ ಡೈವೋರ್ಸ್ ಪೇಪರ್ಸ್ ಬಂದಿದ್ದವು. ಲಾವಣ್ಯ ಅವನ್ನು ತೆಗೆದುಕೊಂಡು ಅಭಿರಾಮನಿಗೆ ತೋರಿಸಿದ್ದಳು. ಅಬಿರಾಮ, “ ನಿನ್ನ ಬದುಕಿನ ಯಾವುದೇ ನಿರ್ಧಾರ ನಿನ್ನದೇ ” ಎಂದಿದ್ದ. ಲಾವಣ್ಯ ಅವುಗಳಿಗೆ ಸಹಿ ಹಾಕಿ ಕಳುಹಿದಸಿಬಿಟ್ಟಳು. ಈಗ ನಿರಾಳವೆನಿಸಿತು. ತಾನು ಸ್ವತಂತ್ರ್ಯ, ಸ್ವಚ್ಛಂದ ಹಕ್ಕಿಯಂತೆ ಗಗನದಲ್ಲಿ ಹಾರಾಡಬಹುದೆನಿಸಿತು. ಆದರೆ ಆ ಬಾನಾಡಿಯ ಬದುಕು ಈ ಭುವಿಯ ಹೆಣ್ಣಿಗೆ ಎಲ್ಲಿ ?

ದಿನಕಳೆದಂತೆ ದಾಸ್‌ ಕಂಪ್ಯೂಟರ್‌ನಲ್ಲಿ ಕೆಲಸದ ಒತ್ತಡ ಹೆಚ್ಚುತ್ತಿತ್ತು. ಲಾವಣ್ಯಳ ಸಲಹೆ ಕೇಳದೆ ಪ್ರಿಯಂಕರ್ ಯಾವ ವಿಷಯದಲ್ಲೂ ಮುಂದುವರೆಯುತ್ತಿರಲಿಲ್ಲ. ಇದೀಗ ಅವಳು ಕ್ಯಾಷಿಯರ್‌ ಸ್ಥಾನವನ್ನೂ ಅಲಂಕರಿಸಿದ್ದಳು. ಸಾವಿರಗಟ್ಟಲೆ ಲೇವಾದೇವಿ ಇವಳ ಕೈಯಿಂದಲೇ ಜರುಗುತ್ತಿತ್ತು. ಅವನೋ ಬೇಕೆಂತಲೆ ವಾರಗಟ್ಟಲೆ ಲೆಕ್ಕಪತ್ರ ತಪಾಸಣೆ ಮಾಡುತ್ತಿರಲಿಲ್ಲ. ಲೆಕ್ಕ ಪತ್ರಗಳಿಗಿಂತಲೂ ಲಾವಣ್ಯ ಅವನಿಗೆ ಬೇಕಾಗಿದ್ದಳು. ತಾನೂ ಇವನ ವಶದಲ್ಲಿರಲೆಂದೇ ತನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಬಲೆಯೊಡ್ಡುತ್ತಿರುವನೋ ಎಂಬ ಗುಮಾನಿ ಆಕೆಗೆ, ತಾನಂತೂ, ಜಾಗ್ರತೆಯಿಂದಿರಬೇಕೆಂದುಕೊಂಡಳು. ಇವಳ ಕೈ ಕೆಳಗೆ ಇಬ್ಬರೂ ಹದಿಹರೆಯದ ಹುಡುಗಿಯರೂ ಸೇರಿದಂತೆ ಇನ್ನಿಬ್ಬರೂ ಹುಡುಗರೂ ಕೆಲಸಕ್ಕೆ ಇದ್ದರು. ಚಿಕ್ಕ ಯಜಮಾನರ ಆಪ್ತಳು ಎಂಬಂತೆ ಈಕೆ ಕಾಣಿಸುತ್ತಿದ್ದರಿಂದ ಇವಳ ಮಾತಿಗೆ ಅವರೆಲ್ಲ ಬಹಳ ಬೆಲೆ ಕೊಡುವಂತಾದರು. ಇತ್ತೀಚಿಗೆ ಪ್ರಿಯಂಕರ್ ತನ್ನ ಮಾರುತಿ ಕಾರಿನಲ್ಲಿ ಬಿಸಿನೆಸ್ ಕಲೆಕ್ಷನ್ ಎಂಬ ನೆಪ ಹೇಳಿ ಜತೆಗೆ ಕರೆದುಕೊಂಡು ಹೋಗತೊಡಗಿದ್ದ. ಮೊದಮೊದಲು ಅವನೊಂದಿಗೆ ಹೋಗುವುದೆಂದರೆ ಆಕೆಗೆ ಎಲ್ಲಿಲ್ಲದ ಮುಜುಗರವಾಗುತ್ತಿತ್ತು.
