Saturday, April 17, 2010

ಇರುಳ ನಕ್ಷತ್ರ-4 (ಕಿರು ಕಾದಂಬರಿ)

-4-
ಮಾರೆನೆಯ ದಿನ ಸಂಜೆ ರೋಸಿಯೊಂದಿಗೆ ಲಾವಣ್ಯ ಛಾಯಗ್ರಾಹಕ ಛಾಯಾಪತಿಯನ್ನು ಭೇಟಿಯಾದಳು. ಛಾಯಾಪತಿ ! ತನ್ನ ಹೆಸರನ್ನು ಅನ್ವರ್ಥಗೊಳಿಸಿಗೊಂಡಿದ್ದಾನೆ. ಮಾಡೆಲಿಂಗ್ ಲೋಕಕ್ಕೆ ಪ್ರವೇಶಿಸಲಿಚ್ಚಿಸುವ ಹದಿಹರೆಯದ ಲಲನೆಯರು ನಾ ಮುಂದು ತಾಮುಂದು ಎಂದು ಈತನ ಬಳಿ ಬರುತ್ತಿದ್ದರು. ಹೀಗೆ ಲಾವಣ್ಯಳಂಥ ತುಂಬು ಸುಂದರಿ, ಅಪೂರ್ವ ಹೆಣ್ಣು ಬರುವುದು ಅಪರೂಪವೇ ! ಅಲ್ಲದೇ, ಇಂತ ಸಪೂರಳಾದ ಆಕರ್ಷಕ ಮೈಮಾಟದ ಹೆಣ್ಣು ಬಹುಬೇಗ ಈ ಕ್ಷೇತ್ರದಲ್ಲಿ ಮೇಲೆ ಬರುತ್ತಾಳೆಂಬುದನ್ನೂ ತಿಳಿದವನೇ. ಅಂತೆಯೇ, ಮಾಡೆಲ್ ಆಗ ಬಯಸುವ ಹೆಣ್ಣೂ ಕೆಲ ವಿಷಯಗಳಲ್ಲಿ ಸಿದ್ದಳಾಗಿ ಮುಂದೆ ಬರಬೇಕಲ್ಲ. ನಾನಾ ಡಿಸೈನಿಂಗ್ ಉಡುಪುಗಳ ಖರ್ಚು, ಬ್ಯೂಟಿಪಾರ್ಲರ್ ಖರ್ಚು, ಪ್ರಾಯೋಜಕರನ್ನು, ಕೋ ಆರ್ಡಿನೇಟರ್ ಗಳನ್ನು ಸಂಪರ್ಕಿಸಲು ತಗಲುವ ವಾಹನದ ಬಾಡಿಗೆ ಇತ್ಯಾದಿ ಹಣವನ್ನೇಲ್ಲ ತಾನೇ ಭರಿಸಬೇಕು. ಮೊದಲು ಛಾಯಾಗ್ರಾಹಕರಿಂದ ತನ್ನ ಪೋಟೋಗ್ರಾಫಿಕ್ ಪೋಲಿಯೋ ;ಮಾಡಿಸಲು ಏನಿಲ್ಲವೆಂದರೂ ಐದಾರ ಸಾವಿರ ರೂಪಾಯಿಗಳ ಖರ್ಚು ಹೊರಲು ಸಿದ್ದಳಿರಬೇಕು.
“ ಕೆಲ ಛಾಯಾಗ್ರಾಹಕರು ನಂಬಿಸಿ ಮೋಸ ಮಾಡ್ತಾರೆ. ಈ ಛಾಯಾಪತಿ ಹಾಗಲ್ಲ, ನಂಬಿಗಸ್ಥ, ಗುರಿ ಮುಟ್ಟಿಸೋ ಸ್ಪ್ರಿಂಗ್ ಬೋರ್ಡ್ ಇದ್ದ ಹಾಗೆ. ನಿನಗೆ ಒಳ್ಳೆ ಷೇಪ್ ಕೊಟ್ಟು ಬೇಗ ಜಂಪ್ ಕೊಡಿಸ್ತಾನೆ. ನೀನು ಚಳಿ ಬಿಡ್ಬೇಕು. ಅವನು ಹೇಳಿದ ಹಾಗೆ ಕೇಳಿ ಪೋಸ್ ಕೊಡ್ಬೇಕಷ್ಟೇ ! ” ರೋಸಿ ಪೂರ್ವ ಸಿದ್ದತೆಯಿಂದ ಆರಂಬಿಸಿ ಲಾವಣ್ಯ ಮಾನಸಿಕವಾಗಿ ಹೇಗೆ ಎದುರಿಸಲು ಸನ್ನದ್ದಳಾಗಬೇಕೆಂಬುದರ ಬಗ್ಗೆ ಸಾಕಷ್ಟು ವಿವರಣೆ ಕೊಟ್ಟಳು. ಸ್ಟುಡಿಯೋದಲ್ಲಿ ಛಾಯಾಪತಿ ಎದುರಿಗೆ ಲಾವಣ್ಯ ಅವನು ಹೇಳಿದಂತೆ ಉಡುಪು ಧರಿಸಿ, ಮೇಕಪ್ ಮಾಡಿಸಿಕೊಂಡು ನಿಂತಾಗ, “ ರಿಯಲೀ...... ಗುಡ್ ಫಿಗರ್ , ಗುಡ್ ಪ್ಯೂಚರ್..... ” ದೊಡ್ಡ ಉದ್ಗಾರ ತೆಗೆದಿದ್ದ.

ಲಾವಣ್ಯ, ಬರುಬರುತ್ತಾ ಲಜ್ಜೆ ತೊರೆದುಬಿಟ್ಟಳು. ನಾನ ಡಿಸೈನ್‌ಗಳ ಉಡುಪುಗಳನ್ನು ತೊಟ್ಟಳು. ಹಲವಾರು ಭಂಗಿಗಳಲ್ಲಿ ಅವನದೇ ನಿರ್ದೇಶನವಾದಂತೆಲ್ಲ ಧೈರ್ಯದಿಂದಲೇ ಎದೆಯುಬ್ಬಿಸುತ್ತಾ ಪೋಸ್ ಕೊಡಲಾರಂಭಿಸಿದಳು. ಆತ ಮಧ್ಯೆ ಮಧ್ಯೆ ಇವಳ ಸನಿಹಕ್ಕೆ ಬಂದು ಮೈ ಕೈ ಮುಟ್ಟಿ, ಉಬ್ಬಿದೆದೆ ಇನ್ನೂ ಆಕರ್ಷಕವಾಗಿಸಲು ಕೈಯಾಡಿಸಿ,
ಓರೆ ನಿಂತಾಗ ಹೇಗೆ ತೋರಬೇಕೆಂದು ನಿತಂಬಗಳ ಮೇಲೆ ತಟ್ಟಿ, ಟೇಕ್‌ಗಳ ಮೇಲೆ ಟೇಕ್‌ ತೆಗೆಯುತ್ತಲಿದ್ದಾಗ ಇವಳಿಗೋ ತೀರ ಮುಜುಗರವಾಗುತ್ತಿತ್ತು. ಅದ್ಹೇಗೆ ಟೇಕ್ ಗಳನ್ನು ಓಕೆ ಮಾಡಿದ್ದಳೋ ಅವಳಿಗೆ ಗೊತ್ತಿರಲಿಲ್ಲ.
ಅಲ್ಲಿಂದ ಹೊರಬಿದ್ದಾಗ ರೋಸಿ ಇವಳ ಬೆನ್ನು ಬಳಸಿಕೊಂಡು.
“ ಈ ಫೀಲ್ಡ್ ನಲ್ಲಿ ಇದೆಲ್ಲಾ ಕಾಮನ್. ಮೈ ಹಗುರವಾಗಿಟ್ಟುಕೊ ಬೇಕು..... ನಿರ್ಭಿಡೆಯಾಗಿ ಪ್ರದರ್ಶಿಸಬೇಕು. ಹಣ, ಹೆಸರು ಬರುತ್ತಿದ್ದಂತೆ ಇವೆಲ್ಲ ಅಭ್ಯಾಸವಾಗಿ ಹೋಗುತ್ತೇ. ” ಹುರಿದುಂಬಿಸಿದ್ದಳು ಆ ಹುಡುಗಿ.

ಕೆಲವೇ ದಿನಗಳಲ್ಲಿ ಪೋಟೋ ಪೋರ್ಟ್ ಪೋಲಿಯೋ ರೆಡಿಯಾಗಿತ್ತು. ಲಾವಣ್ಯ ಅದನ್ನು ನೋಡುನೋಡುತ್ತಿದ್ದಂತೇ ದಿಗ್ಬ್ರಮೆಗೊಂಡಳು. ತಾನಿಷ್ಟು ಅನುಪಮ ಸುಂದರಿಯೆ ಎಂದು ಅತೀವವಾದ ಬಿಗುಮಾನದಿಂದ ಬೀಗಿದಳು. ಪೋಟೋಗಳು ಹಲವಾರು ಪ್ರತಿಗಳು ಹತ್ತು ಹಲವು ಕೋ- ಆರ್ಡಿನೇಟರುಗಳಿಗೆ ರವಾನಿಸಲ್ಪಟ್ಟವು. ಇವೆಲ್ಲ ಪ್ರಾರಂಭಿಕ ಖರ್ಚನ್ನು ರೋಸಿಯೇ ವಹಿಸಿಕೊಂಡಳು. ಈಗಾಗಲೇ ಲಾವಣ್ಯಳ ಉಳಿತಾಯ ಖಾತೆಯಲ್ಲಿ ಹಣ ಹತ್ತು ಸಾವಿರದಷ್ಟಿತ್ತು. ರೋಸಿ ಅವಳಿಂದೇನೋ ಖರ್ಚು ಮಾಡಿಸಲು ಅವಕಾಶವೀಯದಾದಳು.
‘ ಈ ಹುಡುಗಿ ಎಂತಹ ಸ್ನೇಹ ಮಯಿ! ನನಗಾಗಯೇ ತುಂಬ ರಿಸ್ಕ ತೆಗೆದುಕೊಂಡಿರುವಳಲ್ಲ ! ನನ್ನನ್ನು ಎಷ್ಟೋಂದು ಹಚ್ಚಿಕೊಂಡಿದ್ದಾಳೆ ! ’
“ ಏಯ್ ಹುಡುಗಿ ನಿನ್ನ ಉಪಕಾರ ಬಹಳ ಆಯ್ತು.... ಎಂದರೆ, ” ನಥಿಂಗ್ ಟು ವರಿ, ಮೈ ಡಿಯರ್ ಸಿಸ್ಟರ್...... ಐ ಲೈಕ್ ಯೂ ಸೋ ಮಚ್ . ಅನ್ತಾಳೆ, ಒಂಥರಾ ಪೋಸ್ ಕೊಡುತ್ತಾ !

ಬಳಕುವ ನಡಿಗೆಯ , ಬೆಡಗಿನ ರೂಪಸಿ ಲಾವಣ್ಯಳಿಗೆ ಸ್ವಭಾವದಲ್ಲೇ ಲಯವಿರುವುದರಿಂದ ಮಾಡೆಲಿಂಗ್ ಕಷ್ಟವೆನಿಸಲಿಲ್ಲ. ಜತೆಗೆ ಮಾತುಗಾರಿಕೆಯ ಜಾಣ್ಮೆ , ಕಣ್ಣಳತೆಯಲ್ಲೇ ಸೆಳೆಯುವ ತೀಕ್ಷ್ಣತೆ, ನಡೆಗೆಯ ಲಾಸ್ಯ ಇವುಗಳಿಂದ ಆಕೆ ಬಹುಬೇಗ ಮಾಡೆಲಿಂಗ್‌ನ ಒಂದೊಂದೇ ಮೆಟ್ಟಿಲುಗಳನ್ನು ಏರತೊಡಗಿದಳು. ತರಬೇತಿ, ಆಯ್ಕೆಗಳೊಂದಿಗೆ ಆ ಕ್ಷೇತ್ರದಲ್ಲಿರಬಹುದಾದ ಜಟಿಲ ಸಮಸ್ಯೆಗಳನ್ನು ಬಿಡಿಸಿ ಮುನ್ನುಗ್ಗ ತೊಡಗಿದಳು. ನಂತರದ ದಿನಗಳಲ್ಲಿ ಇವಳಿಗೆ ಪೋನ್ ಕರೆಗಳ ಮೇಲೆ ಕರೆಗಳು ಬರಲಾರಂಬಿಸಿದವು.
ಅತಿ ಶೀಘ್ರದಲ್ಲಿ ಆ ಕ್ಷೇತ್ರದಲ್ಲಿ ಹತ್ತು ವರುಷಗಳಿಂದಲೂ ಬೇಡಿಗೆಯಲ್ಲಿರುವ ಮಾಡೆಲ್ ಗಳನ್ನು ಹಿಂದೆ ಹಾಕಿದಳು. ತೀರ ಅಶ್ಲೀಲವೆನೆಸದಂತ ಡಿಸೈನರ್ ಉಡುಪುಗಳಲ್ಲಿ ತಾನೇ ತಾನಾಗಿ ಮಿಂಚ ತೊಡಗಿದಳು. ತನ್ನ ಎದ್ದು ತೋರುವ ವ್ಯವಹಾರಿಕ ರೀತಿ ರಿವಾಜುಗಳಿಂದಾಗಿ ಎಲ್ಲರ ಮೆಚ್ವುಗೆ ಗಳಿಸಿದಳು. ಈಗ ಒಂದು ಸಾಮಾನ್ಯ ಜಾಹಿರಾತಿನ ಚಿತ್ರಗಳಿಗೆ ಅವಳು ಪ್ರಾಯೋಜಕರಿಂದ ಪಡೆಯತ್ತಿದ್ದ ಹಣ ಕಡಿಮೆ ಎಂದರೂ ಇಪ್ಪತ್ತೈದು ಸಾವಿರವಾಗಿತ್ತು.

“ ಏನ್ ಸಿಸ್ಟರ್, ಮಧು ಸಪ್ರೆಯಂತ ಫೇಮಸ್ ಮಾಡೆಲ್‌ನ ಕೂಡ ನಿನ್ನ ಮುಂದೆ ಸಪ್ಪೆ ಎನಿಸಿಬಿಟ್ಟೆಯಲ್ಲ ! ಇನ್ನು ಸ್ವಲ್ಪ ದಿವ್ಸ ಹೋದ್ರೆ ನನ್ನನ್ನೂ ಮಾತಾನಾಡಿಸುತ್ತಿಯೋ ಇಲ್ವೋ........ ” ಯಾಕೆಂದ್ರೆ, ಈ ಹಾಸ್ಟೆಲ್ ಬಿಟ್ಟು ಯಾವುದಾದ್ರೂ ಪಾಷ್ ಏರಿಯಾದಲ್ಲಿ ಒಂದು ಪ್ಲಾಟ್ ಹುಡ್ಕೊತೀಯ. ಆಮೇಲೆ...... ರೋಸಿ ಬೇಕೆಂತಲೇ ಕೆಣಕಿದಳು. ಏಯ್ ಸಾಕು ನಿಲ್ಸೆ ಹುಡುಗಿ. ನಿನ್ನ ಹೊಗಳಿಕೆ ಜಾಸ್ತಿಯಾಯ್ತು....... ಅವಳ ಹೊಗಳಿಕೆಗೆ ರೋಸಿ ಹೋದವಳಂತೆ ಲಾವಣ್ಯ ಅವಳ ಬೆನ್ನಿಗೆ ಗುದ್ದಿದಳು.

“ ಅಮ್ಮಾ, ಎಷ್ಟು ಗಟ್ಟಿಯಾಗಿ ಗುದ್ದುತ್ತಿಯಾ ! ಹ್ಞೂಂ...... ನೀನು ಈ ತಾರಾ ಲೋಕದಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂದರೆ ನೀನಿನ್ನೂ ಹುಡುಗಿಯಂತೆ ಸ್ಲಿಮ್ ಆಗುವುದನ್ನೇ ಕೀಪಪ್ ಮಾಡ್ಬೇಕು. ವ್ಯಾಯಾಮ, ಯೋಗಾಸನ, ಡಯೆಟಿಂಗ್ ಶುರು ಮಾಡು. ಆವಾಗ ನೋಡು ನಿನ್ನ ವೃತ್ತಿಗೆ ಪ್ರೋಫೆಷನಲ್ ಟಚ್ ಬರೊದೂಂದ್ರೆ. ಆಗ ಹಣ ನಿನ್ನ ಪಾಲಿಗೆ ಚಿಂದಿ ಚಿಂದಿ! ” ರೋಸಿ ಒಮ್ಮೇಲೆ ಹಾರಿ ಆಕೆಯ ಕೊರಳಿಗೆ ಜೋತುಬಿದ್ದಳು. “ ಓಹ್ಹೋ...... ಮರಳು ಮಾಡಬೇಡ್ವೇ. ”

“ ನಾನೇಕೆ ನಿನ್ನ ಮರುಳು ಮಾಡ್ಲಿ...... ನೀನು ಈಗ ಜಗತ್ತನ್ನೇ ಮರಳೂ ಮಾಡೊ ಕಾಲ ದೂರವಿಲ್ಲ. ನೀನು ಕೆಲವು ಫ್ಯಾಷನ್ ಷೋಗಳಿಗೆ ಹೋಗ್ಬೇಕು. ರಾಂಪ್ ನಲ್ಲಿ ಎಕ್ಸಪೋಸ್ ಆಗ್ಬೇಕು. ಅಂತಹ ಅವಕಾಶ ನಿನಗೆ ಸಿಗಬೇಕು. ಆವಾಗ ನೋಡು ನೀನೇ ಮಿಸ್ ಇಂಡಿಯಾ ಸ್ಪರ್ಧೆಗಿಳಿಯೋಣಾಂತ ಯೋಚಿಸ್ತಿಯಾ. ”
“ ಅಯ್ಯೋ ಅದೆಲ್ಲ ಬೇಡ್ವೇ. ನಾನಿಷ್ಟರಲ್ಲೇ ತೃಪ್ತಳಾಗಿದ್ದೇನೆ. ”
“ ನಿನ್ನಂಥ ಅದ್ಬುತ ಸುಂದರಿಯರು ಮೊದಮೊದಲು ಹೀಗೆ ಹೇಳೊದು. ಆಮೇಲೆ ಅಂತಹ ಅವಕಾಶ ಸಿಕ್ಕರೆ ಸಾಕು ಹಾರಿ ಹೋಗೋದು. ”
“ ಸಾಕೇ ಸಾಕು ಬಿಡೇ ಹುಡುಗಿ. ನನಗೀಗ ನೀನು ಒದಗಿಸಿಕೊಟ್ಟಿರೋ ಅವಕಾಶ, ನನಗೇಕೋ ಮುಂದಿನದೆಲ್ಲ ನೆನೆಸಿಕೊಂಡರೆ ಭಯವಾಗುತ್ತೇ ” ಎಂದಿದ್ದಳು ಲಾವಣ್ಯ. ಏನೇ ಆಗಲಿ ರೋಸಿಯನ್ನೀಗ ಬಹಳ ಹಚ್ಚಿಕೊಂಡಿದ್ದಳು. ಚಿಕ್ಕವಯಸ್ಸಿನ ಹುಡುಗಿ ಸಾಮಾನ್ಯಳಲ್ಲ. ತನಗೆ ಶರವೇಗದಲ್ಲಿ ಹೆಸರು, ಹಣ ಬರುವಂತೆ ಮಾಡಿದಳಲ್ಲ ! ಹತಾಶೆಯಿಂದ ಬಳಲುತ್ತಿದ್ದಾಗ ತನಗೆ ಹೊಸ ಭರವಸೆಯ ಅಗತ್ಯವಿತ್ತು. ಆ ಭರವಸೆಯೆನೋ ದೊರಕಿತ್ತು. ಆದರೆ, ಈ ಇರುಳು ಬೆಳಕಿನ ಭ್ರಾಮಕ ಪ್ರಪಂಚದ ತೆರೆಮರೆಯಲ್ಲಿ ಏಕೋ ಭಯವೇ ಆವರಿಸುತ್ತಿತ್ತು.....