“ ನೀನು ನನ್ನ ಪ್ರೈವೆಟ್ ಸೆಕ್ರೆಟರಿ ಲಾವಣ್ಯ. ಹೀಗೆ ಅಂಜಿಕೊಂಡ್ರೆ ಹೇಗೆ ? ಬೆಂಗಳೂರು ನಗರದಲ್ಲಿ ಒಂದು ರೌಂಡ್ ಹೋಗ್ಬರಲಿಕ್ಕೆ ಹೀಗಾದರೆ ಹೇಗೆ ? ನಾಳೆ ನಂಜೊತೆ ಔಟ್ ಆಫ್ ಸ್ಟೇಷನ್ ಟೂರ್ ಮಾಡಬೇಕು. ತಿಳೀತೇ ? ಬೀ ಎ ಬೋಲ್ಡ್ ಗರ್ಲ್...... ಬಾ ಬಾ ಇಲ್ಲೇ ಕೂತ್ಕೋ .... ” ಪ್ರಿಯಂಕರ್ ತನ್ನ ಕಾರಿನಲ್ಲಿ ಅವಳಿಗೆ ಫ್ರಂಟ್ ಸೀಟಿನಲ್ಲಿ ಕೂರಲು ಆಹ್ವಾನಿಸುತ್ತಿದ್ದ.
ನಿರ್ವಾಹವಿಲ್ಲದೇನೆ ಆಕೆ ಕುಳಿತಾಗ ಮೃದುವಾಗಿ ಬೆನ್ನು ತಟ್ಟುತ್ತಿದ್ದ. ಮೀಸೆ ತುದಿಯಲ್ಲೇ ನಗು ಇರುತ್ತಿತ್ತು. ಇವಳಿಗೆ ಮೊದಮೊದಲು ಮೈ ಉರಿಯುತ್ತಿತ್ತು. ಬರು ಬರುತ್ತಾ ಅಭ್ಯಾಸವಾಗಿತ್ತು. ಅವಳಿಗೆ ಅರಿಯದಂತೆ ಅವಳ ದೇಹ ಪುರುಷನ ಸಾಮೀಪ್ಯವನ್ನು ಬಯಸುತ್ತಿತ್ತು !
ಈವತ್ತಿನ ಪ್ರಪಂಚ ಇರೋದೇ ಹೀಗೆ. ಪುರುಷರೊಂದಿಗೆ ದುಡಿಯುವ ಮಹಿಳೆ ಇಷ್ಟಕ್ಕೆಲ್ಲಾ ಕೇರ್ ಮಾಡಿದರಾದಿತೇನು ? ತುಟಿಯ ಮೇಲೆ ನಗುವಿನೆಳೆ ಇರುತ್ತಿತ್ತು. ಪ್ರಿಯಂಕರ್ ಅವಳಿಗೆ ಹೊಸ ಪ್ರಪಂಚವನ್ನೇ ತೋರಿಸಲು ಹವಣಿಸಿದ್ದ. ಮೆಲ್ಲ ಮೆಲ್ಲನೆ ಸರಿದು ತನ್ನ ಮನದ ರೀಲು ಬಿಚ್ಚಲಾರಂಬಿಸಿದ. ಅವಳೊಂದಿಗೆ ಸಲಿಗೆ ಎಂಬುದು ಸ್ವೇಚ್ಛೇಯಾಯಿತು. ಅವಳ ದೇಹದ ಉಬ್ಬು ತಗ್ಗುಗಳಲ್ಲಿ ಇವನ ಕೈಗಳು ಹರಿದಾಡಿದ್ದವು. ತನಗಲ್ಲವೆಂದೂ ಅನ್ನಿಸುವುದು. ಇಲ್ಲಿ ಆರು ತಿಂಗಳು ಕಳೆಯುವುದರೊಳಗೆ ಸ್ವಲ್ಪ ಮೇಲು ಆದಾಯವನ್ನೂ ಮಾಡಿಕೊಂಡಿದ್ದಳು.