ಅದೋಂದು ಸಂಜೆ ಲಾವಣ್ಯ ರೋಸಿಯನ್ನು ಷಾಪಿಂಗ್‌ಗೆ ಕರೆದುಕೊಂಡು ಹೋದಳು. ಅವಳು ಬೇಡವೆಂದರೂ ಅವಳಿಗಾಗಿ ನಾಲ್ಕು ಜತೆ ಉಡುಪುಗಳನ್ನು ಖರೀದಿಸಿದ್ದಳು. ಎಂ. ಜಿ. ರೋಡಿನ ಪಬ್‌ವೊಂದರಲ್ಲಿ ಅವರಿಬ್ಬರೂ ಜ್ಯೂಸ್ ಹೀರುತ್ತ ಕುಳಿತಿದ್ದರು. ಅಲ್ಲೇ ಪ್ರತ್ಯಕ್ಷನಾಗಿದ್ದ ಛಾಯಾಪತಿ ! ಲಾವಣ್ಯಳ ಪಕ್ಕಕ್ಕೇ ಬಂದು ಕುಳಿತ. ಉಭಯ ಕುಶಲವನ್ನು ಆರಂಭಿಸಿದವನೆ ನೇರವಾಗಿಯೇ ವಿಷಯಕ್ಕೆ ಬಂದ. “ ಲಾವಣ್ಯ ಳಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ. ಅವಳು ಇನ್ನೂ ಪೂರ್ತಿ ಚಳಿ ಬಿಟ್ಟು ನಡ್ಕೊಬೇಕು. ಇಲ್ಲಿ ಎಲ್ಲರ ಜತೆ ಬೆರೆಯಬೇಕು ” ಅಂದ.
“ ಇನ್ನೂ ಚಳಿ ಬಿಟ್ಟು ನಡ್ಕೋಳೂದೋಂದ್ರೆ ಅಸಭ್ಯವಾಗಿಯೇ ಅಂಗ ಪ್ರದರ್ಶನ ಮಾಡಬೇಕು ! ಅದು ನನ್ನಿಂದ ಸಾಧ್ಯ ಇಲ್ಲಾ ” ಲಾವಣ್ಯ ಚುರುಕಾಗಿ ಹೇಳಿದಳು.
“ ಲಾವಣ್ಯ, ನಿನಗೆ ಇಲ್ಲಿ ಎಲ್ಲವೂ ಅರ್ಥವಾಗಿಲ್ಲ. ನಿನಗೆ ಅರ್ಹತೆ ಇದೆ. ತರಬೇತಿ ಸಾಲದು. ಇಲ್ಲಿ ಎಕ್ಸ್‌ಪೋಸ್‌ ಆಗುವುದರಲ್ಲಿ ಕೆಲವು ಟ್ರಿಕ್ಸಗಳೀವೆ, ನೀನು ವಾರಕ್ಕೋಮ್ಮೆಯಾದರೂ ನನ್ನ ಸ್ಟುಡಿಯೋಗೆ ಬಂದರೆ ಸಾಕು ನಾನು ಎಲ್ಲ ಹೇಳಿಕೊಡ್ತೀನಿ. ಛಾಯಾಪತಿ ಆಕೆಯನ್ನೇ ಕಂಗಳಿಂದ ನಿಟ್ಟಿಸಿದ್ದ.”
ರೋಸಿಯತ್ತ ಪ್ರಶ್ನಾರ್ಥಕ ನೋಟ ಬೀರಿದಳು ಲಾವಣ್ಯ. “ ಷೀ ಈಸ್ ರಿಯಲೀ ಲೌಲೀ ಗರ್ಲ್,. ನಿನ್ನಂಥ ಆತ್ಮೀಯಳ ಸಲಹೆ ಅವಳಿಗೆ ಅಗತ್ಯ. ” ಮತ್ತೆ ರೋಸಿಯತ್ತ ನೋಡಿ ಮಾತಿಗೆ ಜೇನು ಸವರಿದ ಛಾಯಾಪತಿ.
“ ವಾರಕ್ಕೋಂದ್ಸಾರಿ ಹೋಗ್ಬರಲಿಕ್ಕೇನು ಲಾವಣ್ಯ ? ಇಲ್ಲಿ ಎತ್ತರಕ್ಕೇರಬೇಕೆಂದರೆ, ಸ್ಟುಡಿಯೋದ ಕತ್ತಲೆ ಬೆಳಕಿನಾಟದಲ್ಲಿ ಮೊದಲು ಪಳಗಬೇಕು. ” ರೋಸಿ ನಗೆ ಸೂಸಿದಳು.ಸ ಲಾವಣ್ಯ ಮೌನವಾಗಿಯೇ ಇಬ್ಬರನ್ನೂ ವೀಕ್ಷಣೆ ಮಾಡುತ್ತ ಕುಳಿತಳು. ಮನಸ್ನು ಡೋಲಾಯ ಮಾನವಾಗಿತ್ತು. “ ಒಂದು ಕಂಡೀಷನ್ ಲಾವಣ್ಯ. ನೀನು ಪೋನಾಯಿಸಿ ಒಬ್ಬಳೇ ಬರ್ಬೇಕು. ಯಾಕೇಂತ ರೋಸಿನೇ ಕೇಳಿ ತಿಳಿದುಕೊ ” ಛಾಯಾಪತಿ ಅಚಾನಕ್ಕಾಗಿ ತಾನು ಬಂದರೂ ಇಲ್ಲೊಂದು ವ್ಯಾಪಾರ ಕುದುರಿತೆಂಬ ಗೆಲುವಿನಿಂದ ಹೊರಟುಬಿಟ್ಟ.
ಅವನು ಇತ್ತ ಮರೆಯಾಗುತ್ತಿದ್ದಂತೆ, “ ಇವನನ್ನ ಹೇಗೆ ನಂಬೋದೆ ಹುಡುಗಿ..... ! ತುಂಬಾ ಸೊಗಸುಗಾರನ ಹಾಗೆ ಕಾಣ್ತಾನೆ. ” ಲಾವಣ್ಯ ತಿಳಿದನಿ ಎತ್ತಿದಳು.
“ ನಂಬಲೇಬೇಕಮ್ಮ..... ಇಂಥ ಸೊಗಸುಗಾರನನ್ನೇ ನೀನು ಸಲೀಸಾಗಿ ನಿನ್ನ ಬುಟ್ಟಿಗೆ ಹಾಕ್ಕೋಂಡೇಂದರೆ ಅರ್ಧ ಗೆದ್ದ ಹಾಗೆ ..... ”
“ ಅದೇನೆ ಬುಟ್ಟಿಗೆ ಹಾಕ್ಕೋಳೂದೂಂದರೆ..... ನನಗೆ ಅದೆಲ್ಲ ಬರೋಲ್ಲ..... ಅವನ ಹತ್ತಿರ ಹೋಗಲೇಬೇಕೇನು ? ”
“ ಹೋಗದಿದ್ದರೆ ನಿನ್ನನ್ನ ನಡು ನೀರಲ್ಲೇ ಕೈ ಬಿಡ್ತಾನೆ..... ಬಹಳ ಇನ್‌ಪ್ಲೂಯೆನ್ಸ್ ಇರೋ ಮನುಷ್ಯ. ಮನಸ್ಸು ಮಾಡಿದರೆ ನಿನ್ನನ್ನ ಏನೂ ಮಾಡಬಲ್ಲ...... ”
“ ಓ ಹಾಗೇನು ! .... ಅವನಿಗೆ ಮದುವೆ ಆಗಿದೆಯೆನು ? ”
“ ಓ ಯಾಕೇ..... ”
“ ಸುಮ್ನೆ ಕೇಳಿದೆ.... ”
“ ಆಗಿಲ್ಲ.... ನೀನೂ ಪ್ರಯತ್ನಿಸಬಹುದಲ್ಲ...... ” ರೋಸಿ ಕುಹಕ ನಗೆ ನಕ್ಕಳು.
ಲಾವಣ್ಯ ಆದಾಗಲೇ ಯಾವುದೋ ಗುಂಗಿನಲ್ಲಿದ್ದಳು.

ಇಬ್ಬರೂ ಗೆಳತಿಯರೂ ಹಾಸ್ಟೆಲ್ಲಿಗೆ ವಾಪಾಸ್ಸಾಗಿದ್ದರು. ಆಗ ರಾತ್ರಿ ಎಂಟುವರೆ. ಎದುರಿಗೆ ಕಾಣಿಸಿದ ವಾರ್ಡನ್ ರಮಾಮಣಿ ಹೇಳಿದಳು, “ ಲಾವಣ್ಯ, ನಿಮ್ಮ ಬಾವಾ ಅಭಿರಾಮ ಕೇಳ್‌ಕೊಂಡು ಬಂದಿದ್ದರು. ನೀನು ಅವರ ಮನೆಗೆ ಪೋನ್ ಮಾಡ್ಬೇಕಂತೆ. ”
“ ಆಯ್ತು ಮೇಡಮ್ ...... ” ಎಂದು ರೋಸಿ ಜತೆ ಹಾಸ್ಟೆಲಿನೊಳಗೆ ಹೆಜ್ಜೆ ಹಾಕಲಿದ್ದಳು ಲಾವಣ್ಯ.
“ ಇಲ್ನೋಡು ಲಾವಣ್ಯ, ನಿನ್ನನ್ನ ಕೇಳಿಕೊಂಡು ಇಲ್ಲಿಗೆ ಬರೋ ಜನ ಹೆಚ್ಚುತ್ತಿದ್ದಾರೆ. ಇವರು ಬಿಡು, ನಿನ್ನ ಬಾವನ ವಿಷ್ಯ ಬೇರೆ. ನಿನಗಾಗಿ ಬರೋ ಪೋನ್‌ ಕಾಲ್‌ಗಳು ಬಹಳ. ನೀನು ಆ ಹಾಸ್ಟೆಲ್‌ನಲ್ಲಿರಬೇಕೆಂದರೆ, ಮಾಡೆಲಿಂಗ್ ಮಾಡೋದನ್ನ ಬಿಡ್ಬೇಕು. ಹ್ಞಾಂ, ನಿನಗೇನು ಈಗ ದುಡಿಮೆ ಚೆನ್ನಾಗಿದೆಯಲ್ಲ, ಹೈ ಸೊಸೈಟಿ ಏರಿಯಾದಲ್ಲೋಂದು ಫ್ಲಾಟ್ ಖರೀದಿ ಮಾಡ್ಕೊಂಡು ಹೋಗ್ಬಹುದಲ್ಲ.... ! ರಮಾಮಣಿ ಜಡಿಮಳೆ ಹೊಯ್ದಂತೆ ಮಾತಿನ ಮಳೆಗೆರೆದಳು. ಲಾವಣ್ಯ ಮೂಕವಿಸ್ಮಿತೆಯಾದಳು.”
“ ರೋಸಿ ನಿಲ್ಲು, ನೀನೂ ಕಾಲೇಜ್ ಹುಡ್ಗಿ ಅಲ್ಲಾ..... ನಿನ್ನ ಆಯ್ಕೆ ಯಾವುದಾದರೂ ಒಂದಾಗಿರಲಿ. ಮಾಡೆಲಿಂಗ್ ಅಥವಾ ಸ್ಟಡಿಯಿಂಗ್ ನಮ್ಮ ಹಾಸ್ಟೆಲ್‌ನಲ್ಲಿ ಚೆನ್ನಾಗಿ ಓದೋ ಹುಡುಗಿಯರೂ ಇದ್ದಾರೆ. ಅವರ ಪೇರೆಂಟ್ಸ್ ನಮ್ಮ ಮೇಲೆ ಬಹಳ ಭರವಸೆ ಇಟ್ಟಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಓದಲಿಕ್ಕೆ ಒಳ್ಳೆ ವಾತಾವರಣ ಇದೇಂತ. ನೀವು ಅದನ್ನು ಹಾಳು ಮಾಡ್ತಾ ಇದ್ದೀರಾ. ನೀವು ಇಲ್ಲೇ ಇರಬೆಕೂಂದ್ರೆ ಇಲ್ಲಿನ ನಿಯಮ, ನಿಬಂಧನೆ ಪಾಲಿಸಬೇಕು. ತಿಳೀತೇ ? ರಮಾಮಣಿ ಕಟ್ಟಪ್ಪಣೆ ಮಾಡಿದ್ದಳು. ”
“ ಸಾರೀ..... ಮೇಡಮ್...... ”ರೋಸಿ ರಾಗವೆಂದಳು.
ಪಾಪ! ಅವಳಿಗೆ ಗೊತ್ತಿಲ್ಲದೇ ಈ ಮೇಡಮ್ ಯಾವಾಗಲು ಹೀಗೆ ಕಪ್ಪೆ ವಟಗುಟ್ಟಿದ ಹಾಗೇಂತ. ಸ್ವಲ್ಪ ಪೆಚ್ಚಾದವಳೆಂದರೆ ಲಾವಣ್ಯ, ಅವಳು, “ ನಮ್ಮ ಬಾವನವರಿಗೆ ಪೋನ್ ಮಾಡ್ಲೇ ಮೇಡಮ್ ......” ಮೆಲ್ಲನೆ ಕೇಳಿದಳು.
“ ಮಾಡು........ ಮಾಡೂ..... .”ರಮಾಮಣಿ ಅದೇ ಗತ್ತಿನಿಂದ ಹೇಳಿದಳು. ಲಾವಣ್ಯ ಪೋನ್ ರಿಸೀವರ್ ಎತ್ತಿಕೊಂಡು ನಂಬರ್ ಒತ್ತಿದಳು.
“ ಹಲೋ.....” ಆ ಕರೆಗೆ ಆ ಕಡೆಯಿಂದ ಅಬಿರಾಮ ಪ್ರತಿಕ್ರಿಯೆಸಿದ್ದ.
“ ನಾನು ಬಾವ, ಲಾವಣ್ಯ.... ಹೇಗಿದ್ದೀರಿ..... ? ”
“ ಚೆನ್ನಾಗಿದ್ದೇನೆ....... ನೀನು ಬಿಡು ಈಗ ಆಕಾಶದಲ್ಲೇ ಹಾರಾಡ್ತಾ ಇದೀಯ, ನಮ್ಮನ್ನೆಲ್ಲಾ ಮರೆತು ಬಿಟ್ಟಿಯೇನೂ..... ! ”
“ ಇಲ್ಲ ಬಾವ, ನನಗೂ ನಿಮ್ಮನ್ನ, ಅಕ್ಕನ್ನಾ ನೋಡಲ್ಲಿಲ್ಲಾಂತ ಮನಸ್ಸಲ್ಲೇ ಕೊರೆಯುತ್ತಿತ್ತು. ಅಕ್ಕ ಹೇಗಿದ್ದಾಳೆ ಬಾವ........ ”
“ ನಿನ್ನ ಅಕ್ಕ ತಾಯಿಯಾಗಲಿದ್ದಾಳೆ. ಅವಳಿಗೀಗ ಆರು ತಿಂಗಳು. ಆದರೆ ....”
“ ಆದರೇನು ಬಾವ, ಅಕ್ಕನಿಗೆ ಹುಷಾರಿಲ್ಲವೇ ? ”
“ ಅದೇ, ತುಂಬಾ ಸುಸ್ತೂ, ಆಯಾಸ ಅನ್ತಿರ್ತಾಳೆ. ಡಾಕ್ಟರು ಮಾತ್ರ, ಟಾನಿಕ್ ಬರೆದುಕೊಟ್ಟಿದ್ದಾರೆ. ತಗೋಳ್ತಾ ಇದ್ದಾಳೆ...... ಪೂರ್ತಿ ರೆಸ್ಟ್‌ನಲ್ಲಿರಬೇಕೂಂತಾರೆ. ನಿನ್ನನ್ನ ನೋಡ್ಬೇಕೂಂತ ಹೇಳ್ತಾನೆ ಇರ್ತಾಳೆ.”
“ ನಾನೂ ಬೆಳಿಗ್ಗೆನೆ.... ಆಗದೇ..... ? ”
“ ನಾನೂ ಫ್ಯಾಕ್ಟರಿಗೆ ಒಂದು ವಾರ ರಜೆ ಹಾಕಿದ್ದೇನೆ. ಹಾಗಾದರೆ ನೀನು ಬಂದು ಬಿಡು .... ” ಅಭಿರಾಮ ರಿಸೀವರ್ ಇಟ್ಟ ಸದ್ದು. ಲಾವಣ್ಯಳ ಮುಖ ಕಳಾಹೀನಾವಾಗಿತ್ತು. ‘ ಅಕ್ಕಾ ಈ ಬಾರಿ ಸುಖವಾಗಿ ಮೈ ಕಳೆದರೆ..... ಓ ದೇವರೇ, ಅಕ್ಕನ ಮಡಿಲು ತುಂಬಿದರೆ ಎಷ್ಟು ಚೆನ್ನ ! ’ ಅವಳಿಗಾಗಿ ಮನಸ್ಸು ಮರುಗಿತ್ತು. ಈಗಾಗಲೇ ಲಾವಣ್ಯಳ ವೈಯುಕ್ತಿಕ ವಿಷಯವನ್ನೆಲ್ಲ ಕೇಳಿ ತಿಳಿದಿದ್ದ ರೋಸಿ “ ಮೊದಲು ಹೋಗಿ ಬರಬಾರದೇ ಸಿಸ್ಟರ್..... ” ಅಂದಳು.

ಮರುದಿವಸ ಬೆಳಿಗ್ಗೆಯೇ ಲಾವಣ್ಯ ಅಕ್ಕನ ಮನೆಯಲ್ಲಿ ಕಾಲಿಟ್ಟಳು. ಅಭಿರಾಮ ಹಾಲ್‌ನಲ್ಲಿ ಅಂದಿನ ಪತ್ರಿಕೆ ಓದುತ್ತಾ ಕೂತಿದ್ದ. ಹೆಜ್ಜೆಯ ಸಪ್ಪಳವಾಗುತ್ತಿದ್ದಂತೆ ತಲೆ ಎತ್ತಿದ್ದ. ತನ್ನ ಪ್ರೀತಿಯ ನಾದಿನಿ ಎದುರಿಗೆ ನಿಂತಿದ್ದಾಳೆ ! ಬಹಳ ದಿವ್ಸಗಳ ನಂತರದ ಭೇಟಿ, ಲಾವಣ್ಯ ಬಾವನ ಮುಖದಲ್ಲೇ ಆಳವಾಗಿ ಮೂಡಿದ್ದ ಚಿಂತೆಯ ಗೆರೆಗಳನ್ನು ಗುರುತಿಸದಿರಲಿಲ್ಲ. ಏಕೋ ಅವಳ ಕಣ್ಣುಗಳು ತೇವಗೊಂಡವು.
“ ಬಾವಾ....... ” ದನಿ ಕಂಪಿಸಿತ್ತು.
“ ಲಾವಣ್ಯ .... ” ಆತನ ಮಾರ್ದನಿ ವಿಲಪಿಸಿತ್ತು. ನೂರು ಮಾತುಗಳೂ ಹೇಳಲಾಗದ ಅನುಬಂದದ ಸೆಲೆ ! ಕ್ಷಣಕಾಲ ಇಬ್ಬರೂ ಮೈ ಮರೆತರು..... ಇಹದ ನೋವನ್ನು ಹತ್ತಿಕ್ಕಲು ಮನಗಳು ಒಂದಾಗಿದ್ದವು.
ಸಹನಾ ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ತಂಗಿ ಬಂದ ಸಪ್ಪಳ ಕೇಳಿ ಎಚ್ಚರಗೊಂಡಳು. ಅವಳು ತನ್ನ ಕೋಣೆಗೆ ಬಂದಾಗ ಪ್ರಯಾಸ ಪಡುತ್ತಾ ಹಾಸಿಗೆಯಿಂದೆದ್ದು ಕುಳಿತಳು.
“ ಬಂದೇಯೇನು ? ನೀನು ಬರ್ತೀಯೋ, ಇಲ್ವೋ ಅನ್ಕೊಂಡಿದ್ದೆ.....” ಅಂದಳು.
“ ಯಾಕಕ್ಕಾ..... ? ”
“ ಈಗ ನಿನಗೆ ಕೀರ್ತಿ, ಹಣ ಎಲ್ಲಾ ಇದೆ, ನಾವು ಮರೆತು ಹೋಗಬಹುದಲ್ಲ.... ! ”
“ ಹಾಗೆಲ್ಲ ಹೇಳ್ಬೇಡಾ ಅಕ್ಕಾ...... ನನಗಾದರೂ ಬೇರೆ ಯಾರಿದ್ದಾರೆ ? ”
“ ಲಾವಣ್ಯ, ನಾನು ಹೆಚ್ಚು ದಿನ ಬದುಕೊದಿಲ್ಲ ಕಣೇ. ”
“ ಅಕ್ಕಾ..... ಏನ್ ಮಾತೂಂತ ಆಡ್ತಿಯಾ ? ನಿಂಗೆನಾಗಿದೆ, ಏನು ಆಗೊಲ್ಲಾ...... ” ಎಂದ ಲಾವಣ್ಯ ತನ್ನ ಬಾವನ ಕಡೆ ತಿರುಗಿ,
“ ಬಾವಾ, ಅಕ್ಕನಿಗೆ ಏನಾಗಿದೇಂತ ಡಾಕ್ಟರು ಹೇಳ್ತಾರೆ.... ” ಕೇಳಿದಳು.
“ ಹೆರಿಗೆ ಕಷ್ಟವಾದೀತು. ಅವಳು ಧೈರ್ಯವಾಗಿರಬೇಕಷ್ಟೇ. ಹಾಗೇನಾದ್ರೂ ಅದ್ರೆ ಸಿಸೇರಿಯನ್ ಮಾಡ್ಬೇಕೆಂದೇ ಹೇಳ್ತಾರೆ.....”
“ ಓ ಇದೇ ಏನೂ...... ಈವಾಗೆಲ್ಲಾ ಸಿಸೇರಿಯನ್ ಕೇಸು ಏನೂ ಅಲ್ಲಾ, ಅದಿಕ್ಕೆ ಗಾಬರಿಯಾಗೊದೂ..... ಇವಳು...... ? ಲಾವಣ್ಯ ಅಕ್ಕನ ಭುಜ ಆಲುಗಿಸಿದಳು.”
“ ನನ್ನ ದೇಹ ಸ್ಥಿತಿ ನಂಗೊತ್ತಿಲ್ಲವೇನೆ ..... ” ಸಹನಾ ನರಳಿದಳು.
“ ಅಕ್ಕಾ, ಮೊದಲನೇ ಹೆರಿಗೇಲಿ ಎಲ್ಲಾ ಹೆಂಗಸರು ಹೀಗೆ ಅನ್ನೋದು.... ” ಲಾವಣ್ಯ ಎಂದಳು.
“ ರೀ..... ಕಾಫಿ ತಗೊಂಬರ್ತಿರಾ.... ನಿಮ್ಮ ನಾದಿನಿಗೂ ಒಂದು ಕಪ್ಪು ತನ್ನಿಂದ್ರೆ..... ಸಹನಾ ಹೇಳಿದಳು. ”
ಮರುಕ್ಷಣದಲ್ಲಿಯೇ ಅಭಿರಾಮ ಎದ್ದು ಹೋಗಿದ್ದ. ಬಿಸಿ ಕಾಫಿಯ ಎರಡು ಕಪ್ಪು ಟ್ರೇನಲ್ಲಿಟ್ಟು ತಂದಿದ್ದ.
“ ಹೀಗೆ ...... ಅಟ್ ಲೀಸ್ಟ್ ಸಮಯ ಸಂದರ್ಭ ಅಂದ್ರೆ ಕುಳಿತಲ್ಲೇ ಕೈ ಹಿಡಿದಾಕೆಯ ಸೇವೆಯನ್ನು ಮಾಡೋ ಗಂಡ ಸಿಗಬೇಕೂಂದರೆ..... ಪುಣ್ಯ ಮಾಡಿರಬೇಕೂ ಅಕ್ಕಾ ನೀನೂ.....” ಲಾವಣ್ಯ ತನ್ನ ಬಾವನನ್ನು ಹೊಗಳಲು ಶುರುಮಾಡಿದಳು.
“ ಹೌದಮ್ಮ, ಹೆಂಡತಿಯೆಂದ್ರೆ ತಾಯಿಯೂ ಆಗ್ತಾಳೆ ಎಂದೇ ಭಾವಿಸ್ತಾರೆ. ನಾನು ನಿಜಕ್ಕೂ ತಾಯಿ ಆಗೋದು ಒಂದು ಮಗುವಿಗೆ ಜನ್ಮ ನೀಡಿದಾಗಲೇ ತಾನೇ ? ಆ ಶಕ್ತಿ ನನಗೆ ಇದೆಯೇನೆ ? ಇನ್ನೂ ನೀನು ಮನಸ್ಸು ಮಾಡಿದರೆ ಖಂಡಿತ ತಾಯಿ ಆಗ್ತೀಯಾ ನೋಡು. ” ಸಹನಾಳ ಸ್ವರ ಆರ್ತವಾಯಿತು. ತುಸು ತಡೆದು ಅವಳೇ ಹೇಳಿದಳು.
“ ಲಾವಣ್ಯ, ನಾನು ಕಣ್ಮುಚ್ಚಿಕೊಂಡ್ರೆ ನೀನು ನಿನ್ನ ಬಾವನ್ನ ಮರೀಬೇಡ್ವೇ. ನೀನೇ ಅವರಿಗೆ ಎಲ್ಲಾ. ” ಸಹನಾಳ ಕೆನ್ನೆ ಮೇಲೆ ಕಂಬನಿ ತೊಟ್ಟಿಕ್ಕಿತ್ತು.
“ ಅಕ್ಕಾ, ಯಾಕಿಷ್ಟು ಭಾವುಕಳಾಗ್ತಿಯಾ ! ನಿಂಗೇನೂ ಆಗೊಲ್ಲಾ ಅಕ್ಕಾ. ” ಅಕ್ಕನ ಪಕ್ಕಕ್ಕೆ ಒತ್ತಿರಿಸಿಕೊಂಡು ಕುಳಿತಳು.
“ ತಗೋಳೇ, ಕಾಫಿ ಆರಿ ಹೋಗುತ್ತೇ. ” ಕಪ್ಪು ಅವಳ ಕೈಗಿಟ್ಟಳು ಲಾವಣ್ಯ. ಅಭಿರಾಮ ಈ ಅಕ್ಕ ತಂಗಿಯರ ಪ್ರೀತಿ ವಾತ್ಸಲ್ಯವನ್ನು ಕಂಡು ಅವಕ್ಕಾಗಿದ್ದ.
“ ರೋಸಿ, ನಿನಗೆ ಬಾಯ್ ಫ್ರೆಂಡ್ಸ್ ಎಷ್ಟು ಜನ ? ” ಲಾವಣ್ಯ ಎಂದಾದರು ತನಗೆ ಈ ಪ್ರಶ್ನೆ ಹಾಕುತ್ತಾಳೆ ಎಂಬುದನ್ನೂ ರೋಸಿ ಊಹಿಸಿದ್ದಳು.
“ ಇದ್ದಾರೆ ಇದ್ದಾರೆ..... ನನ್ನ ಲೆಕ್ಕಕ್ಕೆ ಸಿಗೊದೂಂದ್ರೆ ಐವರು ಮಾತ್ರ ” ಅಂದಳು.
“ ಅವರ ಜತೆ ನಿನ್ನ ಸಂಬಂದ ಎಲ್ಲಿಯವರೆಗೆ ? ”
“ ಏನ್ ಸಿಸ್ಟರ್, ನನಗೆ ಕ್ಲಾಸ್ ತಗೊಳ್ತಾ ಇದೀಯಾ ... ? ” ಮೊರೆ ಊದಿಸಿಕೊಂಡವಳೇ,
“ ಊಂ...... ನಂಗೆ ನಿದ್ರೆ ಬರ್ತಾ ಇದೆ...... ” ಹೊದಿಕೆ ಮುಖದ ಮೇಲೆಳೆದುಕೊಂಡಳು.
ಹೌದು, ರಾತ್ರಿ ಹತ್ತೂವರೆ ಗಂಟೆಯಾಗಿತ್ತು.
“ ನನ್ನ ಮಾಜಿ ಗಂಡನ ವಿಷಯವನ್ನೇಲ್ಲ ನಿಂಗೆ ಹೇಳಿಲ್ವೇನೆ ಹುಡುಗಿ ? ”ಬೇಕೆಂತಲೇ ಕೆದಕಿದಳು.
“ ಆಗಲಿ ಸಿಸ್ಟರ್, ಹೇಳಿಯೇ ಬಿಡ್ತೀನಿ. ನನ್ನ ವಿಷಯ ನಿನಗೂ ತಿಳಿದು ಹೋಗಲಿ.... ಐದು ಜನ ಬಾಯ್ ಫ್ರೆಂಡ್ಸ್ ಇದ್ದಾರೆ. ಅವರಲ್ಲಿ ಇಬ್ಬರ ಜತೆ ದೈಹಿಕ ಸಂಭಂದ ಇದೆ. ”
“ ನಿನಗೆ ತಪ್ಪು ಮಾಡ್ತಾ ಇದೀನಿ ಅನ್ನಿಸಿಲ್ಲವೇ ? ”
“ ನಿನ್ನನ್ನಾ, ನಿನ್ನಿ ನೈಸ್ ಬಾಡಿನಾ ನೋಡ್ತಾ ಇದ್ದರೆ, ನಂಗೆ ಅಯ್ಯೋ ಪಾಪ ಅನ್ಸುತ್ತೇ... ”
“ ಯಾಕೇ... ? ”
“ ನೀನು ಈ ಸೈಂಟಿಫಿಕ್ ಯುಗದಲ್ಲಿ ಪ್ರೀತಿ, ಪ್ರೇಮಗಳ ಸಂಬಂದಗಳಲ್ಲೇ ಭಾವುಕಳಾದರೆ ಹೇಗೆ ? ”
“ ನಿನ್ನ ಮಾತೇ ನನಗೆ ಅರ್ಥವಾಗಲಿಲ್ಲ. ”
“ ಇಂದಿನ ಸೊಸೈಟಿಯಲ್ಲಿ ಅರ್ಥವಿಲ್ಲದ ಬದುಕನ್ನೇ ಅನುಭವಿಸುತ್ತಾ ಮಜವಾಗಿರೋರು ಬಹಳವಾಗಿದ್ದಾರೆ. ಸಿಸ್ಟರ್, ನಿನಗೆ ನನಗಿಂತ ಪ್ರಾಯ ಹೆಚ್ಚಾಗಿದೆಯಷ್ಟೇ. ಆ ಪ್ರಾಯದ ಹರವಿನೊಂದಿಗೆ ನಿನ್ನ ಯೋಚನೆಯ ದಿಕ್ಕೂ ಬದಲಾಗ್ಬೇಕು. ಇಲ್ಲದ್ದಿದ್ದರೆ, ಸುಖವನ್ನೇ ಕಾಣದೆ ಸೊರಗಿ ಹೋದಿಯೇ ಜೋಕೆ.... ! ” ರೋಸಿ ಕೊಂಕಿನಿಂದಲೇ ನುಡಿದಳು.
ಈ ಹದ್ದು ಮೀರಿದ ಹುಡುಗಿಯ ಹತ್ತಿರ ಮಾತಾಡಿ ಗೆಲ್ಲುವುದುಂಟೇ ಎನಿಸಿತು ಲಾವಣ್ಯಳಿಗೆ. ಆದರೂ, ಅವಳು ಹೇಳಿದ ಹಾಗೆ ತಾನೆಲ್ಲಿ ಸೊರಗಿಹೋಗುವೆನೋ ಎಂಬ ಆತಂಕವೂ ಬೆನ್ನು ಬೀಳದಿರಲಿಲ್ಲ.
ನನ್ನ ಮಾತು ಕಟುವಾಯ್ತೆ ಸಿಸ್ಟರ್ ! ಈವಾಗಿನ ಪ್ರಪಂಚದಲ್ಲಿ ಹೊಂದಿಕೊಂಡು ಸುಖಪಡುವುದೆಂದರೆ ಅದೂ ನಮ್ಮ ಕೈಯಲ್ಲೇ ಇದೆಯಲ್ಲ !.
“ ಹೌದು, ನೀನು ಹೇಳುವುದೂ ನಿಜಾನೇ, ಆದರೆ, ನಮ್ಮದೇ ಆಯ್ಕೆಯ ದಾರಿಯಲ್ಲಿ ನಾವು ಎಚ್ಚರದಿಂದಲೇ ನಡೆಯಬೇಕಲ್ಲವೇ ! ”
“ ಅದ್ಸರಿ ಛಾಯಪತಿಗೆ ಪೋನ್ ಮಾಡಿ ಅಪಾಯಿಂಟ್‌ಮೆಂಟ್‌ ತಗೋಳೋದಿಲ್ಲವೇನೂ ? ” ಥಟ್ಟನೆ ಮಾತು ಬದಲಿಸಿದಳು ರೋಸಿ.
ತಕ್ಷಣವೇ ಉತ್ತರಿಸಲಾಗದೆ ಕುಳಿತಳು ಲಾವಣ್ಯ.
ರೋಸಿ;ಮತ್ತೆ ಹೇಳಿದಳು,