ಈಗಿಂದೀಗಲೇ ಬಿಡುವುದೆಂದರೆ ? .......... ತಾನು ಅಬಲೆ, ಇದನ್ನೆಲ್ಲಾ ಸಹಿಸಬೇಕು. ತನ್ನ ಗತ ಚರಿತ್ರೆಯೆಲ್ಲ ಆದ್ಹೇಗೋ ಪ್ರಿಯಂಕರ್‌ಗೆ ತಿಳಿದಿದೆ. ಆದುದರಿಂದಲೇ, ಅವನು ಹೀಗೆ ವರ್ತಿಸುವುದು......... ಹೀಗೆ ಗಂಡು ದಿಕ್ಕಿಲ್ಲದವಳೆಂಬ ಕಾರಣಕ್ಕಾಗಿಯೆ, ತನಗೆ ಶೋಷಣೆ ಮಾಡಲು ಮುಂದಾಗುವವರೇ ಎಲ್ಲಾ. ಮರು ಮದುವೆ ಯಾಗುವುದರಿಂದಲೇ ತನಗೆ ಹಿತವಿದೆಯೇನೂ. ಈ ಸಮಾಜದಲ್ಲಿ ಹೆಣ್ಣಿನ ಬಯಕೆಗೆ ಅವಳ ಬದುಕಿಗೆ ಮದುವೆಯೊಂದೇ ಬೇಲಿಯೇನು ? ಇತ್ಯಾದಿ ಆತಂಕ, ದ್ವಂದ್ವಗಳಲ್ಲಿ ಬಳಲಿದಳು ಲಾವಣ್ಯ.

ಅಭಿರಾಮ ತನಗೆ ಬಿಡುವು ದೊರೆತ ಸಮಯದಲ್ಲಿ ಬಣ್ಣ, ಕುಂಚ ಹಿಡಿದು ಚಿತ್ರ ಬಿಡಿಸುತ್ತ ಕೂರುತಿದ್ದ. ಚಿತ್ರ ಕಲೆ ಅವನಿಗೆ ಆತ್ಮ ಸಂತೋಷಕೊಡುವ ಹವ್ಯಾಸ, ಅವನ ಸಂಗ್ರಹದಲ್ಲಿ ಸ್ವಂತ ರಚನೆಯ ಹತ್ತಾರು ಜಲವರ್ಣ ಹಾಗೂ ತೈಲ ಚಿತ್ರಗಳಿದ್ದವು. ಅವುಗಳಲ್ಲಿ ಬಹುತೇಕ ಎಲ್ಲ ಭಾವ ಚಿತ್ರಗಳೇ. ದೇಶದ ನೇತಾರರು, ಹೆಸರಾಂತ ಸಾಹಿರಿಗಳು, ಪುರಾಣದಲ್ಲಿ ಬರುವ ಅಪ್ಸರೆಯರು ಹಾಗೂ ಅವನನ್ನು ಆಕರ್ಷಿಸಿದ ಆಧುನಿಕ ಚೆಲುವೆಯರು ಅರೆನಗ್ನ ಚಿತ್ರಗಳು ಅಲ್ಲಿದ್ದವು. ಇವನ್ನೆಲ್ಲಾ ಲಾವಣ್ಯ ನೋಡಿದ್ದಳು.
“ ಬಾವಾ, ನೀವು ಈ ಚಿತ್ರಕಲೆ ಎಲ್ಲಿ ಕಲಿತಿರಿ ? ” ಕೇಳಿದಳು.
“ ಇದು ನನಗೆ ಗುರು ಇಲ್ಲದೆ ಬಂದಿರೋ ವಿದ್ಯೆ ಲಾವಣ್ಯ .”