“ ಛಾಯಾಪತಿಯೊಡನೆ ಒಂದೆರಡು ಗಂಟೆಗಳನ್ನು ಕಳೆದು ಬಾ. ನಿನಗೆ ಮುಂದೆ ಬಹಳ ಉಪಯೋಗವಾದೀತು. ”
“ ಅದೇನು ಉಪಯೋಗವೋ...... ನೀನು ಹೋಗಿದ್ಯಾ ? ”
“ ಹೋಗಿದ್ದೆ ನನಗೆ ನಿನ್ನ ಫಿಗರ್ ಇಲ್ಲವಲ್ಲ.... ! ”
“ ನಾನು ಒಂದು ಮಾತು ಹೇಳಲಾ ರೋಸಿ ? ”
“ ಹೇಳು ”
“ ನಿನಗೆ ಡೆಂಟಲ್ ಸರ್ಜನ್ ಆಗಲಿಕ್ಕೆ ಇಷ್ಟವಿಲ್ಲವೇ..... ”
“......”
“ ಹೇಳು ರೋಸಿ .”
“ ನನ್ನಂಥ ಸಾಧಾರಣ ಹೆಣ್ಣಿಗೆ ಈ ಮಾಡೆಲಿಂಗ್‌ನಲ್ಲಿ ಹೇಳಿಕೊಳ್ಳೋಂತ ಪ್ಯೂಚರ್ ಇಲ್ಲಾ ಅನ್ನಿಸಿದೆ, ನಿನ್ನನ್ನು ನೋಡಿದ ಮೇಲೆ. ”
“ ನನ್ನ ಸೌಂದರ್ಯದದಿಂದಲೇ ತಾನೆ ? ನನ್ನ ಸೌಂದರ್ಯ ನನ್ನನ್ನ ಏನೂ ಮಾಡಿಬಿಡಬಹುದು. ಅಲ್ವಾ ? ” ವಿಲಕ್ಷಣ ನಗೆ ನಕ್ಕಳು ಲಾವಣ್ಯ.
“ ಅದಿರಲಿ, ಮುಂದೇನು ನಿನ್ನ ಯೋಚನೆ ? ”
“ ಈಗಲೇ ಏನೂ ಹೇಳಲಾರೆ ”
ರೋಸಿ ಹಾಸೆಗೆಯಲ್ಲಿ ಮಗ್ಗುಲಾದಳು. ರಾತ್ರಿ ಒಂದು ಹೊತ್ತಿನಲ್ಲಿ ಧಡಕ್ಕನೆ ಎಚ್ಚರವಾಯಿತು. ಲಾವಣ್ಯಳಿಗೆ ಎದ್ದು ಬಾತ್ ರೂಮಿಗೆ ಹೋಗಿಬಂದಳು. ಆ ಬಳಿಗೆ ಹಾಸಿಗೆಯಲ್ಲಿ ಹೊರಳುವುದೇ ಆಯಿತು. ಪಕ್ಕದ ಬೆಡ್‌ನಲ್ಲಿ ರೋಸಿ ಮಲಗಿದ್ದಾಳೆ ದುಂಡುದುಂಡನೆಯ ಮುದ್ದಾದ ಹುಡುಗಿ. ಮೈಮರೆತು ನಿದ್ರೆ ಹೋಗಿದ್ದಾಳೆ. ಉಕ್ಕೇರುತ್ತಿರುವ ಪ್ರಾಯವೊಂದೇ ಅವಳ ಬಂಡವಾಳ, ಪ್ರಾಯಕ್ಕೆ ಬಂದರೆ ಕತ್ತೆಯೂ ಸುಂದರವೆಂಬಂತೆ. ತನಗಿಂತ ವಯಸ್ಸಿನಲ್ಲಿ ಚಿಕ್ಕವಳೇ.

ಈಗಲೇ ಪ್ರಪಂಚವನ್ನೇಲ್ಲ ಕಂಡವಳ ಹಾಗೆ ಆಡುತ್ತಾಳೆ. ಸುಖ ಎಂಬುದನ್ನೂ ಅವಳದೇ ರೀತಿಯಲ್ಲಿ ವ್ಯಾಕ್ಯಾನಿಸುತ್ತಾಳೆ. ತನ್ನ ದೇಹವನ್ನು ಡಯೆಟಿಂಗ್ ಮಾಡಿ ಚೆನ್ನಾಗಿಯೇ ಇಟ್ಟುಕೊಂಡಿದ್ದಾಳೆ. ತನ್ನ ಸುಖದ ಲೋಕದಲ್ಲಿದ್ದೂ ಯಾವುದೇ ಸೋ0ಕು ರೋಗ ತನ್ನ ದೇಹಕ್ಕೆ ತಗುಲದಂತೆ ಮುಂಜಾಗ್ರತೆ ವಹಿಸಿದ್ದಾಳೆ. ಆ ಬಗ್ಗೆಯೂ ಅನುಭವಿಯಂತೆ ನುಡಿಯುತ್ತಾಳೆ. ಅವಳ ದೃಷ್ಟಿಯಲ್ಲಿ ಬದುಕುವುದೂ ಮೊದಲು ಅನುಬೋಗದಿಂದ, ಅನಂತರ ಅನುಭವದಿಂದ. ಎಂಥಾ ಸೊಂಪಾಗಿ ನಿದ್ರೆ ಹೊಡೆಯುತ್ತಿದ್ದಾಳೆ ! ಅಸೂಯೆಯಾಯಿತು. ಲಾವಣ್ಯಳಿಗೆ ಹಾಸಿಗೆಯಲ್ಲಿ ಹೊರಳಿದಷ್ಟೂ ಮೈ ಬಿಸಿಯೇರುತ್ತಲೇ ಇದೆ. ಬಯಕೆ ಭುಗಿಲೇಳುತ್ತಿದೆ. ತಾನು ಮಾಡೆಲ್ ಆದ ಒಂದೇ ವರುಷದಲ್ಲಿ ಬೇಡಿಕೆಗಳು, ಹಗಲು, ರಾತ್ರೆ ಪೂರ್ಣ ಕೆಲಸದ ಒತ್ತಡ. ಡಿಸೈನರ್ಸ್, ಛಾಯಾಗ್ರಾಹಕರು, ಪ್ರಾಯೋಜಕೆರು ತನ್ನನ್ನು ಸುತ್ತುವರಿಯುವರು. ಅವಳಿಗೆ ಈಗೀಗ ಎಲ್ಲವೂ ಅಭ್ಯಾಸವಾಗತೊಡಗಿತ್ತು. ವೃತ್ತಿನಿರತ ಗಂಡಸರು ತನ್ನ ಮೈಮೇಲೆ ಕೈ ಯಾಡಿಸುವಾಗ, ತನ್ನನ್ನು ಟೇಕ್‌ಗಳಿಗೆ ಸಿದ್ದಗೊಳಿಸುವಾಗ ಕೆಲವೇಳೆ ಮೈ ಕಾವೇರುವುದು ಇತ್ತು. ಗಂಡಿನ ಸಂಗ ಸೌಖ್ಯವಿಲ್ಲದೇ ದೇಹ ತಹತಹಿಸುತ್ತಿತ್ತು. ತಾನೆಷ್ಟು ಸುಂದರಳಾದರೇನು ? ತನಗೆ ಸುಖವೆಂಬುದಿದೆಯೇ ? ತನ್ನಿ ಸೌಂದರ್ಯ ಇತರರಿಗಷ್ಡೇ ಮೀಸಲು. ಮಾರುಕಟ್ಟೆಯಲ್ಲಿ ಕಳೆದು ಹೋದ ಮೇಲೆ ತನ್ನೀ ದೇಹ ಸುಕ್ಕುಗಟ್ಟುತ್ತದೆ. ಸೌಂದರ್ಯ ಮಾಸುತ್ತದೆ.

ಮನುಷ್ಯ ಪ್ರಾಣಿ ಮಾತ್ರ ಮೈಥುನ ಕ್ರಿಯೆಯಲ್ಲಿ ಪರಮ ಸೌಖ್ಯ ಕಾಣಲು ಸಾಧ್ಯ. ನೀನು ನಿನ್ನ ದೇಹ ಸೌಂದರ್ಯವನ್ನು ಸಹಸ್ರಾರು ಜನರೆದುರಿಗೆ ತೆರೆದುಕೊಳ್ಳುತ್ತಿರುವೆಯೆಷ್ಟೇ. ನಿನಗೆ ಈ ಜನ್ಮದಲ್ಲಿ ಸುಖ ಹೀರುವುದೇ ಗೊತ್ತಿಲ್ಲ ! ಒಂಟಿ ಬದುಕು ಎಂದಿಗೂ ಬರಡು. ಕೊನೆಗೊಂದು ದಿನ ಯಾರಿಗೂ ಬೇಡವಾದ ಕೊರಡು. ಎಷ್ಟು ಗಳಿಗೆಯಾದರೇನು ? ಹೆಸರು ಮಾಡಿದರೇನು ? ಮರೆದರೇನು ? ನಿನಗೆ ಬೇಕಾದ ಸಂಗಾತಿಯೊಬ್ಬನನ್ನು ಆರಿಸಿ ಕೋ ಪ್ರೀತಿಸುವ ಹೃದಯವನ್ನು ಹುಡುಕಿಕೊ. ಬದುಕಿನ ಆನಂದವನ್ನು ಹೊಂದು ಎತ್ತ ಮಗ್ಗುಲಾದರೂ, ಕವುಚಿ ಮಲಗಿದರೂ ಮನಸ್ಸು ಚುಚ್ಚಿ ಹೇಳುತ್ತಲೇ ಇತ್ತು. ಮೈಕಾವು ಹೆಚ್ಚುತ್ತಿತ್ತು. ಹಾಸಿಗೆ ಮತ್ತೆ ಮತ್ತೆ ಮುಳ್ಳಾಗುತ್ತಿತ್ತು. ಇನ್ನೆನು ಬೆಳಗಾಗುವುದನ್ನೇ ಕಾದಿದ್ದವಳಂತೆ ಎದ್ದಳು. ಬಾತ್‌ರೂಮ್‌ ಸೇರಿ ಬಾಗಿಲು ಹಾಕಿಕೊಂಡಳು. ತಣ್ಣಿರೀನಲ್ಲಿ ಜುಳುಜುಳು ಮೀಯುವಾಗಲು ತನ್ನದೇ ಮೈ ಸೊಬಗು ತನ್ನನ್ನೇ ಅಣಕಿಸಿತು. ತೃಷೆ ಹಿಂಡಿತ್ತು. ಸುಖದ ತುಮುಲವೇ ತುಡಿದಿತ್ತು.

ಸ್ನಾನವಾದ ಮೇಲೆ ರೋಸಿಯೊಡನೆ ಮೆಸ್‌ನಲ್ಲಿ ತಿಂಡಿ ಮುಗಿಸಿಕೊಂಡು ಬಂದಳು.
“ ಇನ್ನೋಬ್ಬ ಡೆಸೈನರ್ ಮೈಖೇಲ್‌ ನನ್ನು ಕಾಣಲಿಕ್ಕೆದೆ ” ಎಂದಳು. ಲಾವಣ್ಯ ಕನ್ನಡಿ ಎದುರಿಗೆ ನಿಂತು ಕನಕಾಂಬರ ಬಣ್ಣದ ತೆಳು ಪತ್ತಾವನ್ನು ತನ್ನ ಹೊಕ್ಕಳಿನ ಕೆಳಗಿಳಿಸಿ ನೆರಿಗೆಗಳನ್ನು ಓರಣಗೊಳಿಸತೊಡಗಿದಳು.
“ ನೀನು ಸೀರೆ ಉಡುವ ಶೈಲಿಯೇ ಕಣ್ಣಿಗೊಂದು ಮಹದಾನಂದ ನೋಡು ! ” ಕಾಲೇಜಿಗೆ ಹೊರಟು ನಿಂತ ರೋಸಿ ತನ್ನ ಕಣ್ಣರಳಿಸಿದಳು.
ಲಾವಣ್ಯ ತುಟಿ ತುಳುಕಿಸಿ ನಕ್ಕಳು. ತಾನು ಹೊರನಡೆದು ಬಂದಿದ್ದಳು.
ತನ್ನ ಕಛೇರಿಯಲ್ಲಿ ಮೈಖೈಲ್ ಕುಳಿತಿದ್ದ. ಅವನ ಛೇಂಬರ್ ಹೊಕ್ಕಳು ಲಾವಣ್ಯ. ಅಷ್ಟೇನೂ ಸುಂದರವಲ್ಲದ ಅವನು, ಅವನ ವ್ಯಕ್ತಿತ್ವವೂ ಅಷ್ಟೇ. ಜೊಲ್ಲು ಸುರಿಸುವ ಅವಳನ್ನೇ ನೆಕ್ಕುವಂತ ನೋಡಿದನು.
ಲಾವಣ್ಯ ಅವನ ಎದುರಿಗೆ ಇದ್ದ ಖರ್ಚಿಯಲ್ಲಿ ಧಸಕ್ಕನೆ ಕುಳಿತಳು. ತೂಗಿ ತೊನೆವ ಆ ತನುವಿನ ಭಾರಕ್ಕೆ ಕುರ್ಚಿ ಕುಯ್ ಗುಟ್ಟಿತ್ತು.
“ ಓಹ್ ಎಂಥಾ ಸೊಗಸುಗಾತಿ ನೀನು ! ಮಿಸ್ ಇಂಡಿಯಾ ಆಗುವ ಎಲ್ಲಾ ಲಕ್ಷಣಗಳು ನಿನ್ನಲಿವೆ...... ” ಕಣ್ಣು ಹೊಡೆದನು ಮೈಖೇಲ್.
“ ನನ್ನ ಕೈಗೆ ಸಿಗಬೇಕು ನೀನು, ಅದೆಲ್ಲಿಗೆ ಹೋಗ್ತಿಯಾ ! ನನ್ನ ಟ್ರೈನಿಂಗ್ ತೆಗೆದುಕೊಂಡರೆ ನಿನ್ನ ಸ್ಟಾರ್ ಖಂಡಿತಾ ಬದಲಾಗಿ ಹೋಗುತ್ತೇ.... ” ಉನ್ಮಾದಗೊಂಡವನಂತೆ ಸಿಗರೇಟಿನ ಹೊಗೆಸುರುಳಿ ಸುರುಳಿಯಾಗಿ ಬಿಟ್ಟ.
“ ಥೂ ಹಾಳು ಹೊಗೆ ! ನಿನ್ನ ಹತ್ತಿರ ಇದ್ದರೆ ಉಸಿರುಗಟ್ಟುತ್ತದೆ ! ” ಮುಖ ಮುರಿದು ಕೈ ಅತ್ತಿತ್ತ ಆಡಿಸಿದಳು ಲಾವಣ್ಯ.
“ ನನಗೆ ಬರಲಿಕ್ಕೆ ಹೇಳಿದೆಯಲ್ಲ, ಅದೇನೂಂತ ಹೇಳು, ” ಕನಲಿದಳು. “ ಓ ಅದಾ ? ಒಂದು ದೊಡ್ಡ ಕಂಪೆನಿಯ ಹೊಸಾ ಪ್ರಾಡಕ್ಟ್ ನ್ನು ಮಾರ್ಕೆಟ್ಟಿಗೆ ಬಿಡುಗಡೆ ಮಾಡಲಿದೆ. ಆ ಸಂದರ್ಭದಲ್ಲಿ ಒಂದು ಭರ್ಜರಿ ಫ್ಯಾಷನ್ ಶೋ ನಡೆಯಲಿದೆ. ಅದಕ್ಕೆಲ್ಲಾ ಡ್ರೆಸ್ ಡಿಸೈನರ್ ನಾನೇ, ನಿನ್ನಂಥ ರನ್ನದ ಬೊಂಬೆಗೆ ರಾಂಪ್ ಮೇಲೆ ಹೆಜ್ಜೆ ಹಾಕಲಿಕ್ಕೊಂದು ಅವಕಾಶ ಕೊಡ್ಸೋಣಾ ಅಂತಾ .... ” ಮೈಖೇಲ್‌ನ ಕಣ್ಣು ಅವಳ ಏರಿಳಿವ ಎದೆಯ ಕಡೆಗೆ. “ ನನಗೆ ಸ್ವಲ್ಪ ಯೋಚನೆ ಮಾಡಲು ಅವಕಾಶ ಕೊಡು. ” ಲಾವಣ್ಯ ಸೆರಗನ್ನು ಎಳೆದುಕೊಂಡಳು.
“ ಇದರಲ್ಲಿ ಯೋಚ್ನೆ ಮಾಡೋದೇನಿದೆ ಹೇಳು, ಇಂಥಾ ಅವಕಾಶವನ್ನು ನೀನು ಬಿಡಬಾರದು ನೋಡು....”
ಟೇಬಲ್ ಮೇಲೆ ಗಾಜಿನ ಪೇಪರ್ ವೈಟ್ ನೊಡನೆ ಆಟವಾಡುತ್ತಿದ್ದ. ಅವಳ ಚಿಗುರು ಬೆರಳುಗಳನ್ನೊಮ್ಮೆ ಅವಳ ಹೊಳೆಯುವ ಕಂಗಳನ್ನೊಮ್ಮೆ ನಿಟ್ಟಿಸುತ್ತ ಹೇಳಿದ ಮೈಖೇಲ್,
“ ನಾನೇ ನಿನಗೆ ಡ್ರೆಸ್ ಡಿಸೈನರ್, ಟ್ರೈನರ್ ಎಲ್ಲಾ. ನನ್ನನ್ನ ನಂಬು ಲಾವಣ್ಯ...... ” ಅವಳ ಬೆರಳುಗಳ ಮೇಲೆ ಕೈ ಇಟ್ಟ.
ತಾನು ಕೈ ಹಿಂತೆಗೆದುಕೊಂಡು ಬಿಟ್ಟರೆ ಅವನ ಮುಖಕ್ಕೆ ರಾಚಿದ ಹಾಗೇ. ಹಾಗೆ ಮಾಡಿ ಜಯಿಸುವುದುಂಟೇ ? ಇವನ ವಿರೋಧ ಕಟ್ಟಿಕೊಂಡ ಕೆಲ ಮುದ್ದಾದ ಹುಡುಗಿಯರ ಕಥೆ ಎನಾಯಿತೆಂಬುದನ್ನು ತಿಳಿದ್ದಿದ್ದಳು.
“ ಮೈಖೇಲ್...... ನಾನು ಹೇಳಿದೆನಲ್ಲ. ನನಗೆ ಯೋಚ್ನೆ ಮಾಡಲು ಒಂದೆರಡು ದಿನ ಬೇಕು.” ಅವನ ಕೈ ಸವರಿ ತನ್ನ ಕೈ ಹಿಂತೆಗೆದುಕೊಂಡಳು, ಜಾಣ್ಮೆಯಿಂದ.
“ ಓ.ಕೆ. ಮೂರು ದಿನ ಟೈಮ್ ತಗೆದುಕೊ, ಆಮೇಲೆ ಪೋನ್ ಮಾಡು ನಂಗೆ. ” ಅವಳ ಮೃದು ಸ್ಪರ್ಶದಿಂದಲೇ ಮೆದುವಾಗಿದ್ದ ಮೈಖೇಲ್.
‘ ನಿನಗೆ ನಾನು ಪೋನ್ ಮಾಡಿದ ಹಾಗೆ ’ ಅಂದುಕೊಂಡಳು. ‘ ಇವನಿಗಿಂತ ಛಾಯಾಪತಿಯೇ ವಾಸಿ. ಅವನಲ್ಲೇನೋ ಸೆಳೆತವಿದೆ. ಅವನ ಸಾಮೀಪ್ಯದಲ್ಲಿ ನಾನು ಏನನ್ನೂ ಸಾಧಿಸಬಲ್ಲೆನೆಂಬ ಭರವಸೆ ಏಕೋ ಮೈ ತಳೆಯುತ್ತದಲ್ಲ ! ’ ಮೈಖೇಲ್ ಗೆ, “ ಬೈ ಬೈ ” ಹೇಳಿ ಎದ್ದು ಹೊರ ಬಂದಿದ್ದಳು.