“ ನೀವು ದೊಡ್ಡ ಚಿತ್ರ ಕಲಾವಿದರಾಗಿ ಹೆಸರು ಮಾಡಬಹುದಿತ್ತು. ”
“ ಅದೆಲ್ಲ ನಮ್ಮಂಥವರಿಗೆ ಬರುವುದಿಲ್ಲ ಲಾವಣ್ಯ ”
“ ಅಂದರೆ ! ”
“ ನಿನಗೆ ಪ್ರಪಂಚ ಪೂರ್ಣ ಅರ್ಥವಾಗಿಲ್ಲ...”
“ ಅದು ಯಾರಿಗೆ ತಾನೇ ಅಪೂರ್ಣ ಅರ್ಥವಾಗಿದೆ ಬಾವಾ ? ”
“ ಅರ್ಥವಾಗೋದಿಲ್ಲ........... ಬಿಡು...”
“ ಬಾವಾ,ನಿಮ್ಮ ಈ ಚಿತ್ರಗಳ ಸರಕಿನಲ್ಲಿ ಹೆಣ್ಣಿನ ಚೆಲುವನ್ನೇ ಸೆರೆ ಹಿಡಿದಿರುವ ಚಿತ್ರಗಳ ಸಂಖ್ಯೆ ಜಾಸ್ತಿ ಇದೆಯಲ್ಲ ..........”
“ ಈ ಚೆಲುವೆಯರ ಅರೆ ನಗ್ನ ಚಿತ್ರ ನೋಡಿದ ಮೇಲೆ ನಿನ್ನ ಬಾವಾಂದ್ರೆ ನಿನಗೆ ಏನನ್ನಿಸಿತು ? ”
“ ನಿಜ ಹೇಳಲಾ ? ” “ ಹೇಳು ಲಾವಣ್ಯ...... ”
“ ನನ್ನ ಬಾವಾ ತುಂಬಾ ಶೃಂಗಾರ ಪ್ರಿಯರು ಅನ್ನಿಸ್ತು. ನಮ್ಮಕ್ಕ ನಿಮ್ಮನ್ನ ಕೈ ಹಿಡಿಯಲು ತುಂಬಾ ಪುಣ್ಯ ಮಾಡಿದ್ದಾಳೆ .”
“ ಅವಳೊಂದು ಪೆದ್ದು, ಅವಳ ಚಿತ್ರ ಬರೀತೀನೀಂದ್ರೆ ಹೌಹಾರಿ ಬೀಳ್ತಾಳೆ. ನಿಮಗೆ ಗಿಡ, ಮರ, ಜಿಂಕೆ, ನವಿಲು, ಇಂತಹ ಪ್ರಾಣಿ, ನಿಸರ್ಗದ ಚೆಲುವು ಕಾಣಸಿಗುವುದಿಲ್ವೇ....... ಹೆಣ್ಣಿನ ಬೆತ್ತಲೆ ಚಿತ್ರ ಬರೀತಿರಲ್ಲ.........” ಅಂತ ಬೈತಾಳೆ....... ಅವಳು ಹಳೇ ಕಾಲದವಳು. ಮನಸ್ಸೇನೂ ಒಳ್ಳೆಯದೇ. ನಿಮ್ಮ ಚಿಂತನೆಯ ಮಟ್ಟಕೇರಬೇಕವಳು. ಅಷ್ಟೇ....
ಅದ್ಯಾವಗಲೋ........ “ ಆಗ್ತಾಳೆ, ಅವಳು ಬದಲಾಗ್ತಾಳೆ........ ಬಾವಾ ನೀವು ನನ್ನ ರೂಪ ಹೊಗಳ್ತೀರಲ್ಲ, ನನ್ನ ಚಿತ್ರ ಯಾವಾಗ ಬರೀತೀರಿ ... ? ”
“ ನನಗೆ ಈಗೀಗಂತೂ ಫ್ಯಾಕ್ಟರಿ ಕೆಲ್ಸದಲ್ಲಿ ಬಿಡುವೇ ಆಗೋದಿಲ್ಲ...... ನೀನೇ ನೋಡ್ತಾ ಇದೀಯಾ....... ನೋಡೋಣ. ಅದಕ್ಕೂ ಒಂದು ಸಂದರ್ಭ ಕೂಡಿ ಬರಲಿ........ ಅಭಿರಾಮ ನಾದಿನಿಯನ್ನೇ ತದೇಕವಾಗಿ ದಿಟ್ಟಿಸಿದ್ದ.

No comments:

Post a Comment