ಎರಡು ದಿನಗಳು ಲಾವಣ್ಯ ಕೋಣೆ ಬಟ್ಟು ಹೊರ ಬರದಾದಳು. ಬೆಳಗಿನ ಸ್ನಾನ, ತಿಂಡಿ, ಮಧ್ಯಾಹ್ನದ ಊಟಕ್ಕೆ ಹೊರತಾಗಿ ಆಕೆ ಕೋಣೆಯಿಂದ ಹೊರಗೆ ಹೆಜ್ಜೆ ಇಡದಾದಳು. ರೋಸಿ ಮಾತನಾಡಿಸಿದರೆ ಚುಟುಕಾಗಿ ಪ್ರತಿಕ್ರಿಯೆಸುವಳು. ಇವಳ ಬಯಕೆಯ ಜ್ವರ ಏನೆಂದು ಅವಳೂ ಊಹಿಸಬಲ್ಲವಳೆ ಆದರೂ ಅಮಾಯಕಳಂತೆ ಇದ್ದು ಬಿಟ್ಟಳು.ನಾಲ್ಕನೆಯ ದಿನ ಸಂಜೆ ಛಾಯಾಪತಯೇ ಟೆಲಿಫೋನ್ ಕರೆ ನೀಡಿದಾಗ ಇದ್ದಕ್ಕಿದ್ದಂತೆ ಗೆಲುವಿನ ಖನಿಯಾದಳು, ಆವೋತ್ತೇ ರಾತ್ರೆ ಒಂಭತ್ತು ಗಂಟೆಗೆ ಬರಬೇಕೆಂದು ಅಪಾಯಿಂಟ್‌ಮೆಂಟ್ ಕೊಟ್ಟಿದ್ದ ಛಾಯಾಪತಿ. ಅದನ್ನೇ ಅತ್ಯಂತ ಖುಷಿಯಿಂದ ರೊಸಿಗೆ ಹೇಳಿದಳು. ಎಂಟೂವರೆಗೆ ಅತಿ ತೆಳುವಾದ ನುಣುಪಿನ ಆಕಾಶ ಬಣ್ಣದ ಸೀರೆಯನ್ನುಟ್ಟಳು. ಅದರ ನೆರಿಗೆಗಳನ್ನು ಒಪ್ಪವಾಗಿಸುತ್ತಾ ಕನ್ನಡಿಯ ಮುಂದೆ ನಿಂತು ಹಿಂದು ಮುಂದು ನೋಡಿಕೊ0ಡು ವೈಯಾರದಿಂದಲೇ ಬಳುಕಿದಳು ಲಾವಣ್ಯ. ರೋಸಿಯತ್ತ ಹೋಗಿ ಬರಲೇ ? ಎಂಬ ನೋಟಹರಿಸಿದಾಗ ರೋಸಿ ಆಕೆಯತ್ತ ಕಣ್ಣಗಲಿಸಿ, “ ನಿನ್ನನ್ನು ನೋಡುವುದೇ ಮನಸ್ಸಿಗೊಂದು ಮಹಾ ಖುಷಿ..... ” ಎಂದು ವಿಚಿತ್ರ ನಗೆ ನಕ್ಕು ಬೀಳ್ಕೋಟ್ಟಳು.

ಛಾಯಾಪತಿ ಮನ್ಮಥರೂಪಿ, ಅವಿವಾಹಿತ ಬೇರೆ, ತುಂಬಾ ಸ್ರ್ಟಿಕ್ಟ್ . ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಚಕ್ಕಂದವಾಡುವವನಲ್ಲ ಎಂಬ ಹೆಸರು ಬೇರೆ ಪಡೆದಿದ್ದಾನೆ. ತನ್ನ ಕೆಲಸದಲ್ಲಿ ಒಂದು ಶಿಸ್ತು ರೂಢಿಸಿಕೊಂಡಿದ್ದಾನೆ. ಅವನ ಮೆಚ್ಚುಗೆ ಪಡೆದ ಯಾವ ಸುಂದರ ಮಾಡೆಲ್ ಗಳು ಸಹ ಅವನ ಗುಟ್ಟು ಏನೆಂದು ಬಿಟ್ಟುಕೊಡಲಾರರು. ಟೇಕ್‌ಗಳನ್ನು ಓಕೆ ಮಾಡುವಾಗ ಪಾಪ ಹೆಣ್ಣಿನ ಮನಸ್ಸನ್ನೊಂದಿಷ್ಟು ನೋಯಿಸಲಾರ. ಅಂತಹ ಚಾಕಚಕ್ಯತೆ ಅವನಿಗಿದೆಯಲ್ಲ. ಅಷ್ಟೋಂದು ಮೆದುವಾಗಿಯೇ, ತಾಳ್ಮೆಯಿಂದಲೇ ಹೇಳಿಕೊಡುವ ಜಾಣ್ಮೆಯೂ ಇದೆಯಲ್ಲ !
ವ್ಯವಹಾರದಲ್ಲಿ ಪ್ರಭಾವ ಶಾಲಿಯಾಗಿದ್ದ. ಪ್ರಾಯೋಜಕರ ಬಳಿ ವಸೂಲಿಗಾಗಿ ಕಳುಹಿಸಿಬಿಡುತ್ತಿದ್ದ. ಹೀಗಾಗಿಯೇ ಮಾಡೆಲ್‌ಗಳು ಅವನನ್ನು ನಂಬುತ್ತಿದ್ದರು. ಎಷ್ಟೋ ಹೆಣ್ಣುಗಳು ಈ ಸರಸಿ ಹಾಗು ರಸಿಕ ಮಹಾಶಯನನ್ನು ಒಳಗೊಳಗೆ ಪ್ರೀತಿಸುತ್ತಲೂ ಇದ್ದರೂ. ಇವನ ಕೃಪಾದೃಷ್ಟಿಗಾಗಿ ಕಾಯುತ್ತಲೂ ಇದ್ದರು. ಇಂಥ ಮನುಷ್ಯನ ಆಕರ್ಷಣೆಗೆ ಲಾವಣ್ಯ ಒಳಗಾದುದರಲ್ಲಿ ಆಶ್ಚರ್ಯವೇನಿರಲಿಲ್ಲ. ಲಾವಣ್ಯ ಛಾಯಾಪತಿಯ ಸ್ಟುಡಿಯೋ ತಲುಪಿದ್ದಳು. ಅವನು ಮುಗುಳನಗೆ ಬೀರಿ ಸ್ವಾಗತಿಸಿದ್ದ.
ಸ್ಟುಡೀಯೋದಲ್ಲಿ ಇದ್ದ ಒಂದಿಬ್ಬರು ಗಿರಾಕಿಗಳನ್ನು ಕಳುಹಿಸಿದ ನಂತರ ಸ್ಟುಡಿಯೋ ಬಂದ್ ಮಾಡಿಬಿಟ್ಟ ಲಾವಣ್ಯಳನ್ನು ಒಳಗಿನ ಡಾರ್ಕ್‌ ರೂಮಿಗೆ ಬರಹೇಳಿದ. ಅವಳನ್ನು ಎದುರಿಗೆ ಕೂರಿಸಿಕೊಂಡು ಸ್ವಲ್ಪ ಹೊತ್ತು ತದೇಕವಾಗಿ ದಿಟ್ಟಿಸಿದ್ದ. ಗಹನಾ ಲೋಚನೆಯಲ್ಲಿ ಮುಳುಗಿದ್ದವನಂತೆ ಕಂಡ. ಅವನು ಹಾಗೆ ತನ್ನನ್ನೇ ದಿಗಂಬರ ದೃಷ್ಟಿಯಲ್ಲಿ ದಿಟ್ಟಿಸುತ್ತಿದ್ದರೆ, ಲಾವಣ್ಯಳಿಗೆ ಎಂದಿಲ್ಲದ ಲಜ್ಜೆ ಮೈಗೆಲ್ಲ ಸುತ್ತಿಕೊಂಡಿತು. ಕೊಂಚ ತಲೆ ತಗ್ಗಿಸಿದಳು.
“ ಇಲ್ನೋಡು ಲಾವಣ್ಯ, ನಾನು ಹೇಳುವುದನ್ನೂ ಮೊದಲು ಗಮನವಿಟ್ಟು ಕೇಳು. ನೀನು ಈ ನಾಚಿಕೆ ಬಿಟ್ಟು ಬಿಡು. ನೀರಿಗೆ ಇಳಿದಾಯಿತಲ್ಲ ! ಛಳಿ ಏನು ? ಮೈ ತೆರೆದು ಅಂಗ ವಿನ್ಯಾಸ ತೋರಿಸಲು ನಿನಗೆ ಭಯವೇತರದು ? ಶ್ರಿಮಂತ ತಂದೆ, ತಾಯಿಗಳೇ ತನ್ನ ಮುದ್ದು ಮಕ್ಕಳನ್ನು ನಮ್ಮ ಬಳಿ ಕರೆ ತಂದು ನಿಲ್ಲಿಸುತ್ತಾರೆ. ಅವುಗಳ ಮೊಲೆಕಟ್ಟನ್ನು ಎತ್ತಿ ಎತ್ತಿ ತೋರಿಸುತ್ತಾರೆ; ಅವಕಾಶಕ್ಕಾಗಿಯೇ ಅಂಗಲಾಚುತ್ತಾರೆ. ತಮ್ಮ ಮಗಳು ಮಾಡೆಲ್ ಆಗಲು, ಫ್ಯಾಷನ್ ಶೋಗಳಲ್ಲಿ ಪ್ರದರ್ಶನ ನೀಡಲು, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿವಿಧ ರೀತಿಯ ಉಡುಪುಗಳನ್ನು, ಅವಳಿಗಾಗಿಯೇ ಐವತ್ತು ಸಾವಿರದವರೆಗೆ ತಾವೇ ಸುರಿದು ಖರೀದಿಸುತ್ತಾರೆ. ಹರೆಯದ ಬಾಲೆಯರು ಓದಿಗಿಂತಲೂ ಹೆಚ್ಚಾಗಿ ಮಾಡೆಲ್‌ಗಳಾಗಿ ಅಂಗ- ವಸ್ತ್ರ ಪ್ರದರ್ಶನ ಮಾಡುವುದನ್ನೇ ಕಲಿಯಲೆಂದು ಆಶಿಸುತ್ತಾರೆ. ಅದಕ್ಕಾಗಿಯೇ ಏನೂ ತೆರಲು ಸಿದ್ದರಾಗಿರುತ್ತಾರೆ. ಅವುಗಳಿಗೆ ಮೈ ಕಟ್ಟು ಕಾಯ್ದುಕೊಳ್ಳುವ ವ್ಯಾಯಾಮ ಪಾಠಗಳಷ್ಟೇ ಕಠಿಣವಾದರೂ ಅದೇ ಮುಖ್ಯವೆಂದು ತಿಳಿಸಿಹೇಳುತ್ತಾರೆ. ಅವು ನಾಚಿಕೊಂಡರೆ ಸೆಟದು ನುಡಿದರೆ ಹೊಡೆದು ಬಗ್ಗಿಸಿ ಈ ವೃತ್ತಿಗೆ ಹೇಗಾದರೂ ಒಗ್ಗಿಸಲು ಹೇಸದ ಹೆತ್ತವರೂ ಇದ್ದಾರೆ ಲಾವಣ್ಯ. ”

ಲಾವಣ್ಯ ‘ ಹೀಗೂ ಉಂಟೆ ! ’ ಎಂದು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು.
“ ನೋಡು ಲಾವಣ್ಯ, ನಿನ್ನ ಕಾಸ್ಟ್ಯೂಮ್ಸ್ ಖರ್ಚನೆಲ್ಲ ನಾನು ವಹಿಸಿಕೊಳ್ಳುತ್ತೇನೆ. ನಾನು ಹೇಳಿದ ಹಾಗೆ ಚಾಚು ತಪ್ಪದೆ ನೀನು ಕೇಳಿದರೆ ಸಾಕು. ” ಅವನು ತನ್ನ ಉಪದೇಶ ಕೊಟ್ಟಿದ್ದ.
“ ಈಗ ನಾನೇನು ಮಾಡ್ಬೇಕೂ.....” ಲಾವಣ್ಯ ವಿಧೇಯ ವಿಧ್ಯಾರ್ಥಿನಿ ಆದಳು.
“ ಏಳು ನಿನಗಾಗಿಯೇ ಸಿದ್ದ ಉಡುಪುಗಳನ್ನು ತರಿಸಿ ಇಟ್ಟಿದ್ದೇನೆ. ನಿನ್ನ ಎದೆ, ಸೊಂಟದ ಸುತ್ತಳತೆ ನನಗೆ ಗೊತ್ತಿದೆಯಲ್ಲ, ಅವು ಸರಿ ಹೊಂದುತ್ತವೆ. ಒಂದೊಂದಾಗಿ ಅವನ್ನು ಉಟ್ಟು ಪೋಸು ಕೊಡು ನೋಡೋಣ..... ” ಬೆನ್ನುಚಪ್ಪರಿಸಿದ್ದ.
ಯಾಕೋ ಅನುಮಾನಿಸಿದಳು ಲಾವಣ್ಯ, “ ಮತ್ತೇಕೆ ಹಾಗೆ ಕುಳಿತೆ ? ” ತೀರ ಮೆದುವಾಗಿಯೇ ಹೇಳಿ ಅವಳ ಮಾಟವಾದ ಬೆನ್ನ ಹಿಂದೆ ಬಂದು ನಿಂತವನು ಎರಡು ಭುಜದ ಮೇಲೆ ಕೈ ಇಟ್ಟು , “ ನೋಡು, ನಾನು ಹಾಗೆಲ್ಲ ಯಾವ ಸುಂದರ ಹೆಣ್ಣನ್ನು ಇಷ್ಟು ಹಚ್ಚಿಕೊಂಡವನಲ್ಲ, ವಂಚಿಸಿದವನು ಅಲ್ಲ. ನಿನ್ನಲ್ಲೆನೋ ಅತಿ ಸೆಳೆತ ನನಗೆ..... ಷೂರಲೀ ..... ಯು ಹ್ಯಾವ್ ದಟ್ ಪ್ಯೂಚರ್..... ” ಅವಳ ನುಣ್ಗೆನ್ನೇಗಳನ್ನು ಬೊಗಸೆಯಲ್ಲಿ ಹಿಡಿದಿದ್ದ.

ರೋಮಾಂಚಿತೆಯಾದಳು ಲಾವಣ್ಯ. “ ನೀವು, ಮತ್ತೆ ನನ್ನ ಕೈ ಬಿಡುವುದಿಲ್ಲ ತಾನೇ..... ? ”ಪಿಸುದನಿಯಲ್ಲಿ ಎಂದಳು; ಅವನ ಕೊರಳಸುತ್ತಲೂ ತಾನೂ ತೋಳು ಬಳಸಿಕೊಂಡಳು.
“ನನ್ನನ್ನು ನಂಬು ಎಂದೆನಲ್ಲ. ಏಳು ಷಾಟ್‌ಗೆ ರೆಡಿಯಾಗು. ” ತೋಳು ಸವರಿ ಸೊಂಟ ಬಳಸಿದ ಛಾಯಾಪತಿ.
ಅವಳು ತತ್‌ಕ್ಷಣ ಉನ್ಮಾದಗೊಂಡವಳಂತೆ ಎದ್ದಳು. ಸೀರೆ ಬಿಚ್ಚಿ ಬಿಸುಟಳು. ಅವನು ಹೇಳುತ್ತಿದ್ದಂತೆ ಒಂದೋಂದೇ ವಿಚಿತ್ರ ಉಡುಪುಗಳಲ್ಲಿ ಚಿತ್ರೀಕರಣ ನಡೆಯಿತು. ಬಟ್ಟೆ ಇದ್ದೂ ಇಲ್ಲದ ಅಂಗಾಂಗ ಪ್ರದರ್ಶನ.
“ ಹಾಗಲ್ಲ ಹೀಗೆ ಬಾಗಬೇಕು. ಹಾಗೆ ತಿರುಗಬೇಕು. ಇಲ್ಲಿ ತಗ್ಗಿನಲ್ಲಿ ಕತ್ತಲೆಯ ಛಾಯ ಬರಬೇಕು, ಈ ಉಬ್ಬಿನಲ್ಲಿ ಬೆಳಕು ಚೆಲ್ಲಿ ಮಿಂಚಬೇಕು ”
-ಎಂದೆಲ್ಲ ಸ್ವೇಚ್ಛೇಯಾಗಿ ತನ್ನ ಕೈಗಳನ್ನು ಅವಳ ಮೇಮೇಲೆ ಹರಿಯಬಿಟ್ಟಿದ್ದ. ಲಾವಣ್ಯಳಿಗೆ ಮತ್ತೇರಿದಂತಾಯ್ತು. ಮಾದಕತೆಯಿಂದ ಸಹಕರಿಸುತ್ತಲೇ ಮೈ ಮರೆತು ನಿಂತಳು. ಎತ್ತರದ ನಿಲುವು, ಚಂದ್ರವದನೆ, ಹೊಂಬಣ್ಣದ ಚೆಲುವೆ. ಅವಳ ಕೆಂದುಟಿ ಕಂಪಿಸುತ್ತಿತ್ತು. ಉಸಿರಾಟಕ್ಕೆ ತುಂಬಿದೆದೆ ಏರಿಳಿಯುತ್ತಿತ್ತು. ಹಲವಾರು ಡಿಸೈನ್‌ಗಳ ದಿರಿಸು, ಶಾರ್ಟ್ಸ್, ಸ್ಲೀವ್‌ಲೆಸ್‌, ಟಾಪ್‌ಲೆಸ್‌, ಓವರ್‌ಕೋಟ್, ಚೂಡಿ, ಮಿಟಿ ಪಾರದರ್ಶಕ ಶರ್ಟ್ಸ್, ಜೀನ್ಸ್, ಟೈಟ್ ಪ್ಯಾಂಟ್‌ ಇತ್ಯಾದಿಗಳಲ್ಲಿ ಅವಳ ದೇಹದ ಅಪ್ರತಿಮ ಸೌಂದರ್ಯವನ್ನು ಛಾಯಾಪತಿ ತನ್ಮಯತೆಯಿಂದ ಸೆರೆಹಿಡಿಯುತ್ತಲಿದ್ದಾನೆ. ತನ್ನ ನೀಳವಾದ ಕಾಲುಗಳ ಚಲನೆಯಲ್ಲಿ ಪಾದರಸದಂತಹ ಚುರುಕಿನ ಗತಿಯಲ್ಲಿ ಲಾವಣ್ಯ ಅವನೊಂದಿಗೆ ಸಹಕರಿಸುತ್ತಲಿದ್ದಾಳೆ.
“ ವಾಹ್, ರಿಯಲೀ ಗ್ಲಾಮರಸ್.... ! ” ಅವನ ಉದ್ಗಾರಗಳಲ್ಲಿ ಕೈ ಬಳಸಿ ಸ್ಪರ್ಶಿಸುವ ರೀತಿಯಲ್ಲಿ ಅವಳೊಳಗಿನ ಸುಪ್ತ ಬಯಕೆಯೂ ಗರಿಗೆದರಿ ಕೆಣಕಿದಾಗ ಬುಡ ಕಿತ್ತೋಗೆದ ಬಳ್ಳಿಯಂತಾದಳು.

ಕಡೆಯ ಹಂತದಲ್ಲಿ ತನ್ನ ತೋಳುಗಳಲ್ಲಿಯೇ ತೇಲುತ್ತಿದ್ದಾಕೆಯ ಕೆಂದುಟಿಗಳನ್ನು ಬಲವಾಗಿ ಚುಂಬಿಸಿದ್ದ ಛಾಯಾಪತಿ. ಅವಳೂ ಸಹ ಕೊರಳೆತ್ತಿ ಕೊಟ್ಟು ಸ್ಪಂದಿಸಿದ್ದಳು. ಅನಾಮತ್ತಾಗಿ ಅವಳನ್ನೆತ್ತಿಕೊಂಡ. ಪಕ್ಕದ ರೂಮಿನ ಪೋಮ್ ಬೆಡ್‌ನತ್ತ ನಡೆದಿದ್ದ ಛಾಯಾಪತಿ. ರತಿ ಸುಖಕ್ಕಾಗಿ ಬಹುದಿನದಿಂದ ಕಾತರಿಸುತ್ತಿದ್ದವಳು ತನ್ನಷ್ಟಕ್ಕೆ ತಾನೇ ಒಡ್ಡಿಕೊಂಡಳು. ಹಿಂದುಮುಂದಿನದನ್ನೆಲ್ಲ ಕಳೆದುಕೊಂಡು ಮೇಣದಂತೆ ಕರಗಿಹೋದಳು, ಬಯಕೆಯ ಬೆಂಕಿಯಲ್ಲಿ. ಜ್ವಾಲೆ ಅಡಗಿದ ಮೇಲೆ ಹೋದ ಜೀವ ಬಂದಂತಹ ಅನುಭವ. ಸುಖಾತೀರೇಖದ ಕೇಳಿಯ ಹಾಗೆ. ಸೀರೆಯುಟ್ಟು ಮೊಳಕಾಲುಗಳಲ್ಲಿ ಮುಖ ಹುದುಗಿಸಿ ಕುಳಿತಳು ಲಾವಣ್ಯ. ಆಕೆಯ ಗಲ್ಲ ಎತ್ತಿ, “ ನಿನಗೆ ಮಿಸ್ ಇಂಡಿಯಾ ಆಗುವ ಎಲ್ಲ ಅರ್ಹತೆ ಇದೆ. ನೋಡುತ್ತಿರ, ನೀನು ನನ್ನ ಕೈಯಲ್ಲಿ ಎಂತಹ ಎತ್ತರಕ್ಕೆರುವೆ ಎಂದು ! ನಾನು ನಿನ್ನ ಕೈ ಬಿಡುವುದಿಲ್ಲ. ನೀನು ಇಷ್ಟಕ್ಕೆ ಸೆಂಟಿಮೆಂಟಲ್ ಆಗಬಾರದು, ಏಳು. ” ಎಂದ ಛಾಯಾಪತಿ. ಲಾವಣ್ಯ ದೀನವದನೆಯಾಗಿದ್ದಳು.

No comments:

Post a Comment